Breaking News

ತ್ಯಾಗವೀರ, ಮಹಾದಾನಿ ಸಿರಸಂಗಿಲಿಂಗರಾಜ_ಸರ್ದೇಸಾಯಿ

Tyagaveera, Mahadani Sirasangilingaraja_Sardesai

ಇದೇ ತಿಂಗಳ(ಜನೇವರಿ) 10 ರಂದು ಕಲಬುರಿಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ತ್ಯಾಗವೀರ, ಮಹಾದಾನಿ ಸಿರಸಂಗಿ ಲಿಂಗರಾಜ_ಸರ್ದೇಸಾಯಿ ಅವರು ಜಯಂತಿ ನಿಮಿತ್ತ ಲೇಖನ

(ನಮ್ಮ ಹಿರಿಯರು ಹೀಗಿದ್ದರು. ಅವರ ತ್ಯಾಗ,ಮುಂದಾಲೋಚನೆ ಕಾಲಕ್ಕೆ ತಕ್ಕಂತೆ ಜನಕ್ಕೆ ತಿಳಿಸುವಲ್ಲಿ ವಿಫಲವಾಗಿದ್ದೇವೆ. ಅವರ ಆಸ್ತಿ, ಕೋಟೆ ಸಂರಕ್ಷಣೆಯ ಮಾಡೋದು ನನ್ನಂತಹ ಪಾಮರನಿಂದ ಇಗಿರುವ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಆಗ್ತಿಲ್ಲ. ಆ ಮಟ್ಟಿಗಿದೆ ನನ್ನ ಸ್ಥಿತಿ. ತೋರಿಕೆಗೆ ಲಿಂಗರಾಜರ ನೆನಪು ಮಾಡಿಕೊಳ್ಳುವ ವಂಚಕನಾ?ಎಂಬ ಭಾವ ಹಲವು ವರ್ಷಗಳಿಂದ ನನಗೆ ತೀವ್ರವಾಗಿ ಕಾಡ್ತಿದೆ)

ದೇಶದೆಲ್ಲೆಡೆ ತ್ಯಾಗವೀರ ಲಿಂಗರಾಜ ಸರ್ದೇಸಾಯಿಯವರನ್ನು ನೆನಪಿಸುವ ಕಾರ್ಯಕ್ರಮ ನಡೆಯಬೇಕಿದೆ: ದಿವಂಗತ.. ದೇವಿಂದ್ರಕುಮಾರ ಹಕಾರಿಯವರ ಆಶಯವಿದು.
ಮಹಾದಾನಿ ಸಿರಸಂಗಿ ಲಿಂಗರಾಜರು ಲಿಂಗಾಯತ ಸಮಾಜದ ಪುಣ್ಯ ಪುರುಷರು ಹೌದು.ಕರ್ನಾಟಕದ ಪುಣ್ಯ ಪುರುಷರು ಹೌದು. ವ್ಯಕ್ತಿ ಜೀವನ ಮಹಾಮೌಲ್ಯಗಳಲ್ಲಿ” ವೀರ” ಆಗ್ರಮಾನ್ಯವಾದದು. ಇ ಮೌಲ್ಯವನ್ನು ನಂಬಿ ನಡೆದ ಧರ್ಮವೀರ, ಧಾನವೀರ, ದಯಾವೀರ, ಯುದ್ದವೀರರ ಶ್ರೀಮಂತ ಪರಂಪರೆ ಲಿಂಗಾಯತ ಸಮಾಜಕ್ಕಿದೆ. ಇವರಲ್ಲಿ ಲಿಂಗರಾಜರು ” ಧಾನವೀರ” ಪರಂಪರೆಯ ಅಮೃತ ಫಲ, ಅವರ ತ್ಯಾಗವನ್ನುಂಡು ಲಿಂಗಾಯತ ಸಮಾಜ ಬಾಳುತ್ತಲ್ಲಿದೆ, ಬೆಳಗುತ್ತಲಿದೆ ಎಂದು ಗದುಗಿನ ತೋಂಟದ ಸಿಧ್ಧಲಿಂಗ ಮಹಾಸ್ವಾಮಿಗಳು ಒಂದೆಡೆ ಲಿಂಗರಾಜರ ಕುರಿತು ಹೇಳಿದ್ದಾರೆ.
ನಮ್ಮ ನಾಡಿನ ಚರಿತ್ರೆಯಲ್ಲಿ ಅಳಿದ ಸಂಸ್ಥಾನಗಳು ಹೇರಳ. ಉಳಿದ ಸಂಸ್ಥಾನಗಳು ವಿರಳ. ಜನಾಂಗದ ಪ್ರಗತಿಗಾಗಿ, ಮೀಸಲಾಗಿ, ಚಿರಂತನವಾಗಿ ಉಳಿದ ಸಂಸ್ಥಾನ ಇನ್ನೂ ವಿರಳ. ಸಿರಸಂಗಿ ಲಿಂಗರಾಜರ ಮಹಾತ್ಯಾಗವೇ ಆ ಸಂಸ್ಥಾನಕ್ಕೆ ಅಂತಹ ಹಿರಿಮೆಯನ್ನು ತಂದು ಕೊಟ್ಟಿದೆ. ಪೋರ್ಡ ಪೌಂಡೇಶನ, ಭಾರತೀಯ ಜ್ಞಾನಪೀಠ ಮುಂತಾದ ಹೆಮ್ಮೆಯ ದತ್ತಿಗಳ ಸಾಲಿನಲ್ಲಿ ಸರಿಸಾಟಿಯಾಗಿ ನಿಲ್ಲಬಲ್ಲ ಲಿಂಗರಾಜರ ಘನವ್ಯಕ್ತಿತ್ವದ ಫಲವಾಗಿ ಮೂಡಿ ಬಂದ ” ಸಿರಸಂಗಿ ನವಲಗುಂದ ಟ್ರಸ್ಟ್” ಕನ್ನಡ ನಾಡಿನ ಮಹಾನ್ ಪರಂಪರೆಯ ಸಂಕೇತವಾಗಿದೆ.
ಆಗಿನ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು. ಸಂಸ್ಥಾನದ ಆಡಳಿತ ಎಲ್ಲಾ ಜನತೆಗೂ ಬ್ರಾಹ್ಮಣ ರಂತೆ ಅದಿಕಾರ ಪಡೆಯಲಿ ಮತ್ತು ಶಿಕ್ಷಣ ಪಡೆಯಲಿ ಎಂಬ ಸದಾಶಯವೇ ಲಿಂಗರಾಜರು ವೀರಶೈವ ಮಹಾಸಭಾ ಕಟ್ಟಲು ಕಾರಣವಾಯಿತು. ಸಂಘಟನೆಯೇ ಅಭಿವೃದ್ಧಿಯ ಹೆದ್ದಾರಿ ಎಂದರಿತ ಲಿಂಗರಾಜರು, ಲಿಂಗಾಯತ ಸಂಘಟನೆಯ ಪ್ರಪ್ರಥಮ ರೂವಾರಿ ಏನಿಸಿ , ” ಅಖಿಲ ಭಾರತ ವೀರಶೈವ ಮಹಾಸಭಾ” ಯನ್ನು ಹಾನಗಲ್ಲ ಕುಮಾರ ಸ್ವಾಮಿಗಳ ಆಶೀರ್ವಾದದ ಮೂಲಕ ಪ್ರಾರಂಭಿಸಿದರು. ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು, ಸರ್ ಪುಟ್ಟಣ್ಣ ಶೆಟ್ಟಿ ಸೇರಿದಂತೆ ಆ ಕಾಲದ ಹಿರಿಯರನ್ನು ಒಗ್ಗೂಡಿಸಿ ವಿವಿಧ ಪಂಗಡಗಳ, ಒಳ ಜಾತಿಗಳ ವಿಂಗಡನೆಯಲ್ಲಿ ಹರಿದು ಹಂಚಿಹೋಗಿದ್ದ ಮತ್ತು ಅಸ್ತಿತ್ವ ಕಳೆದುಕೊಂಡಿದ್ದ ಲಿಂಗಾಯತ ಸಮಾಜಕ್ಕೆ ಶಕ್ತಿ ಸಂಜೀವಿನಿಯ ದಿವ್ಯ ಔಷದವನ್ನು ದಾರೆಯೆರೆದರು.ಹಾಗೇಯೇ, ಲಿಂಗಾಯತ ಸಮುದಾಯ ಸಂಘಟಿತವಾಗಲು ಮತ್ತು ಶಿಕ್ಷಣ ಪಡೆಯಲು ಸಹಾಯಕವಾಯಿತು. 