Village Neglect, Muddy Gudekote 3rd Ward
ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನ ಹೊಂದಿರುವ ಗುಡೇಕೋಟೆ ಗ್ರಾಮದ ಮೂರನೇ ವಾರ್ಡ್‌ನ ಜನರು ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ದಿನನಿತ್ಯ ಪರದಾಡುತ್ತಿದ್ದಾರೆ.
ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಈ ಓಣಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಸಿಸಿ ರಸ್ತೆ, ಚರಂಡಿ ಸಂಪೂರ್ಣ ಕಿತ್ತು ಹೋಗಿದೆ. ಹೀಗಾಗಿ ಮನೆಗಳಿಂದ ಬರುವ ಕೊಳಚೆ ನೀರು, ಮಳೆ ನೀರು ರಸ್ತೆಯ ಮೇಲೆಯೇ ಸಂಗ್ರಹವಾಗುತ್ತಿದೆ.
ಇದರಿಂದ ಗ್ರಾಮದ ವಾರ್ಡ್ 3 ರಲ್ಲಿ ಅಸ್ವಚ್ಛತೆ
ಜೆಜೆಎಂ ಕಾಮಗಾರಿಗಾಗಿ ಅಗೆದ ತೆಗ್ಗು ಹಾಗೇ ಮುಚ್ಚಿದ್ದಾರೆ. ಇದರಿಂದ ಓಣಿಯ ಜನರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮಧ್ಯೆ ನೀರು ಸಂಗ್ರಹವಾದ ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಈಗಾಗಲೇ ಈ ಭಾಗದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.
ʼಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣವೇ ಎಚ್ಚೆತುಕೊಂಡು 3ನೇ ವಾರ್ಡ್ ನಲ್ಲಿ ರಸ್ತೆ, ಚರಂಡಿ ಸ್ವಚ್ಛಗೊಳಿಸಲು ಮುಂದಾಗಬೇಕು. ಹೊಸ ಸಿಸಿ ರಸ್ತೆ, ಚರಂಡಿ ನಿರ್ಮಿಸಲು ಯೋಜನೆ ರೂಪಿಸಬೇಕು ʼ ಎಂದು ಓಣಿಯ ನಿವಾಸಿ ಸಂದೀಪಗೌಡ ಆಗ್ರಹಿಸಿದ್ದಾರೆ.
ಗ್ರಾಮದ ದೇವಸ್ಥಾನದ ಪಕ್ಕದ ಸುತ್ತ ಮುತ್ತಲಿನ ಓಣಿಗಳಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೆ ಮನೆಗಳ ಹೊಲಸು ನೀರು ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತಿದೆ.
ಸ್ವಲ್ಪ ಮಳೆಯಾದರೆ ಸಾಕು ರಸ್ತೆ ಕೆಸರು ಗದ್ದೆಯಂತಾಗುತ್ತಿದೆ. ಇದರಿಂದ ಪುಟ್ಟ ಮಕ್ಕಳು, ವೃದ್ಧರಿಗೆ ಓಡಾಡಲು ತುಂಬಾ ತೊಂದರೆ ಆಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಈ ಓಣಿಯ ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಸ್ಚಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.