
Steps to follow while purchasing agricultural implements: Advice to farmers
ಕೃಷಿ ಪರಿಕರಗಳ ಖರೀದಿಸುವಾಗ ಅನುಸರಿಸಬೇಕಾದ ಕ್ರಮಗಳು: ರೈತರಿಗೆ ಸಲಹೆ

ಕೊಪ್ಪಳ ಮೇ 26 (ಕರ್ನಾಟಕ ವಾರ್ತೆ): ರೈತರು ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಈ ವರ್ಷದ ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ ವಾಡಿಕೆ ಮಳೆಯ ಪ್ರಮಾಣ 64.30 ಮಿ.ಮೀ. ಇದ್ದು, ವಾಸ್ತವಿಕ ಮಳೆಯ ಪ್ರಮಾಣ 92.00 ಮಿ.ಮೀ. ದಾಖಲಾಗಿದೆ. 43% ಹೆಚ್ಚಿನ ಮಳೆಯಾಗಿದ್ದು, ಮಳೆಯು ಪ್ರಾರಂಭವಾಗಿರುವುದರಿಂದ ಈ ಹಂಗಾಮು ಆಶಾದಾಯಕವಾಗಿರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ರೈತರು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
ಅಧೀಕೃತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಂದ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು. ಬಿಡಿ (ಲೂಸ್) ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಖರೀದಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಬೇಕು ಹಾಗೂ ಬಿಲ್ಲಿನಲ್ಲಿ ಉಲ್ಲೇಖಿತ ವಿವರಗಳನ್ನು ಪರಿಶೀಲಿಸಬೇಕು. ಬಿಲ್‌ನಲ್ಲಿ ಲಾಟ್ ಸಂಖ್ಯೆ ಅಥವಾ ಬ್ಯಾಚ್ ಸಂಖ್ಯೆ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ತಮ್ಮ ಜಮೀನಿನ ಸ್ವರೂಪಕ್ಕೆ (ಖುಷ್ಕಿ ಅಥವಾ ನೀರಾವರಿ) ಅನುಗುಣವಾಗಿ ಶಿಫಾರಸ್ಸು ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯವಾಗಿದ್ದು, ಆಧಾರ್ ಕಾರ್ಡ್ ನೊಂದಿಗೆ ಮಾರಾಟ ಮಳಿಗೆ ಅಥವಾ ಸೊಸೈಟಿಗಳಿಗೆ ಭೇಟಿ ನೀಡಿ ಖರೀದಿ ಮಾಡಬೇಕು. ರೈತರು ತಾವು ಬೆಳೆಯುವ ಬೆಳೆಯ ಪ್ರಕಾರ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಖರೀದಿ ಬಿಲ್ ಪಡೆಯಬೇಕು. ಡಿ.ಎ.ಪಿ. ರಸಗೊಬ್ಬರದ ಪರ್ಯಾಯವಾಗಿ 20:20:0:13, ನ್ಯಾನೋ ಡಿಎಪಿ, ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ರಸಗೊಬ್ಬರಗಳನ್ನು ಬಳಸಬಹುದು.
ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಪೀಡೆನಾಶಕಗಳನ್ನು ಮಾತ್ರ ಬಳಸಬೇಕು. ಕಳೆನಾಶಕಗಳ ಬಳಕೆಯ ವೇಳೆ ಎಚ್ಚರಿಕೆಯಿಂದಿರಬೇಕು. ಪೀಡೆನಾಶಕ ಸಿಂಪಡನೆ ಮಾಡುವ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಮಾರಾಟಗಾರರು ದಾಸ್ತಾನು ಹಾಗೂ ದರಪಟ್ಟಿ ಪದರ್ಶಿಸಿರುವುದು ಕಂಡು ಬಂದಿಲ್ಲದಿದ್ದಲ್ಲಿ, ಖರೀದಿ ಬಿಲ್‌ನ್ನು ನೀಡದೇ ಇದಲ್ಲಿ ಅಥವಾ ಕೃಷಿ ಪರಿಕರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ ಅಥವಾ ಕೀಟನಾಶಕ ಕಂಡುಬಂದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಜೀವನಸಾಬ ಮೊ.ಸಂ: 8277922143, ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ ಕಾತರಕಿ ಮೊ.ಸಂ: 8277922109, ಯಲಬುರ್ಗಾ ಕೃಷಿ ನಿರ್ದೇಶಕರಾದ ಪ್ರಮೋದ ತುಂಬಾಳ ಮೊ.ಸಂ: 8277922107, ಗಂಗಾವತಿ ಸಹಾಯಕ ಕೃಷಿ ನಿರ್ದೇಶಕರಾದ ಸಿ.ಆರ್.ಅಭಿಲಾಷ ಮೊ.ಸಂ: 8277922106, ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಎಂ.ಟಿ.ಸುನೀಲ್ ಕುಮಾರ ಮೊ.ಸಂ: 8277932117 ಮತ್ತು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಎ.ನಾರನಗೌಡ ಮೊ.ಸಂ: 8277932103 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
