Huradihalli road like mud field!
![](https://i0.wp.com/kalyanasiri.in/wp-content/uploads/2024/12/IMG-20241224-WA0197-1.jpg?fit=1280%2C867&ssl=1)
![](https://i0.wp.com/kalyanasiri.in/wp-content/uploads/2024/07/IMG-20240716-WA0001.jpg?fit=1131%2C1600&ssl=1)
![](https://i0.wp.com/kalyanasiri.in/wp-content/uploads/2024/09/IMG-20240908-WA0043.jpg?resize=618%2C348&ssl=1)
ಗುಡೇಕೋಟೆ:- ಸಮೀಪದ ಸೌಲಭ್ಯ ವಂಚಿತ ಗಡಿಗ್ರಾಮ ಕೂಡ್ಲಿಗಿ ತಾಲೂಕಿನ ಹುರಡಿಹಳ್ಳಿ ಗ್ರಾಮದಿಂದ ಕಸಾಪುರ ಗುಡೇಕೋಟೆ ರಸ್ತೆಗೆ ಸಂಪರ್ಕಿಸುವ ಹುರಡಿಹಳ್ಳಿ ಗ್ರಾಮದಲ್ಲಿ ಕಳೆದ ವಾರದಿಂದ ಸುರಿಯುವ ನಿರಂತರ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಇಲ್ಲಿಯ ನಿವಾಸಿಗಳು ಪರದಾಡುವಂತಾಗಿದೆ.
![](https://i0.wp.com/kalyanasiri.in/wp-content/uploads/2024/09/IMG-20240908-WA0042.jpg?fit=300%2C169&ssl=1)
ರಸ್ತೆಗಳು ಚರಂಡಿಯಾಗಿ ಪರಿವರ್ತನೆಗೊಂಡಿದ್ದು, ಜನರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ರಸ್ತೆ ಕೆಸರು ಗದ್ದೆಯಾಗಿದ್ದರಿಂದ ಶಾಲಾ ಮಕ್ಕಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆ ತೀವ್ರ ಹಾಳಾಗಿದ್ದರಿಂದ ಈ ಗ್ರಾಮದ ನಿವಾಸಿಗಳು ಕಾಯಿಲೆಯಿಂದ ಬಳಲುವವರು, ವೃದ್ಧರನ್ನು ಗುಡೇಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸ್ಥಳಿಯ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಕೂಡ್ಲಿಗಿ ತಾಲೂಕಿನ ಕಟ್ಟಕಡೆಯ ಗ್ರಾಮ ಇದಾಗಿದ್ದು ಇನ್ನೂ ಡಾಂಬರೀಕರಣ ಮಾಡಿಲ್ಲ. ಅಲ್ಲದೆ, ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿ ಸಹ ಮಾಡಿಲ್ಲ. ಇದರಿಂದ ಮುಂದೆ ರಸ್ತೆ ಮತ್ತೆ ಹಾಳಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಅಕ್ಕಪಕ್ಕ ಗಿಡಗಂಟಿ ಬೆಳೆದಿವೆ. ಅಲ್ಲದೆ, ರಸ್ತೆಯಲ್ಲೇ ಬಹಿರ್ದೆಸೆ ಮಾಡುತ್ತಿರುವುದರಿಂದ, ಈ ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಪಾದಚಾರಿಗಳು ಸಂಚರಿಸುವುದು ದುಸ್ತರವಾಗಿದೆ. ವಿಪರೀತ ದುರ್ನಾತ ಬೀರುತ್ತಿರುವುದರಿಂದ ಈ ರಸ್ತೆಗೆ ಹೊಂದಿಕೊಂಡ ಅಕ್ಕ ಪಕ್ಕದ ಮನೆಗಳವರಿಗೆ ತೊಂದರೆಯಾಗುತ್ತದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಸೌಲಭ್ಯ ವಂಚಿತ ನಮ್ಮೂರಿಗೆ ರಸ್ತೆ ಚರಂಡಿ ನಿರ್ಮಿಸಿಕೊಡಬೇಕೇಂದು ಮನವಿ ಮಾಡುತ್ತಿದ್ದಾರೆ ಗ್ರಾಮದ ನಿವಾಸಿಗಳು.