
There are many shortcomings in Anganwadi centers, hospitals, hostels, and food godowns in Koppal district: Dr. H Krishna

ಕೊಪ್ಪಳ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಆಸ್ಪತ್ರೆ, ವಸತಿನಿಲಯಗಳು, ಆಹಾರ ಗೋದಾಮುಗಳಲ್ಲಿ ಸಾಕಷ್ಟು ಲೋಪ: ಡಾ.ಹೆಚ್ ಕೃಷ್ಣ

ಕೊಪ್ಪಳ ಮೇ 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಆಸ್ಪತ್ರೆ, ವಸತಿ ನಿಲಯಗಳು, ಗೋದಾಮು ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಿದಾಗ ಸಾಕಷ್ಟು ಲೋಪಗಳು ಕಂಡು ಬಂದಿದೆ. ಕೂಡಲೇ ಸುಧಾರಣಾ ಕ್ರಮಗಳನ್ನು ಕೈಗೊಂಡು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ತಿಳಿಸಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮೇ 21ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಮೇ 19 ರಿಂದ 21ರವರೆಗೆ ಅನಿರೀಕ್ಷಿತ ಭೇಟಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಆಯೋಗ ಭೇಟಿಯ ಬಗ್ಗೆ ಸುದ್ದಿ ಮಾಡಿದರೆ ಕೆಲವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ತಿಳಿದು, ಯಾರಿಗೂ ಮಾಹಿತಿ ನೀಡದೇ ನಾವು ದಿಢೀರ್ ಜಿಲ್ಲೆಗೆ ಆಗಮಿಸಿ ಆಯಾ ಕಡೆಗಳಲ್ಲಿ ಭೇಟಿ ನಡೆಸಿದ್ದರಿಂದಾಗಿ ಲೋಪಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಆಯೋಗದ ಎಲ್ಲ ಸದಸ್ಯರು ಪರಸ್ಪರ ಚರ್ಚಿಸಿ, ಮೇ 20ರಂದು ಮೂರು ತಂಡಗಳಾಗಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದೆವು. ಸದಸ್ಯರಾದ ಮಾರುತಿ ಎಂ ದೊಡ್ಡಲಿಂಗಣ್ಣವರ ಅವರೊಂದಿಗೆ ತಾವು ಕೊಪ್ಪಳ ಸಿಟಿಯ ಗಾಂಧೀನಗರದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಮೊಟ್ಟೆ ಖರೀದಿ ಬಿಲ್ಲುಗಳಲ್ಲಿ ವ್ಯತ್ಯಾಸ ಇರುವುದು, ಗರ್ಭಿಣಿಯರು, ಬಾಣಂತಿಯರ ಮನೆಗೆ ಆಹಾರ ವಿತರಣೆ ವಹಿಯಲ್ಲಿ ವ್ಯತ್ಯಾಸ ಸೇರಿದಂತೆ ಹಲವು ಲೋಪಗಳು ಕಂಡು ಬಂದವು. ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿದಾಗ ರೋಗಿಗಳಿಗೆ ಚಪಾತಿ ನೀಡದೇ ಇರುವುದು, ನೀಡಿದ ಆಹಾರವು ರುಚಿ ಶುಚಿಯಾಗಿಲ್ಲದಿರುವುದು, ಮರುದಿನಕ್ಕೆ ದಿನಾಂಕ ಮುಕ್ತಾಯವಾಗುವ ಮಸಾಲ ಪದಾರ್ಥಗಳನ್ನು ದಾಸ್ತಾನು ಕೊಠಡಿಯಲ್ಲಿ ಇಟ್ಟಿರುವುದು ಕಂಡು ಬಂದಿತು. ಮಕ್ಕಳ ಆರೈಕೆ ವಿಭಾಗಕ್ಕೆ ಭೇಟಿ ನೀಡಿದಾಗ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೇ ಇರುವುದು ಕಂಡು ಬಂದಿತು. ಈ ಬಗ್ಗೆ ನಿರ್ಲಕ್ಷö್ಯ ವಹಿಸಿದ ನರ್ಸಿಂಗ್ ಸೂಪರಿಂಟೆAಡೆAಟ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕ್ರಮ ವಹಿಸುವಂತೆ ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಲಾಗಿದೆ. ಬೋಧಕ ಆಸ್ಪತ್ರೆಗೆ ಕಳಪೆ ಆಹಾರ ಧಾನ್ಯ ಪೂರೈಸುವ ಟೆಂಡರ್‌ನ್ನು ರದ್ಧುಗೊಳಿಸಿ, ಗುಣಮಟ್ಟದ ಆಹಾರ ಧಾನ್ಯ ಪೂರೈಸುವವರಿಗೆ ಟೆಂಡರ್ ಕೊಡಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಸುಮಂತ್ ರಾವ್ ಹಾಗೂ ಎ.ರೋಹಿಣಿ ಪ್ರಿಯ ಅವರು ಮೇ 20ರಂದು ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಬುರ್ಗಾ ಮತ್ತು ಕುಕನೂರು ಪಟ್ಟಣದಲ್ಲಿರುವ ಗೋದಾಮಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ದಾಸ್ತಾನು ಮತ್ತು ಅಲ್ಲಿನ ಲೆಕ್ಕಪತ್ರ ನಿರ್ವಹಣೆಯ ಪರಿಶೀಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯ, ಕುಕನೂರಿನ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಆಯಾ ಕಡೆಗೆ ಮೂಲ ಸೌಕರ್ಯದ ಕೊರತೆ ಇರುವುದನ್ನು ಸದಸ್ಯರು ಗುರುತಿಸಿದ್ದಾರೆ.
ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ ಮತ್ತು ಕೆ.ಎಸ್.ವಿಜಯಲಕ್ಷಿö್ಮ ಅವರು ಗಂಗಾವತಿ ಮತ್ತು ಕಾರಟಗಿ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಸತಿ ನಿಲಯಗಳು ಮತ್ತು ಇನ್ನೀತರ ಕಡೆ ಸಂಚರಿಸಿ ಹಲವು ಲೋಪಗಳನ್ನು ಗುರುತಿಸಿದ್ದಾರೆ ಎಂದು ಅವರು ತಿಳಿಸಿದರು. ಭೇಟಿ ವೇಳೆ ಕಂಡು ಬಂದ ಲೋಪಗಳ ವರದಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರ ಮುಂದೆ ಇಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಆಹಾರ ಭದ್ರತಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಫಲಾನುಭವಿಗಳ ಹಕ್ಕುಗಳ ರಕ್ಷಣೆಗೆ ಕರ್ನಾಟಕ ರಾಜ್ಯ ಆಹಾರ ಆಯೋಗವು ಮಹತ್ವದ ಪಾತ್ರ ವಹಿಸುತ್ತಿದೆ. ಕರ್ನಾಟಕ ರಾಜ್ಯ ಆಹಾರ ಆಯೋಗವು ಆಹಾರ ಭದ್ರತಾ ಹಕ್ಕುಗಳ ರಕ್ಷಣೆಗೆ ಕಾನೂನುಬದ್ಧ ಸಂಸ್ಥೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಯೋಗಕ್ಕೆ ಕೆಲ ಅರೆ-ನ್ಯಾಯಾಂಗ ಅಧಿಕಾರಗಳನ್ನು ನೀಡಲಾಗಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುವುದು ಹಾಗೂ ಸಂಬAಧಿತ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಅಧಿಕಾರವಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಕಾರ್ಯದ ಬಗ್ಗೆ ವಿವರಿಸಿದರು.
ರಾಜ್ಯದಲ್ಲಿ ಆಹಾರ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕರ ಆಹಾರ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಕರ್ನಾಟಕ ರಾಜ್ಯ ಆಹಾರ ಆಯೋಗ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅಡಿಯಲ್ಲಿ ಸ್ಥಾಪನೆಯಾಗಿರುವ ಈ ಆಯೋಗವು ಆಹಾರ ಭದ್ರತಾ ಯೋಜನೆಗಳ ಮೇಲ್ವಿಚಾರಣೆ, ದೂರುಗಳ ಪರಿಶೀಲನೆ ಮತ್ತು ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.
ಆಯೋಗವು ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್), ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತಾ ಕುಟುಂಬಗಳಿಗೆ ಪಡಿತರ ವಿತರಣೆ, ಶಾಲಾ ಮಕ್ಕಳ ಮಧ್ಯಾಹ್ನ ಉಪಾಹಾರ ಯೋಜನೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕ ಆಹಾರ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸುತ್ತದೆ. ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳು ಮತ್ತು ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆಯೋಗದ ಪ್ರಮುಖ ಉದ್ದೇಶವಾಗಿದೆ. ಆಹಾರ ವಿತರಣೆಯಲ್ಲಿ ಆಗುವ ವ್ಯತ್ಯಾಸಗಳು, ದೂರುಗಳು ಹಾಗೂ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ವಿಚಾರಣೆ ನಡೆಸುವ ಅಧಿಕಾರವೂ ಸಹ ಆಯೋಗಕ್ಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿAಗಣ್ಣವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್.ವಿಜಯಲಕ್ಷ್ಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
