Breaking News

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ

Winter session begins in Belgaum

ಅಗಲಿದ ಗಣ್ಯರಿಗೆ ಸಂತಾಪ

ಸುವರ್ಣಸೌಧ ಬೆಳಗಾವಿ(ಕರ್ನಾಟಕ ವಾರ್ತೆ).ಡಿ.4: ಹದಿನಾರನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭವಾಗಿದೆ.
ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸದನದ ಸದಸ್ಯರು ಸಂವಿಧಾನ ಪೀಠಿಕೆ ಓದುವ ಮೂಲಕ ಅಧಿಕವೇಶನದ ಕಾರ್ಯ ಕಲಾಪಗಳಿಗೆ ಚಾಲನೆ ನೀಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮಾಜಿ ಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವ ಶ್ರೀರಂಗದೇವರಾಯಲು, ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪಿ.ಬಿ.ಆಚಾರ್ಯ ಹಾಗೂ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಮಂಗಳೂರು ಜಿಲ್ಲೆಯ ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜಿದ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಅವರಿಗೆ ಸಂತಾಪ ಸೂಚನಾ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ನಿರ್ಣಯದ ಮೇಲೆ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿದ್ದ ಮೇರು ವ್ಯಕ್ತಿಯಾಗಿದ್ದರು. ಸದನ ಕಾರ್ಯಕಲಾಪಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಸ್ನೇಹಿಜೀವಿಯಾಗಿದ್ದು ಅಜಾತ ಶತ್ರುವಾಗಿದ್ದರು. ಅವರೊಂದಿಗಿನ ಒಡನಾಟ ಸದಾಕಾಲ ಸ್ಮರಣೀಯ ಎಂದರು.
ವಿಜಯನಗರ ಸಾಮ್ರಾಜ್ಯದ ರಾಜಮನೆತನಕ್ಕೆ ಸೇರಿದ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಶ್ರೀರಂಗದೇವರಾಯಲು ಅವರು,ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಹಲವು ಜನಪರ ಕಾರ್ಯಗಳನ್ನು ಕೈಗೊಂಡು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪಿ.ಬಿ.ಆಚಾರ್ಯ ಅವರ ನಿಧನಕ್ಕೂ ಅವರು ಸಂತಾಪ ಸೂಚಿಸಿದರು.
ನವೆಂಬರ್ 22 ರಂದು ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಹುತಾತ್ಮರಾಗಿದ್ದರೆ. ಸಣ್ಣ ವಯಸ್ಸಿನಲ್ಲಿಯೇ ದೇಶ ಸೇವೆಗಾಗಿ ಪ್ರಾಣ ಅರ್ಪಿಸಿದ ಅವರ ತ್ಯಾಗ ದೊಡ್ಡದು. ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದ ವೇಳೆ ಖುದ್ದು ಹಾಜರಾಗಿ ಗೌರವ ಸೂಚಿಸಿದೆ. ಇವರೊಂದಿಗೆ ಹುತಾತ್ಮರಾದ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ್ ಅಬ್ದುಲ್ ಮಜಿದ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಅವರ ಆತ್ಮಗಳಿಗೂ ಶಾಂತಿ ದೊರಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ರಾಜ್ಯದ ಮುತ್ಸದ್ದಿ ರಾಜಕಾರಣಿ ಆಗಿದ್ದರು. ರಾಜಕೀಯ ವಲಯದಲ್ಲಿ ‘ಡಿಬಿಸಿ’ ಎಂದು ಚಿರಪರಿಚಿತರಾಗಿದ್ದರು. ಹಲವು ರಾಜಕೀಯ ವಿಷಯಗಳಿಗೆ ಡಿ.ಬಿ.ಚಂದ್ರೇಗೌಡರ ಬಳಿ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಇಂದಿರಾಗಾAಧಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಡಿ.ಬಿ.ಚಂದ್ರೇಗೌಡ ಅವರು ಕ್ಷೇತ್ರ ತ್ಯಾಗ ಮಾಡಿದರು. ಬೆಂಗಳೂರಿನಿAದ ಬಿಜೆಪಿ ಪಕ್ಷದ ಪರವಾಗಿ ಲೋಕಸಭೆಗೆ ಸ್ಪರ್ಧಿಸಿ ಜಯಶೀಲರಾದರು. ವಿಧಾನ ಸಭೆ, ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಡಿ.ಬಿ.ಚಂದ್ರೇಗೌಡ ಅವರದು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿದ್ದ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಈಶಾನ್ಯ ರಾಜ್ಯಗಳಲ್ಲಿ ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಆದರೂ ಗಡಿಯಲ್ಲಿ ಉಗ್ರಗಾಮಿಗಳ ಉಪಟಳ ನಿಂತಿಲ್ಲ. ಉಗ್ರರೊಂದಿಗೆ ದಿಟ್ಟತನದಿಂದ ಹೋರಾಡಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಹಾಗೂ ಅವರ ಸಹೊದ್ಯೋಗಿ ಯೋಧರ ತ್ಯಾಗವನ್ನು ದೇಶದ ಜನತೆ ಮರೆಯುವುದಿಲ್ಲ ಎಂದರು.
ಮಾಜಿ ಸಚಿವ ಶ್ರೀರಂಗದೇವರಾಯಲು, ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್ ಅವರು ಸಹ ಶಾಸಕರಾಗಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಂತಾಪ ಸೂಚನೆ ನಿರ್ಯಣದ ಮೇಲೆ ಗೃಹ ಸಚಿ ಡಾ.ಜಿ.ಪರಮೇಶ್ವರ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಅರಗ ಜ್ಞಾನೇಂದ್ರ, ಹೆಚ್.ಕೆ.ಪಾಟೀಲ್, ವಿಜಯೇಂದ್ರ, ಜನಾರ್ದನ ರೆಡ್ಡಿ, ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್, ಶಾಸಕಿ ನಯನ ಮೋಟಮ್ಮ ಸೇರಿದಂತೆ ಇತರ ಶಾಸಕರು ಮಾತನಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು.


