Shri Mallikarjuna Swamijis of Salur Brihan Math visited by Forest Minister Ishwar Khandre
ವರದಿ :ಬಂಗಾರಪ್ಪ ಸಿ ಹನೂರು :
ಶ್ರೀ ಮಲೆ ಮಹದೇಶ್ವರ ಬೆಟ್ಟ ಕಾಡಿನೊಳಗೆ ದನಗಳನ್ನು ಮೇಯಿಸಲು, ಗುಂಪುಗೂಡಿಸಿ ‘ದೊಡ್ಡಿ’ ಹಾಕಲು ಅರಣ್ಯ ಇಲಾಖೆ ನಿರ್ಬಂಧ ವಿಧಿಸುತ್ತಿರು ವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸದ್ಯ ಈ ಸಮಸ್ಯೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಂಗಳಕ್ಕೆ ತಲುಪಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿದ ಶ್ರೀಗಳು, ದನದ ದೊಡ್ಡಿಗೆ ಅವಕಾಶ ನೀಡು ವಂತೆ ಮನವಿ ಮಾಡಿದ್ದಾರೆ. ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಿದ್ದು, ಅರಣ್ಯ ಪ್ರದೇಶದೊಂದಿಗೆ ಬೆಸೆದುಕೊಂಡಿವೆ. ಇಲ್ಲಿ ವಾಸಿಸುವ ಜನರು ಶತಮಾನಗಳಿಂದಲೂ ಹೆಚ್ಚಾಗಿ ಗೋವುಗಳನ್ನು ಸಾಕಣೆ ಮಾಡುತ್ತಿದ್ದು,
ಈ ಹಿಂದೆ ಅರಣ್ಯ ಪ್ರದೇಶದಲ್ಲಿ ಮೇವಿಗಾಗಿ ದನಗಳ ದೊಡ್ಡಿ ನಿರ್ಮಿಸಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಇದರಿಂದ ಹಸುಗಳ ಸಾಕಣೆಗೆ ಈ ಭಾಗದ ಜನರಿಗೆ ತೊಂದರೆ ಯಾಗಿದೆ.
ಆದ್ದರಿಂದ, ದೊಡ್ಡಿ ನಿರ್ಮಿಸಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎನ್ನಲಾಗಿದೆ.
ಮಲೆಮಹದೇಶ್ವರ ಬೆಟ್ಟದ ಮಾಯ್ಕಾರ ಮಾದಪ್ಪನಿಗೆ ಪ್ರತಿ ಅಮಾವಾಸ್ಯೆಯಂದು ಗೋವುಗಳಿಂದ ಕರೆದು ತಂದ ಹಾಲಿನಿಂದ ಅಭಿಷೇಕ ನೆರವೇರಿಸಲಾಗುತ್ತದೆ. ಆದರೆ ಈ ತಪ್ಪಲಿನಲ್ಲೇ ನೆಲೆಸಿರುವ ದೇಸಿ ತಳಿಯ ಹಸುಗಳಿಗೆ ಅರಣ್ಯ ಪ್ರದೇಶದಲ್ಲಿ ದೊಡ್ಡಿ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇತ್ತ ಪರ್ಯಾಯ ವ್ಯವಸ್ಥೆಯೂ ಇಲ್ಲವಾಗಿದೆ. ಇದರಿಂದ ಹಸುಗಳು ಅಳಿವಿನಂಚಿನಲ್ಲಿವೆ. ಜಿಲ್ಲೆಯಲ್ಲಿಯೇ ಹನೂರು ತಾಲೂಕು ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದೆ. ಈ ತಪ್ಪಲಿನಲ್ಲಿ ನೆಲೆಸಿರುವ ಸುತ್ತಮುತ್ತಲ ಹಳ್ಳಿಗಳ ಜನರು ದೇಸಿ ತಳಿಯ ಹಸು ಸಾಕಣೆಯನ್ನು ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ದೊಡ್ಡಿ ನಿರ್ಮಿಸಲು ಅವಕಾಶ ನೀಡುವ ಸಂಬಂಧ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಚರ್ಚಿಸಿದರು.
