Breaking News

ಮಹಾತ್ಮಗಾಂಧೀಜಿ ಭಾನಾಪುರದ ಭೇಟಿಯ ಚಾರಿತ್ರಿಕ ನೋಟ

A historical overview of Mahatma Gandhi’s visit to Bhanapur

ಜಾಹೀರಾತು


ಕೊಪ್ಪಳ: (ದಿನಾಂಕ ೦೨-೧೦-೨೦೨೩ರಂದು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಕೊಪ್ಪಳದ ಶಿಕ್ಷಕರ ಕಲಾ ಸಂಘದಿಂದ ಬಾನಾಪುರಕ್ಕೆ ಕಾಲ್ನಡಿಗೆ ಜಾಥಾ ನಿಮಿತ್ಯ ವಿಶೆಷ ಲೇಖನ)
ಅದಾಗಲೇ ಸ್ವತಂತ್ರö ಚಳುವಳಿ ಪ್ರಾರಂಭವಾಗಿ ದೇಶದ ತುಂಬೆಲ್ಲಾ ಹಬ್ಬಿತ್ತು. ಬ್ರಿಟಿಷರಿಂದ ದೇಶವನ್ನು ಸ್ವಾತಂತ್ರಗೊಳಿಸಲು ಎಲ್ಲರೂ ಒಟ್ಟುಗೂಡಿ ನಾನಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದರು. ಗಾಂಧೀಜಿಯವರ ಆದಿಯಾಗಿ ಅನೇಕರು ಪ್ರವಾಸಮಾಡಿ ದೇಶದ ನಾನಾ ಪ್ರದೇಶಗಳಿಗೆ ತೆರಳಿ ಸ್ವಾತಂತ್ರ ಪಡೆಯಬೇಕೆಂಬ ಕಿಚ್ಚು ಹಚ್ಚಲು ಪ್ರಯತ್ನಿಸುತ್ತಿದ್ದರು. ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೂ ದೇಶದ ತುಂಬೆಲ್ಲಾ ಸಂಚರಿಸಿದ್ದಾರೆ. ‘ಸ್ವರಾಜ್ಯವೇ ನಮ್ಮ ಜನ್ಮಸಿದ್ಧ ಹಕ್ಕು’ ಎಂಬುದನ್ನು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ ಪಡೆಯಲು ಒಬ್ಬರಿಂದ ಅಥವಾ ಒಂದು ಪ್ರದೇಶದಲ್ಲಿ ಹೋರಾಟ ಸಂಘಟಿಸುವುದರಿAದ ಸಾಧ್ಯವಿಲ್ಲ ಎಂಬುದು ಎಲ್ಲಾ ಹೋರಾಟಗಾರರು ಅರಿತಿದ್ದರು. ಹೀಗಾಗಿ ಸ್ವಾತಂತ್ರ್ಯ ಗಳಿಸಲು ಅನೇಕ ಹೋರಾಟಗಾರರು ಸಂಘಟಿತರಾದರು, ಅನೇಕ ಪ್ರದೇಶಗಳಲ್ಲಿ ಸಂಚರಿಸಿದರು. ಅದರ ಜೊತೆಗೆ ಹರಿಜನೋದ್ಧಾರ, ಸ್ತ್ರೀ ಸಮಾನತೆ, ಸ್ವಾಭಿಮಾನ, ಸ್ವಾವಲಂಭನೆ ಮುಂತಾದ ತತ್ವಗಳನ್ನು ಪ್ರಚಾರಪಡಿಸುವ ಮೂಲಕ ಹೋರಾಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದವು. ಹೀಗಾಗಿ ದೇಶದ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಹೋರಾಟಗಾರರನ್ನು ಮತ್ತು ಹೋರಾಟಗಳನ್ನು ಸಂಘಟಿಸುತ್ತಿದ್ದರು.