ರಾಯಚೂರು ಜಿಲ್ಲೆಗೆ 107 ಹೊಸ ಬಸ್‌ಗಳ ನೀಡಿಕೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ಸುವರ್ಣಸೌಧ,ಡಿ.04(ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ 7 ಸಾರಿಗೆ ಘಟಕಗಳಿಗೆ 107 ಹೊಸ ಬಸ್‌ಗಳನ್ನು ಒದಗಿಸಲಾಗಿದ್ದು, ಅವಶ್ಯಕತೆಗನುಗುಣವಾಗಿ ಜಿಲ್ಲೆಗೆ ಇನ್ನೂ ಹೊಸಬಸ್‌ಗಳು ಒದಗಿಸಲು ಬದ್ಧ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ದದ್ದಲ್ ಅವರು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಅವರು ಉತ್ತರಿಸಿ ಮಾತನಾಡಿದರು. ಪೂರ್ಣಕವಚ ನಿರ್ಮಿತ 250 ವೇಗದೂತ ಸಾರಿಗೆಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಪೂರ್ಣಕವಚ ನಿರ್ಮಿತ 93 ನಗರ ಸಾರಿಗೆ ಬಸ್‌ಗಳನ್ನು ಡಲ್ಟ್ ಆರ್ಥಿಕ ಸಹಾಯದಿಂದ ಖರೀದಿಸಲು ಮಂಜೂರಾತಿ ದೊರೆತಿದ್ದು, ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪೂರ್ಣಗೊಂಡ ಹೊಸಬಸ್ ಡಿಪೋ ಜೊತೆಗೆ ಇತರೆ ಘಟಕಗಳಿಗೆ ಅವಶ್ಯಕತೆಗನುಗುಣವಾಗಿ ಹೊಸ ಬಸ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ರಾಯಚೂರಿನಲ್ಲಿ ನೂತನ ಬಸ್‌ಘಟಕದ ಕಾಮಗಾರಿ ಪೂರ್ಣಗೊಂಡಿದ್ದು,ಶೀಘ್ರದಲ್ಲಿ ಉದ್ಘಾಟಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ಅವರು ರಾಯಚೂರು ಜಿಲ್ಲೆಯಲ್ಲಿ ಒಟ್ಟು 07 ಬಸ್‌ಘಟಕಗಳಿದ್ದು,665ಬಸ್‌ಗಳಿದ್ದು,ಅವುಗಳಲ್ಲಿ 654 ಬಸ್‌ಗಳು ಚಾಲನೆಯಲ್ಲಿವೆ ಎಂದು ಅವರು ತಿಳಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್
ಬೆಳಗಾವಿ ಸುವರ್ಣಸೌಧ,ಡಿ.04(ಕರ್ನಾಟಕ ವಾರ್ತೆ): ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪ್ರಸ್ತುತ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ದಿನನಿತ್ಯ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಅವರು ಉತ್ತರಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಬೇಡಿಕೆಗಳ ಹಿನ್ನೆಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಗಳ ಕಟಾವು ಪೂರ್ವ ಅವಧಿಯಲ್ಲಿ 7 ಗಂಟೆಗಳಿಗೂ ಹೆಚ್ಚಿನ ಅವಧಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ಹಗಲಿನಲ್ಲಿ 4 ಗಂಟೆಗಳು ಹಾಗೂ ರಾತ್ರಿ ವೇಳೆ 3 ಗಂಟೆಗಳು ಸೇರಿ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ಈ ವರ್ಷ ಬರಗಾಲವಾಗಿರುವುದರಿಂದ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಪ್ರಮಾಣ ದ್ವಿಗುಣವಾಗಿರುವುದರಿಂದ,ಲಭ್ಯ ಸಂಪನ್ಮೂಲಗಳಿAದ ವಿದ್ಯುತ್ ಪಡೆದು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆಲವು ಸಮಯಗಳಲ್ಲಿ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಲಭ್ಯತೆ/ಉತ್ಪಾದನೆ ಕುಂಠಿತಗೊAಡು ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಿರುವುದನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.

