Public tax money will not be wasted – K Nemarajanayaka

ಕೊಟ್ಟೂರು: ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ನಿಖರ ಅಂಕಿ ಅಂಶಗಳೊಂದಿಗೆ ಬರಬೇಕೇ ವಿನಃ ಸುಳ್ಳು ಅಂಕಿ ಅಂಶಗಳನ್ನು ನೀಡಿ ನಮ್ಮನ್ನು ಯಾಮಾರಿಸಲು ನೋಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರದ ಶಾಸಕ ಕೆ.ನೇಮರಾಜನಾಯ್ಕ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀಧಿಸುವ ಧಾನ್ಯಗಳನ್ನು ಬೇರೆಯವರ ಪಹಣಿಯನ್ನು ಮಧ್ಯವರ್ತಿಗಳು ದುರಪಯೋಗ ಪಡಿಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಾರ್ಯದರ್ಶಿ ಎ.ಕೆ.ವೀರಣ್ಣ ಇವರಿಗೆ ಸೂಚಿಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕೇ ವಿನಃ ತಮಗಿಷ್ಟ ಬಂದಂತೆ ನಡೆದುಕೊಳ್ಳುವಂತಿಲ್ಲ ಎಂದು ಕಟ್ಟು ನಿಟ್ಟಾಗಿ ನೋಟಿಸ್ ನೀಡಲು ತಾಸಿಲ್ದವರಿಗೆ ಆದೇಶಿಸಿದರು.
ರೈತರಿಗೆ ಬೆಳೆ ಪರಿಹಾರ ಹಣವನ್ನು ಖಾಸಗಿ ವಿಮಾ ಸಂಸ್ಥೆಗಳು ಇಂದಿಗೂ ನೀಡದಿರುವುದು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖಾಧಿಕಾರಿ ಕೊಳ್ಳಿ ವಾಮದೇವ ಇವರಿಗೆ ಸೂಚಿಸಿದರು.
ಹಾನಿಯಾದ ಮನೆಗಳಿಗೆ ಕಡಿಮೆ ಹಣ ಮಂಜೂರು ಮಾಡಿರುವುದಕ್ಕೆ ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕರು ಹಾನಿಯಾದ ಪ್ರಮಾಣಕ್ಕೆ ಸರಿಯಾಗಿ ಹಣ ಮಂಜೂರು ಮಾಡಿಸುವಂತೆ ತಹಶೀಲ್ದಾರ್ ಜಿ.ಕೆ.ಅಮರೀಶ್ ಇವರಿಗೆ ಸೂಚಿಸಿದರು. ಪಟ್ಟಣಕ್ಕೆ ಪ್ರವೇಶಿಸುವ ರಸ್ತೆಗಳ ದುರಸ್ಥಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಿ ಎಂದು ಎಇಇ ನಾಗನಗೌಡ ಇವರಿಗೆ ಆದೇಶಿಸಿದರು.
ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ನಮಗೆ ಮಾಹಿತಿ ನೀಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗೆ ಸೂಚಿಸಿ ಆಹಾರ ಸಾಮಾಗ್ರಿಗಳನ್ನು ಪೂರೈಸುವ ಏಜೆನ್ಸಿಗಳ ಬಗ್ಗೆ ನಿಖರವಾದ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ತಾಕೀತು ಮಾಡಿದರಲ್ಲದೇ ಜನರ ತೆರಿಗೆ ಹಣ ಸಮರ್ಪಕವಾಗಿ ಸದ್ವಿನಿಯೋಗವಾಗಬೇಕೆ ವಿನಃ ದುರುಪಯೋಗವಾಗುವುದಕ್ಕೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದು ಕಂಡುಬಂದಿತು
“ಪಟ್ಟಣಕ್ಕೆ 100 ಬೆಡ್ ಆಸ್ಪತ್ರೆ ಮಂಜೂರಾಗಿದ್ದು ಪಟ್ಟಣದ ಹೊರವಲಯದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಎಂದು ತಹಶೀಲ್ದಾರ್ ಇವರಿಗೆ ತಿಳಿಸಿದರಲ್ಲದೇ ತಾಲ್ಲೂಕಿನಾದ್ಯಂತ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರದೀಪ್ ಇವರಿಗೆ ಸೂಚಿಸಿದರು.”
ತಾಲ್ಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಶಾಸಕರು ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಲು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಕೆ.ಅಮರೀಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದಕುಮಾರ್ ,ತಾಲೂಕು ಪಂಚಾಯಿತಿ ವ್ಯವಸ್ಥಾಪಕರು ಪುಷ್ಪಲತಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.