ನೂತನ_ಅರಣ್ಯ ಕಾಯ್ದೆ ಜಾರಿ:
ಪೂರ್ವಿಕರ ಕಾಲದಿಂದಲೂ ಮಳೆಗಾಲದಲ್ಲಿ ಅರಣ್ಯ ಪ್ರದೇಶದಲ್ಲಿನ ಝರಿ ಹಾಗೂ ಹಳ್ಳ ಹರಿಯುವ ಕಡೆ ರೈತರು ಮೇವಿಗಾಗಿ ಜಾನುವಾರುಗಳನ್ನು ಕರೆದೊಯ್ದು ದೊಡ್ಡಿಗಳನ್ನು ನಿರ್ಮಿಸಿಕೊಂಡು ತಿಂಗಳುಗಟ್ಟಲೆ ಅಲ್ಲಿಯೇ ವಾಸಿಸುತ್ತಿದ್ದರು. ಯಾವುದೇ ಅಡ್ಡಿ ಆತಂಕವಿರಲಿಲ್ಲ. ಆದರೆ, ಈ ಭಾಗದಲ್ಲಿ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ರೂಪುಗೊಂಡು ಹೊಸ ಅರಣ್ಯ ಕಾಯ್ದೆ ಜಾರಿಯಾದ ಬಳಿಕ ದನದ ದೊಡ್ಡಿಗಳಿಗೆ ಕಡಿವಾಣ ಬಿದ್ದಿದೆ.
ಇದರಿಂದ ಜಾನುವಾರಗಳ ಮೇವಿಗೆ ಸಮಸ್ಯೆ ಯಾಗಿದೆ. ಇತ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಪರಿಣಾಮ, ಈ ಭಾಗದ ರೈತರು ಜಾನುವಾರುಗಳ ಮೇವಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಈ ಬಗ್ಗೆ ಜನರಿಂದ ಆಕ್ಷೇಪ ಕೇಳಿಬರುತ್ತಲೇ ಇದೆ.
ಅಳಿವಿನಂಚಿನಲ್ಲಿ ಆಲಂಬಾಡಿ ತಳಿ :
ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರಗೂರು, ಆಲಂಬಾಡಿ ಹಾಗೂ ಹಳ್ಳಿಕಾರ್ ತಳಿ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಹಸುಗಳಿವೆ. ಆದರೆ, ಅರಣೀಕರಣದಿಂದ ದನಗಳನ್ನು ಕಾಡಿನಲ್ಲಿ ಮೇಯಲು ಬಿಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಆಲಂಬಾಡಿ ತಳಿಯ ಹಸುಗಳ ಸಂತತಿ ಕ್ಷೀಣಿಸುತ್ತ ಬಂದಿದ್ದು, ಅಳಿವಿನಂಚಿನಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಸಂತತಿಯ ಜತೆಗೆ ದೇಸಿ ತಳಿಯ ಹಸುಗಳು ನಶಿಸು ಹೋಗುವಂತಹ ಸನ್ನಿವೇಶ ಎದುರಾಗಿದೆ ಎಂಬುದು ಈ ಭಾಗದ ಜನರ ಆತಂಕವಾಗಿದೆ.
ಮಹತ್ವದ ಸ್ಥಾನ:
ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಹದೇಶ್ವರರನ್ನು ಪೂಜಿಸುವ ಬೇಡಗಂಪಣ ಸಮುದಾಯದ ಜನರು ಜಾನುವಾರುಗಳನ್ನು ಸಾಕುತ್ತಿದ್ದಾರೆ. ಇಂದಿಗೂ ಬಹುತೇಕರು ಸೋಮವಾರ ಬಸವಣ್ಣ ಹುಟ್ಟಿದ ದಿನ ಎಂಬ ನಂಬಿಕೆಯಿಂದ ಹಸುವಿನಿಂದ ಹಾಲನ್ನು ಕರೆಯುವುದಿಲ್ಲ. ಜತೆಗೆ, ಜಮೀನು ಉಳುಮೆಗೆ ಹಸುಗಳನ್ನು ಬಳಸುವುದಿಲ್ಲ ಎಂಬುದಾಗಿದೆ .