Increase your knowledge to succeed in competitive exams – Sachin Jadhav
ಸಾವಳಗಿ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಮ್ಮನ್ನು ತೆರೆದುಕೊಳ್ಳಬೇಕು. ವಿವಿಧ ಮೂಲಗಳಿಂದ ಜ್ಞಾನದ ಪರಿಧಿ ಹೆಚ್ಚಿಸಿಕೊಳ್ಳಬೇಕು. ಸತತ ಪರಿಶ್ರಮದಿಂದ ಕಠಿಣ ಎನ್ನುವುದನ್ನು ಸುಲಭವಾಗಿಸಿಕೊಳ್ಳಬೇಕು ಎಂದು ಜಮಖಂಡಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು ಡಾ. ಸುನಂದಾ ಎಸ್. ಶಿರೂರು ಹೇಳಿದರು.
ಇಲ್ಲಿನ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಕಲಾ ಹಾಗೂ ವಾಣಿಜ್ಯ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯಶಸ್ಸು ಕಾಣಲು ಕಠಿಣ ಪರಿಶ್ರಮ, ಧೈರ್ಯ ಹಾಗೂ ಶ್ರದ್ಧೆ ಬಹಳ ಮುಖ್ಯವಾಗಿರುತ್ತದೆ. ಜೀವನ ಶೈಲಿಯಲ್ಲಿ ಕೀಳರಿಮೆ ಹೆಚ್ಚು ಕಡಿಮೆ ಅಂತ ಇರುವುದಿಲ್ಲ, ವಿದ್ಯಾರ್ಥಿಗಳಿಗೆ ಜೀವನ ಶೈಲಿ, ಹಸಿವು ಹಾಗೂ ಶಿಸ್ತು ಬಹಳ ಮುಖ್ಯ, ಯಾರು ಈ ಮೂರು ಅಂಶಗಳನ್ನು ರೂಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆ ಎಂದರು.
ನಮ್ಮಲ್ಲಿ ಯಾವಾಗಲೂ ಹೊಸದನ್ನು ಕಲಿಯುವ ಕುರಿತು ಹಸಿವಿರಬೇಕು, ಕೆಲಸ ಕಾರ್ಯ, ಸಾಧನೆಯಲ್ಲಿಯೂ ಸಹ ಹಸಿವಿರಬೇಕು. ಶಿಸ್ತು ರೂಡಿಸಿಕೊಂಡವರು ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ಶಿಕ್ಷಕ ಇರ್ಷಾದ್ ಮುಲ್ಲಾ ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜು ಸಲಹಾ ಸಮಿತಿಯ ಸದಸ್ಯರಾದ ರಾಜುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಲಕ್ಷ್ಮಣ್ ಪುಂಡೆ, ಪಾರ್ಶ್ವನಾಥ ಉಪಾಧ್ಯ, ಸುರೇಶ್ ಮಾಳಿ, ಪ್ರಾಂಶುಪಾಲರಾದ ಪ್ರೊ ಅಶೋಕ ಕನ್ನಾಳ, ಊರಿನ ಹಿರಿಯರು, ಹಾಗೂ ಕಾಲೇಜಿನ ಸಹ ಶಿಕ್ಷಕರು ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.