ಇಂತಹ ಸಂದರ್ಭದಲ್ಲಿ ಮಹಾತ್ಮಗಾಂಧಿಜಿಯವರು ಭಾರತದ ಅನೇಕ ಪ್ರಾಂತ್ಯಗಳಲ್ಲಿ ಸಂಚರಿಸಿದ್ದಾರೆ. ಹೋದಲ್ಲೆಲ್ಲಾ ಸ್ತ್ರೀ ಸಮಾನತೆ, ದಲಿತೋದ್ಧಾರದ ಸಂದೇಶಗಳನ್ನು ನೀಡುತ್ತಿದ್ದರು. ಅದರಂತೆ ಕೊಪ್ಪಳದ ಕುಕನೂರು ತಾಲ್ಲೂಕಿನ(ಅಂದು ಯಲಬುರ್ಗಾ ತಾಲ್ಲೂಕು ಆಗಿತ್ತು) ಬಾನಾಪೂರಕ್ಕೂ ಸಹ ಬಂದು ಸ್ವಾತಂತ್ರ ಹೋರಾಟದ ಕಹಳೆ ಊದಿ, ಜಾಗೃತಿ ಮೂಡಿಸಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಈ ಬಾನಾಪುರ ಗ್ರಾಮವು ಪ್ರಾಚೀನ ಕಾಲದ ಗ್ರಾಮವಾಗಿದ್ದರೂ ಇಲ್ಲಿ ಶಾಸನಗಳಾಗಲಿ, ಪ್ರಾಚೀನ ದೇವಸ್ಥಾನ ಇಲ್ಲವೇ ಸ್ಮಾರಕಗಳಾಗಲಿ ಇಲ್ಲ. ಅದರೂ ಇದು ಪ್ರಾಚೀನ ಗ್ರಾಮ ಎನ್ನುವುದಕ್ಕೆ ಇಲ್ಲಿ ಒಂದು ಹುಡೆವು(ಹುಡೆ) ಇತ್ತಂತೆ ಅದನ್ನು ಇತ್ತೀಚೆಗೆ ನಾಶಮಾಡಲಾಯಿತೆಂದು ಹೇಳಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಇದು ವಾಣಿಜ್ಯ ಕೇಂದ್ರವಾಗಿತ್ತೆಂದು ಆ ಗ್ರಾಮದ ಹಿರಿಯ ಕಲಾವಿದರಾದ ಶಂಕರ ಪತ್ತಾರರವರು ಹೇಳುತ್ತಾರೆ. ಸುತ್ತಲ ಗ್ರಾಮಗಳಲ್ಲದೇ ದೂರದ ಕುಕನೂರು, ಯಲಬುರ್ಗಾ ಗ್ರಾಮಗಳಿಂದಲೂ ಸಹ ವ್ಯಾಪಾರಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದರಂತೆ. ಹೀಗಾಗಿ ಹಿಂದಿನ ಕಾಲದಲ್ಲಿ ಇದು ಬಹುದೊಡ್ಡ ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರಬೇಕು ಎಂದೆನಿಸುತ್ತದೆ. ಭಾರತದಲ್ಲಿ ಕ್ರಿ.