
ಗಂಗಾವತಿ.ಮೇ.02: ಕೊಪ್ಪಳ ಲೋಕಸಭಾ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು
ಮತದಾನದ ದಿನ ಹತ್ತಿರವಾಗುತ್ತಿದ್ದರೂ ಕೂಡ ಮುಂಚೂಣಿ ನಾಯಕರ ಓಲೈಕೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆಯೇ ಹೊರತು ತಳಮಟ್ಟದ ಮುಖಂಡರಾದ ಗ್ರಾಪಂ ಸದಸ್ಯರನ್ನು ಶಿಷ್ಟಾಚಾರಕ್ಕೂ ಭೇಟಿಯಾಗಿ ಮಾತನಾಡಿಸಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ರಮೇಶ್ ಕಾಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ವಾರ್ಡುವಾರು ಜನರ ವಿಶ್ವಾಸ ಗಳಿಸಿ ಗ್ರಾಮ ಪಂಚಾಯತಿ ಸದಸ್ಯರಾದವರು ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿರುತ್ತಾರೆ. ಪಕ್ಷ ಆಯೋಜಿಸುವ ದೊಡ್ಡಮಟ್ಟದ ಕಾರ್ಯಕ್ರಮಗಳ ಯಶಸ್ವಿಗೆ ಗ್ರಾಮ ಪಂಚಾಯತಿ ಸದಸ್ಯರ ಪಾತ್ರ ಮಹತ್ವದ್ದು ಎಂಬುದು ಮುಖಂಡರು ಮರೆಯಬಾರದು. ಪಕ್ಷ ಸಂಘಟನೆ, ಪ್ರಣಾಳಿಕೆಗಳ ಪ್ರಚಾರ, ಜನರಿಗೆ ಯೋಜನೆಗಳನ್ನು ತಲುಪಿಸುವಂತಹ ಜವಾಬ್ದಾರಿಯುತ ಕೆಲಸಗಳನ್ನು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಮಾಡುವ ಸದಸ್ಯರು ಜನಮಾನಸದಲ್ಲಿ ನಂಬಿಕೆ ಹುಟ್ಟಿಸಿರುತ್ತಾರೆ. ಅಭ್ಯರ್ಥಿಯ ಗೆಲುವಿಗೆ ಗ್ರಾಮೀಣ ಭಾಗದ ಮತಗಳು ಅತ್ಯಗತ್ಯ ಎಂಬ ಸತ್ಯದ ಅರಿವಿದ್ದೂ ರಾಜಶೇಖರ ಹಿಟ್ನಾಳ್ ಅವರು ಗ್ರಾಪಂ ಸದಸ್ಯರನ್ನು ನಿರ್ಲಕ್ಷಿಸಿದ್ದು ಒಳ್ಳೆಯದಲ್ಲ. ಇನ್ನೂ ಕಾಲ ಮಿಂಚಿಲ್ಲ, ಕೂಡಲೇ ಜಿಲ್ಲೆಯ ಗ್ರಾಮ ಪಂಚಾಯತಿ ಸದಸ್ಯರ ಸಭೆ ಕರೆದು ಚರ್ಚಿಸಬೇಕು. ಗ್ರಾಮೀಣ ಭಾಗದ ಮತಗಳು ವಿಭಜನೆ ಆಗದಂತೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ರಮೇಶ ಕಾಳೆ ಒತ್ತಾಯಿಸಿದ್ದಾರೆ.