ರೂ.40 ಕೋಟಿ ವೆಚ್ಚದಲ್ಲಿ 19.30ಲಕ್ಷ ಹದಿಹರೆಯದ ಹೆಣ್ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ವಿತರಣೆಗೆ ಕ್ರಮ: ಆರೋಗ್ಯ ಸಚಿವ ದಿನೇಶ ಗುಂಡೂರಾವ್
ಬೆಳಗಾವಿ ಸುವರ್ಣಸೌಧ,ಡಿ.04(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಶುಚಿ ಕಾರ್ಯಕ್ರಮ ರೂಪಿಸಲಾಗಿದ್ದು, ಅದರಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. 40 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲಾ/ಕಾಲೇಜುಗಳ 10 ರಿಂದ 18 ವಯೋಮಾನದ 19.30ಲಕ್ಷ ವಿದ್ಯಾರ್ಥಿನಿಯರಿಗೆ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು.

ವಿಧಾನಪರಿಷತ್‌ನಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.ಶುಚಿ ಕಾರ್ಯಕ್ರಮದಡಿ ಹದಿಹರೆಯದವರಲ್ಲಿ ಋತುಸ್ರಾವದ ಶುಚಿತ್ವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹದಿಹರೆಯದವರಿಗೆ ಸ್ಯಾನಿಟರಿ ನ್ಯಾಪಕಿನ್ ಬಳಕೆ ಹಾಗೂ ಉಪಯೋಗಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಸಮುದಾಯ ಮತ್ತು ವಿಶೇಷವಾಗಿ ಹದಿಹರೆಯದವರಲ್ಲಿ ಋತುಸ್ರಾವ ನೈರ್ಮಲ್ಯದ ಕುರಿತು ದೃಷ್ಟಿಕೋನ ಬದಲಾಯಿಸಲಾಗುತ್ತಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದರ ಮುಖಾಂತರ ಬಳಕೆಯನ್ನು ಪ್ರೋತ್ಸಾಹಿಸುವುದು ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ; ಅಗಲಿದ ಗಣ್ಯರಿಗೆ ಸಂತಾಪ

ಸುವರ್ಣ ಸೌಧ ಬೆಳಗಾವಿ, ಡಿ.4 (ಕರ್ನಾಟಕ ವಾರ್ತೆ): ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭವಾಯಿತು. ಹಿರಿಯರ ಮನೆಯೆನಿಸಿರುವ ವಿಧಾನ ಪರಿಷತ್ತಿನಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಇತ್ತೀಚೆಗೆ ನಿಧನರಾದ ರಾಜ್ಯ ವಿಧಾನಮಂಡಲದ ಎರಡೂ ಸದನಗಳ ಹಾಗೂ ಸಂಸತ್ತಿನ ಉಭಯ ಸದನಗಳ ಮಾಜಿಸದಸ್ಯರು, ಮಾಜಿ ಸಚಿವರು, ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾಗಿದ್ದ ಡಿ.ಬಿ.ಚಂದ್ರೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್. ವಿಶ್ವನಾಥ, ಹಿರಿಯ ವಿಜ್ಞಾನಿ ಪ್ರೊ. ಎಂ.ಆರ್. ಸತ್ಯನಾರಾಯಣರಾವ್, ಹಿರಿಯ ವಿಜ್ಞಾನಿ ಡಾ.ವಿ.ಎಸ್. ಅರುಣಾಚಲಂ, ಖ್ಯಾತ ಸಂಖ್ಯಾಶಾಸ್ತçಜ್ಞ ಡಾ: ಕಲ್ಯಂಪುಡಿ ರಾಧಾಕೃಷ್ಣರಾವ್, ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ಮಮತಾ ಗುಡೂರ್, ಹಿರಿಯ ಲೇಖಕಿ ಡಾ: ಕಮಲಾ ಹೆಮ್ಮಿಗೆ , ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ಹಿರಿಯ ಹಿಂದೂಸ್ತಾನಿ ಗಾಯಕ ಪ್ರೊ. ಹನುಮಣ್ಣ ನಾಯಕ ದೊರೆ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಸಭಾನಾಯಕ ಎನ್.ಎಸ್.ಬೋಸರಾಜ ಸಂತಾಪ ಸೂಚಿಸಿ ನಿರ್ಣಯ ಅನುಮೋದಿಸಿ ಅಗಲಿದ ಗಣ್ಯರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿ ಗೌರವ ಸೂಚಿಸಿದರು.ಅಗಲಿದ ಗಣ್ಯರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.