ಶ ೧೮೫೩ರಲ್ಲಿ ಪ್ರಪ್ರಥಮವಾಗಿ ರೈಲನ್ನು ಓಡಿಸಲಾಗುತ್ತದೆ. ಕೇವಲ ೮೦ ವರ್ಷಗಳ ಅಂತರದಲ್ಲೇ ಅಂದರೆ ೧೯೩೪ರಲ್ಲೇ ಗಾಂಧೀಜಿಯಂತಹ ಮಹಾತ್ಮರು ಈ ಬಾನಾಪುರಕ್ಕೆ ಬರುವಂತಹ ಸುಸಜ್ಜಿತ ರೈಲ್ವೆ ವ್ಯವಸ್ಥೆ ಇತ್ತೆಂಬುದನ್ನು ಗಮನಿಸಿದರೆ ಆ ಕಾಲಕ್ಕಾಗಲೇ ಇದು ಬಹುದೊಡ್ಡ ಕೇಂದ್ರ ಇರಬೇಕೇಂದೆನಿಸುತ್ತದೆ. ಭಾರತಕ್ಕೆ ರೈಲು ಬಂದು ಇಂದು ನೂರೈವತ್ತು ವರ್ಷಗಳು ಗತಿಸಿದರೂ ಸಹ ರೈಲು ಕಾಣದ ಎಷ್ಟೋ ಕುಗ್ರಾಮಗಳು ಈ ದೇಶದಲ್ಲಿವೆ. ಬಾನಾಪುರ ಗ್ರಾಮಕ್ಕೆ ಆ ಕಾಲಕ್ಕಾಗಲೇ ರೈಲು ಸಂಚಾರ ವ್ಯವಸ್ಥೆ ಇತ್ತೆಂದರೆ ಇದು ಬಹುದೊಡ್ಡ ಕೇಂದ್ರವೇ ಆಗಿರಬೇಕು. ಪತ್ರಕರ್ತ ಮಹೇಶಗೌಡ ಬಾನಾಪುರರವರು ಹೇಳುವಂತೆ ಇದು ತಂಗುತಾಣವಾಗಿತ್ತು, ಇಲ್ಲಿಗೆ ಬೇರೆ-ಬೇರೆ ಪ್ರದೇಶಗಳಿಂದ ಅನೇಕರು ತಂಗುವುದಕ್ಕಾಗಿ ಆಗಮಿಸುತ್ತಿದ್ದರೆಂದು ಹೇಳುತ್ತಾರೆ. ಈ ಗ್ರಾಮವು ಬಾಂಬೆ ಪ್ರಾಂತ್ಯದ ಕೊನೆ ಮತ್ತು ಹೈದರಾಬಾದ್ ಪ್ರಾಂತ್ಯದ ಆರಂಭದ ಗಡಿಭಾಗವಾಗಿದ್ದರಿಂದ ಇಲ್ಲಿ ನಿಜಾಮರ ಕರೋಡಗಿರಿ ನಾಕಾ ಇತ್ತು. ಇಲ್ಲಿ ಸಕ್ಕರೆ, ನೂಲು, ಔಷಧಿ ಇತ್ಯಾದಿಗಳಿಗೆ ಪೊಲೀಸರಿಗೆ ತೆರಿಗೆ ಕಟ್ಟಿ ಒಳ ಪ್ರವೇಶಿಸಬೇಕಿತ್ತೆಂದು ರಾಮಣ್ಣ ಹವಳೆಯವರು ತಿಳಿಸಿದ್ದಾರೆ. ಆದರೆ ಹೆಚ್ಚಿನ ದಾಖಲೆಗಳು ನನಗೆ ಲಭ್ಯವಾಗುತ್ತಿಲ್ಲ. ಇದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಇಂತಹ ಬಹಳ ವೈಶಿಷ್ಟಪೂರ್ಣವಾದ ಈ ಬಾನಾಪುರ ಗ್ರಾಮಕ್ಕೆ ಮಹಾತ್ಮಗಾಂಧೀಜಿ ಆಗಮಿಸಿದ್ದು ಸೂಕ್ತವೇ ಆಗಿದೆ ಎನ್ನಬಹುದು.
