Breaking News

ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ

Necessary preparation in Koppal district for Grilahakshmi Yojana registration process

ಜಾಹೀರಾತು

ಕೊಪ್ಪಳ ಜುಲೈ 19 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯಾದ ಹಾಗೂ ಸ್ತ್ರೀ ಸ್ವಾವಲಂಬನೆಯ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜುಲೈ 19ರಂದು ಈ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತದೆ.


ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಯನ್ನು ಖಚಿತ ಪಡಿಸಬಹುದಾಗಿದೆ ಹಾಗೂ ಕುಟುಂಬದ ಅಭಿವೃದ್ಧಿ ಸಮಾಜದ ಅಭಿವೃದ್ಧಿಗೆ ಬುನಾದಿಯಾಗಿರುತ್ತದೆ.

ಆದ್ದರಿಂದ ಈ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಹೆಗ್ಗುರುತಾಗಲಿದೆ. ಈ ಯೋಜನೆಯನ್ನು ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮಾರ್ಗದರ್ಶನದಲ್ಲಿ ಮತ್ತು ಸಮನ್ವಯ ಇಲಾಖೆಗಳ ಸಹಯೋಗದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಸಾರ್ವಜನಿಕ ಅರ್ಹ ಯಜಮಾನಿ ಪಡಿತರ ಚೀಟಿಯ ಫಲಾನುಭವಿಗಳು ಜುಲೈ 20ರಿಂದ ಯೋಜನೆಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಹ ಅರ್ಜಿದಾರರಾದ ಯಜಮಾನಿಯ ರೇಷನ್ ಕಾರ್ಡ, ಅರ್ಜಿದಾರರ ಮತ್ತು ಪತಿಯ ಆಧಾರ್ ಕಾರ್ಡ್, ರೇಷನ್ ಕಾರ್ಡಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ್ ಖಾತೆಯ ಪಾಸ್‌ಬುಕ್ ವಿವರಗಳು ಅಗತ್ಯವಾಗಿರುತ್ತದೆ.
ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು 197 “ಗ್ರಾಮ ಒನ್ ಕೇಂದ್ರಗಳು, 153 ಬಾಪೂಜಿ ಸೇವಾ ಕೇಂದ್ರಗಳು (ಗ್ರಾಮ ಪಂಚಾಯತ ಕೇಂದ್ರಗಳಲ್ಲಿ) ಹಾಗೂ ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 13 ಕರ್ನಾಟಕ ಒನ್ ಕೇಂದ್ರಗಳಲ್ಲಿ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗುತ್ತಿರುವ 26 ಕೇಂದ್ರಗಳು ಹೀಗೆ ಒಟ್ಟು ಸುಮಾರು 389 ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದಾದರೂ ದೂರು, ಸಮಸ್ಯೆ ಇದ್ದಲ್ಲಿ ಸರ್ಕಾರವು ಸ್ಥಾಪಿಸಿದ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು ಹಾಗೂ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ವೇಳಾ ಪಟ್ಟಿಯ ಎಸ್.ಎಂ.ಎಸ್ ಬರದೇ ಇದ್ದಲ್ಲಿ 8147500500 ಈ ಸಂಖ್ಯೆಗೆ ಫಲಾನುಭವಿಗಳ ಪಡಿತರ ಚೀಟಿಯ ಸಂಖ್ಯೆಯನ್ನು ಎಸ್.ಎಂ.ಎಸ್ ಮಾಡುವ ಮೂಲಕ ಪರಿಹಾರ ಪಡೆಯಬಹುದಾಗಿದೆ. ಅಲ್ಲದೇ ಸೇವಾಸಿಂಧು ಪೋರ್ಟಲ್‌ನಲ್ಲಿ ಫಲಾನುಭವಿಗಳ ಪಡಿತರ ಚೀಟಿ ಸಂಖ್ಯೆ ನಮೂದಿಸಿ ವೇಳಾ ಪಟ್ಟಿಯ ಮಾಹಿತಿಯನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ಎಸ್.ಎಂ.ಎಸ್ ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್ ಮೂಲಕ ಅಟೋ ಜನರೇಟೆಡ್ ಸ್ವೀಕೃತಿಗಳನ್ನು ಪಡೆಯಬಹುದಾಗಿದೆ.
ಅರ್ಹ ಗ್ರಾಮೀಣ ಪ್ರದೇಶದ ಯಜಮಾನಿ ಪಡಿತರ ಚೀಟಿದಾರರಿಗೆ ಹತ್ತಿರವಿರುವ ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಕೊಳ್ಳಲು ಮ್ಯಾಪಿಂಗ್ ಆಗಿದ್ದು, ಈ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ದಿನಾಂಕ ಹಾಗೂ ಸಮಯವನ್ನು ಪಡಿತರ ಚೀಟಿಗೆ ಜೋಡಿಸಿರುವ ಮೊಬೈಲ್ ಸಂಖ್ಯೆಗೆ ವೇಳಾಪಟ್ಟಿಯು ಎಸ್.ಎಂ.ಎಸ್ ಮೂಲಕ ಬರುವುದು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ಒನ್, ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತಿಯ ಕಚೇರಿಗಳಲ್ಲಿ, ತಹಶೀಲ್ದಾರ, ನಾಡ ಕಚೇರಿ ಅಥವಾ ತಾಲೂಕ ಪಂಚಾಯತಿ ಕಚೇರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ನಗರ ವ್ಯಾಪ್ತಿಯ ಫಲಾನುಭವಿಗಳು ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಪ್ರತಿ ನೋಂದಣಿ ಕೇಂದ್ರದಲ್ಲಿ ಪ್ರತಿದಿನ 60 ಫಲಾನುಭವಿಗಳಿಗೆ ನೋಂದಣಿ ಮಾಡಲು ಅವಕಾಶವಿದ್ದು, (ಬೆಳಿಗ್ಗೆ-30 ಮತ್ತು ಮಧ್ಯಾಹ್ನ-30) ಅರ್ಜಿ ವೇಳಾ ಪಟ್ಟಿ ಪ್ರಕಾರ ಆ ದಿನದಂದು ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ಫಲಾನುಭವಿಗಳು ಅದೇ ದಿನ ಅಥವಾ ಯಾವುದೇ ಕೆಲಸದ ದಿನ ಸಂಜೆ 5ಗಂಟೆಯ ನಂತರ ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯವಾಣಿ ಸ್ಥಾಪನೆ: ಮಂಜೂರಾತಿಯ ನಂತರ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸೌಲಭ್ಯ ನೀಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಕಚೇರಿ ಜಿಲ್ಲಾಡಳಿತ ಭವನ ಕೊಪ್ಪಳ ಹಾಗೂ ಜಿಲ್ಲೆಯ 5 ಯೋಜನೆಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಿದ್ದು, ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ಶುಲ್ಕ ಇಲ್ಲ: ಅರ್ಜಿ ಸಲ್ಲಿಕೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಕೊನೆಯ ದಿನಾಂಕ ಹಾಗೂ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ನೋಂದಣಿ ಮಾಡುವ ಕೇಂದ್ರದವರಿಗೆ ಸರ್ಕಾರವೇ ಪ್ರತಿ ಅರ್ಜಿಗೆ ರೂ.12 ನೀಡುತ್ತದೆ.

