Farmers are not poor: Kalakappa Kambali

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಅನ್ನ ನೀಡುವ ರೈತರು ಯಾರು ಬಡವರಲ್ಲಾ, ಮುಂದೊಂದು ದಿನ ರೈತನ ಬೆಲೆ ಜಗತ್ತಿಗೆ ತಿಳಿಯುತ್ತದೆ. ರೈತರು ಕೇವಲ ವ್ಯವಸಾಯ ಒಂದನ್ನೇ ಅವಲಂಬಿಸದೇ ಎಲ್ಲಾ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ ಬರಬೇಕು ಎಂದು ಮಾಜಿ ತಾಲೂಕ ಪಂಚಾಯತ್ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಕರೆ ನೀಡಿದರು.
ಮಂಗಳವಾರದಂದು ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರೈತ ಸಂಘಟನೆಗಳು ಜನ ಪ್ರತಿನಿಧಿಗಳ ಮರಳು ಮಾತಿಗೆ ಬಲಿಯಾಗದೇ ಮುಗ್ದ ರೈತರ ಕಣ್ಣಿರು ಒರೆಸುವ ಸಂಘಟನೆಗಳಾಗಬೇಕು, ಕೆಲವೊಂದೆಡೆ ರೈತರು ಪ್ರತಿಭಟನೆಗೆ ನಿಂತರೇ ಸರಕಾರ ನಡುಗುವಂತಹ ಪ್ರತಿಭಟನೆಗಳು ಈ ಹಿಂದೆ ನಡೆದಿವೆ ಎಂದರು.
ಇಂದಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಹಾಗೂ ಸರಕಾರ ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ನೀಡದಿರುವುದು ರೈತರ ಪಾಲಿನ ದುರಂತವಾಗಿದೆ. ಇದರ ಲಾಭವನ್ನು ದಲ್ಲಾಳಿಗಳು ಪಡೆಯುಂತಾಗಿದೆ ಎಂದರು.
ಸರಕಾರದ ಯಾವ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲಾ, ಈ ಹಿಂದೆ ರೈತ ಮುಖಂಡ ನಂಜುಂಡ ಸ್ವಾಮಿಯವರ ರೈತ ಪರ ಹೋರಾಟದ ಮೂಲಕ ರೈತರಿಗೆ ಅನೇಕ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದ್ದರಿಂದ
ರೈತರು ಬಲಿಷ್ಠ ಹೋರಾಟಗಳ ಮೂಲಕ ಸಂಘಟನೆಗಳನ್ನು ಬಲಪಡಿಸಿ ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು
ಎಂದು ತಿಳಿಸಿದರು.
ಈ ವೇಳೆ ಕುಷ್ಟಗಿಯ ರೈತ ಮುಖಂಡ ಸಿ.ಕೆ ಪಾಟೀಲ್ ಮಾತನಾಡಿ ರೈತರು ಕೇವಲ ರೈತರಾಗಿರದೇ ಉದ್ಯಮಿಗಳಾಗಿ ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ದಾಳಿಂಬೆ ಬೆಳೆ ಹೀಗೆ ವಿವಿಧ ಬೆಳೆಗಳನ್ನು ಬೆಳೆದು ಮುಂದೆ ಬರಬೇಕು ಎಂದರು.
ನಂತರ ರೈತ ಮುಖಂಡರಾದ ಪಚ್ಚೆ ನಂಜುಂಡ ಸ್ವಾಮಿ ಮಾತನಾಡಿ ನಮಗೆ ಅನ್ನ ನೀಡುವ ರೈತ ಇಂದು ಹಲವಾರು ರೀತಿಯ ಸಂಕಷ್ಟದಲ್ಲಿದ್ದರು ಯಾವ ಸರಕಾರವು ರೈತರ ಕಣ್ಣಿರು ಒರೆಸುವ ಕೆಲಸ ಮಾಡುತ್ತಿಲ್ಲಾ, ಕೇವಲ ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿಯುತ್ತವೆ ಎಂದು ಬೇಸರ ವ್ಯಕ್ತ ಪಡಿಸಿ ಮಾತನಾಡಿದರು.
ದೇಶದಲ್ಲಿ ಸಾಲದ ಸೂಳಿಗೆ ಸಿಲುಕಿ ಸಾವಿರಾರು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಯಾವ ಜನ ಪ್ರತಿ ನಿಧಿಗಳಾಗಲಿ ಯಾವ ರಾಜಕಾರಣಿಗಳಾಗಲಿ ಸಾಲದ ಸೂಳಿಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಂಡಿದ್ದು ಇದೆಯೇ,,? ರೈತರು ತಮ್ಮ ವ್ಯವಸಾಯಕ್ಕೆ ಮೈಕ್ರೋ ಪೈನಾನ್ಸ್ ಗಳಲ್ಲಿ ಸಾಲ ಸೂಲ ಮಾಡಿಕೊಂಡಿದ್ದು, ಹಣ ಮರು ಪಾವತಿಸಲಾಗದೇ ಕೇಲವೊಂದಿಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೇ ಇನ್ನಷ್ಟು ರೈತರು ಕುಟುಂಬ ಸಮೇತ ಊರು ಬಿಟ್ಟು ಓಡಿ ಹೋದ ಪ್ರಸಂಗಗಳು ಜರುಗಿವೆ ಇದಕ್ಕೆಲ್ಲಾ ಕಡಿವಾಣ ಹಾಕಲು ರೈತ ಸಂಘಟನೆಗಳು ಬಲಿಷ್ಠಗೊಂಡು ಸರಕಾರದ ಗಮನ ಸೆಳೆಯಬೇಕಿದೆ ಎಂದು ತಿಳಿಸಿದರು.
ತದ ನಂತರ ಮುಖಂಡರಾದ ಸುರೇಶ ಭೂಮರಡ್ಡಿ, ರಾಮಣ್ಣ ಭಜೇಂತ್ರಿ, ಭಾಗ್ಯರಾಜು ಹೆಚ್ ಮಾತನಾಡಿದರು.
ನಂತರದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ, ಮುಖಂಡರಿಗೆ ಸನ್ಮಾನಿಸಲಾಯಿತು.
ವೇದಿಕೆಯ ಸಾನಿಧ್ಯವನ್ನು ಅನ್ನದಾನೀಶ್ವರ ಮಠದ ಮಹಾದೇವ ಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಅರವಿಂದಗೌಡ ಪಾಟೀಲ್, ಅಂದಪ್ಪ ಜವಳಿ, ಶರಣಪ್ಪ ದೊಡ್ಮನಿ, ಬಶೀರ್ ಅಹ್ಮದ್ ಮುಲ್ಲಾ, ಜೀವನ್ ಸಾಬ ಬಿನ್ನಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಅನೇಕ ಗಣ್ಯರು ಮುಖಂಡರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಣಿ ಹಳ್ಳಿ ನೆರವೇರಿಸಿದರು.