To fulfill various demands: Porter workers protest,,,
ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ರಾಜ್ಯದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುಕನೂರು ತಾಲೂಕ ಹಮಾಲಿ ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ ಹೇಳಿದರು.
ಅವರು ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ ನಮ್ಮ ಬೇಡಿಕೆಗಳು ಈ ರೀತಿಯಾಗಿದ್ದು : ಅಸಂಘಟಿತ ಕಾರ್ಮಿಕರ ಸಹಜ ಮರಣಕ್ಕೂ 1 ಲಕ್ಷ ರೂಗಳ ಪರಿಹಾರ ನೀಡಬೇಕು ಹಾಗೂ ಶವ ಸಂಸ್ಕಾರದ ಪರಿಹಾರದ ಮೊತ್ತವನ್ನು ರೂಪಾಯಿ 25 ಸಾವಿರಕ್ಕೆ ಹೆಚ್ಚಿಸಬೇಕು, ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿ ಮಾಡಬೇಕು, ಎಲ್ಲಾ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು, ಎಪಿಎಂಸಿ ಕಾಯಕ ನಿಧಿ ಯಡಿ ನಿವೃತ್ತಿ ಪರಿಹಾರ ನೀಡಬೇಕು, ಮರಣ ಪರಿಹಾರವನ್ನು ರೂ 2 ಲಕ್ಷಕ್ಕೆ ಹೆಚ್ಚಿಸಬೇಕು, ಕೇಂದ್ರ ಸರಕಾರ ಇ -ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಜಾರಿ ಮಾಡಬೇಕು, ಮಿಲ್ ಗೋಡೌನ್ ವೇರ ಹೌಸ್ ಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು, ವಸತಿಹೀನ ಹಮಾಲರಿಗೆ ವಸತಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯು ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭಗೊಂಡು ಘೋಷಣೆಯೊಂದಿಗೆ ಕುಕನೂರು ಎಪಿಎಂಸಿಯಿಂದ ಅಂಬೇಡ್ಕರ್ ವೃತ್ತದ ವರೆಗೆ ಸಾಗಿ ಮರಳಿ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ ತಹಸೀಲ್ದಾರರ ಮೂಲಕ ಶಾಸಕರ, ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕರಾದ ದೊಡ್ಡ ಈರಪ್ಪ ಆರಬೆರಳಿನ, ದೇವರಾಜ ಆರಬೆರಳಿನ, ದೇವಪ್ಪ ಗುಡದಳ್ಳಿ, ನಾಗರಾಜ ಹಳ್ಳಿಕೇರಿ, ಮಹೇಶ ಮ್ಯಾಗಳಮನಿ, ಶಿವಪ್ಪ ಗುಡದಳ್ಳಿ, ವೀರುಪಾಕ್ಷ ಭಂಡಾರಿ, ಶರಣಪ್ಪ, ಯಲ್ಲಪ್ಪ, ಮಾರುತಿ, ಶಿವಬಸಪ್ಪ, ಬಸವರಾಜ, ಸುರೇಶ, ಹನುಮಪ್ಪ, ಮಲ್ಲಪ್ಪ, ಲಿಂಗಪ್ಪ ಇನ್ನಿತರ ಹಮಾಲಿ ಕಾರ್ಮಿಕರು ಇದ್ದರು.