Breaking News

ಸೋದರತೆ, ಬಾಂಧವ್ಯ ಬೆಸೆಯುವ ಹಬ್ಬ ಈ ರಕ್ಷಾ ಬಂಧನ

Raksha Bandhan is a festival of brotherhood and bonding

ಜಾಹೀರಾತು

ದೇವರಾಜ ದೇವಿಪುರ

ಭಾರತ ಸಂಸ್ಕೃತಿ, ಆಚಾರ ಮೆರೆಯುವ ತವರು ನಾಡು. ಇಲ್ಲಿ ಪ್ರತಿಯೊಂದು ಆಚರಣೆಗೂ, ಹಬ್ಬಕ್ಕೂ ಅದರದೇ ಆದ ವಿಶೇಷತೆಯಿದೆ. ಪ್ರತಿಯೊಂದು ಹಬ್ಬವೂ ಒಂದಲ್ಲ ಒಂದು ರೀತಿ ಸಾರವನ್ನು ಹೇಳುತ್ತದೆ. ಎಲ್ಲಾ ಹಬ್ಬದಂತೆಯೇ ರಕ್ಷಾಬಂಧನ ಹಬ್ಬವೂ ಸಹ ವಿಶೇಷ ಹಬ್ಬವಾಗಿದ್ದು, ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ.

ರಾಖಿ ಕಟ್ಟುವುದು ಭಾವನಾತ್ಮಕ ಸಂಕೇತವಾಗಿದೆ. ಪ್ರತಿಯೊಬ್ಬ ಸಹೋದರಿಯೂ ರಕ್ಷಾಬಂಧನ ಹಬ್ಬಕ್ಕಾಗಿ ಹಾತೊರೆಯುತ್ತಾರೆ. ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಈ ರಕ್ಷಾ ಬಂಧನ ಹಬ್ಬದ ದಿನದಂದು ಸಹೋದರಿಯರು ಅಣ್ಣನ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಕರುಣಿಸೆಂದು ದೇವರಲ್ಲಿ ಕೇಳಿಕೊಳ್ಳುತ್ತಾಳೆ. ಅಣ್ಣನ ಬಾಯಿ ಸಿಹಿ ಮಾಡಿ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವುದು ಈ ಹಬ್ಬದ ವಿಶೇಷವಾಗಿದೆ.

ರಕ್ಷಾ ಬಂಧನ ಕಟ್ಟುವುದು ಹಿಂದಿನಿಂದಲೂ ವಾಡಿಕೆಯಲ್ಲಿದೆ. ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳಿಸುವ ಈ ಪವಿತ್ರ ದಿನ ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಹಬ್ಬವಾಗಿತ್ತು. ಇದೀಗ ದಕ್ಷಿಣ ಭಾರತದಲ್ಲೂ ಈ ಹಬ್ಬ ಪ್ರಚಲಿತವಾಗಿದ್ದು, ಇಂದು ಭಾರತದೆಲ್ಲೆಡೆ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದುಂಟು. ಭಾರತದೆಲ್ಲೆಡೆ ಪ್ರಚಲಿತದಲ್ಲಿರುವ ಈ ಹಬ್ಬಕ್ಕೆ ಒಂದು ತಿಂಗಳ ಹಿಂದಿನಿಂದಲೇ ಹಲವು ವರ್ಣರಂಜಿತ, ವೈವಿಧ್ಯಮಯ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಉತ್ತರ ಭಾರತದಲ್ಲಿ ರಾಖೀ ತಯಾರು ಮಾಡುವುದು ಉದ್ಯಮವಾಗಿ ಬೆಳೆದುಬಿಟ್ಟಿದೆ.

ಪ್ರತೀ ಹಬ್ಬದಂತೆ ರಕ್ಷಾ ಬಂಧನಕ್ಕೂ ಚಾರಿತ್ರ್ಯವಿದೆ…
ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತಿರುತ್ತದೆ. ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ. ಸೋಲುವ ಭೀತಿಯಲ್ಲಿದ್ದ ಇಂದ್ರ ದೇವನು ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರ ಮೊರೆ ಕೇಳಿದ ಬೃಹಸ್ಪತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಸಲಹೆ ನೀಡುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾನೆ.

