A child-friendly model library should be built in every village: Rahul Pandey
ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯದ ತರಬೇತಿ ಸ್ಥಳಕ್ಕೆ ಜಿಪಂ ಸಿಇಓ ಭೇಟಿ
ಕೊಪ್ಪಳ ಜುಲೈ 19 (ಕ.ವಾ.): ಕೊಪ್ಪಳ ತಾಲೂಕು ಪಂಚಾಯತಿಯ ಸಾಮರ್ಥ್ಯಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ ಹಾಗೂ ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯತಿ ಮೇಲ್ವಿಚಾರಕರಿಗೆ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯದ ತರಬೇತಿ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಜುಲೈ 19ರಂದು ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳನ್ನು ಗ್ರಂಥಾಲಯದತ್ತ ಸೆಳೆಯಲು, ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ನಿರ್ಮಾಣಕ್ಕಾಗಿ ಈ ತರಬೇತಿ ಆಯೋಜನೆ ಮಾಡಲಾಗಿದೆ. ತರಬೇತಿ ಪಡೆಯುವುದರೊಂದಿಗೆ ಮಾದರಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯಗಳ ನಿರ್ಮಾಣದತ್ತ ನಿಮ್ಮ ಗುರಿಯಿರಲಿ ಎಂದು ಅವರು ಸಲಹೆ ಮಾಡಿದರು. ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಸಮಸ್ಯೆಗಳನ್ನು ಇದೆ ವೇಳೆ ಆಲಿಸಿದ ಸಿಇಓ ಅವರು, ಈ ಬಗ್ಗೆ ಅಗತ್ಯ ಪರಿಹಾರೋಪಾಯ ಕಂಡುಕೊಳ್ಳಲು ಕ್ರಮ ವಹಿಸುವಂತೆ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿಯಲ್ಲಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯದ ಪರಿಕಲ್ಪನೆ ಮತ್ತು ಮಹತ್ವ, ಮಕ್ಕಳ ಹಕ್ಕುಗಳು, ಮಕ್ಕಳ ಭೌದ್ಧಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಾದ ಕಟ್ಟು ಕಟ್ಟು ಕಥೆ ಕಟ್ಟು, ಪುಸ್ತಕ ಪರಿಚಯ, ನಿಧಿ ಶೋಧ, ಗಟ್ಟಿ ಓದು, ಪತ್ರ ಬರಹ, ಓದುಗರ ಕೂಟ ನಿರ್ಮಾಣ ಹೀಗೆ ಮಕ್ಕಳ ಸ್ನೇಹಿ ಗ್ರಂಥಾಲಯಗಳ ಕುರಿತು ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡಲಾಯಿತು. ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಂದ ಉದ್ಘಾಟನೆಗೊಂಡ ತಾಲೂಕಿನ ಕಿನ್ನಾಳದಲ್ಲಿನ ಸುಸಜ್ಜಿತ ಗ್ರಾಮೀಣ ಗ್ರಂಥಾಲಯಕ್ಕೆ ಎಲ್ಲ ಮೇಲ್ವಿಚಾರಕರಿಂದ ಕ್ಷೇತ್ರ ಭೇಟಿ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಪಿ.ಡಿ.ಕೃಷ್ಣಮೂರ್ತಿ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಮಹೇಶ, ತರಬೇತಿಯ ಸಂಪನ್ಮೂಲ ವ್ಯಕ್ತಿ ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ, ತಾಲೂಕು ಪಂಚಾಯತ್ ನೋಡಲ್ ಅಧಿಕಾರಿ ಜ್ಯೋತಿ ರೆಡ್ಡೇರ್, ವಿಕೇಂದ್ರಿಕೃತ ತರಬೇತಿ ಸಂಯೋಜಕ ಹೆಚ್.ಎಸ್.ಹೊನ್ನುಂಚಿ, ತಾಲೂಕು ಪಂಚಾಯತಿಯ ದೇವರಾಜ, ಗಂಗಾಧರ, ಗಿರೀಶ ಮತ್ತಿತ್ತರರು ಹಾಜರಿದ್ದರು.