Breaking News

ಧರ್ಮದಮಾರಾಟಗಾರರ ಎಡಬಿಡಂಗಿತನದ ಅನಾವರಣ:ಸಾಣೇಹಳ್ಳಿ ಶ್ರೀಗಳ ಲೇಖನ

Unveiling the Clumsiness of Apostates: Article by Sanehalli Shri

“ಕೆಲವರು ತಮ್ಮ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳಲು ಜನಪರ ಕಾಳಜಿಯ, ವೈಚಾರಿಕ ಚಿಂತನೆಯ, ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿಗಳ ಮುಖಕ್ಕೆ ಮಸಿಬಳಿಯಲು ಹೇಸುವುದಿಲ್ಲ..”

“ನಮ್ಮ ಗುರುಗಳು ಏನೇ ಮಾಡಿದರೂ ಶರಣರ ಆಶಯ ಬಿಟ್ಟು ಮಾಡಿದವರಲ್ಲ. ಊರಿನಲ್ಲಿ ಏನಾದರೂ ಕಾರ್ಯ ಮಾಡುವಾಗ ಗಣಪತಿ ಪೂಜೆಯಿಂದ ಮಾಡುತ್ತೀರಿ. ಗಣಪತಿ ನಮ್ಮ ಸಂಸ್ಕೃತಿ ಅಲ್ಲ. ಆದರೂ ಆ ಪರಂಪರೆಯನ್ನು ಬಹಳ ಜನರು ಇವತ್ತಿಗೂ ಮುಂದುವರಿಸಿದ್ದೀರಿ. ಪ್ರಾರ್ಥನೆ ಮಾಡಿರಿ ಎಂದರೆ ‘ಗಣಪತಿ’ ಎಂದೇ ಷುರುವಾಗುತ್ತೆ. ನಮ್ಮ ಗುರುಗಳು ಆ ಎಲ್ಲ ಪರಂಪರೆಯನ್ನು ಬದಲಾಯಿಸಿ ವಚನಗಳನ್ನು ಹಾಡುವ ಪದ್ಧತಿಯನ್ನು ಜಾರಿಯಲ್ಲಿ ತಂದರು. ವಚನಗಳನ್ನು ಹಾಡಬಹುದು ಅನ್ನೋದನ್ನು ತೋರಿಸಿಕೊಟ್ಟವರು ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಅವರ ಯಾವುದೇ ಕಾರ್ಯಕ್ರಮ ‘ಶಿವ’ ಧ್ವಜಾರೋಹಣದ ಮೂಲಕವೇ ನಡೀತಾ ಇತ್ತು. ಅದು ತರಳಬಾಳು ಹುಣ್ಣಿಮೆ, ಶರಣರ ಜಯಂತಿ ಮತ್ತಾವುದೇ ಆಗಿರಬಹುದು. ಸಾಣೇಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ‘ಶಿವ’ ಧ್ವಜಾರೋಹಣ ಇದ್ದೇ ಇರುತ್ತದೆ”.

ಈ ಮಾತುಗಳನ್ನು ನಾವು ಹೇಳಿದ್ದು 2-11-2023ರಂದು ‘ಶಿವ’ ಧ್ವಜಾರೋಹಣ ನೆರವೇರಿಸಿ. ಆಗ ‘ಗಣಪತಿ ನಮ್ಮ ಸಂಸ್ಕೃತಿ ಅಲ್ಲ’ ಎಂದದ್ದೇ ಕೆಲವರಿಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಮುರಿದಂತಾಗಿದೆ. ಅದಕ್ಕಾಗಿ ನಮ್ಮ ಮೇಲೆ ಪತ್ರಿಕೆ, ವಿದ್ಯುನ್ಮಾದ್ಯಮಗಳ ಮೂಲಕ ದಾಳಿ ನಡೆಸಿದ್ದಾರೆ. ಹಿಂದೂಪರ ಹೋರಾಟಗಾರ ಪ್ರಶಾಂತ ಸಂಬರಗಿ ನಮ್ಮ ವಿರುದ್ಧ ‘ದೂರು ದಾಖಲಿಸಿದ್ದೇನೆ. ಹಿಂದೂ ಕಾರ್ಯಕರ್ತರು, ಅಭಿಮಾನಿಗಳು ರಾಜ್ಯದ ನಾನಾ ಭಾಗದಲ್ಲಿಯೂ ಇದೇ ರೀತಿ ಶ್ರೀಗಳ ವಿರುದ್ಧ ದೂರು ದಾಖಲಿಸುವ ಮೂಲಕ ಹಿಂದೂ ಧರ್ಮದ ಶಕ್ತಿಯನ್ನು ಮನವರಿಕೆ ಮಾಡಿಕೊಡಬೇಕು…’ ಎಂದಿದ್ದಾರೆ. ಸ್ತುತ್ಯರ್ಹ ಕಾರ್ಯ.