ಸ್ವತಂತ್ರ ಹೋರಾಟಗಾರರು ಚಳುವಳಿ ಮಾಡುತ್ತಾ ಸಂಘಟನೆಗಾಗಿ ಅನೇಕ ಕಡೆಗಳಲ್ಲಿ ಸಂಚರಿಸಿ ನಿಧಿ ಸಂಗ್ರಹಿಸಿದ್ದಾರೆ. ಅದರಂತೆ ಬಾನಾಪುರದಲ್ಲಿಯೂ ಸಹ ನಿಧಿ ಸಂಗ್ರಹಿಸಿರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಮಹಾತ್ಮಗಾಂಧಿಯವರು ದೇಶ ಸಂಚಾರದಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಾನಾಪುರದಲ್ಲಿ ಸ್ವಲ್ಪ ಕಾಲ ತಂಗಿ ನಿಧಿ ಸಂಗ್ರಹಿಸಿದ್ದರು. ಗಾಂಧೀಜಿಯವರ ಸ್ವಾಗತ ಸಮಿತಿ ಅಧ್ಯಕ್ಷರಾದ ತಮ್ಮನಗೌಡ ಪಾಟೀಲ್, ಕಾರ್ಯದರ್ಶಿ ಶಿರೂರು ವೀರಭದ್ರಪ್ಪ ಮುಂತಾದ ಸ್ವಾತಂತ್ರ ಹೋರಾಟಗಾರರು ಮಹಾತ್ಮ ಗಾಂಧಿಯವರನ್ನು ಬಾನಾಪುರದಲ್ಲಿ ಸ್ವಲ್ಪ ಕಾಲ ವಿಶ್ರಮಿಸಿ ಜನರನ್ನುದ್ಧೇಶಿಸಿ ಮಾತನಾಡಲು ವಿನಂತಿಸಿದ್ದರು. ಮಹಾತ್ಮಗಾಂಧಿಜಿಯವರು ಬಾನಾಪುರಕ್ಕೆ ಬರುವ ಸುದ್ದಿಯನ್ನು ಕರಪತ್ರಗಳಲ್ಲಿ ಮುದ್ರಿಸಿ ಸುತ್ತಲ ಗ್ರಾಮಗಳಿಗೆ ಹಂಚಿದ್ದರು. ಮಹಾತ್ಮಗಾಂಧಿ ಬಾನಾಪುರಕ್ಕೆ ಬರುವ ಸುದ್ದಿ ಎಲ್ಲಡೆ ಮಿಂಚಿನಂತೆ ಪ್ರಚಾರವಾಯಿತು. ಅಂದಿನ ಕಾಲದಲ್ಲಿ ರೈಲುಗಳು ಕಲ್ಲಿದ್ದಲಿನಿಂದ ಸಂಚರಿಸುತ್ತಿದ್ದವು. ಹೀಗಾಗಿ ಆ ರೈಲುಗಳಿಗೆ ಮಾರ್ಗದ ಮಧ್ಯ ಅಲ್ಲಲ್ಲಿ ನೀರು ತುಂಬಿಸುವ ಕ್ರಿಯೆ ನಡೆಯುತ್ತಿತ್ತು. ಬಾನಾಪುರದಲ್ಲಿ ರೈಲಿಗೆ ನೀರು ತುಂಬಿಸುವ ಕ್ರಿಯೆ ನಡೆಯುತ್ತಿತ್ತು. ಅಂತಹ ಸಮಯವನ್ನು ಉಪಯೋಗಿಸಿಕೊಂಡು ಹೋರಾಟಗಾರರು ಮಹಾತ್ಮಗಾಂಧಿಯವರಿಗೆ ಬಾನಾಪುರದಲ್ಲಿ ದೇಶಪ್ರೇಮಿಗಳನ್ನು ಉದ್ಧೇಶಿಸಿ ಮಾತನಾಡಲು ವ್ಯವಸ್ಥೆ ಮಾಡಲಾಗಿತ್ತು. ೧೯೩೪ರ ಮಾರ್ಚ್ ೩ರಂದು ಬಳ್ಳಾರಿಯಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಗಾಂಧೀಜಿ ತೆರಳುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ರೈಲನ್ನು ಬಾನಾಪುರದಲ್ಲಿ ನಿಲ್ಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಲಾಗಿತ್ತು. ಗಾಂಧೀಜಿಯವರ ಮುಖ್ಯ ತತ್ವ ಹರಿಜನೋದ್ಧಾರವಾಗಿತ್ತು. ಅಂದು ಎಚ್.