Breaking News

ಕನಕಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ

Charity lecture held at Adarsh ​​Vidyalaya on Saturday by Kannada Sahitya Parishad of Kanakagiri Taluk

ಕನಕಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಹಾಗೂ ಲಿಂ. ಸಾವಿತ್ರಮ್ಮ ಭುವನೇಶ್ವರಯ್ಯ ತಾತನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು

ಸಾಹಿತ್ಯ ಶೋಷಿತರ ಧ್ವನಿಯಾಗಲಿ ಗಾಯಕ ಜೀವನಸಾಬ ಅಭಿಮತ
ಸಾಮಾಜಿಕ ವ್ಯಾಧಿಗಳಿಗೆ ಸಾಹಿತ್ಯ ಮೂಲವಾಗಲಿ
ಕನಕಗಿರಿ: ಕನ್ನಡ ಭಾಷೆಗೆ ಬಹು ದೊಡ್ಡ ಪ್ರಾಚೀನತೆ ಇದೆ, ಕನ್ನಡವು ಸುಂದರ ಮತ್ತು ಶ್ರೀಮಂತ ಭಾಷೆಯಾಗಿದ್ದು, ಲಿಪಿಗಳ ರಾಣಿ ಎಂಬ ಅಭಿಮಾನಕ್ಕೆ ಪಾತ್ರವಾಗಿದೆ ಎಂದು ಅಂತರರಾಷ್ಟ್ರೀಯ ಗಾಯಕ ಡಾ. ಜೀವನಸಾಬ ಬಿನ್ನಾಳ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನಕಗಿರಿ ಆಶ್ರಯದಲ್ಲಿ ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶನಿವಾರ ನಡೆದ ಲಿಂ. ಸಾವಿತ್ರಮ್ಮ ಭುವನೇಶ್ವರಯ್ಯ ತಾತ ಬೃಹನ್ಮಠದ ಅವರ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಕನ್ನಡಿಗರು ಸೇರಿದಂತೆ ಅನ್ಯ ಭಾಷಿಕರು, ವಿದೇಶಿಗರು ಅಪಾರ ಕೊಡುಗೆ ನೀಡಿದ್ದಾರೆ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಇದೆ ಎಂದು ತಿಳಿಸಿದರು.
ಸಾಹಿತ್ಯ ಶೋಷಿತರು, ಅಸಹಾಯಕರ ದ್ವನಿಯಾಗಬೇಕು ಅಸಮಾನತೆ, ಜಾತೀಯತೆ, ಅನಕ್ಷರತೆ, ಮೂಢನಂಬಿಕೆ ಇತರೆ ಸಾಮಾಜಿಕ ವ್ಯಾಧಿಗಳ ನಿರ್ಮೂಲನೆಗೆ ಔಷಧಿಯಾಗಬೇಕೆಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಕಲಿತವರಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಮೀಸಲಿಡಬೇಕು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕನ್ನಡ ಭಾಷೆಗೆ ಸಿಗುತ್ತಿರುವ ಮೀಸಲಾತಿ ಪ್ರಮಾಣ ಮತ್ತಷ್ಟು ಹೆಚ್ಚಳವಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ಕನ್ನಡ ಬಗೆಗಿನ ಪ್ರೀತಿ ಮತ್ತು ಅಭಿಮಾನ ಕನ್ನಡಿಗರಲ್ಲಿ ಹೆಚ್ಚಳವಾಗಬೇಕು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉಳ್ಳವರು ಶಕ್ತಿ ತುಂಬುವಂತ ಕೆಲಸ ಮಾಡಬೇಕೆಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಹನುಮೇಶ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ಮಾತನಾಡಿ ಶಿಕ್ಷಣದ ಬೆಳವಣಿಗೆಯಲ್ಲಿ ಮಠ, ಮಾನ್ಯಗಳ ಕೊಡುಗೆ ಅಪಾರವಾಗಿದೆ ಸುಳೇಕಲ್, ಅರಳಹಳ್ಳಿ ಬೃಹನ್ಮಠಗಳಿಗೆ ಯಾವುದೇ ಭಕ್ತರೆ ಆದಾಯದ ಮೂಲವಾಗಿದ್ದು ಧರ್ಮ, ಜಾತಿದ ತಾರತಮ್ಯವಿಲ್ಲದೆ ನಿತ್ಯವೂ ದಾಸೋಹ ನಡೆಯುತ್ತಿದೆ, ಈ ಮಠಗಳು ಶ್ರೀಮಂತಿಕೆಯಿಂದ ಕೂಡಿರದಿದ್ದರೂ ಹೃದಯ ಶ್ರೀಮಂತವಾಗಿದೆ ಎಂದು ತಿಳಿಸಿದರು.ಮಠದ ಬೆಳವಣಿಗೆಯಲ್ಲಿ ಲಿಂ. ಸಾವಿತ್ರಮ್ಮ ಅವರ ಕೊಡುಗೆ ಸಾಕಷ್ಟು ಇದೆ, ಮಠದ ಶಕ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಬೃಹನ್ಮಠದ ಭುವನೇಶ್ವರಯ್ಯ ತಾತನವರು ಮಾತನಾಡಿ 12ನೇ ಶತಮಾನದ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ, ಅನುಭವ ಮಂಟಪದಲ್ಲಿ ಪ್ರತಿಯೊಬ್ಬರಿಗೂ ಸ್ಥಾನಮಾನ ನೀಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.
ಹಿರಿಯರ ಪುಣ್ಯಸ್ಮರಣೆ ಕಾರ್ಯಕ್ರಮ ಕುಟುಂಬಕ್ಕೆ ಸೀಮಿತಗೊಳಿಸದೆ ಕಸಾಪದಲ್ಲಿ ದತ್ತಿನಿಧಿಗಳನ್ನು ಸ್ಥಾಪನೆ ಮಾಡುವ ಮೂಲಕ ಪೂರ್ವಜರು ನಡೆದು ಬಂದ ದಾರಿ, ಹೋರಾಟ, ಸಾಮಾಜಿಕ ಬದುಕು, ಬರಹ ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಆಶಿಕಾ ಎಚ್. ಸಿ ಅವರು ’12ನೇ ಶತಮಾನದ ಶಿವಶರಣೆಯರು, ಮಹಿಳೆ ಮತ್ತು ಸಮಾಜ ಕಲ್ಯಾಣ, ಬದುಕಿಗೆ ಭಾವೈಕ್ಯತೆ ಹಾಗೂ ಬೃಹನ್ಮಠ ಕೊಡುಗೆ’ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ, ಕೇಂದ್ರ ಕಸಾಪ ಸಂಘ-ಸಂಸ್ಥೆ ಪ್ರತಿನಿಧಿ ನಬೀಸಾಬ ಕುಷ್ಟಗಿ, ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ, ಮುಖಂಡರಾದ ಶೇಖರಗೌಡ ಪಾಟೀಲ, ಸಿದ್ದಪ್ಪ ನೀರ್ಲೂಟಿ ಅವರು ಮಾತನಾಡಿದರು.
ಸಾಹಿತಿಗಳಾದ ಜೀವನಸಾಬ ಬಿನ್ನಾಳ, ಬೆಟ್ಟಪ್ಪ ಜೀರಾಳ, ನಾಗೇಶ ಪೂಜಾರ, ಯಮನೂರಪ್ಪ ವಡಕಿ, ಪರ್ವಿನ್ ಬೇಗಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಸ್ ಡಿಎಂಸಿ ಅಧ್ಯಕ್ಷ ಕನಕರೆಡ್ಡಿ ಕೆರಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಮುಖಂಡರಾದ ಶರಣಬಸಪ್ಪ ಭತ್ತದ, ಮಹಾಂತೇಶ ಸಜ್ಜನ್, ಶರಣಪ್ಪ ಎಂ. ಭತ್ತದ, ವಾಗೀಶ ಹಿರೇಮಠ, ಮುಖ್ಯಶಿಕ್ಷಕ ಎಸ್. ಶಿವಕುಮಾರ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಗೈಡ್ಸ್ ಜಿಲ್ಲಾ ಆಯುಕ್ತೆ ಅರುಣಕುಮಾರಿ ವಸ್ತ್ರದ ಇತರರು ಇದ್ದರು. ಬಾಲಾಜಿ ಸ್ವಾಗತಿಸಿದರು. ಪರಸಪ್ಪ ಹೊರಪೇಟೆ ನಿರೂಪಿಸಿದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.