ಪ್ರಭುದೇವರು ‘ಪುರಾಣವೆಂಬುದು ಪುಂಡರ ಗೋಷ್ಠಿ, ಶಾಸ್ತ್ರವೆಂಬುದು ಸಂತೆಯ ಸುದ್ದಿ, ತರ್ಕವೆಂಬುದು ತಗರ ಹೋರಟೆ… ಗುಹೇಶ್ವರನೆಂಬುದು ಮೀರಿದ ಘನ’ ಎಂದರೆ ಸಿದ್ಧರಾಮೇಶ್ವರರು ‘ಪುರಾಣವೆಂಬುದು ಮೃತವಾದವರ ಗಿರಾಣವಯ್ಯ, ಶಾಸ್ತ್ರವೆಂಬುದು ಮನ್ಮಥ ಶಸ್ತ್ರವಯ್ಯಾ’ ಎಂದು ಲೇವಡಿ ಮಾಡಿದ್ದಾರೆ. ಬಸವಣ್ಣನವರು ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ’ ಎಂದು ವಾಸ್ತವತೆಗೆ ಕನ್ನಡಿ ಹಿಡಿದಿದ್ದಾರೆ. ಗಣೇಶೋತ್ಸವದಂದು ನಡೆಯುವ ಅವಾಂತರಗಳನ್ನು ನೋಡದಿರುವವರು ವಿರಳ. ಆಗ ಡಿಜೆ ಸೌಂಡ್ ಹಾಕಿ ಕುಣಿಯುವರು. ಅದರ ಶಬ್ದದಿಂದ ಕೆಲವರು ಕಿವುಡರಾಗಿದ್ದಾರೆ, ಹೃದಯಾಘಾತಕ್ಕೆ ತುತ್ತಾಗಿದ್ದಾರೆ ಎನ್ನುವರು. ನಮಗೆ ಅರಿವು ಬಂದಾಗಿನಿಂದಲೂ ‘ಗಣಪತಿ ಶರಣ ಸಂಸ್ಕೃತಿಯಲ್ಲ’ ಎಂದು ಹೇಳುತ್ತ ಬಂದಿದ್ದೇವೆ. ಬಸವತತ್ವಾನುಯಾಯಿಗಳು ಪೂಜಿಸಬೇಕಾದ್ದು ಗುರು ಕರುಣಿಸಿದ ಇಷ್ಟಲಿಂಗವನ್ನು. ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ಗಣೇಶೋತ್ಸವ, ದೇವಾಲಯದ ಉದ್ಘಾಟನೆ ಇತ್ಯಾದಿ ಕಾರ್ಯಗಳಿಗೆ ಹೋಗುತ್ತಿದ್ದೆವು. ಅಲ್ಲಿ ಹೇಳುತ್ತಿದ್ದುದು ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಬಸವತತ್ವವನ್ನೇ. ಎಷ್ಟೇ ತತ್ವ ಹೇಳಿದರೂ ಪರಂಪರೆಯಿಂದ ಬಂದಿರುವ ಸಂಪ್ರದಾಯಗಳನ್ನು ಬದಲಾಯಿಸುವುದು ಕಷ್ಟಸಾಧ್ಯ ಎನಿಸಿದಾಗ ಕಳೆದ ಸುಮಾರು 25 ವರ್ಷಗಳಿಂದ ಅಂಥ ಯಾವ ಕಾರ್ಯಕ್ರಮಗಳಿಗೂ ನಾವು ಹೋಗುತ್ತಿಲ್ಲ.

