ಕೊಪ್ಪಳದಲ್ಲಿ “ಎಸ್.ಐ.ಆರ್. ಕರ್ನಾಟಕ ಪ್ರತಿರೋಧ” ಬೃಹತ್ ಪ್ರತಿಭಟನೆ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

SIR Karnataka Resistance" massive protest in Koppal




ಕೊಪ್ಪಳದಲ್ಲಿ “ಎಸ್.ಐ.ಆರ್. ಕರ್ನಾಟಕ ಪ್ರತಿರೋಧ” ಬೃಹತ್ ಪ್ರತಿಭಟನೆ

ಜಾಹೀರಾತು

ಯಾವ ನಾಗರಿಕರ ಮತದಾನದ ಹಕ್ಕು ತಪ್ಪಲು ಬಿಡುವದಿಲ್ಲ : ವೀರಸಂಗಯ್ಯ

ಕೊಪ್ಪಳ: ಕೋಟಿಗಟ್ಟಲೆ ಮತದಾರರ ಹಕ್ಕು ಚ್ಯುತಿಯಾಗುತ್ತಿದೆ, ದೇಶದ ೧೩ ರಾಜ್ಯಗಳಲ್ಲಿ ಈಗಾಗಲೇ ಎಸ್.ಐ.ಆರ್. ಪ್ರಕ್ರಿಯೆ ನಡೆಸಿ, ಕನಿಷ್ಠ ೫ ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು ೬.೫ ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಹೊಸದಾಗಿ ಹೆಸರು ನೋಂದಾಯಿಸಲು ೨೦೨೫ರ ಜೊತೆಗೆ ೨೦೦೨ರ ಮತದಾರರ ಪಟ್ಟಿಯ ದಾಖಲೆ ಅಥವಾ ಕಠಿಣವಾದ ೧೧ ದಸ್ತಾವೇಜುಗಳನ್ನು ಕೇಳಲಾಗುತ್ತಿದೆ, ಈ ಮೂಲಕ ಅರ್ಹ ಮತದಾರರನ್ನು ಹೊರಗಿಡುವ ಹುನ್ನಾರ ನಡೆಯುತ್ತಿದೆ. ಅಲ್ಪಸಂಖ್ಯಾತರ ದಲಿತರ ಆದಿವಾಸಿಗಳ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ ಇದರ ವಿರುದ್ಧ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳು ಸಮಾನಮನಸ್ಕ ಪಕ್ಷಗಳು ಒಂದಾಗಿ ಹೋರಾಟ ಮಾಡುತ್ತಿವೆ ಎಂದು ಸಂಚಾಲಕರು, ರೈತ ಸಂಘದ ಮುಖಂಡರಾದ ಜೆ.ಎಂ. ವೀರಸಂಗಯ್ಯ ಹೇಳಿದರು.
ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತರುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ನೀಡಿದ್ದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಸುತ್ತಿನ “ಎಸ್.ಐ.ಆರ್. ಕರ್ನಾಟಕ ಪ್ರತಿರೋಧ” ಹಕ್ಕೊತ್ತಾಯ ಚಳುವಳಿಯ ಅನ್ವಯ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡುತ್ತಿದ್ದರು.
ಅಶೋಕ್ ಸರ್ಕಲ್ ನಲ್ಲಿ ನಡೆದ ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೀರಸಂಗಯ್ಯ. ಲಾಜಿಕಲ್ ಡಿಸ್ಕ್ರಿಪೆನ್ಸಿ (ಹೆಸರು, ವಿಳಾಸದ ಸಣ್ಣಪುಟ್ಟ ವ್ಯತ್ಯಾಸ) ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕಟಾವು ಮಾಡಲಾಗುತ್ತಿದೆ. ಇದು ವಿರೋಧ ಪಕ್ಷಗಳ ಮತ ಬ್ಯಾಂಕ್ ಕುಗ್ಗಿಸುವ ಮತ್ತು ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮನುವಾದಿ ಹುನ್ನಾರವಾಗಿದೆ. ಜನವಿರೋಧಿ ಎಸ್.ಐ.ಆರ್. ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ, ಜನಸ್ನೇಹಿ ಪರಿಷ್ಕರಣೆ ತರಬೇಕು. ಮತದಾರರ ಹಕ್ಕು ಕಸಿಯುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಸಾಫ್ಟ್ವೇರ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಮೆಷಿನ್ ರೀಡಬಲ್ ಫಾರ್ಮಾಟ್‌ನಲ್ಲಿ ಸಾರ್ವಜನಿಕ ಪರಿಶೀಲನೆಗೆ ನೀಡಬೇಕು.
