Breaking News

ಐತಿಹಾಸಿಕಹನುಮಮಾಲಾವಿಸರ್ಜನೆಗೆಕ್ಷಣಗಣನೆ: ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ

Countdown to historic Hanumanala dissolution: Festival celebrations at Anjanadri

ಕೊಪ್ಪಳ ಡಿಸೆಂಬರ್ 23 (ಕರ್ನಾಟಕ ವಾರ್ತೆ): ಹನುಮಮಾಲಾ ವಿಸರ್ಜನೆಗೆ ಕ್ಷಣಗಣನೆ ಶುರುವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಎಲ್ಲಾ ವ್ಯವಸ್ಥೆಯು ಅಚ್ಚುಕಟ್ಟಾಗಿ ಸಿದ್ಧಗೊಂಡಿದ್ದರಿಂದ ಆನೇಗೊಂದಿಯ ಚಿಕ್ಕರಾಂಪುರ ಹತ್ತಿರದ ಅಂಜನಾದ್ರಿ ಬೆಟ್ಟ ಹನುಮ ಜನ್ಮಭೂಮಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಹತ್ತು ಹಲವು ಬಗೆಯ ವಿದ್ಯುದೀಪಗಳ ಅಲಂಕಾರದಿಂದಾಗಿ ಸಂಜೆ ವೇಳೆಯಿಂದ ಮನಮೋಹಕ ದೃಶ್ಯವಾಗಿ ಅಂಜನಾದ್ರಿ ಬೆಟ್ಟವು ಸುತ್ತ ಎತ್ತೆತ್ತಲೂ ಬಹುದೂರದಿಂದಲೇ ಕಣ್ಮನ ಸೂರೆಗೊಳ್ಳುತ್ತಿದೆ. ಸೆಲ್ಪೀ ಪಾಯಿಂಟ್ ಎಂಬಂತೆ ರೂಪುಗೊಂಡಿರುವ ಬೆಟ್ಟದೊಂದಿಗೆ ಸೆಲ್ಫಿ ಪಡೆದು ಹನುಮ ಭಕ್ತರು ಸಂಭ್ರಮಿಸುತ್ತಿದ್ದಾರೆ.
ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ತಿಂಗಳ ಮೊದಲೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಕಾರ್ಯಾರಂಭ ಮಾಡಿದ್ದವು. ಅಚ್ಚುಕಟ್ಟಾದ ಯೋಜನೆ ರೂಪಿಸಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಸಿದ್ಧತೆ ಮಾಡಿಕೊಂಡಿದ್ದರಿಂದ ಅಂಜನಾದ್ರಿಯಲ್ಲಿ ಎಲ್ಲಾ ಕಡೆಗಳಲ್ಲೂ ಕುಡಿಯುವ ನೀರು, ಸ್ನಾನಗೃಹ, ವಾಹನಗಳಿಗೆ ಪಾರ್ಕಿಂಗ್, ಪ್ರಸಾದ ಸೇರಿದಂತೆ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.
ಅಂಜನಾದ್ರಿಯತ್ತ ಹನುಮ ಭಕ್ತರು: ಶ್ರೀ ಆಂಜನೇಯ ಜನ್ಮಸ್ಥಳ ಪ್ರಖ್ಯಾತಿಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಅಂಜನಾದ್ರಿಯ ಆಂಜನೇಯ ಸ್ವಾಮಿ ದೇವಸ್ಥಾನದತ್ತ ದೇಶದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಹನುಮ ಭಕ್ತರು ತಂಡ ತಂಡವಾಗಿ ಆಗಮಿಸುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿದೆ.
ತಳಿರು ತೋರಣದಿಂದ ಅಲಂಕಾರ: ಪ್ರಸಿದ್ಧ ಅಂಜನಾದ್ರಿಯ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಾದಗಟ್ಟೆಯ ಪ್ರದೇಶದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಹಚ್ಚ ಹಸುರಿನ ಹೂಬಳ್ಳಿಯಿಂದ ಪಾದಗಟ್ಟೆಯು ಜನಮನ ಸೂರೆಗೊಳ್ಳುತ್ತಿದೆ.
ಸಹಾಯವಾಣಿ ಕಾರ್ಯಾರಂಭ: ಭಕ್ತಾದಿಗಳಿಗೆ ತಂಗಲು, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯದ ಮಾಹಿತಿ ನೀಡಲು ಗಂಗಾವತಿ ರೈಲು ನಿಲ್ದಾಣ, ಗಂಗಾವತಿ ಬಸ್ ನಿಲ್ದಾಣ, ಕೃಷ್ಣದೇವರಾಯ ವೃತ್ತ, ಅಂಜನಾದ್ರಿ ದೇವಸ್ಥಾನದ ಮುಂಭಾಗ ಸೇರಿದಂತೆ ವಿವಿಧೆಡೆ ಡಿಸೆಂಬರ್ 23ರ ಬೆಳಗ್ಗೆಯಿಂದಲೇ ಸಹಾಯವಾಣಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ.
ಉಚಿತ ಸಾರಿಗೆ ವ್ಯವಸ್ಥೆ: ಪೂರ್ವ ನಿರ್ಧಾರದಂತೆ ಅಂಜನಾದ್ರಿಗೆ ತೆರಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಸಹ ಕಲ್ಪಿಸಿದ್ದು ಭಕ್ತರನ್ನು ಕರೆದೊಯ್ಯಲು ಅಲಂಕೃತ ಬಸ್‌ಗಳು ಅಂಜನಾದ್ರಿಯ ವಿವಿಧೆಡೆ ಸಾಲಾಗಿ ನಿಂತಿವೆ.