ಮೌಢ್ಯಗಳನ್ನು ನಿರಾಕರಿಸುವ, ಶಾಸ್ತ್ರಕಾರರ ಹುಳುಕುಗಳನ್ನು ಬಯಲಿಗೆಳೆಯುವ, ಸ್ಥಾವರ ಪೂಜೆ ಬೇಡವೆನ್ನುವ ಮಾತುಗಳನ್ನು ಹಿಂದಿನಂತೆ ಈಗಲೂ ಹೇಳುತ್ತಲೇ ಇದ್ದೇವೆ. ಲೇಖನಗಳನ್ನೂ ಬರೆದಿದ್ದೇವೆ. ದೃಶ್ಯ ಮಾಧ್ಯಮಗಳಲ್ಲಿ ಪ್ರತಿದಿನ ಬೆಳಗ್ಗೆ ಜ್ಯೋತಿಷ್ಯ, ಭವಿಷ್ಯ ಹೇಳುವ ವೇಷಧಾರಿ ಗುರುಗಳನ್ನು ‘ಮಾನಸಿಕ ಭಯೋತ್ಪಾದಕರು’ ಎಂದೂ ಲೇವಡಿ ಮಾಡಿದ್ದೇವೆ. ಗಣಪತಿ ಪೌರಾಣಿಕ ಕಲ್ಪನೆ ಎನ್ನುವುದು ಯಾರಿಗೆ ತಾನೆ ಗೊತ್ತಿಲ್ಲ? ಶರಣರ ಪರಂಪರೆಯಲ್ಲಿ ಬೆಳೆದ ನಾವು ಪುರಾಣಗಳನ್ನೇ ಒಪ್ಪದಿರುವಾಗ ಪುರಾಣಗಳಿಂದ ಸೃಷ್ಟಿಯಾದ ಗಣೇಶನನ್ನು ಒಪ್ಪಲು ಸಾಧ್ಯವೇ? ಹಾಗಾಗಿ ‘ಗಣಪತಿ ನಮ್ಮ ಸಂಸ್ಕೃತಿ’ ಅಲ್ಲ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲ. ಯಾವ ದೇವರೂ ವರ ಅಥವಾ ಶಾಪ ಕೊಟ್ಟಿಲ್ಲ್ಲ, ಕೊಡುವುದೂ ಇಲ್ಲ. ನಾವು ಕಾಣುವ ಎಲ್ಲ ದೇವರುಗಳು ಮಾನವ ನಿರ್ಮಿತ ಜಡ ವಿಗ್ರಹಗಳು. ದೇವರು ‘ಸಚ್ಚಿದಾನಂದ ನಿತ್ಯಪರಿಪೂರ್ಣ’. ಆ ಚೇತನ ‘ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ’ ಎಂದಿದ್ದಾರೆ ಬಸವಣ್ಣನವರು. ಅವರು ‘ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ’ ಎನ್ನುತ್ತ ಅಂಥ ದೇವರನ್ನು ಜಾತಿ, ಲಿಂಗ ಇತ್ಯಾದಿ ಭೇದವಿಲ್ಲದೆ ಇಷ್ಟಲಿಂಗದ ರೂಪದಲ್ಲಿ ಕರುಣಿಸಿದ್ದಾರೆ. ಲಿಂಗಾಯತರು ಅಂಥ ಲಿಂಗಯ್ಯನನ್ನು ಪೂಜಿಸಬೇಕೇ ಹೊರತು ಬೇರೇನನ್ನೂ ಅಲ್ಲ. ನಮ್ಮಲ್ಲಿ ಪುರಾಣಪ್ರಜ್ಞೆ ಜಾಸ್ತಿ. ಹಾಗಾಗಿ ಶರಣರು ಹೇಳಿದ್ದನ್ನು ಬಿಟ್ಟು ಬೇರೆಲ್ಲ ಮಾಡುವರು ಎಂದು ಬಸವತತ್ವಪ್ರೇಮಿಗಳಿಗೆ ಎಚ್ಚರಿಸುವ ನಿಟ್ಟಿನಲ್ಲಿ ಗಣಪತಿಯ ಪ್ರಸ್ತಾಪ ಮಾಡಿದ್ದೇವೆ.

‘ಲೀಲಾ ವಿನೋದಪ್ರಿಯ’, ‘ಭಾರ್ಗವಾನುಜ, ಶಾರದಾಪುರ’ ಮತ್ತಿತರರು ವಿಶ್ವೇಶ್ವರ ಭಟ್ಟರ ‘ವಿಶ್ವವಾಣಿ’ ಪತ್ರಿಕೆಯಲ್ಲಿ (೪-೧೧-೨೦೨೩) ‘ಗಣಪತಿಯನ್ನು ದೇವರೇ ಅಲ್ಲವೆನ್ನುವ ಪಂಡಿತಾರಾಧ್ಯರು ತಾವು ಅನುಸರಿಸುವ ವಚನಕಾರರು ಪ್ರಸ್ತಾಪಿಸಿದ ಗಣಪತಿಯನ್ನು ಮರೆತದ್ದೇಕೆ? ಬುದ್ಧಿಜೀವಿ ಎನಿಸಿಕೊಳ್ಳಲು ಹೊರಟ ಸಾಣೇಹಳ್ಳಿ ಬುದ್ಧಿಗೆ ಭ್ರಮಣೆ?’ ಎನ್ನುವ ತಲೆಬರಹದಡಿಯಲ್ಲಿ ಪ್ರತಿಕ್ರಿಯಿಸಿರುವುದು ಅವರ ಬೌದ್ಧಿಕ ದಾರಿದ್ರ್ಯ ಮತ್ತು ಬುದ್ಧಿ ಭ್ರಮಣೆಗೆ ಕನ್ನಡಿ ಹಿಡಿದಂತಿದೆ. ಯಾರಿಂದಲೋ ಬುದ್ಧಿಜೀವಿ, ಚಿಂತಕ ಎನಿಸಿಕೊಳ್ಳಲು ನಾವು ನಮ್ಮ ಮನಸ್ಸೊಪ್ಪದ, ತಾರ್ಕಿಕವಲ್ಲದ, ಅವಾಸ್ತವಿಕ ಹೇಳಿಕೆಯನ್ನು ನೀಡುವುದಿಲ್ಲ. ಇದು ವಿ ಭಟ್ಟರಿಗೂ ಗೊತ್ತು. ಅವರೇ ನಮ್ಮ ನಾಟಕೋತ್ಸವಕ್ಕೆ ಬಂದಾಗ ಏನು ಮಾತನಾಡಿದ್ದಾರೆ ಎಂದು ‘ಪ್ರೀತಿಸಿ, ಜಾತಿ-ಅಧಿಕಾರವನ್ನಲ್ಲ; ಮನುಷ್ಯರನ್ನು’ ಎನ್ನುವ ನಮ್ಮ ಸಂಪಾದನಾ ಕೃತಿಯಲ್ಲಿರುವ ಅವರ ಮಾತುಗಳನ್ನು ಓದಿಕೊಳ್ಳಲಿ. ‘… ಕೆಲ ವರ್ಷಗಳಿಂದ ಹೆಚ್ಚಾಗಿ ಸುದ್ದಿಯಲ್ಲಿ ಕಾಣಿಸಿಕೊಳ್ಳದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದೇ ಸಾಲಿಗೆ ಸೇರಿದ್ದಾರೆ’ ಎಂದು ತಮ್ಮ ಅತೀ ಬುದ್ಧಿವಂತಿಕೆ ತೋರಿಸಿಕೊಳ್ಳಲು ‘ವಿನೋದಪ್ರಿಯ/ಭಾರ್ಗವಾನುಜ ಮುಂದಾಗಿದ್ದಾರೆ. ‘ಪ್ರಗತಿಪರ ಚಿಂತಕರ ಹಾಟ್‌ಫೇವರೇಟ್ ಸ್ವಾಮೀಜಿ ನಿಜಗುಣಾನಂದರು ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಯಶಸ್ವಿಯಾದಂತೆಯೇ ಎಚ್ಚೆತ್ತು ತಮಗೂ ಸಾಣೇಹಿಡಿಸಿಕೊಳ್ಳಲು ಮುಂದಾದಂತೆ ತೋರುತ್ತದೆ’ ಎಂದು ವಿಷ ಕಾರಿದ್ದಾರೆ. ಶಿಫಾರಸ್ ಮಾಡಿಸಿಕೊಂಡು ಪ್ರಶಸ್ತಿ ಪಡೆಯುವ ಗೀಳು ನಮಗಿಲ್ಲ. ನಾವು ಯಾವ ಪ್ರಶಸ್ತಿಗೂ ಅರ್ಜಿ ಹಾಕಿದವರಲ್ಲ. ಆದರೂ 2004ರಲ್ಲೇ ‘ರಾಜ್ಯೋತ್ಸವ ಪ್ರಶಸ್ತಿ’, 2012ರಲ್ಲಿ ಕುವೆಂಪು ವಿಶ್ವವಿದ್ಯಾಲಯ ‘ಗೌರವ ಡಾಕ್ಷರೇಟ್’ ಬಂದಿರುವುದು ಈ ಮಹಾಶಯರಿಗೆ ಗೊತ್ತಿದ್ದಂತಿಲ್ಲ.

