Farewell to CS Pura retired teacher AK Mahendrappa
ಗುಡೇಕೋಟೆ: ಕೂಡ್ಲಿಗಿ ತಾಲೂಕು ಚಂದ್ರಶೇಖರಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘವಾಗಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಎ.ಕೆ.ಮಹೇಂದ್ರಪ್ಪ ಅವರಿಗೆ ಶಾಲೆಯ ಸಿಬ್ಬಂದಿ ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸಿ.ಆರ್.ಪಿ. ವಿಶಾಲ ರವರು, ಎ.ಕೆ.ಮಹೇಂದ್ರಪ್ಪ ನವರು ಮೂಲತಃ ತಾಲೂಕಿನ ಕಡಕೋಳ ಗ್ರಾಮದ ಬಡ ರೈತನಾದ ಜೋಗಪ್ಪ ದುರುಗಮ್ಮ ಇವರ ನಾಲ್ಕನೇ ಪುತ್ರರಾಗಿ 1964 ರಂದು ಜನಿಸಿ, ಕಿತ್ತು ತಿನ್ನುವ ಬಡತನದ ನಡುವೆ ಉತ್ತಮ ಶಿಕ್ಷಣ ಪಡೆದ ಇವರಿಗೆ 1994 ರಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿ ಮೊದಲಿಗೆ ಅರ್ಜುನಚಿನ್ನನಹಳ್ಳಿ ಶಾಲೆಯಲ್ಲಿ 14 ವರ್ಷ,ಕಡಕೋಳ ಗ್ರಾಮದಲ್ಲಿ 3 ವರ್ಷ,ಮಡ್ಲಾಕನಹಳ್ಳಿ ಗೊಲ್ಲರಹಟ್ಟಿಯಲ್ಲಿ 2 ವರ್ಷ,ವಲಸೆ ಗ್ರಾಮದಲ್ಲಿ ಬಡ್ತಿ ಮುಖ್ಯಗುರುಗಳಾಗಿ 7 ವರ್ಷ, ಕೊನೆಯದಾಗಿ 2022 ರಿಂದ 2024ರ ವರೆಗೆ 2 ವರ್ಷ ಮುಂಬಡ್ತಿ ಮುಖ್ಯಗುರುಗಳಾಗಿ ಚಂದ್ರಶೇಖರಪುರ ಗ್ರಾಮದಲ್ಲಿ ಒಟ್ಟಿನಲ್ಲಿ 30 ವರ್ಷಗಳ ಸುದೀರ್ಘ ಕಾಲ ಕೆಲಸ ನಿರ್ವಹಿಸಿ ನಿವೃತ್ತಿ ಸೇವೆಯನ್ನು ಹೊಂದಿರುತ್ತಾರೆ.ಎ.ಕೆ.ಮಹೇಂದ್ರಪ್ಪ ಶಿಕ್ಷಕರ ಸೇವಾ ಅವಧಿಯಲ್ಲಿ ಶಾಲೆಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರ ಶ್ರಮದಿಂದ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ,’’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‘‘ಮಕ್ಕಳ ಭವಿಷ್ಯ ರೂಪಿಸಿದ ಅವರ ವಿಶ್ರಾಂತ ಜೀವನ ಸುಖಮಯವಾಗಿರಲಿ,’’ ಎಂದು ಶುಭ ಹಾರೈಸಿದರು.
ನಿವೃತ್ತ ಶಿಕ್ಷಕ ಎ.ಕೆ.ಮಹೇಂದ್ರಪ್ಪ ಮಾತನಾಡಿ,ವಿದ್ಯೆಯ ಜತೆಗೇ ವಿನಯ, ಶಿಸ್ತು, ಸಮಯಪಾಲನೆ, ಶಾಂತಿ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡುವಂತೆ, ’’ ಕಿವಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು,ಸಿಆರ್ಪಿ ವಿಶಾಲ, ಮುಖ್ಯಗುರುಗಳಾದ ಬಿ.ಕೆ.ಹಿರೇಮಠ್, ಅಂಬೇಡ್ಕರ್ ನಗರ ಶಾಲೆಯ ಮುಖ್ಯಗುರುಗಳಾದ ಪಿ.ಉಮೇಶ್, ಸೇರಿದಂತೆ ಶಾಲಾ ಶಿಕ್ಷಕ ವರ್ಗದವರು,ಮತ್ತಿತರರು ಹಾಜರಿದ್ದರು.