mass marriages Symbol of Amity: MLA Dodna Gowda Patil
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ (ಕುಷ್ಟಗಿ) : ಸಾಮೂಹಿಕ ವಿವಾಹಗಳು
ಸೌಹಾರ್ದತೆಯ ಸಂಕೇತವಾಗಿದ್ದು ಸರ್ವ ಧರ್ಮದವರನ್ನು ಒಳಗೊಂಡ ಇಂತಹ ಕಾರ್ಯಕ್ರಮಗಳು ಆಯೋಜಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಅವರು ಕುಷ್ಟಗಿ ಪಟ್ಟಣದ ಬನ್ನಿ ಮಹಾಂಕಾಳಿಯ ಮಹಾಭಿಷೇಕ ನಿಮಿತ್ತ ಶುಕ್ರವಾರದಂದು ಪಟ್ಟಣದ ಸಂತೆ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಜಾತಿ, ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಪಟ್ಟಣದ ವಜೀರ್ ಅಲಿ ಗೋನಾಳ ಅವರು ಎಲ್ಲಾ ಸಮುದಾಯಗಳನ್ನು ಒಂದೆಡೇ ಸೇರಿಸುವ ಮೂಲಕ ಶಾಂತಿ, ಸೌಹಾರ್ಧತೆ ಮೂಡಿಸುತ್ತಾ ನಾಡಿನ ಜನತೆಯ ಪ್ರೀತಿ ಪಾತ್ರರಾಗಿದ್ದಾರೆ. ಇಂತಹ ಬೃಹತ್ ವೇದಿಕೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ನಂತರದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಶಕ್ತ ಸಮಾಜ ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಬಹುತೇಕ ಯುವಕರು ದುಶ್ಚಟಗಳಿಂದ ಅಕಾಲಿಕ ಮರಣ ಹೊಂದುತ್ತಿದ್ದು, ಪಾಲಕರೇ ಮಕ್ಕಳ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಬಂದೊದಗಿದೆ. ಒಳ್ಳೆಯ ನಡೆ-ನುಡಿಗಳಿಂದ ಪರೋಪಕಾರದ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಹೆಣ್ಣು ಹೆತ್ತ ಬಡ ಜನತೆಗೆ ಆರ್ಥಿಕ ಹೊರೆ ಕಡಿಮೆಯಾಗಲು ಸಾಮೂಹಿಕ ವಿವಾಹಗಳಿಂದ ಮಾತ್ರ ಸಾಧ್ಯ ಅಂತಹ ಕಾರ್ಯವನ್ನು ಇಂದು ಇಲ್ಲಿನ ನಮ್ಮ ಯುವ ನಾಯಕರಾದ ವಜೀರ ಅಲಿ ಗೋನಾಳ ಅವರು ಪ್ರತಿ ವರ್ಷ ಮಾಡುತ್ತಿರುವದು ಶ್ಲಾಘನೀಯ ಎಂದರು.
ಬಾಗಲಕೋಟೆಯ ಫಾರೂಖ್ ಅಹ್ಮದ್ ನೂರಾನಿ ಅಸ್ಸಾಖಾಫಿ, ಮಾಜಿ ಶಾಸಕ ಹಸನಸಾಬ ದೋಟಿಹಾಳ ಇತರರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣದ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ನಿಡಶೇಸಿಯ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ದೋಟಿಹಾಳ ಗ್ರಾಮದ ಚಂದ್ರಶೇಖರ ದೇವರು, ಕಾರ್ಯಕ್ರಮ ಆಯೋಜಕ ವಜೀರ್ ಅಲಿ ಗೋನಾಳ, ಪ್ರಮುಖರಾದ ಪ್ರಭಾಕರ ಚಿಣಿ, ಉಮೇಶ ಮಂಗಳೂರು ಇತರರು ಇದ್ದರು.
ಈ ಸಾಮೂಹಿಕ ವಿವಾಹದಲ್ಲಿ 43 ಜೋಡಿ ದಂಪತಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು.