Professionalism, reward for hard work : Parasurama Maddare

ಗಂಗಾವತಿ, ಜ.15: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿಜಯ ಕರ್ನಾಟಕ ಪತ್ರಿಕೆಯ ಸ್ಥಳೀಯ ಅರೆಕಾಲಿಕ ವರದಿಗಾರ ಚಂದ್ರಶೇಖರ ಮುಕ್ಕುಂದಿ ಜೆ.ನಾರಾಯಣಸ್ವಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್ ಅವರು, ಚಂದ್ರಶೇಖರ ಮುಕ್ಕುಂದಿ ಪತ್ರಿಕೋದ್ಯಮದಲ್ಲಿ ಕಳೆದ ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಸಾಮಾಜಿಕ ಜವಾಬ್ದಾರಿಯ ಕಳಕಳಿಯುಳ್ಳ ಯುವಪತ್ರಕರ್ತರಾಗಿದ್ದು, ತಮ್ಮ ವರದಿಗಾರಿಕೆ ಮೂಲಕ ಸಮಾಜದ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇಂತಹ ಯುವಪ್ರತಿಭೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳಲ್ಲಿ ಒಂದಾದ ಅತ್ಯುತ್ತಮ ಗ್ರಾಮಾಂತರ ವರದಿಗೆ ಜೆ.ನಾರಾಯಣಸ್ವಾಮಿ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ. ಇದು ಚಂದ್ರಶೇಖರ ಮುಕ್ಕುಂದಿ ಅವರ ವೃತ್ತಿನಿಷ್ಠೆ ಹಾಗೂ ಶ್ರಮಕ್ಕೆ ಸಂದ ಪ್ರತಿಫಲ. ಮುಂಬರುವ ದಿನಗಳಲ್ಲಿ ಯುವ ವರದಿಗಾರ ಚಂದ್ರಶೇಖರ ಮುಕ್ಕುಂದಿ ಅವರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅತ್ಯುತ್ತಮ ವರದಿಗಳನ್ನು ಮಾಡುವ ಮೂಲಕ ತಮ್ಮ ಸೇವಾ ಅವಧಿಯಲ್ಲಿ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗುವ ಮೂಲಕ ಉನ್ನತ ಸ್ಥಾನ ತಲುಪಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.