ಇದ್ದಕ್ಕಿದ್ದಂತೆ ಪ್ರಚಾರಕ್ಕೆ ಬರುವ ಗೀಳು ನಮಗಿಲ್ಲ. ಹಲವು ವರ್ಷಗಳ ನಮ್ಮ ಸಾಧನೆ ಪ್ರಶಸ್ತಿ, ಪ್ರಚಾರಕ್ಕೆ ಕಾರಣವಾಗಿರಬಹುದು. ಅದಕ್ಕಾಗಿ ಮತ್ಸರಪಡುವುದೇಕೆ? ‘ಸಾಣೇಹಳ್ಳಿ ತರಳಬಾಳು ಮಠದ ಪ್ರಭಾವಲಯದಲ್ಲಿ ಸಹಜವಾಗಿ ಮಂಕಾಗಿರುವ ಪಂಡಿತಾರಾಧ್ಯರು, ಅಲ್ಲಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲಾಗದೇ ಎಡಚರ ಬೆನ್ನುಬಿದ್ದು…’ ಎಂದೆಲ್ಲ ಬರೆದು ತಾವೇ ಎಂಥ ಕೊಳಕು ರಾಜಕೀಯ ಮಾಡುತ್ತಿದ್ದಾರೆಂದು ತೋರಿಸಿಕೊಂಡಿದ್ದಾರೆ. ಮಂಕಾಗಲು ನಮಗೇನು ತೊಂದರೆ ಆಗಿದೆ? ನಾವು ಮಂಕಾಗಿದ್ದೇವೆಂದು ಯಾರು ಹೇಳಿದರು? ನಿಮ್ಮ ಹೇಳಿಕೆಯ ಹಿಂದೆ ಯಾರದಾದರೂ ಪ್ರಭಾವ, ಪ್ರಚೋದನೆ ಅಥವಾ ಪಿತೂರಿ ಇದೆಯೇ? ಎಡಪಂಥೀಯರು ಎನ್ನುವ ಬದಲು ‘ಎಡಚರು’ ಎಂದಿರುವುದು ನೀವು ಶುದ್ಧ ಬಲಪಂಥೀಯರು ಎಂದು ಹೇಳಿಕೊಂಡಂತೆ. ಹಾಗಂತ ನಿಮ್ಮನ್ನು ‘ಬಲಚರು’ ಎಂದು ಕರೆಯಲು ಇಚ್ಛಿಸುವುದಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾವೇನು ನಿಮ್ಮಂಥ ಬರಹಗಾರರಲ್ಲ. ನಾವು ಕಾವಿ ಧರಿಸಿ ಸ್ವಾಮಿಗಳಾಗಿರುವುದು ಸತ್ಯದ ದಾರಿಯಲ್ಲಿ ಸಾಗಲು, ಜನರಿಗೆ ಸನ್ಮಾರ್ಗ ತೋರಿಸಲು, ಇದ್ದದ್ದನ್ನು ಇದ್ದಂತೆ ಹೇಳಿ ತಿದ್ದಲು. ತೆರೆಮರೆಯ ಚಟುವಟಿಕೆಗಳನ್ನು ಮಾಡುವ ಅಗತ್ಯ ನಮಗಿಲ್ಲ. ‘ಲಿಂಗತಾರತಮ್ಯ ಮಾಡದೆ ಬೆರೆಯುವುದು’ ಎನ್ನುವ ಪದ ಬಳಕೆಯ ಹಿಂದೆ ಅವರು ಈಗಲೂ ಲಿಂಗತಾರತಮ್ಯ ಮಾಡುವರು, ಅವರಂತೆ ನಾವೂ ಮಾಡಬೇಕು ಎನ್ನುವ ಗುಪ್ತ ಅಜಂಡಾ ಇದ್ದಂತಿದೆ. ಇಂಥವರಿಗೆ ‘ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ’ ಎನ್ನುವ ಶರಣರ ಸಮಾನತಾ ತತ್ವ ಅರ್ಥವಾಗುವುದಾದರೂ ಹೇಗೆ?

‘ನೀವು ಪಾಲಿಸುವ ಶರಣ ಪರಂಪರೆಯ ಪಧಾನ ದೇವತೆ ಶಿವನ ಮಗನೆಂದೇ ಪುರಾಣಗಳಲ್ಲಿ ನಂಬಿಕೊಂಡು ಬಂದಿರುವ ಗಣಾಧೀಶ್ವರನ ಪರಿಕಲ್ಪನೆಯೇ ನಿಮ್ಮಿಂದ ಪ್ರಶ್ನೆಗೊಳಪಡುತ್ತಿದೆ ಎಂದರೆ ಇನ್ನು ನೀವೆಷ್ಟು ಪ್ರಚಾರದ ವಿಚಾರದಲ್ಲಿ ಬರಗೆಟ್ಟು ಹೋಗಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ’ ಎಂದಿರುವ ಲೇಖಕರ ಮನಸ್ಥಿತಿಯನ್ನು ಗಮನಿಸಿದಾಗ ಬರಗೆಟ್ಟವರು ನಾವೋ, ಅವರೋ ಎಂದು ಓದುಗರೇ ತೀರ್ಮಾನಿಸುತ್ತಾರೆ. ಪುರಾಣವನ್ನೇ ನಂಬದ ನಾವು ಪುರಾಣದ ಶಿವ, ಪಾರ್ವತಿ, ಗಣೇಶನನ್ನು ನಂಬಲು ಸಾಧ್ಯವಿಲ್ಲ ಎನ್ನುವ ಅರಿವು ಲೇಖಕರಿಗೆ ಇರಬೇಕಾಗಿತ್ತಲ್ಲವೇ? ‘ಸಕಾರಾತ್ಮಕವಾಗಿ ಸುದ್ದಿಯಲ್ಲಿದ್ದ ನಿಮ್ಮ ಪೀಠ, ವೈಯಕ್ತಿಕ, ಸುಲಭದ ಪ್ರಚಾರದ ನಿಮ್ಮ ತೆವಲಿಗೆ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯ ಮುಂಚೂಣಿಗೆ ಬರುತ್ತಿರುವುದು ದುರದೃಷ್ಟಕರ’ ಎನ್ನುವ ಮಹಾಶಯರಿಗೆ ಪದಗಳನ್ನು ಹೇಗೆ ಬಳಸಬೇಕೆಂಬ ವಿವೇಕವೇ ಇದ್ದಂತಿಲ್ಲ. ವೈಯಕ್ತಿಕ ‘ತೆವಲು’ ಅವರದೇ ಎಂದು ಯಾರಿಗಾದರೂ ಅರ್ಥವಾಗುತ್ತದೆ. ನಮ್ಮ ಪೀಠ ಈಗಲೂ ಸಕಾರಾತ್ಮಕ ಚಟುವಟಿಕೆಗಳಿಂದಾಗಿಯೇ ಸುದ್ದಿಯಲ್ಲಿರುವುದು ಕಾಮಾಲೆ ರೋಗ ಪೀಡಿತರಿಗೆ ನಕಾರಾತ್ಮಕವಾಗಿ ಕಾಣುವುದು ಸಹಜ. ಕೆಲವರು ತಮ್ಮ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳಲು ಜನಪರ ಕಾಳಜಿಯ, ವೈಚಾರಿಕ ಚಿಂತನೆಯ, ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿಗಳ ಮುಖಕ್ಕೆ ಮಸಿಬಳಿಯಲು ಹೇಸುವುದಿಲ್ಲ. ಆ ವರ್ಗಕ್ಕೆ ಭಟ್ಟರ ಪತ್ರಿಕೆ ಸೇರಬಾರದು ಎನ್ನುವ ಸದಾಶಯ ನಮ್ಮದಾಗಿದೆ.

