
AIDSSO condemns the state government's move to cut back on the learning of basic subjects!

ಮೂಲ ವಿಷಯಗಳ ಕಲಿಕೆಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಎಐಡಿಎಸ್ಓ ಖಂಡನೆ!

ಕೊಪ್ಪಳ: ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಅರ್ಥಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಕೋರ್ಸುಗಳ ಸಂಯೋಜನೆಗಳಿಗೆ ಬೇಡಿಕೆಯಿಲ್ಲ ಎಂಬ ನೆಪವೊಡ್ಡಿ ಈ ಕೋರ್ಸುಗಳನ್ನೇ ಕಾಲೇಜು ಇಲಾಖೆಯು ರದ್ದುಪಡಿಸಲು ಹೊರಟಿದೆ. ಇಲಾಖೆ ಮಾಹಿತಿಯಂತೆ ಒಟ್ಟು 458 ಕೋರ್ಸುಗಳನ್ನು ರದ್ದುಪಡಿಸಲು 21 ಮೇ 2026ರಂದು ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಿಲುವನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ. ವಿವಿಧ ಕೋರ್ಸುಗಳಿಗೆ ವಿದ್ಯಾರ್ಥಿಗಳ ಪ್ರವೇಶ ಕುಸಿದಿರುವುದಕ್ಕೆ ಉದ್ಯೋಗಾವಕಾಶದ ಕೊರತೆಯೇ ಮೂಲ ಕಾರಣವಾಗಿದೆ. ಪ್ರಮುಖವಾಗಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ದಶಕಗಳಿಂದ ನೇಮಕಾತಿ ನಡೆದಿಲ್ಲ. ಶಿಕ್ಷಣ ಇಲಾಖೆಯಲ್ಲೇ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದೆ. ಸರ್ಕಾರ ಮೊದಲು ಈ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು. ಮತ್ತು ಇಂದಿನ ಅವಶ್ಯಕತೆ ಆಧರಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು.
ಇದನ್ನು ಬಿಟ್ಟು ದಾಖಲಾತಿ ಕುಸಿತದ ನೆಪವೊಡ್ಡಿ ಕೋರ್ಸುಗಳನ್ನೇ ರದ್ದುಗೊಳಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ.
ಅಷ್ಟೇ ಅಲ್ಲದೇ ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಅರ್ಥಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದಂತಹ ಮೂಲ ವಿಷಯಗಳ ಕಲಿಕೆಗೆ ಕತ್ತರಿ ಹಾಕಿ ಶಿಕ್ಷಣದ ಅಡಿಪಾಯಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ. ಈ ಕುರಿತು ಶಿಕ್ಷಣತಜ್ಞರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಮೂಲಕ ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕರ್ನಾಟಕ ರಾಜ್ಯ ಸರ್ಕಾರವು ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ.
ಮಾರುಕಟ್ಟೆಯ ಬೇಡಿಕೆಯೆಂಬ ಬಣ್ಣ ಹಚ್ಚಿ ಅನುದಾನರಹಿತ ಕೋರ್ಸುಗಳನ್ನು ಆರಂಭಿಸುತ್ತಿದೆ.ಈ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಸಂಚು ರೂಪಿಸಿದೆ.
ಸರ್ಕಾರವು ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕು. ಮೂಲ ವಿಷಯಗಳ ಕಲಿಕೆಗೆ ಒತ್ತು ನೀಡಬೇಕು ಮತ್ತು ಉದ್ಯೋಗಾವಕಾಶದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂದು ಎಐಡಿಎಸ್ಓ ಕೊಪ್ಪಳ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.
