District level talent award for children of Gangamat Samaj
ಗಂಗಾವತಿ: ಮಾಜವು ಬದಲಾವಣೆಯನ್ನು ಕಂಡುಕೊಳ್ಳಬೇಕಾದರೆ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಎಂ.ಶ್ರೀನಿವಾಸ್ ಹೇಳಿದರು.
ನಗರದ ಲಯನ್ಸ್ ಕ್ಲಬ್ ಆವರಣದ ಐಎಂಎ ಹಾಲ್‌ನಲ್ಲಿ ಗಂಗಾಮತ ಸಮಾಜ ಹಾಗೂ ಗಂಗಾಮತ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡ ಗಂಗಾಮತ ಸಮಾಜದ ಮಕ್ಕಳ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗಾಮತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಸಮಾಜವಾಗಿದೆ. ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ ಬದಲಾಗಬೇಕಾದರೆ ಶಿಕ್ಷಣ ಅತಿಮುಖ್ಯವಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜವು ಬದಲಾವಣೆಯಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರು ಸಹ ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಮೂಲಕ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕವನ್ನು ಪಡೆದುಕೊಂಡಿರುವ ಮಕ್ಕಳಿಗೆ ಸನ್ಮಾನಿಸಿ, ಗೌರವಿಸಲಾಗಿದೆ ಎಂದು ಹೇಳಿದರು. ನಂತರ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕವನ್ನು ಪಡೆದುಕೊಂಡಿರುವ ಗಂಗಾಮತ ಸಮಾಜದ ೨೪ ಮಕ್ಕಳಿಗೆ, ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದುಕೊಂಡಿರುವ ೧೨ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ರಾಜ್ಯ ಕಾರ್ಯದರ್ಶಿ ಹಾಲೇಶಪ್ಪ, ರಾಜ್ಯ ನಿರ್ದೇಶಕರಾದ ಎನ್.ಯಂಕಪ್ಪ, ಹನುಮಂತಪ್ಪ ಆನೆಗೊಂದಿ ಗಂಗಾಮತ ಸಮಾಜದ ಮುಖಂಡರಾದ ಶಂಕರಗೌಡ ಪಾಟೀಲ್, ಈರಣ್ನ ಹೆಬ್ಬಾಳ, ಸೋಮಣ್ಣ ಬಾರಕೇರ, ಆಂಜನೇಯ ಮಟ್ಟೂರು, ರಮೇಶ್ ಕಡ್ಡಿಪುಡಿ, ಎಚ್.ವೈ.ಮನಗೂಳಿ, ಪರಶುರಾಮ ಮಡ್ಡೇರ, ಧನರಾಜ, ಪಂಪಾಪತಿ, ಎಸ್.ಎಂ.ಕಳ್ಳಿ ಹಾಗೂ ಇತರರಿದ್ದರು.