Foundation stone for construction of 100-bed taluk hospital; 60 bedded Mother-Child Hospital Lokarpane
ಖಾನಾಪುರ ಜನತೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಸಚಿವ ದಿನೇಶ್ ಗುಂಡೂರಾವ್ ಭರವಸೆ
ಬೆಳಗಾವಿ:(ಕರ್ನಾಟಕ ವಾರ್ತೆ): ಕಾಡಂಚಿನಲ್ಲಿರುವ ಖಾನಾಪುರ ತಾಲ್ಲೂಕಿನ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ 60 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ಆದಷ್ಟು ಶೀಘ್ರದಲ್ಲೇ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ಕೂಡ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ (ಸೆ.11) ಖಾನಾಪೂರ ಪಟ್ಟಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್ಚ್.ಎಂ) ಅಡಿಯಲ್ಲಿ ನಿರ್ಮಿಸಲಾದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಸಿದ ಬಳಿಕ ನಬಾರ್ಡ ಆರ್.ಐಡಿಎಫ್-30 ಯೋಜನೆಯಡಿಯಲ್ಲಿ 100 ಹಾಸಿಗೆಗಳ ತಾಲೂಕಾ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಖಾನಾಪುರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು, ಸಿಬ್ಬಂದಿ, ಮೂಲಸೌಕರ್ಯ ಹಾಗೂ ವೈದ್ಯಕೀಯ ಉಪಕರಣಗಳನ್ನು ಸರಕಾರ ಒದಗಿಸಲಿದೆ ಎಂದು ಭರವಸೆ ನೀಡಿದರು.
ಆರೋಗ್ಯ ವ್ಯವಸ್ಥೆಯಲ್ಲಿ ತಾಯಿ ಮಗು ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಬೇಕು. ತಾಯಿ ಗರ್ಭದಲ್ಲೇ ಮಗು ಆರೋಗ್ಯವಾಗಿರಬೇಕು ಎಂದರೆ ತಾಯಿ ಆರೋಗ್ಯ ಅತೀ ಮುಖ್ಯ. ಇದರಿಂದ ಮಗು ಆರೋಗ್ಯಕರವಾಗಿ ಬೆಳೆಯಲಿದೆ ಎಂದು ಹೇಳಿದರು.
ಹೆರಿಗೆಯ ನಂತರ ಮಗು ಆರೋಗ್ಯಕರ ಬೆಳವಣಿಗೆ ಹೊಂದಬೇಕು ಎಂದರೆ ಮಗು ಗರ್ಭದಲ್ಲಿ ಇರುವಾಗಲೇ ತಾಯಿಗೆ ಪೌಷ್ಟಿಕ ಆಹಾರ ನೀಡಬೇಕು ಇದರಿಂದ ಯಾವುದೇ ತೊಂದ್ರೆ ಇಲ್ಲದೇ ಮಗು ಮನಸಿಕ, ದೈಹಿಕವಾಗಿ ಆರೋಗ್ಯಕರವಾಗಿರಲಿದೆ.
ಯುವ ಸಮುದಾಯ ಸಮಾಜಕ್ಕೆ ಅಸ್ತಿಯಾಗಬೇಕು. ಒಳ್ಳೆ ಆರೋಗ್ಯ ಹಾಗೂ ಶಿಕ್ಷಣ ನೀಡಿದರೆ ಮಾತ್ರ ದೇಶ ಪ್ರಗತಿ ಹೊಂದಲಿದೆ. ದೇಶ ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಸ್ವಾವಲಂಬನೆಯಾಗಿ ಬದುಕಬೇಕು.