ತಂಡವಾಗಿ ಕಾರ್ಯನಿರ್ವಹಣೆ: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ವಿವಿಧ ಕಾರ್ಯಕ್ಕೆ ನಿಯೋಜನೆಗೊಂಡಿರುವ ಆಯಾ ಇಲಾಖೆಗಳ ಸಿಬ್ಬಂದಿಯು ತಂಡವಾಗಿ ಅಧಿಕಾರಿಗಳ ಮಾರ್ಗದರ್ಶನದಡಿ ನಾನಾ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೊವಿಡ್ ಹಿನ್ನೆಲೆ ಮುಂಜಾಗ್ರತಾ ಕ್ರಮ: ಕೋವಿಡ್ ಹಿನ್ನೆಲೆಯಲ್ಲಿ ಸಹ ಅಗತ್ಯ ಸಂಖ್ಯೆಯಲ್ಲಿ ಚಿಕಿತ್ಸಾಲಯಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಂಜನಾದ್ರಿಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ರಕ್ತದಾನ ಶಿಬಿರ: ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಆರೋಗ್ಯ ಇಲಾಖೆಯು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹನುಮ ಮಾಲಾಧಾರಿ ಭಕ್ತಾದಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ. ಕುಷ್ಟಗಿ ತಹಸೀಲ್ದಾರ ಶೃತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದೆ ವೇಳೆ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಸಹಭಾಗೀತ್ವ: ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ ಅವರ ನೇತೃತ್ವದಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಿರ್ವಹಣೆಯು ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ, ತಹಸೀಲ್ದಾರರಾದ ವಿಶ್ವನಾಥ ಮುರಡಿ, ಶೃತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ದೇವಿ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಾನಾ ಸಮಿತಿಗಳ ಮೇಲುಸ್ತುವಾರಿ ವಹಿಸಿ ಕಾರ್ಯಪ್ರವೃತ್ತರಾಗಿದ್ದು, ಗಂಗಾವತಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಗಂಗಾವತಿ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ, ಸ್ಥಳೀಯ ಗ್ರಾಮ ಪಂಚಾಯತ್ ಸೇರಿದಂತೆ ಹತ್ತಾರು ಇಲಾಖೆಗಳು, ವಿವಿಧ ಸಂಘ-ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಭಾಗೀತ್ವ ನೀಡಿವೆ.
ನೋಡಲ್ ಅಧಿಕಾರಿಗಳು ಭೇಟಿ: ಹನುಮಮಾಲಾ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಡಿಸೆಂಬರ್ 23ರಂದು ಅಂಜನಾದ್ರಿಗೆ ಭೇಟಿ ನೀಡಿ ನಾನಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಸ್ವಾಗತ ಕಮಾನುಗಳು: ಹನುಮ ಮಾಲಾಧಿಕಾರಿಗಳಿಗೆ ಅಂಜನಾದ್ರಿಗೆ ಸ್ವಾಗತಿಸಲು ಅಂಜನಾದ್ರಿ ಬೆಟ್ಟದ ಕೆಳಗೆ ಮತ್ತು ಸುತ್ತಲು ಮತ್ತು ಇನ್ನೀತರ ಕಡೆಗಳಲ್ಲಿ ಹಾಕಿರುವ ಬೃಹಧಾಕಾರದ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ, ಕುಕನೂರ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಹನುಮ ಮಾಲಾಧಿಕಾರಿಗಳನ್ನು ಸ್ವಾಗತಿಸುವ ಕಮಾನುಗಳು ಕಂಡು ಬಂದವು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.