1904 ರ ಧಾರವಾಡ ಮತ್ತು 1905 ರ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಮತ್ತು ದ್ವಿತೀಯ ಅಖಿಲ ಭಾರತ ವೀರಶೈವ ಮಹಾಸಭಾದ ಸಮ್ಮೇಳನದ ಪ್ರಥಮ ಮತ್ತು ದ್ವಿತೀಯ ಸಮ್ಮೇಳನಾಧ್ಯಕ್ಷರಾಗಿ ಅವರು, ಲಿಂಗಾಯತ ಸಂಘಟನೆಗೆ ಹೊಸ ದಿಕ್ಕು ದಿಶೆಗಳನ್ನು ತೋರಿದರು. ಪ್ರಗತಿಪರ ಆಲೋಚನೆ, ವೈಜ್ಞಾನಿಕ ಮನೋಧರ್ಮ ಹಾಗೂ ದೂರದೃಷ್ಟಿಯ ಕನಸುಗಳಿಂದ ಕೂಡಿದ ಅವರ ಅಂದಿನ ಭಾಷಣಗಳು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಮಾರ್ಗದರ್ಶಕ ಮಂತ್ರಗಳಾಗಿವೆ. ಸಮ್ಮೇಳನಾಧ್ಯಕ್ಷರಾಗಿ ಅವರು ಮಾಡಿದ ಭಾಷಣಗಳು ಅತ್ಯಂತ ವೈಚಾರಿಕತೆಯಿಂದ ಕೂಡಿವೆ. ಆದರೆ, ಹಾನಗಲ್ ಕುಮಾರ ಸ್ವಾಮಿಗಳು ಲಿಂಗರಾಜರನ್ನು ದಾರಿ ತಪ್ಪಿಸಿ, ಉದ್ಧೇಶ ಪೂರ್ವಕವಾಗಿ ವೀರಶೈವ ಪದ ಬಳಸಿದರು ಎನ್ನಬಹುದಾಗಿದೆ.ಇದಕ್ಕೆ ಸಕಾರಣವೆಂದರೆ, ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಲಿಂಗರಾಜರು ತಮ್ಮ ಸಂಸ್ಥಾನದ ಆಸ್ತಿಯನ್ನು ಉಯಿಲು ಬರೆಯುವಾಗ ಅದರಲ್ಲಿ ಎಲ್ಲೂ ಕೂಡಾ ವೀರಶೈವ ಪದ ಬಳಸಿಲ್ಲ. ಅವರು ಅದರಲ್ಲಿ ಬಳಸಿರುವುದು ಲಿಂಗಾಯತ…ಮಾತ್ರ. ಇದು ತುಂಬಾ ಗಮನಾರ್ಹವಾದ ವಿಷಯವಾಗಿದೆ. ಲಿಂಗರಾಜರ ದಾನಪತ್ರ ಲಿಂಗಾಯತ ಸಮುದಾಯಕ್ಕೆ ಅಮೃತವಾಯಿತು.ಬ್ರಿಟಿಷರ ಆಳ್ವಿಕೆಯಲ್ಲಿ ಭಾರತ ದೇಶದಲ್ಲಿ ಸುಮಾರು 545 ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಇಂದು ಅವುಗಳೆಲ್ಲ ಅಳಿದು ಹೋದರೂ ಉಳಿದ ಏಕೈಕ ಸಂಸ್ಥಾನವೆಂದರೆ ಅದು ಸಿರಸಂಗಿ ಸಂಸ್ಥಾನ. ಅದು ಇಂದು ಸಿರಸಂಗಿ ನವಲಗುಂದ ಟ್ರಸ್ಟ ಆಗಿ ಉಳಿದಿದೆ. ಅದರ ಮೇಲ್ವಿಚಾರಣೆ ಬೆಳಗಾವ ಜಿಲ್ಲಾದಿಕಾರಿಯದು ಎಂದು ಆ ಕಾಲದಲ್ಲೇ ಲಿಂಗರಾಜರು ತಮ್ಮ ಉಯಿಲು ಪತ್ರದಲ್ಲಿ ಬರೆದಿದ್ದರು. ಹಾಗೇಯೇ,ತಮ್ಮ ಸಂಸ್ಥಾನದ ಹಿತಚಿಂತಕರಾದ ಅದಕ್ಕೆ ಏಳು ಜನ ಟ್ರಸ್ಟಿಗಳನ್ನು ನೇಮಕ ಮಾಡಿದರು. ಅವುಗಳಲ್ಲಿ ಅರಟಾಳ ರುದ್ರಗೌಡರು, ಪ್ರಸ್ತುತ ಕರ್ನಾಟಕದ ಜಲಸಂಪನ್ಮೂಲ ಸಚಿವರಾದ ಎಂ. ಬಿ. ಪಾಟೀಲರ ತಾತ , ಪ್ರಸ್ತುತ ಕಿತ್ತೂರು ಶಾಸಕರಾದ ನೇಗಿನಿಹಾಳದ ಡಿ.ಬಿ. ಇನಾಮದಾರ ರವರ ತಾತಾ, ವಿಜಯಪುರ ಜಿಲ್ಲೆಯ ಉಕ್ಕಲಿಯ ಜಿ. ಕೆ. ಪಾಟೀಲ ರವರ ತಾತಾ ಸೇರಿದಂತೆ ಇನ್ನಿತರ ಪ್ರಮುಖರನ್ನು ನೇಮಿಸಿದರು. ಆ ಟ್ರಸ್ಟಿಗಳ ನಿಧನಾನಂತರ ಮುಂದುವರಿಕೆಯನ್ನು ಸಬಲರಾದ ಅದೇ ಟ್ರಸ್ಟಿಗಳ ವಂಶಜರನ್ನು ಇಲ್ಲವಾದರೆ, ಇನ್ನುಳಿದ ಸದಸ್ಯರು ಸಭೆ ಸೇರಿ ಸಮುದಾಯಕ್ಕಾಗಿ ಶ್ರಮಿಸಿದ ವ್ಯಕ್ತಿಯನ್ನು ಪಡೆಯಬಹುದೆಂದು ತಮ್ಮ ಉಯಿಲು ಪತ್ರದಲ್ಲೆ ಬರೆದ ಮಹಾನ್ ವ್ಯಕ್ತಿ ಲಿಂಗರಾಜರು. ಆಗಿನ ಸಾತ್ರಾ ಸಂಸ್ಥಾನದೊಂದಿಗೆ ಉತ್ತಮ ಸಂಭಂದವನ್ನು ಹೊಂದಿದ್ದರು. ಅವರು ತಮ್ಮ ಶಿಕ್ಷಣ ಪಡೆದದ್ದು ಅಲ್ಲಿಯೇ. 1861 ರ ಜನೇವರಿ 10 ರಂದು ಗದಗ ಜಿಲ್ಲೆಯ ವನಶಿಗ್ಲಿ ಗ್ರಾಮದ ರಾಮಪ್ಪ ಗೂಳಪ್ಪ ಮಡ್ಲಿ ಎಂಬ ಬಾಲಕ ಶಿರಸಂಗಿ ಸಂಸ್ಥಾನಕ್ಕೆ ಅಪುತ್ರಕವಾದಾಗ, ದತ್ತು ಪುತ್ರಕನಾಗಿ ಆಯ್ಕೆಯಾದ. ಇ ಬಾಲಕನ ಪ್ರವೇಶದಿಂದ” ಸಿರಸಂಗಿ ಸಂಸ್ಥಾನ” ಹೊಸ ದಿಸೆ ಪಡೆದು ಅಜರಾಮರವಾಯಿತು. ವನಶಿಗ್ಲಿಯ ರಾಮಪ್ಪ ಸಿರಸಂಗಿ ಸಂಸ್ಥಾನದ ವಾರಸುದಾರನಾಗಿ ಲಿಂಗರಾಜ ಸರ್ ದೇಸಾಯಿಯೆಂದು ಪುನರ್ ನಾಮಕರಣಗೊಂಡನು. ತೆರೆದುಕೊಂಡಿತು. ಲಿಂಗರಾಜ ದೇಸಾಯಿಯವರ ಆಡಳಿತ, ಅವರ ದೂರದೃಷ್ಟಿ, ಪ್ರಗತಿಪರ ವಿಚಾರಗಳು, ಆಧುನಿಕ ವೈಜ್ಞಾನಿಕ ಮನೋಭಾವ ಸಿರಸಂಗಿ ಸಂಸ್ಥಾನದಲ್ಲಿ ಹೊಸ ಅಲೆಗಳನ್ನು ಉಂಟು ಮಾಡಿತು. ಅಂದಿನ ಪುಣೆ ಹಾಗೂ ಮಹಾರಾಷ್ಟ್ರದ ಇತರ ಭಾಗಗಳ ಪರಿಚಯವಿದ್ದ ಲಿಂಗರಾಜರು ಉತ್ತರ ಕರ್ನಾಟಕದ ಇ ನಾಡು ಮತ್ತು ಜನತೆ ಹಿಂದುಳಿದಿರುವುದೇಕೆ? ಎಂದು ಚಿಂತಿಸಿದರು. ಸ್ಪರ್ದಾತ್ಮಕ ವಿಶ್ವದಲ್ಲಿ ನಮ್ಮ ಜನರು ಕೂಡಾ ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕುವುದು ಹೇಗೆ? ಎಂದು ಹಗಲಿರುಳು ಚಿಂತಿಸಿದರು. ಇವರ ಚಿಂತನ ಸಾಮರ್ಥ್ಯ, ವಿಶ್ಲೇಷಣೆಯಲ್ಲಿ ಹತ್ತು ಹಲವಾರು ಪ್ರಗತಿಪರ ಯೋಜನೆಗಳು, ಕನಸುಗಳು ಹುಟ್ಟಿಕೊಂಡವು. ಇವರ ಚಿಂತನಾತ್ಮಕ ಮನೋಧರ್ಮದಿಂದಾಗಿ ಶಿಕ್ಷಣ, ಕೃಷಿ, ಸಹಕಾರ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಹಲವಾರು ನೂತನ ಯೋಜನೆಗಳು ಸಾಕಾರಗೊಂಡವು. ಲಿಂಗರಾಜರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಚ್ಚ ಹಸಿರಾಗಿ ಉಳಿಯುವಂತಹದ್ದು. ಬೃಹತ್ತಾದ ವೃಕ್ಷವಾಗಿ ಬೆಳೆದಿರುವ ಇಂದಿನ ಕೆ. ಎಲ್. ಇ . ಬೆಳಗಾವ ಸಂಸ್ಥೆಗೆ ಆಸ್ತಿಭಾರ ಹಾಕಿದವರೇ ಲಿಂಗರಾಜರು. ಧಾರವಾಡದಲ್ಲಿ” ಲಿಂಗಾಯತ ಟೌನಹಾಲ್” ಮತ್ತು ಶಿಕ್ಷಣ ಪಡೆಯುವ ಮಹಿಳೆಯರಿಗಾಗಿ ” ಉಮಾಬಾಯಿ ವಸತಿ ನಿಲಯ” ವನ್ನು , ವಿಜಯಪುರದಲ್ಲಿ ” ಲಿಂಗರಾಜ ಹಾಸ್ಟೆಲ್” ಗಳನ್ನು ಕಟ್ಟಿಸಿ, ಗ್ರಾಮೀಣ ಪ್ರದೇಶದ ಬಡಲಿಂಗಾಯತ ಮಕ್ಕಳ ಬದುಕಿಗೆ ಶಿಕ್ಷಣದ ಸಂಸ್ಕಾರ ದೊರೆಯುವಂತೆ ಅನುವು ಮಾಡಿಕೊಟ್ಟರು. ಸಮಗ್ರ ಲಿಂಗಾಯತ ಸಮುದಾಯದ ಮಕ್ಕಳು ಶಿಕ್ಷಣ ಹೊಂದಿದಾಗ ಮಾತ್ರ ನಮ್ಮ ಸಮಾಜ ಸುಧಾರಣೆ ಸಾಧ್ಯವೆಂದು ಒತ್ತಿ ಹೇಳುತ್ತಿದ್ದರು.” ನನ್ನಿಂದ ನಮ್ಮ ಸಮಾಜಕ್ಕೆ ಕಲ್ಯಾಣವಾಗುವುದಾದರೆ, ನನ್ನ ಪ್ರಾಣ ಮೀಸಲೆಂದು ಘೋಷಿಸಿ ” ತಮ್ಮ ಬದುಕಿನ ಸತ್ ಸಂಕಲ್ಪವನ್ನು ಜಾಹೀರು ಗೊಳಿಸಿದರು. ಲಿಂಗಾಯತ ಸಮಾಜದ ರೈತರ ಅನುಕೂಲಕ್ಕಾಗಿ ಹಾಗೂ ಸಹಕಾರ ತತ್ವದ ಲಾಭ ಎಲ್ಲಾ ಕೃಷಿಕರಿಗೂ ತಲುಪಲೆಂಬ ಉಧ್ಧೇಶದಿಂದ ವಿಜಯಪುರದಲ್ಲಿ “ಏಳೂರ ಗೌಡರ ದಲ್ಲಾಳಿ ಅಂಗಡಿ” ಯನ್ನು ಸ್ಪಾಪಿಸಿದರು. .