ಈ ಹಿನ್ನೆಲೆಯಲ್ಲೇ ರಜಪೂತರು ಯುದ್ಧದ ಸಮಯದಲ್ಲಿ ಹೊರಡುವಾಗ ಗಂಡುಮಕ್ಕಳ ಹಣೆಗೆ ಕುಂಕುಮ ಹಚ್ಚಿ ರಕ್ಷಣೆಯ ಸಂಕೇತವಾಗಿ ರೇಷ್ಮೆ ದಾರ ಕಟ್ಟಿ ಜಯ ಸಾಧಿಸಲೆಂದು ಹಾರೈಸುತ್ತಿದ್ದು. ಹಿಂದೂ ರಾಣಿಯರು ಸಹ ರಾಜರಿಗೆ ರಾಖಿಯನ್ನು ಕಟ್ಟಿ ಸಹೋರತೆಯ ಸಂಬಂಧ ಬೆಳೆಸುತ್ತಿದ್ದರು. ಇದರಂತೆ ರಾಖಿ ಭಾವನಾತ್ಮಕ ಸಂಕೇತವಾಗಿ ರಾಜರು ಸಹೋದರಿಯರ ರಕ್ಷಣೆಗೆ ನಿಲ್ಲುತ್ತಿದ್ದರು. ಇಂದು ಕಾಲಕಳೆಯುತ್ತಿದ್ದಂತೆ ಸಂಪ್ರದಾಯವಾಗಿ ಬೆಳೆಯ ತೊಡಗಿ ರಕ್ಷಾ ಬಂಧನ ದಿನವಾಗಿದೆ.

ಮಹಾಭಾರತಕ್ಕೂ ರಕ್ಷಾ ಬಂಧನಕ್ಕೂ ಮತ್ತೊಂದು ಕಥೆ ಇದ್ದು, ಕೃಷ್ಮ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ.

ಇದನ್ನು ಕಂಡ ಶ್ರೀಕೃಷ್ಣ ತನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ. ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ. ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತಿದ್ದು, ಈ ಹಬ್ಬವನ್ನು ರಾಖಿ ಪೂರ್ಣಿಮಾ ದಿನ ಎಂದು ಕರೆಯಲಾಗುತ್ತದೆ.

ಸಂಬಂಧಗಳನ್ನು ಬೆಸೆಯುವ ರಕ್ಷಾಬಂಧನ ದಿನದಂದು ಸಹೋದರರು ಕೇವಲ ರಾಖಿಯನ್ನು ಕಟ್ಟಿಸಿಕೊಂಡು ಉಡುಗೊರೆ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಮುಗಿಯುವುದಿಲ್ಲ. ರಕ್ಷಾಬಂಧನ ಅರ್ಥ ಬಾಂಧವ್ಯ ಹಾಗೂ ರಕ್ಷೆ ಎಂದು. ರಾಖಿ ಕಟ್ಟಿಕೊಂಡ ಸಹೋದರು ಸದಾಕಾಲ ಸಹೋದರಿಯ ಬೆನ್ನ ಹಿಂದೆ ನಿಂತು ಆಕೆಯ ರಕ್ಷಣೆ ಮಾಡುವುದು ಆತನ ಕರ್ತವ್ಯವಾಗಿರುತ್ತದೆ. ರಕ್ಷಾ ಬಂಧನದ ಅರ್ಥವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸಿದರೆ ರಕ್ಷಾ ಬಂಧನದ ದಿನದ ಆಚರಣೆಗೆ ನಿಜಕ್ಕೂ ಅರ್ಥ ಸಿಕ್ಕಂತಾಗುತ್ತದೆ.2024 ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್‌ 19 ರಂದು ಸೋಮವಾರದಂದು ಆಚರಿಸಲಾಗುವುದು. ಇದು ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುವ ಹಬ್ಬವಾಗಿದೆ. ಶ್ರಾವಣ ಮಾಸದ ಸೋಮವಾರದಂದು ರಕ್ಷಾಬಂಧನ ಬರುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ಶ್ರಾವಣ ಮಾಸದ ಹುಣ್ಣಿಮೆಯಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.