ನಾವು ಶರಣರ ವಚನ ಧರ್ಮ, ಕಾಯಕ ಮತ್ತು ಇಷ್ಟಲಿಂಗವನ್ನು ಮಾತ್ರ ನಂಬಿದವರೇ ಹೊರತು ಪುರಾಣಪ್ರಜ್ಞೆಯ ಧರ್ಮ, ಕರ್ಮ, ದೇವರನ್ನು ಅಲ್ಲ. ‘ಹೊಳಲ್ಕೆಯಲ್ಲಿರುವ ಗಣಪತಿ ಇತಿಹಾಸ ತಿಳಿದಿಲ್ಲವೇ’ ಎಂದಿದ್ದಾರೆ. ಆ ಇತಿಹಾಸ ತಿಳಿದುಕೊಂಡು ನಮಗೇನೂ ಆಗಬೇಕಿಲ್ಲ. ನಮಗೆ ನಮ್ಮ ಧರ್ಮತತ್ವಗಳನ್ನು ತಿಳಿಯುವುದು, ತಿಳಿಸುವುದು ಮುಖ್ಯ. ವೈದಿಕಶಾಹಿ ಸಂಗತಿಗಳಿಗೆ ಪ್ರಚಾರ ಕೊಟ್ಟು ಅವುಗಳನ್ನು ಅನುಸರಿಸಿರಿ ಎಂದು ಹೇಳುವುದಲ್ಲ. ವಚನಗಳಲ್ಲಿ ಗಣೇಶನ ಪ್ರಸ್ತಾಪವಿರುವುದಾಗಿ ಎರಡು ವಚನಗಳನ್ನು ದಾಖಲಿಸಿದ್ದಾರೆ. ಅವು ಶರಣರ ವಚನಗಳಲ್ಲದಿದ್ದರೂ ನಮನ್ನು ಟೀಕಿಸುವ ಆತುರದಲ್ಲಿ ಅಲ್ಲಮ ಮತ್ತು ಚನ್ನಬಸವಣ್ಣನವರ ಸಾಹಿತ್ಯಕ್ಕೂ ಮಸಿಬಳಿಯಲು ಮುಂದಾಗಿದ್ದಾರೆ.