ಕೊಟ್ರಪ್ಪ, ಪುಂಡಲಿಕಪ್ಪ ಜ್ಞಾನಮೋಟೆ, ಕೊಪ್ಪಳದ ಮಾರ್ತಾಂಡರಾವ್, ಜಗನ್ನಾಥರಾವ್ ಇಟಗಿ, ರಂಗನಾಥ ಕುಲಕರ್ಣಿ, ಚಿದಂಬರಭಟ್, ಎಂ.ಆರ್.ಕುಲಕರ್ಣಿ, ಪದಕಿ ಬಾಲಜಿರಾವ್, ಸುಬ್ರಮಣ್ಯಚಾರ್ ಮುಂತಾದ ಸ್ವಾತಂತ್ರ ಹೋರಾಟಗಾರರು, ದೇಶಪ್ರೇಮಿಗಳು, ಸಾರ್ವಜನಿಕರು ಅಲ್ಲಿ ನೆರೆದಿದ್ದರು. ಗಾಂಧಿಜಿಯವರು ಅಲ್ಲಿದ್ದ ಸ್ವಾತಂತ್ರ ಹೋರಾಟಗಾರರಿಗೆ ‘ಖಾದಿ ದೀಕ್ಷೆ’ ನೀಡಿದರು. ಅಲ್ಲದೇ ತಳಕಲ್ ಗ್ರಾಮದ ಚುಟ್ಟವ್ವ(ಸುಟ್ಟವ್ವ) ಹರಿಜನರವರು ಮಾಹಾತ್ಮ ಗಾಂಧೀಜಿಯವರಿಗೆ ನೂಲಿನಹಾರ ಹಾಕಿ ಆರತಿ ಎತ್ತಿ ಸ್ವಾಗತಿಸಿದರು. ಮಹಾತ್ಮಗಾಂಧೀಜಿಯವರು ಸ್ವತಃ ತಮ್ಮ ಕೈಯಾರೆ ತಳಕಲ್ ಗ್ರಾಮದ ಬಾಲಕಿಗೆ ನೀರನ್ನು ಕುಡಿಸಿ ಅಸ್ಪೃಶ್ಯತೆ ನಿವಾರಣೆಗೆ ಕರೆಕೊಟ್ಟರೆಂದು ಹೇಳಲಾಗುತ್ತಿದೆ. ಇದರ ಬಗ್ಗೆ ಕೆಲ ಚರ್ಚೆಗಳಿವೆ. ಸುಟ್ಟವ್ವ ಜನಪದ ಕಲಾವಿದೆಯಾಗಿದ್ದು, ಆಕೆ ಮಸಬಹಂಚಿನಾಳ ಗ್ರಾಮದವಳು ಎಂದು ಹೇಳಲಾಗುತ್ತಿದೆ. ತಳಕಲ್ ಗ್ರಾಮದ ಹರಿಜನ ಮಹಿಳೆ ಬೇರೊಬ್ಬ ಸ್ತ್ರೀ ಎಂದು ಹೇಳಲಾಗುತ್ತಿದೆ. ಆಕೆಯ ಹೆಸರಿನ ಬಗ್ಗೆ ಕೆಲ ಚರ್ಚೆಗಳಿವೆ. ಅಂದು ಆಗಮಿಸಿದ್ದ ಮಹಾತ್ಮಗಾಂಧಿಯವರನ್ನು ದೂರದಿಂದ ನೋಡಿದ ಇದೇ ಗ್ರಾಮದ ೧೯ ವರ್ಷದ ಬಾಲಕ ಕಾಳಪ್ಪ ಪತ್ತಾರ ಅವರು ಮಹಾತ್ಮಗಾಂಧೀಜಿಯವರ ಚಿತ್ರವನ್ನು ಸ್ಥಳದಲ್ಲೇ ರಚಿಸಿದ್ದರಂತೆ. ಅದನ್ನು ಅಲ್ಲಿಯೇ ಹರಾಜು ಹಾಕಲಾಯಿತಂತೆ. ಅದನ್ನು ಪಡೆದ ಯಾರೋ ಒಬ್ಬ ವ್ಯಾಪಾರಿ ಹಣಕೊಟ್ಟನಂತೆ. ಆ ಹಣದ ಜೊತೆಗೆ ಸ್ವಾತಂತ್ರ ಹೋರಾಟಗಾರರು ಮತ್ತು ದೇಶಪ್ರೇಮಿಗಳಿಂದ ಸಂಗ್ರಹಿಸಿದ್ದ ಹಣವನ್ನು ಹರಿಜನ ನಿಧಿಗೆ ಅರ್ಪಿಸಲಾಯಿತೆಂದು ಹೇಳಲಾಗುತ್ತಿದೆ.