ಅರ್ಜಿದಾರರ ಮೊಬೈಲ್ ಸಂಖ್ಯೆ ಬಂದಿರುವ ನೋಂದಣಿ ಕೇಂದ್ರದ ವೇಳಾ ಪಟ್ಟಿ ಅನುಸಾರ ತಾವೇ ಸ್ವತ: ಮೇಲೆ ತಿಳಿಸಿದ ಕೇಂದ್ರಗಳಿಗೆ ಬಂದು ನೋಂದಣಿ ಮಾಡಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗಂಗಪ್ಪ ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,56,566 ಪಡಿತರ ಚೀಟಿಯನ್ನು ಹೊಂದಿದ ಫಲಾನುಭವಿಗಳಿದ್ದು, ಅದರಲ್ಲಿ 37,573 ಎ.ಎ.ವೈ ಕಾರ್ಡ್, 27,284 ಎ.ಪಿ.ಎಲ್ ಕಾರ್ಡ್ ಹಾಗೂ 2,91,699 ಬಿ.ಪಿ.ಎಲ್ ಕಾರ್ಡ್ ಹೊಂದಿದವರಾಗಿದ್ದಾರೆ.

ಇದರಲ್ಲಿ ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ ಪಾವತಿದಾರರಾಗಿದ್ದರೆ ಅವರು ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ: ಜಿಲ್ಲೆಯಲ್ಲಿ ಒಟ್ಟು 1850 ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ 1808 ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದು, ಅಂಗನವಾಡಿ ಕೇಂದ್ರದ ವ್ಯಾಪ್ತಿಯ ಗೃಹಲಕ್ಷ್ಮಿ ಯೋಜನೆಯಡಿ ಅರ್ಹರಿರುವ ಎಲ್ಲಾ ಫಲಾನುಭವಿಗಳ ಮನೆ ಭೇಟಿ ಮಾಡಿ ವೇಳಾ ಪಟ್ಟಿಯ ಪ್ರಕಾರ ನೋಂದಣಿ ಕಾರ್ಯದ ಜವಾಬ್ದಾರಿಯನ್ನು ನೀಡಿ ಎಲ್ಲಾ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡಿಸುವಂತೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ.
ಸಹಾಯವಾಣಿ ವಿವರ: ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಆರಂಭಿಸಲಾಗಿದೆ. ಉಪನಿರ್ದೇಶಕರ ಕಚೇರಿ ಸ.ವಾ.ಸಂ: 9110481302, 9738758256, 9902061530. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಾದ ಕೊಪ್ಪಳ: 9113284639, ಗಂಗಾವತಿ: 7259351515 ,ಕುಷ್ಟಗಿ: 7204861203, ಯಲಬುರ್ಗಾ: 8105729581 ಮತ್ತು ಕನಕಗಿರಿ ಕಚೇರಿ ಸಂ: 9902651753ಗೆ ಸಮಪರ್ಕಿಸಬಹುದು. ಅಥವಾ ಹೆಚ್ಚಿನ ಮಾಹಿತಿಗಾಗಿ ಹತ್ತಿರವಿರುವ ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳು ಸ್ಥಾಪಿಸಿದ ಕೇಂದ್ರಗಳು, ಅಂಗನವಾಡಿ ಕೇಂದ್ರ ಹಾಗೂ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ ಕಚೇರಿ, ತಾಲೂಕ ಪಂಚಾಯತ್ ಕಚೇರಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಚೇರಿಗಳಲ್ಲಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಸಂಪರ್ಕಿಸಬಹುದು.

ಯೋಜನೆಯ ಕುರಿತಂತೆ ಸಂದೇಹ ಅಥವಾ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ (ಹೆಲ್ಪ್ಲೈನ್) ಸಂಖ್ಯೆ: 1902ಗೆ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.