
It is God's job to show the way, it is our job to reach the goal: DCM D.K. Shivakumar
ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪುವುದು ನಮ್ಮ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್



ವರದಿ: ಬಂಗಾರಪ್ಪ .ಸಿ.
ಹನೂರು : “ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತಾನೆ. ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪಬೇಕಿರುವುದು ನಮ್ಮ ಕೆಲಸ. ದೇವರು ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಕೈಯಿಂದ ದಾನ ಮಾಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಪೂರಕ ಅಷ್ಟಬಂಧನ ದಿವ್ಯ ಮಹಾ ಕುಂಭಾಭಿಷೇಕ-ಸಂಪ್ರೋಕ್ಷಣ ಮಹೋತ್ಸವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಯಾವುದೇ ದೇವರಿಗೆ ಜಾತಿ, ಧರ್ಮ ಎಂಬುದು ಇರುವುದಿಲ್ಲ. ಧರ್ಮ ಯಾವುದಾದರೂ ತತ್ವವೊಂದೇ, ದೈವ ನೂರಾದರೂ ಭಕ್ತಿಯೊಂದೆ, ಕರ್ಮ ಹಲವಾದೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಕಾವೇರಿ ನದಿ ಹಾಗೂ ರಂಗನಾಥನ ಮಧ್ಯೆ ದರ್ಗಾವಿದೆ. ಇದೇ ಈ ನೆಲದ ಸೌಹಾರ್ಧತೆ” ಎಂದರು.
ಚಾಮರಾಜನಗರ ದೇವರ ನಾಡು
“ಚಾಮರಾಜನಗೆ ಹಿಂದುಳಿದ ಜಿಲ್ಲೆಯಲ್ಲ. ಇದು ದೇವರ ನಾಡು. ಚಾಮರಾಜೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ, ಮಲೆ ಮಾದೇಶ್ವರ, ಮಧ್ಯರಂಗ ಹೀಗೆ ದೇವಾಲಯಗಳ ಬೀಡಾಗಿದೆ. ಕಾವೇರಿ ನದಿಯ ತಟದಲ್ಲಿ ರಂಗನಾಥಸ್ವಾಮಿ ನೆಲೆಸಿ ಹರಸುತ್ತಿದ್ದಾನೆ. ಮನುಷ್ಯ ಎಷ್ಟೇ ದೊಡ್ಡವನಾದರೂ ಅವನ ಧರ್ಮ, ಆಚರಣೆಗಳನ್ನು ಬಿಡಲು ಆಗುವುದಿಲ್ಲ ಎಂದು ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ. ದೇವರ ದೇವ ರಂಗನಾಥನ ಪಾದಗಳಿಗೆ ನನ್ನ ಕುಟುಂಬ ಹಾಗೂ ಎಲ್ಲಾ ಭಕ್ತಾಧಿಗಳ ಪರವಾಗಿ ಸಾಷ್ಟಾಂಗ ನಮಸ್ಕಾರ” ಎಂದರು.
“ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ. ಎಎಂಆರ್ ಗ್ರೂಪಿನ ಮಹೇಶ್ ರೆಡ್ಡಿ ಅವರು ಹಾಗೂ ಕುಟುಂಬ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ಲಕ್ಷ್ಮೀ ರಂಗನಾಥಸ್ವಾಮಿಯ ಸೇವೆ ಮಾಡುವ ಭಾಗ್ಯ ಇವರಿಗೆ ಅವಕಾಶ ಸಿಕ್ಕಿದೆ. ಇನ್ನೂ ಹೆಚ್ಚಿನ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ ಅಂದರೆ ಅರ್ಚಕರ ಪ್ರಭಾವದಿಂದ ಶಿಲೆಯ್ಲಲೂ ಶಿವನನ್ನು ಕಾಣಬಹುದು. ದೇವರು, ದೇವಸ್ಥಾನ ಎಲ್ಲಾವು ಜನರ ಆಸ್ತಿ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಜುರಾಯಿ ಸಚಿವರಾದ ಶ್ರೀ ರಾಮಲಿಂಗರೆಡ್ಡಿ . ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ,ಶಾಸಕರುಗಳಾದ ಪುಟ್ಟರಂಗಶೇಟ್ಟಿ ,ಎ ಆರ್ ಕೃಷ್ಣಮೂರ್ತಿ ,ಎಮ್ ಆರ್ ಮಂಜುನಾಥ್ , ಮಾಜಿ ಶಾಸಕರಾದ ಆರ್ ನರೇಂದ್ರ ,ಡಿ ಕೆ ಶಿ ಯವರ ಪತ್ನಿ ಉಷಾಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