100 ಬೆಡ್ ಗಳ ಹೊಸ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಆಸ್ಪತ್ರೆ ಅಗತ್ಯವಿರುವ ಕ್ಷೇತ್ರಗಳನ್ನು ಗಮನಿಸಿ ಮುಖ್ಯಮಂತ್ರಿಗಳು ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿರುತ್ತಾರೆ. ಈಗಾಗಲೇ ಖಾನಾಪೂರ ತಾಲೂಕಿನ ನೂತನ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಶಾಸಕರ ಬೇಡಿಕೆಯಂತೆ ಕೆಲವು ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ನಿರ್ಮಾಣವಾಗಬೇಕಿದ್ದು, ಇವುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
ಸರ್ಕಾರ ಮಹಿಳಾ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಾಪೊಲಿಯಲ್ಲಿ 65 ಲಕ್ಷದ ಉಪ ಕೇಂದ್ರ ನಿರ್ಮಿಸಲಾಗುವುದು. ಇಟಗಿ, ನಂದಗಡ, ಪಾರಿಶ್ವಾಡ, ಕಕ್ಕೇರಿ, ಬೀಡಿ, ಭಾಗದಲ್ಲಿ ಆರೋಗ್ಯ ಇಲಾಖೆಯ ಬೇರೆ ಬೇರೆ ಕಾಮಗಾರಿಗಳಿಗೆ ಸುಮಾರು 3 ಕೋಟಿ 50 ಲಕ್ಷ ಅನುದಾನ ನೀಡಲಾಗುವುದು ಅದೇ ರೀತಿಯಲ್ಲಿ ಸ್ಥಳೀಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ವಾರದ 6 ದಿನಗಳು ಮೊಟ್ಟೆ ವಿತರಣೆ ಮಾಡಲಾಗುವುದು. ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮಜಿ ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ 1500 ಕೋಟಿ ರೂಪಾಯಿ ವೆಚ್ಚದಲ್ಲಿ 3 ವರ್ಷದವರೆಗೆ ಪ್ರತಿದಿನ ಮೊಟ್ಟೆ ನೀಡಲಿದ್ದಾರೆ ಅವರ ಕಾರ್ಯ ಇತರರಿಗೆ ಮಾದರಿ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಖಾನಾಪೂರ ತಾಲ್ಲೂಕಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದಂತಾಗಿತ್ತು. ಆಸ್ಪತ್ರೆಯಲ್ಲಿ ಕೂಡ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆಯಿತ್ತು. ತಾಲ್ಲೂಕಿನ ಸಾರ್ವಜನಿಕರ ತೊಂದರೆ ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಎರಡು ಆಸ್ಪತ್ರೆಗಳನ್ನು ಕೊಡುಗೆಯಾಗಿ ನೀಡಿದೆ. ತಾಯಿ ಮಕ್ಕಳ ಆಸ್ಪತೆಯಂತೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಅತೀ ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.
ಈ ಭಾಗದಲ್ಲಿ ಬಹಳ ಮಳೆಯಾಗುವುದರಿಂದ ರಸ್ತೆಗಳು ಹಾಳಾಗಿವೆ. ತಾಲ್ಲೂಕು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರ ಶ್ರಮಿಸಲಾಗುವುದು.
ಚಾಪಗಾವಿ, ಕಕ್ಕೇರಿ, ಜಾಂಬೋಟಿ ಸೇರಿದಂತೆ ತಾಲ್ಲೂಕಿನಲ್ಲಿ ಅಗತ್ಯವಿರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಶಾಸಕ ವಿಠ್ಠಲ ಹಲಗೇಕರ ಮನವಿ ಮಾಡಿಕೊಂಡರು.
ಇದಕ್ಕೂ ಮುಂಚೆ ಮಾತನಾಡಿದ ಖಾನಾಪೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು, ಖಾನಾಪೂರ ತಾಲ್ಲೂಕಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆಯಾಗಿರುವುದು ಹೆಮ್ಮೆಯ ವಿಷಯ. ಖಾನಾಪೂರ ತಾಲೂಕಿನ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಬೆಳಗಾವಿಗೆ ಹೋಗುವುದು ಅನಿವಾರ್ಯವಾಗಿರುವ ತಮ್ಮ ಅವಧಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಅದರಂತೆ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದೆ ಎಂದರು.
ಈ ಆಸ್ಪತ್ರೆ ಸೌಲಭ್ಯ ಪ್ರತಿಯೊಬ್ಬ ಮಹಿಳೆಯರಿಗೂ ತಲುಪುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಬೇಕು. ಖಾನಾಪೂರ ತಾಲ್ಲೂಕಿನ ತಾಯಂದಿರಿಗೆ ತಾಯಿ ಮಕ್ಕಳ ಆಸ್ಪತ್ರೆ ಸದ್ಭಳಕೆಯಾಗಲಿದೆ ಎಂದು ಅಂಜಲಿ ನಿಂಬಾಳ್ಕರ್ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಖಾನಾಪೂರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವುಡಸಣ್ಣವರ, “ಈಗಾಗಲೇ ಇರುವ ಆಸ್ಪತ್ರೆ ಹಳೆಯದಾದ ಕಾರಣ ಸರ್ಕಾರ 100 ಹಾಸಿಗೆಯ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿಲಾಗಿದೆ. ತಾಯಿ ಮಗು ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.
60 ಹಾಸಿಗೆಗಳ ತಾಯಿ- ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಬಂದಂತಹ ಸಾಕಷ್ಟು ಯೋಜನೆಗಳನ್ನು ಎಲ್ಲರೂ ಬಳಸಿಕೊಂಡು ತಾಯಿ-ಮಗು ಮರಣ ಪ್ರಮಾಣ ನಿಯಂತ್ರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಖಾನಾಪೂರ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.