From January 6 to 20 in Raichur, Yuvanidhi special registration is allowed

ರಾಯಚೂರು ಜ.08,(ಕರ್ನಾಟಕ ವಾರ್ತೆ):
ಯುವನಿಧಿ ಯೋಜನೆಯ ಫಲಾನುಭವಿಯಾಗಲು
ಆಸಕ್ತಿ ಉಳ್ಳವರು ಸೇವಾಸಿಂಧು ವೆಬ್‌ಪೋರ್ಟಲನಲ್ಲಿ ಹೆಸರು ನೋಂದಾಯಿಸಿಕೊಳ್ಳಲು 2025ರ ಜನವರಿ 6ರಿಂದ 20ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರಾಯಚೂರಿನಲ್ಲಿ ಏರ್ಪಡಿಸಿದ್ದು, ಅರ್ಹ ಫಲಾನುಭವಿಗಳು ಈ ಸದಾವಕಾಶ ಉಪಯೋಗಿಸಿಕೊಳ್ಳಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
ಜ.08ರಂದು ಬುಧವಾರ
ನಡೆದ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪದವಿ ಮತ್ತು ಡಿಪ್ಲೋಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಜಿಲ್ಲೆಯ 8 ಸಾವಿರಕ್ಕೂ ಮೇಲ್ಪಟ್ಟು ಅಭ್ಯರ್ಥಿಗಳು ಈಗಾಗಲೇ ಈ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇತರರು ಯೋಜನೆಯನ್ನು ಲಾಭ ಪಡೆಯಬೇಕೆಂದರು.
ಪದವೀಧರರಿಗೆ ಪ್ರತಿ ತಿಂಗಳ 3000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ.ಗಳ ನೀರುದ್ಯೋಗ ಭತ್ಯೆ ನೀಡಲಾಗುತ್ತದೆ. ಫಲಿತಾಂಶದ ನಂತರ ನೀರುದ್ಯೋಗಿಗಳಾಗಿ 180 ದಿವಸಗಳ ಪೂರೈಸಿ ಹೆಸರನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದರು.
ನಂತರ ಪ್ರತಿ ತಿಂಗಳು ಯುವನಿಧಿ ಯೋಜನೆಯ ಪ್ರಯೋಜನ ಪಡೆಯಬೇಕಿದ್ದರೆ, ಸೇವಾಸಿಂಧು ವೆಬ್ ಪೋರ್ಟಲನಲ್ಲಿ ಮಾಹೆಯಾನ ತಾನು ನೀರುದ್ಯೋಗಿ ಎಂದು ಉನ್ನತ ವ್ಯಾಸಂಗ ಮುಂದುವರಿಸಿರುವುದಿಲ್ಲ ಎಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಪ್ರತಿ ತಿಂಗಳ 25ನೇ ತಾರೀಖಿನೊಳಗೆ ಸ್ವಯಂ ಫೋಷಣೆ ಮಾಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಸ್ವಯಂ ಘೋಷಣೆಯ ಆಧಾರದ ಮೇಲೆ ಅಭ್ಯರ್ಥಿಗಳು ಮುಂದಿನ ಪಾವತಿಯನ್ನು ಸ್ವೀಕರಿಸಲಾಗುವುದು. ಅಭ್ಯರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಹಾಗೂ ಆಧಾರ್ ಲಿಂಕ್ಡ್ ಮೊಬೈಲ್ ನಂಬರನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿದ ನಂತರ ಸೇವಾಸಿಂಧು ಪೋರ್ಟಲನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿ ಇದೆ ಎಂಬುದನ್ನು ಪರಿಶೀಲಿಸಿ ಒಂದು ವೇಳೆ ಅರ್ಜಿಯ ನೋಂದಾಣಿಯಾಗದಿದ್ದ ಸಂದರ್ಭದಲ್ಲಿ ಸೂಚಿಸಲ್ಪಟ್ಟ ಇಲಾಖೆಯ ಕಚೇರಿಗಳಿಗೆ ತಮ್ಮ ಎಲ್ಲಾ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ನವೀನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಣ್ಣ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ವೆಂಕಟೇಶ್ ನಾಯಕ, ರಾಧಾಕೃಷ್ಣ ರೆಡ್ಡಿ, ವೀರೇಶ್ ಗಾಣದಾಳ, ಶಶಿಕಲಾ, ಭಾರತಿ, ಮೊಹಮ್ಮದ ಜಾವೀದ್, ರಾಘವೇಂದ್ರ, ತಿಮ್ಮಪ್ಪ ಸೇರಿದಂತೆ ಕಾಲೇಜಿನ ವಿವಿಧ ವಿಷಯಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.