Unveiling of Talents at Sangeet Dance Festival: N. Narendra Babu
ಗಂಗಾವತಿ: ಸೆಪ್ಟೆಂಬರ್-೧೪ ರಂದು ಮಧ್ಯಾಹ್ನ ೨ ಗಂಟೆಯಿಂದ ಸಂಜೆ 8 ವರೆಗೆ ಗಂಗಾವತಿಯ ಐ.ಎಂ.ಎ ಹಾಲ್‌ನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಸಂಗೀತ ನೃತ್ಯೋತ್ಸವ-ಯುವಸಂಭ್ರಮವನ್ನು ಅಕಾಡೆಮಿಯ ರಿಜಿಸ್ಟಾçರ್ ಎನ್. ನರೇಂದ್ರಬಾಬು ರವರು ಉದ್ಘಾಟಿಸಿ ಮಾತನಾಡುತ್ತಾ, “ಸರಕಾರ ಪ್ರತಿಭಾವಂತ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ನಾಡಿನೆಲ್ಲೆಡೆಗೆ ಫಸರಿಸುವ, ಸಂಗೀತ ನೃತ್ಯ ಪರಂಪರೆಯನ್ನು ಬೆಳೆಸುವ ದೃಷ್ಟಿಯಿಂದ ಈ ತರಹದ ಕಾರ್ಯಕ್ರಮಗಳನ್ನು ಕರ್ನಾಟಕದಾದ್ಯಂತ ಹಮ್ಮಿಕೊಳ್ಳುವ ಪ್ರಯತ್ನ ನಮ್ಮ ಅಕಾಡೆಮಿಯಿಂದ ನಡೆದಿದೆ. ಗಂಗಾವತಿಯ ತಾಲ್ಲೂಕಿನಲ್ಲಿ ಇದು ಮೊದಲ ಕಾರ್ಯಕ್ರಮ ನಿಜಕ್ಕೂ ಸ್ಮರಣೀಯ ಇಂತಹ ಅದ್ಭುತವಾದ ಪ್ರತಿಭೆಗಳು ಇಲ್ಲಿ ನೋಡಿ ತುಂಬಾ ಖುಷಿಯಾಯಿತು. ಈ ಪ್ರತಿಭೆಗಳನ್ನು ಮುಂದಿನ ದಿನಗಳಲ್ಲಿ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದರು.”
ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ ಗೌಡ ಅತಿಥಿಗಳಾಗಿ ಮಾತಾಡುತ್ತಾ “ನಮ್ಮ ಭಾಗದ ಪ್ರತಿಭೆಗಳಿಗೆ ಅಕಾಡೆಮಿಯಿಂದ ಈ ಅವಕಾಶ ಕೊಟ್ಟಿದ್ದು ತುಂಬಾ ಖುಷಿಯಾಯಿತು ಎಂದು ಹೇಳುತ್ತಾ ಅಕಾಡೆಮಿಗೆ ಧನ್ಯವಾದಗಳ ತಿಳಿಸಿದರು.”
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಸಿರಿಗೆರೆ ಮತ್ತು ಖಜಾಂಚಿ ಪ್ರಶಾಂತರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಸಿದ್ಧಾರ್ಥ ಎಜುಕೇಷನಲ್ ಆಂಡ್ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಕಾರ್ಯದರ್ಶಿ ಹುಸೇನಪ್ಪ ಹಂಚಿನಾಳ್, ಸಂಜೋಗಿತಾ ಸಂಸ್ಥೆಯ ಶೈಲಜಾ ಹಿರೇಮಠ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ಪದ ದೇವರಾಜ್, ಹುಸೇನ್ ದಾಸ್ ಕನಕಗಿರಿ, ಶಂಕರ್ ಹೂಗಾರ್ ಮತ್ತು ಜಾನಪದ ಅಕಾಡೆಮಿಯ ಕೆಂಕೆರೆ ಮಲ್ಲಿಕಾರ್ಜುನ್, ಸಾಹಿತ್ಯ ಅಕಾಡೆಮಿಯ ಅಜಮೀರ್ ನಂದಾಪುರ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯರಾದ ಮತ್ತು ಈ ಯುವ ಸಂಭ್ರಮದ ಸಂಚಾಲಕರಾದ ರಮೇಶ ಗಬ್ಬೂರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಾರ್ಯಕ್ರಮಗಳನ್ನು ಪರಿಚಯಿಸುತ್ತ “ಅಧ್ಯಕ್ಷರಾದ ನಾಟ್ಯ ಸರಸ್ವತಿ ಶುಭಾ ಧನಂಜಯ್ ಅವರ ನೇತೃತ್ವದಲ್ಲಿ ನಾಡಿನಾದ್ಯಂತ ಸಂಗೀತ ನೃತ್ಯೋತ್ಸವಗಳನ್ನು ನಡೆಸುವ, ಶಿಷ್ಯ ವೇತನ, ಮಾಶಾಸನ ನೀಡುವ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆಗಳನ್ನು ಸೃಷ್ಟಿಸುವ ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಕೆಲಸ ಮಾಡುವ ಹೊಸ ಪಡೆ ನಮ್ಮ ಜೊತೆಗಿದೆ. ಈ ಮೂಲಕ ಸಂಗೀತ ನೃತ್ಯ ಅಕಾಡೆಮಿ ಅವಕಾಶ ವಂಚಿತರಿಗೆ ವೇದಿಕೆಗಳನ್ನು ಕಲ್ಪಿಸುವ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ ಎಂದು ಹೇಳಿದರು.”
ಕಾರ್ಯಕ್ರಮಕ್ಕೆ ಹುಸೇನ್ ದಾಸ್ ಕನಕಗಿರಿ ಅವರು ಸ್ವಾಗತಿಸಿದರೆ, ನಿರೂಪಣೆಯನ್ನು ಲಿಂಗಾರೆಡ್ಡಿ ಆಲೂರ್ ರವರು ನಡೆಸಿಕೊಟ್ಟರು.