‘ಬೇಡವೊ ಇಲಿಚಯ್ಯಾ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ, ಇಂದು ಬಂದು ನಮ್ಮ ವಸ್ತ್ರವ ಕಡಿದೆ. ಬೇಡವೊ ಇಲಿಚಯ್ಯಾ! ನಿನಗಂಜರು ನಿನ್ನ ಗಣಪತಿಗಂಜರು; ಕೂಡಲಚೆನ್ನಸಂಗನ ಶರಣರು ಕಂಡಡೆ, ನಿನ್ನ ಹಲ್ಲ ಕಳೆವರು, ಹಂ(ದಂ?)ತವ ಮುರಿವರು’. ಇಲ್ಲಿ ಚನ್ನಬಸವಣ್ಣನವರು ಏನು ಹೇಳಿದ್ದಾರೆಂಬುದನ್ನು ಗಮನಿಸಬೇಕು. ಸಿದ್ಧರಾಮೇಶ್ವರರು ‘ಇಂದ್ರ ನೋಡುವಡೆ… ಇವರೆಲ್ಲರು ಎಮ್ಮ ಪೂಜೆಗೆ ಬಾರರು’ ಎಂದು ಗಣಪತಿ, ಷಣ್ಮುಖ ಇತ್ಯಾದಿ ಪೌರಾಣಿಕ ಪಾತ್ರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಲೇಖನದ ಕೊನೆಯಲ್ಲಿ ‘ಓ ಸಿದ್ಧಿ-ಬುದ್ಧಿಯೊಡೆಯ, ನೀನೇ ಈ ಸ್ವಾಮಿಗೆ ಬುದ್ಧಿಕೊಡು!!’ ಎಂದು ಪ್ರಾರ್ಥಿಸಿದ್ದಾರೆ. ಬುದ್ಧಿ ಕೊಡುವ ಶಕ್ತಿ ಗಣಪತಿಗೆ ಇದ್ದಿದ್ದರೆ ಏನೆಲ್ಲ ‘ಅಪಸವ್ಯ’ದ ಮಾತುಗಳನ್ನು ನೀವು ಬಳಸಬೇಕಿರಲಿಲ್ಲ. ಅದೇ ಪುಟದಲ್ಲಿ ಇನ್ನೂ ಕೆಲವರು ಏನೇನೋ ಹರಟಿದ್ದಾರೆ. ಅದು ಅವರ ಸಂಸ್ಕಾರದ ಫಲ ಎಂದು ನಿರ್ಲಕ್ಷಿಸಬಹುದಿತ್ತು. ಆದರೆ ಇವರೆಲ್ಲರ ಹಿಂದೆ ವಿಶ್ವೇಶ್ವರ ಭಟ್ಟರೂ ಇದ್ದಾರೆ ಎನ್ನುವುದು 5-11-2023ರ ಅವರ ಲೇಖನದಿಂದ ವ್ಯಕ್ತವಾಗುವುದು. ಅವರಿಗೆ ನಿಜಗುಣಾನಂದ ಸ್ವಾಮಿಜಿಯವರ ಬಗ್ಗೆ ಇರುವ ಅಸಹನೆಯನ್ನು ಪ್ರದರ್ಶಿಸಿ ನಮಗೂ ಬುದ್ಧಿ ಹೇಳಲು ಮುಂದಾಗಿದ್ದಾರೆ. ‘ಸಾಣೇಹಳ್ಳಿ ಶ್ರೀಗಳು ತಮ್ಮ ಎಡಬಿಡಂಗಿ ಹೇಳಿಕೆಗೆ ಸಾಣೆ ಹಿಡಿಯಲಿ!’ ಎಂದು ಮಹತ್ಸಾಧನೆ ಮಾಡಿದವರಂತೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ದಾಖಲಿಸಿಕೊಂಡಿದ್ದಾರೆ. ಯಾರು ಎಡಬಿಡಂಗಿಗಳು ಎಂದು ಬಿಚ್ಚಿ ಹೇಳಬೇಕಾಗಿಲ್ಲ. ಭಟ್ಟರು ಆತ್ಮಾವಲೋಕನ ಮಾಡಿಕೊಂಡರೆ ಅವರಿಗೇ ಸತ್ಯದ ಮನವರಿಕೆ ಆಗುವುದು.

‘ಸ್ವಾಮಿಗಳದು ಯಾವ ಸಂಸ್ಕೃತಿ ಎಂದು ಕೇಳಲೇಬೇಕಾಗುತ್ತದೆ… ಸಾಣೇಹಳ್ಳಿ ಶ್ರೀಗಳು ಸಮಜಾಯಿಷಿ ಕೊಟ್ಟು ಈ ವಿಷಯದಲ್ಲಿ ಮೂಡಿರುವ ಗೊಂದಲ ನಿವಾರಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿಯವರು ಮಾಡಲಿ. ಅವರ ಬಗ್ಗೆ ನಾವೆಲ್ಲ ಉಳಿಸಿಕೊಂಡಿರುವ ಅಭಿಮಾನ, ಗೌರವವನ್ನು ಕಾಪಾಡಿಕೊಳ್ಳಲಿ’ ಎಂದು ಭಟ್ಟರು ಹಿತೋಕ್ತಿ ಹೇಳಿದ್ದಾರೆ. ಭಟ್ಟರೇ; ನಮ್ಮದು ಶರಣ ಸಂಸ್ಕೃತಿ. ಆ ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ನಾವು ಎಂದೂ ಹಿಂದೆ ಬಿದ್ದಿಲ್ಲ. ಈಗಲೂ ಹಿಂದೆ ಬೀಳುವುದಿಲ್ಲ. ಗೊಂದಲ ಸೃಷ್ಟಿಸುವುದು ನಮ್ಮ ಉದ್ದೇಶವಲ್ಲ. ಗೊಂದಲ ಸೃಷ್ಟಿಸಿ ಜನರನ್ನು ಮೂಢರನ್ನಾಗಿಸುವವರ ಹುಳುಕನ್ನು ಅನಾವರಣಗೊಳಿಸಿ ಜನರಿಗೆ ಬಸವ ಮಾರ್ಗವನ್ನು ತೋರುವುದು ನಮ್ಮ ಕಾಯಕ. ಸತ್ಯ ಯಾವಾಗಲೂ ಸಿಹಿಯಾಗಿರುವುದಿಲ್ಲ. ‘ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’. ಸುಳ್ಳನ್ನು ಹೇಳಿ ಜನರನ್ನು ಯಾರೂ ಮೌಢ್ಯದ ಕೂಪಕ್ಕೆ ತಳ್ಳುವ ಕಾರ್ಯ ಮಾಡಬಾರದು. ಶರಣರು ಸಕಾರಾತ್ಮಕ ಚಿಂತನೆಯ ಮೂಲಕ ವಚನಗಳೆಂಬ ಅರಿವಿನ ಅನರ್ಘ್ಯ ರತ್ನಗಳನ್ನು ಕರುಣಿಸಿದ್ದಾರೆ. ಅವುಗಳಂತೆ ಬದುಕು ಕಟ್ಟಿಕೊಳ್ಳೋಣ. ಶರಣರ ವಚನಗಳೇ ನಮಗೆ ಪ್ರಮಾಣ. ಭಾರ್ಗವಾನುಜ, ಲೀಲಾ ವಿನೋದಪ್ರಿಯ, ವಿ ಭಟ್ಟರು ಒಬ್ಬರೋ ಅಥವಾ ಬೇರೆ ಬೇರೆಯವರೋ ಎನ್ನುವ ಅನುಮಾನ ಇದೆ. ಅದರಲ್ಲೂ ಭಾರ್ಗವಾನುಜ ಮತ್ತು ಲೀಲಾ ವಿನೋದಪ್ರಿಯ ಅವರ ಬರವಣಿಗೆ ನೋಡಿದಾಗ ಹಾಗೆನಿಸುವುದು.

ಬಸವ ಗುರು ಹೇಳಿರುವಂತೆ ಕಲ್ಲಿನಲ್ಲಿ ಚಿನ್ನ, ಕಟ್ಟಿಗೆಯಲ್ಲಿ ಬೆಂಕಿ, ಹಾಲಿನಲ್ಲಿ ತುಪ್ಪ ಇರುವಂತೆ ಪ್ರತಿಯೊಬ್ಬರ ಅಂತರಂಗದಲ್ಲೂ ಶಿವ ಚೇತನ ಇದೆ. ಇದ್ದರೂ ಕತ್ತಲೆಯ ಕಾರಣ ಅದು ಕಾಣುತ್ತಿಲ್ಲ. ಆ ಕತ್ತಲೆಯನ್ನು ಕಳೆದು ಶಿವ ಪ್ರಕಾಶ ತೋರುವ ಗುರು ಸುಳಿಯನು ಎಂದಿದ್ದಾರೆ. ಮತ್ತೊಂದೆಡೆ ‘ಎನಗೆ ಗುರುಪಥವ ತೋರಿದವರಾರು? ಲಿಂಗಪಥವ ತೋರಿದವರಾರು? ಜಂಗಮಪಥವ ತೋರಿದವರಾರು? ಪಾದೋದಕ ಪ್ರಸಾದ ಪಥವ ತೋರಿದವರಾರು? ತೋರುವ ಮನವೆ ನೀವೆಂದರಿತೆ. ಎನಗಿನ್ನಾವ ಭವವಿಲ್ಲ. ಕೂಡಲಸಂಗಮದೇವಾ’ ಎಂದು ತಮಗೆ ತಾವೇ ಗುರುವಾಗಿ ಅಂತರಂಗದ ಶಿವ ಚೇತನವನ್ನು ಕಂಡುಕೊಂಡು ಅದನ್ನೇ ಇಷ್ಟಲಿಂಗದ ರೂಪದಲ್ಲಿ ಕರುಣಿಸಿದ್ದಾರೆ. ಅಂಥ ಗುರು ತೋರಿದ ದಾರಿಯಲ್ಲಿ ನಡೆಯುವ ಬದ್ಧತೆ ನಮ್ಮದು. ‘ಅಪ್ಪ ಹಾಕಿದ ಆಲದ ಮರ ಎಂದು ಅದಕ್ಕೇ ನೇತು ಹಾಕಿಕೊಳ್ಳುವ’ ಅಗತ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕ್ಷಮೆ ಕೇಳುವ ಸಂದರ್ಭವೂ ಇಲ್ಲ.

ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,
ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ

About Mallikarjun

Check Also

ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ

ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ  ಪ್ರಕಾಶ ರಾವ್ ದೀಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.