ಕಲ್ಯಾಣ ಕರ್ನಾಟಕ ಶಿಕ್ಷಕರ ನೇಮಕಾತಿಗೆ ಕ್ರಮ-ಸಚಿವ ಮಧು ಬಂಗಾರಪ್ಪÀ
ಸುವರ್ಣ ಸೌಧ ಬೆಳಗಾವಿ, ಡಿ.4 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಕರ ಕೊರತೆಯನ್ನು ತುಂಬುವುದರ ಜೊತೆಗೆ ಈ ಭಾಗದ ಶಾಲೆಗಳಿಗೆ ಅಗತ್ಯವಿರುವ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಆದ್ಯತೆಯಲ್ಲಿ ಒದಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಶಶೀಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣ ಆಯುಕ್ತಾಲಯದಲ್ಲಿ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಸಿಬ್ಬಂದಿಗಳ ವರ್ಗಾವಣೆಗೆೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಪ್ರಾಥಮಿಕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಕುರಿತಂತೆ ಸದಸ್ಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್. ಮಧು ಬಂಗಾರಪ್ಪ ಅವರು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಖಾಲಿ ಇರುವ 2120 ದೈಹಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2500 ಹುದ್ದೆಗಳ ಭರ್ತಿ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದರು.


ಆನೆ ಹಾವಳಿ ನಿಯಂತ್ರಣ ಸಿಬ್ಬಂದಿಗೆ ಹೆಚ್ಚಿನ ತರಬೇತಿ-ಸಚಿವ ಈಶ್ವರ ಖಂಡ್ರೆ
ಸುವರ್ಣ ಸೌಧ ಬೆಳಗಾವಿ, ಡಿ.4 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಈಗಾಗಲೇ ಏಳು ಆನೆ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು, ಆನೆ ಹಿಡಿಯಲು ನಿಯೋಜಿಸಿರುವ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದ ಎಂದು ಅರಣ್ಯ ,ಜೈವಿಕ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರ‍್ರೆ ಹೇಳಿದರು, ವಿಧಾನಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ಡಾ.ತೇಜಸ್ವಿನಿ ಗೌಡ ಅವರು, ಆನೆ ಹಾವಳಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು ಅನೆ ಕಂದಕ ನಿರ್ಮಾಣ, ರೇಲ್ವೇ ಬ್ಯಾರಿಕೇಡ್‌ಗಳ ಅಳವಡಿಕೆಯನ್ನು ಮಾಡಲಾಗುವುದು ಎಂದರು.


2030 ರೊಳಗೆ ಅಪೌಷ್ಠಿಕತೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ-ಸಚಿವ ದಿನೇಶ್ ಗುಂಡೂರಾವ್
ಸುವರ್ಣ ಸೌಧ ಬೆಳಗಾವಿ, ಡಿ.4 (ಕರ್ನಾಟಕ ವಾರ್ತೆ): ಮಹಿಳೆಯರು ಮತ್ತು ಮಕ್ಕಳಲ್ಲಿರುವ ರಕ್ತಹೀನತೆ(ಅನೀಮಿಯಾ)ವನ್ನು 2030 ರೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್ ಅವರು ವಿಷಯ ಪ್ರಸ್ತಾಪಿಸಿ, ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಮಹಿಳೆಯರು ಮತ್ತು ಮಕ್ಕಳು ಬಳಲುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಅನೀಮಿಯಾದಿಂದ ಬಳಲುತ್ತಿರುವ ಮಹಿಳೆಯರು ಮತ್ತು ಹದಿಹರೆಯದವರ ಸಂಖ್ಯೆ ಸುಮಾರು 2 ಕೋಟಿ ಎಂದು ಗುರುತಿಸಲಾಗಿದೆ, ಇದರ ನಿವಾರಣೆಗೆ 185 ಕೋಟಿ ರೂ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, 2030 ರ ವೇಳೆಗೆ ರಜ್ಯದಲ್ಲಿ ಈ ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣ ಹತ್ಯೆ ಕುರಿತಂತೆ ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪಿಸಿದರು. ಈ ಪ್ರಕರಣವನ್ನು ಈಗಾಗಲೇ ಸಿಓಡಿ ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.


About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.