Avail Personal Benefit of Narega Scheme- Mahantagowda Patil Advice
ವೈಯಕ್ತಿಕ ಕಾಮಗಾರಿಗಳ ಆದೇಶ ಪ್ರತಿ ವಿತರಣಾ ಅಭಿಯಾನ
ಗಂಗಾವತಿ : ರೈತಾಪಿ ವರ್ಗದವರು ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ.) ಮಹಾಂತಗೌಡ ಪಾಟೀಲ್ ಅವರು ಹೇಳಿದರು.
ತಾಲೂಕಿನ ಜಂಗಮರ ಕಲ್ಗುಡಿ ಗ್ರಾಪಂ ಕಾರ್ಯಾಲಯದಲ್ಲಿ ನರೇಗಾ ಯೋಜನೆಯ 2024-25 ನೇ ಸಾಲಿನ ವೈಯಕ್ತಿಕ ಫಲಾನುಭವಿಗಳಿಗೆ ಆಯೋಜಿಸಿದ್ದ ಕಾಮಗಾರಿ ಆದೇಶ ಪ್ರತಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಗಾದಡಿ ಜಾನುವಾರು ಶೆಡ್, ಕೋಳಿ ಶೆಡ್, ಮೇಕೆ ಶೆಡ್ ಮಾಡಿಕೊಳ್ಳಲು ಅವಕಾಶವಿದೆ. 2024-25 ನೇ ಸಾಲಿನಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪ್ರತಿಗಳನ್ನು ನೀಡಲಾಗಿದ್ದು, ಫಲಾನುಭವಿಗಳು ನಿಯಮಾವಳಿ ಪ್ರಕಾರ ಶೆಡ್ ನಿರ್ಮಿಸಿಕೊಳ್ಳಬೇಕು. ಸದರಿ ಶೆಡ್ ಬೇರೆ ಚಟುವಟಿಕೆಗಳಿಗೆ ಬಳಸಿಕೊಂಡರೆ ಯೋಜನೆಯ ಹಣ ವಸೂಲಾತಿ ಮಾಡಿಕೊಳ್ಳಲಾಗುವುದು ಎಂದರು.
ನರೇಗಾ ಯೋಜನೆಯಿಂದ ದೂರ ಉಳಿದ ರೈತಾಪಿ ವರ್ಗದವರು ಜಾನುವಾರು ಸಾಕಣೆ ಮಾಡಲು ನರೇಗಾದಡಿ 57 ಸಾವಿರ ರೂ. ಸಹಾಯಧನ ಸೌಲಭ್ಯವಿದ್ದು, ಶೆಡ್ ನಿರ್ಮಾಣದ ನಂತರ ಸಕಾಲಕ್ಕೆ ಫಲಾನುಭವಿ ಖಾತೆಗೆ ಸಾಮಗ್ರಿ ಮೊತ್ತ ಬಿಡುಗಡೆಯಾಗಲಿದೆ. ಶೆಡ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಂಗಮರ ಕಲ್ಗುಡಿ ಗ್ರಾಪಂ ಅಧ್ಯಕ್ಷರಾದ ಶ್ರುತಿ ಧನಂಜಯ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪ್ರತಿ ವಿತರಣೆ ಮಾಡಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಂಗಳಪ್ಪ ನಾಯ್ಕ, ಕಾರ್ಯದರ್ಶಿಗಳಾದ ಯಮನೂರಪ್ಪ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕರಾದ ಚೇತನ್ ಕುಮಾರ್, ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿಗಳು ಇದ್ದರು.