ಅಂದು ಹೋರಾಟಗಾರರು ಮತ್ತು ದೇಶಪ್ರೇಮಿಗಳು ಸೇರಿದಂತೆ ಸುಮಾರು ಹತ್ತುಸಾವಿರ ಜನ ಸೇರಿದ್ದರೆಂದು ಅಂದಾಜಿಸಲಾಗಿದೆ. ರೈಲು ನಿಲ್ದಾಣ ತುಂಬೆಲ್ಲಾ ಸೇರಿರುವುದರ ಜೊತೆಗೆ ಅಕ್ಕ-ಪಕ್ಕದ ಮರ, ಮನೆಗಳ ಮೇಲೆಯೂ ಸಹ ಕುಳಿತು ಗಾಂಧೀಜಿಯವರನ್ನು ವೀಕ್ಷಿಸಿದರೆಂದು ಹೇಳಲಾಗುತ್ತಿದೆ.
ಕಾಳಪ್ಪ ಪತ್ತಾರರವರ ಮಗ ಶಂಕರ ಪತ್ತಾರರವರೂ ಸಹ ತಂದೆಯಂತೆ ಉತ್ತಮ ಕಲಾವಿದ. ಅನೇಕ ಚಿತ್ರಗಳನ್ನು ಬಿಡಿಸಿ ಪ್ರಸಿದ್ಧಿಯಾದವರು. ಮಹಾತ್ಮಗಾಂಧಿಯವರು ಬಾನಾಪುರಕ್ಕೆ ಆಗಮಿಸಿದ್ದನ್ನು ಹಿರಿಯರಿಂದ ಕೇಳಿ ಬಹಳ ಖುಷಿಪಟ್ಟವರು. ಈ ಬಾನಾಪುರ ಗ್ರಾಮದಲ್ಲಿ ಗಾಂಧಿಯವರ ಒಂದು ಸ್ಮಾರಕ ನಿರ್ಮಿಸಬೇಕೆಂದು ಆಶಿಸಿದವರು. ಅದರಂತೆ ೧೯೯೮ರ ಅಕ್ಟೋಬರ್ ೨ರಂದು ಅದೇ ಬಾನಾಪುರ ರೈಲು ನಿಲ್ದಾಣದಲ್ಲಿ ಸ್ವತಃ ರಚಿಸಿದ ಮಹಾತ್ಮ ಗಾಂಧೀಜಿಯವರ ಚಿತ್ರಬಿಡಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ವತಂತ್ರ ಹೋರಾಟಗಾರರಾದ ಅಳವಂಡಿ ಶಿವಮೂರ್ತಿಸ್ವಾಮಿಗಳು, ಲಿಂಗಪ್ಪ ಬಿಸನಳ್ಳಿ, ಶೇಖರಯ್ಯ ಲಕ್ಮಾಪೂರಮಠ ಭಾಗವಹಿಸಿದ್ದು ವಿಶೇಷ. ಅದರ ಜೊತೆಗೆೆ ರೇಲ್ವೆ ಇಲಾಖೆ ಇಂಜಿನಿಯರ್‌ಗಳಾದ ಎ.ಗೌತಮ್ ಶ್ರೀನಿವಾಸ್, ಡಿ.ಎಲ್.ಕುಲಕರ್ಣಿ, ಯಲಬುರ್ಗಾ ತಹಶೀಲ್ದಾರರಾದ ಸಿ.ಜೆ.ಚಿಲಕವಾಡ, ನಾಡತಹಶೀಲ್ದಾರರಾದ ಕೆ.ಬಸಣ್ಣ ಮುಂತಾದವರು ಭಾಗವಹಿಸಿದ್ದರೆಂದು ಅಲ್ಲಿನ ಶಿಲನ್ಯಾಸದಲ್ಲಿ ಬರೆಯಲಾಗಿದೆ.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: 9448570340
E-mail:-skotnekal@gmail.com

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.