Let learning movements benefit children’s academic progress: Laxmikanta

ಮಾನ್ವಿ : ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ವಲಯ ಸಿಆರ್ಪಿ ಲಕ್ಷ್ಮೀಕಾಂತ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪೋತ್ನಾಳ ಗ್ರಾಮದ ಕೇಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೋತ್ನಾಳ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ಶಿಕ್ಷಕರಿಂದ ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಲಿದೆ ಎಂದರು.
ನಂತರದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ಮಕ್ಕಳು ಗಣಿತ ಪರೀಕ್ಷಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು ಪರಿಕ್ಷೇಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಗಂಡ ಈರಣ್ಣ, ಅಭಿವೃದ್ಧಿ ಅಧಿಕಾರಿ ಬಸವರಾಜ, ಶಿಕ್ಷಣ ಸಂಯೋಜಕರಾದ ಸಂತೋಷ, ತಾಲೂಕ ವೃತ್ತಿ ಅಭಿವೃದ್ಧಿ ಮೇಲ್ವಿಚಾರಕರಾದ ಅಜಾರುದ್ದಿನ್, ಸೇರಿದಂತೆ ಆಯೇಷಾ, ಅಬ್ದುಲ್ ಖಲೀಲ್, ನಾಗಪ್ಪ, ಮಹದೇವಪ್ಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.