ಕರಡು ಪಟ್ಟಿ ತಯಾರಾದ ಬಳಿಕ ಕಡ್ಡಾಯವಾಗಿ ಗ್ರಾಮ/ವಾರ್ಡ್ ಸಭೆ ನಡೆಸಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. ದಾಖಲೆಗಳ ಸಲ್ಲಿಕೆ ಮತ್ತು ಅಪೀಲು ಸಲ್ಲಿಸಲು ಕನಿಷ್ಠ ೬ ತಿಂಗಳು ಕಾಲಾವಕಾಶ ನೀಡಬೇಕು. ರಾಜ್ಯ ಸರ್ಕಾರವು ಈ ಹಕ್ಕೊತ್ತಾಯಗಳನ್ನು ಬೆಂಬಲಿಸಿ, ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ವಿಶೇಷ ಗ್ರಾಮ/ವಾರ್ಡ್ ಸಭೆಗಳನ್ನು ಕರೆದು, ೨೦೨೫ರ ಪಟ್ಟಿಯ ಆಧಾರದ ಮೇಲೆ ಅರ್ಹ ಮತದಾರರಿಗೆ ಮತದಾನ ಮತ್ತು ಸರ್ಕಾರಿ ಸೌಲಭ್ಯಗಳನ್ನು ಖಾತರಿಪಡಿಸುವ “ಸ್ಮಾರ್ಟ್ ಕಾರ್ಡ್” (ಮಹಾ ಗ್ಯಾರಂಟಿ ಕಾರ್ಡ್) ನೀಡಬೇಕು. ದಾಖಲೆಗಳಿಲ್ಲದ ಬಡವರಿಗೆ ತಕ್ಷಣವೇ ವಾಸಸ್ಥಳ ದೃಢೀಕರಣ ಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕು ಇಲ್ಲವಾದಲ್ಲಿ ಹೋರಾಟ ನಿರಂತರ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಬದುಕುವ ಮತ್ತು ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಜಾಪ್ರಭುತ್ವವಾದಿ ಹೋರಾಟ ನಡೆಯುತ್ತಿದ್ದು, ಎಲ್ಲಾ ಜವಾಬ್ದಾರಿಯುತ ನಾಗರಿಕರು ಇದರಲ್ಲಿ ಭಾಗವಹಿಸಬೇಕು, ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತಗೊಳಿಸಬಾರದು, ಹಾಗೆ ಮಾಡಿದರೆ ಅದು ದ್ರೋಹದ ಕೆಲಸವಾಗುತ್ತದೆ ಎಂದರು.
ನಗರದ ಗಡಿಯಾರ ಕಂಬದಿAದ ಅಶೋಕ್ ಸರ್ಕಲ್ ವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿ ಕೇಂದ್ರ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿ ಮಾತನಾಡಿದರು.
ಜಿಲ್ಲಾಡಳಿತ ಪರವಾಗಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಆರ್.ಕೆ.ದೇಸಾಯಿ, ಯೂಸೂಪಿಯಾ ಮಸೀದಿಯ ಮುಪ್ತಿ ನಜೀರ್ ಅಹ್ಮದ, ಸಿರಾಜ್ ಸಿದ್ದಾಪೂರ, ಜಿಲ್ಲಾ ಕಾಂಗ್ರೆಸ್ ಮಹಿಳಾ ಆಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಶೈಲಜಾ ಹಿರೇಮಠ, ಸಲ್ಮಾಜಾನ್, ರಮ್ಯಾಕೃಷ್ಣ ಎಂಜೆಎಸ್ಪಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ವೆಲ್ಫೇರ್ ಪಕ್ಷದ ಆದಿಲ್ ಪಟೇಲ್, ಪಿಂಜಾರ ಸಮಾಜದ ರಾಜ್ಯ ಖಜಾಂಚಿ ಶಾಹಬುದ್ದೀನಸಾಬ, ಪಾಮಣ್ಣ ಕನಕಗಿರಿ, ಫಾದರ್ ಚನ್ನಬಸಪ್ಪ, ದುರ್ಗೆಶ್ ಬರಗೂರು, ರಫಿ ಕಾರಟಗಿ, ಧರ್ಮರಾಜ್ ಗೋನಾಳ, ಕೆ.ಬಿ,ಗೋನಾಳ, ರಾಜಾಬಕ್ಷಿ ಎಚ್.ವಿ , ಹುಜೂರ್ ಅಹ್ಮದ್, ಮುದುಕಪ್ಪ, ಸಲೀಂ ಖಾದ್ರಿ, ಶರಣು ಶೆಟ್ಟರ್ ಬಸವರಾಜ್ ಶೀಲವಂತರ, ಆಸಿಫ್ ಅಲಿ, ಕಾಟನ್ ಪಾಷಾ, ಮನವಿ ಪಾಷಾ, ಪೀರಾ ಹುಸೇನ್ ಹೊಸಳ್ಳಿ , ಎಸ್.ಎ.ಗಫಾರ್ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು, ಧರ್ಮ ಗುರುಗಳು ಪಾಲ್ಗೊಂಡಿದ್ದರು.

Total Views: 0
Share This Article