At SBI Main BranchVoting awareness campaign for consumers

ಗಂಗಾವತಿ: ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಲ್ಲಿ ಮತದಾರರ ಪಾತ್ರ ಪ್ರಾಮುಖ್ಯತೆ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಮತದಾನ ಮಹತ್ವದ್ದಾಗಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾ ರಾಯಭಾರಿ ಡಾ|| ಶಿವಕುಮಾರ್ ಮಾಲಿಪಾಟೀಲ್‌ರವರು ಇಂದು ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ನಡೆದ ಗ್ರಾಹಕರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದರು.
ಮತದಾನ ಮಾಡಲು ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಎಲ್ಲರೂ ಮತದಾನ ಮಾಡಬೇಕು. ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕೆಂದು ಗ್ರಾಹಕರಿಗೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತಪ್ಪದೆ ತಾವು ಮತ್ತು ತಮ್ಮ ಕುಟುಂಬದ ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮೇ-೭ ರಂದು ಮತದಾನ ಮಾಡಲು ವಿನಂತಿಸಿದರು. ಬ್ಯಾಂಕ್‌ನಲ್ಲಿ ಮತದಾನದ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಎಸ್.ಬಿ.ಐ ಬ್ಯಾಂಕ್ ಇತರ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ವ್ಯವಸ್ಥಾಪಕರಾದ ಬ್ರಹ್ಮದೇವ ಸಿಂಗ್‌ರವರು ಮತದಾನ ನಮ್ಮ ಹಕ್ಕು ಅಷ್ಟೇ ಅಲ್ಲದೆ ನಮ್ಮ ಜವಾಬ್ದಾರಿಯು ಸಹ ಇದೆ. ತಾವೆಲ್ಲರೂ ಮತದಾನ ಮಾಡಿದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಆಗಲು ಸಾಧ್ಯ. ನಿಮ್ಮ ಒಂದು ಮತ ದೇಶಕ್ಕೆ ಅತಿ ಮುಖ್ಯ. ಆದ್ದರಿಂದ ನಮ್ಮ ಎಲ್ಲಾ ಗ್ರಾಹಕ ಬಂಧುಗಳು ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯರವರು ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆಯ ಪಾತ್ರ ಮಹತ್ವದ್ದಾಗಿದೆ. ಪ್ರತಿ ಹಳ್ಳಿ/ನಗರ ಪ್ರದೇಶದ ಜನರು ಮತದಾನದ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಲು ವಿನಂತಿಸಿದರು. ಮತದಾನ ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಹಾಗಾಗಿ ಇಲ್ಲಿ ಭಾಗವಹಿಸಿರುವ ೧೮ ವರ್ಷ ಮೇಲ್ಪಟ್ಟಿರುವ ಎಲ್ಲರೂ ತಮ್ಮ ಕುಟುಂಬದ ಮತ್ತು ಬಂಧುಗಳು ಸೇರಿ ಮೇ-೭ ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರಲ್ಲಿ ಭಾಗವಹಿಸಿ ತಮ್ಮ ಮತವನ್ನು ಚಲಾಯಿಸಲು ನೆರೆದಿದ್ದ ಗ್ರಾಹಕರಲ್ಲಿ ವಿನಂತಿಸಿದರು.
ಎಸ್.ಬಿ.ಐ ಶಾಖೆಯ ವ್ಯವಸ್ಥಾಪಕರಾದ ಬ್ರಹ್ಮದೇವ ಸಿಂಗ್ ರವರು ಗ್ರಾಹಕರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳಾದ ಶ್ರೀನಿವಾಸ, ಸುರೇಂದ್ರ ರೆಡ್ಡಿ, ಕೀರ್ತಿ, ಸತೀಶ್, ರಾಮಣ್ಣ, ರವೂಪ್, ಯಮನೂರ ಸಿಬ್ಬಂದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಾದ ಹರನಾಯಕ, ಚುಟುಕು ಸಾಹಿತಿ ಚಿದಾನಂದ ಕೀರ್ತಿ ಮತ್ತು ಸುಮಾರು ೫೦ಕ್ಕೂ ಅಧಿಕ ಗ್ರಾಹಕರು ಉಪಸ್ಥಿತರಿದ್ದರು.