ಫೆಬ್ರವರಿ 8ರವರೆಗೆ ಜಿಲ್ಲೆಯಲ್ಲಿ ಕರವಸೂಲಿ ಅಭಿಯಾನ ಹಮ್ಮಿಕೊಳ್ಳಿ- ಸಿಇಒ

Conduct a car collection campaign in the district until February 8th - CEO
ಕೊಪ್ಪಳ ಜನವರಿ 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಕರವಸೂಲಿ ಅಭಿಯಾನವನ್ನು ಫೆಬ್ರವರಿ 8ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಹಮ್ಮಿಕೊಳ್ಳಬೇಕೆಂದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.
ಜನವರಿ 30 ರಿಂದ ಫೆ. 8ರ ವರೆಗೆ ಬೆಳಿಗ್ಗೆ 8 ರಿಂದ ಸಾಯಂಕಾಲ 6 ಗಂಟೆಯವರೆಗೆ ಕರವಸೂಲಿ ಅಭಿಯಾನವನ್ನು ಹಮ್ಮಿಕೊಂಡು ತೆರಿಗೆ ವಸೂಲಾತಿಯಲ್ಲಿ ಶೇ. 100ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿರುವ ಕಾರಣ ಕೆಲ ಅಂಶಗಳ ಕುರಿತು ಶ್ರಮವಹಿಸಬೇಕಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಫೆ. 8ರ ವರೆಗೆ ಬೆಳಿಗ್ಗೆ 8 ರಿಂದ ಸಾಯಂಕಾಲ 6 ಗಂಟೆಯವರೆಗೆ ಕಡ್ಡಾಯವಾಗಿ ಕರವಸೂಲಿ ಅಭಿಯಾನವನ್ನು ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತಿಯು ಈ ಅಭಿಯಾನದ ಸಮಯದಲ್ಲಿ ಗರಿಷ್ಠ ಪ್ರಮಾಣದ ಕರವಸೂಲಾತಿಯ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಕರವಸೂಲಾತಿ ಆಂದೋಲನದ ಬಗ್ಗೆ ಪ್ರತಿ ಗ್ರಾಮದಲ್ಲಿ ಬ್ಯಾನರ್ ಅಳಡಿಸಿ ಪ್ರಚಾರ ಮಾಡಿ. ಗ್ರಾಮ ಪಂಚಾಯತಿಯಲ್ಲಿ ಬಾಕಿದಾರರ ಪಟ್ಟಿಯನ್ನು ತಯಾರಿಸಿ ಮನೆ ಮನೆಗೆ ಭೇಟಿ ನೀಡಿ ಕರ ವಸೂಲಾತಿಗೆ ಕ್ರಮ ಕೈಗೊಂಡು ಶೇ.100 ರಷ್ಟು ಪ್ರಗತಿಯನ್ನು ಸಾಧಿಸಬೇಕು. ಪತ್ರಿಕೆಗಳ ಮೂಲಕವು ಸಹ ಹೆಚ್ಚಿನ ಪ್ರಚಾರ ನೀಡಿ ಕರವಸೂಲಾತಿ ಆಂದೋಲನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ. ತೆರಿಗೆ ಸಂಗ್ರಹಣೆ ಮಾಡುವ ಪೂರ್ವದಲ್ಲಿ ಸ್ವಚ್ಚ ವಾಹಿನಿ ವಾಹನಗಳಲ್ಲಿ ಜಿಂಗಲ್ಸ್ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು.
ಪ್ರತಿ 2 ಗಂಟೆಗೊಮ್ಮೆ ಗ್ರಾಮ ಪಂಚಾಯತಿಯಿಂದ ಕರವಸೂಲಾತಿ ಮಾಹಿತಿಯನ್ನು ತಾಲೂಕು ಪಂಚಾಯತಿ ವಿಷಯ ನಿರ್ವಾಹಕರು ಸಂಗ್ರಹಿಸಿಕೊಂಡು ಈ ಮಾಹಿತಿಯನ್ನು ಸಾಯಂಕಾಲ 6 ಗಂಟೆಯೊಳಗಾಗಿ ಜಿಲ್ಲಾ ಪಂಚಾಯತಿಯ ಸ್ವಚ್ ಭಾರತ ಮಿಷನ್ ಸಮಾಲೋಚಕರಿಗೆ ಸಲ್ಲಿಸಬೇಕು. ಈ ಎಲ್ಲಾ ಸಮಾಲೋಚಕರು ಮಾಹಿತಿಯನ್ನು ಕ್ರೋಢಿಕರಿಸಿ ಉಪ ಕಾರ್ಯದರ್ಶಿಗಳು ಜಿ.ಪಂ ಕೊಪ್ಪಳ ರವರಿಗೆ ಸಲ್ಲಿಸಬೇಕು.
ಈ ಕರವಸೂಲಾತಿ ಅಭಿಯಾನದಲ್ಲಿ ಕರವಸೂಲಿ ಮಾಡಲು ವಿಫಲರಾದಲ್ಲಿ ಅಂತಹ ಗ್ರಾಮ ಪಂಚಾಯತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಫೆಬ್ರವರಿ 11 ರಂದು ಖುದ್ದಾಗಿ ಸೂಕ್ತ ವಿವರಣೆಯೊಂದಿಗೆ ಜಿ.ಪಂ ಕಾರ್ಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.