ಕೃಷಿಯನ್ನು ಅವಲಂಬಿಸಿದ ಲಿಂಗಾಯತ ಸಮಾಜದ ಜನರ ಬದುಕಿಗೆ ಬೆಳಕು ಸಿಗುವುದು ಕೇವಲ ಆಧುನಿಕ ಕೃಷಿಯಿಂದ ಮಾತ್ರವೆಂದು ನಂಬಿದ ಅವರು ” ದೇವಿ ಹೊಸೂರು( ಹಾವೇರಿ ಹತ್ತಿರ) ದಲ್ಲಿ ಹಾವೇರಿ ಶೆಟ್ಟರ 150 ಏಕರೆ ಹೊಲವನ್ನು ಖರೀದಿಸಿ, ಕೃಷಿ ತರಬೇತಿ ಶಾಲೆಯನ್ನು ಸ್ಪಾಪಿಸಿದರು. ನವಲಗುಂದ ಮತ್ತು ಸಿರಸಂಗಿ ಯಲ್ಲಿ ಭವ್ಯವಾದ ಕೆರೆಗಳನ್ನು ಕಟ್ಟಿಸಿ, ಆ ಕೆರೆಯ ನೀರಿನಿಂದ ರೈತರ ಹೊಲಗಳಿಗೆ ನೀರು ಹರಿಸುವ ಹೊಸ ತಂತ್ರಜ್ಞಾನವನ್ನು ಜಾರಿಗೊಳಿಸಿದರು.ಬಾಲ್ಯ ವಿವಾಹವನ್ನು ಸ್ಪಷ್ಟವಾಗಿ ಖಂಡಿಸಿದ ಅವರು, ಆ ಕಾಲದಲ್ಲಿಯೇ ವಿಧವಾ ವಿವಾಹವನ್ನು ಪುರಸ್ಕರಿಸಿ, ತಮ್ಮ ಪ್ರಗತಿಪರ ಚಿಂತನೆಯನ್ನು ಸಾರ್ವತ್ರಿಕಗೊಳಿಸಲು ಹಗಲಿರುಳು ಶ್ರಮಿಸಿದರು. ತಮ್ಮ ಬದುಕಿನ ಕೊನೆಯಲ್ಲಿ ಸಮಾಜಮುಖಿಯಾದ ಅವರ ಮನಸ್ಸು ವ್ಯಕ್ತಿ ಪ್ರಜ್ಞೆಯಿಂದ ಸಮಷ್ಠಿಯತ್ತ ಪಯಣ ಬೆಳೆಸಿತು. ಹಾಗಾಗಿ ವಾರಸುದಾರರಿಲ್ಲದ ತಮ್ಮ ಸಂಸ್ಥಾನದ ಆಸ್ತಿ, ಸಂಪತ್ತು, ನಗನಾಣ್ಯಗಳನ್ನು ಲೋಕಹಿತಕ್ಕಾಗಿ ಮುಡುಪಾಗಿಡಲು ನಿರ್ಣಯಿಸಿ, ಇ ಕುರಿತು ಅಂದೇ “ಮೃತ್ಯ್ಯು ಪತ್ರ” ವನ್ನು ಸಿದ್ದಪಡಿಸಿ, ಬೆಳಗಾವಿ ಜಿಲ್ಲಾದಿಕಾರಿಗಳ ಕೈಗೊಪ್ಪಿಸಿ, ತಮ್ಮ ಮರಣಾನಂತರ ಅದನ್ನು ಘೋಷಿಸಬೇಕೆಂದು ಕೇಳಿಕೊಂಡರು. ಲಿಂಗರಾಜರು ಅಂದು ಬರೆದ ‘ ಮೃತ್ತ್ಯು ಪತ್ರ’ ಲಿಂಗಾಯತ ಸಮಾಜಕ್ಕೆ ‘ ಅಮೃತ ಪತ್ರ’ ವಾಗಿ ಪರಿಣಮಿಸಿತು. ಲಿಂಗರಾಜರು ತಮ್ಮ ಮೃತ್ಯ್ತು ಪತ್ರದ ಮೂಲಕ ಅದನ್ನು ಸಮಸ್ತ ಲಿಂಗಾಯತರ ಪ್ರಗತಿಗಾಗಿ ಮೀಸಲಿಟ್ಟರು. ಇಂದು ಭಾರತ ಸ್ವಾತಂತ್ರ ಪೂರ್ವದ 600 ಸಂಸ್ಥಾನಗಳು ಭಾರತ ಒಕ್ಕೂಟ ರಾಷ್ಟ್ರದ ಅವಿಭಾಜ್ಯ ಭಾಗಗಳಾಗಿ ಸೇರಿಕೊಂಡು ತಮ್ಮ ಅಸ್ತಿತ್ವವನ್ನೇ ಬಿಟ್ಟು ಕೊಟ್ಟಿವೆ. ಆದರೆ, ಲಿಂಗರಾಜರ ದೂರದೃಷ್ಟಿ ಹಾಗೂ ತತ್ವಜ್ಞಾನಿಯ ಮನೋಧರ್ಮ ಕಾರಣವಾಗಿ ಸಮಾಜದ ಹಿತಕ್ಕಾಗಿ ಸಮರ್ಪಿಸಿಕೊಂಡ ಅವರ ಸಂಸ್ಥಾನ ಇಂದೂ ಕೂಡಾ ” ಸಾರ್ವಜನಿಕರ ಸಂಸ್ಥಾನ” ವಾಗಿ ಅಸ್ತಿತ್ವದಲ್ಲಿದೆ. ಹೀಗೆ ಎಲ್ಲಾ ಸಂಸ್ಥಾನಗಳು ಅಳಿದರೂ , ಸಿರಸಂಗಿ ಸಂಸ್ಥಾನ ಮಾತ್ರ ” ನವಲಗುಂದ- ಸಿರಟ್ರಸ್ಟ್ ಪಂಡ್” ಹೆಸರಿನಿಂದ ಇ ಲೋಕದಲ್ಲಿ ಅಜರಾಮರವಾಗಿ ಉಳಿದಿದೆ. ಅದಕ್ಕಾಗಿಯೇ ಲಿಂಗರಾಜರು ಮಹಾದಾನಿ, ಮಹಾತ್ಯಾಗಿಯೆಂದು ಲೋಕಪೂಜ್ಯ ವ್ಯಕ್ತಿತ್ವದಿಂದ ಕಂಗೊಳಿಸುತ್ತಿದ್ದಾರೆ. ಇ ”ನವಲಗುಂದ – ಸಿರಸಂಗಿ ಟ್ರಸ್ಟ್ ಫಂಡ್ ” ನ ಸಹಾಯ ಮತ್ತು ಅನುದಾನದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಲಿಂಗಾಯತ ಮಕ್ಕಳು ಉನ್ನತ ಶಿಕ್ಷಣವನ್ನು ಪೂರೈಸುವುದಕ್ಕೆ ಸಾಧ್ಯವಾಗಿದೆ. ಈ ಟ್ರಸ್ಟ್ ಫಂಡ್ ದ ಸಹಾಯ ಪಡೆದ ಪ್ರಮುಖರೆಂದರೆ, ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ . ಜತ್ತಿಯವರು, ಡಾ. ಡಿ. ಸಿ. ಪಾವಟೆ, ಡಾ. ಮೆಣಸಿನಕಾಯಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಆರ್.ಬೊಮ್ಮಾಯಿ, ನ್ಯಾಯಮೂರ್ತಿ ಮಳೀಮಠ, ಶ್ರೀ ರತ್ನಪ್ಪಣ್ಣಾ ಕುಂಬಾರ, ಡಾ. ಆರ್. ಸಿ.ಹಿರೇಮಠ, ಡಾ.ಬಿ. ಸಿ.ಜವಳಿ, ಡಾ. ಹಿರೇಮಲ್ಲೂರು ಈಶ್ವರನ್ ಸೇರಿದಂತೆ ಮುಂತಾದವರು ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಿ, ಲೋಕವಿಖ್ಯಾರಾಗಿದ್ದವರು. ಲಿಂಗರಾಜರು 24/08/1906 ರಲ್ಲಿ ಲಿಂಗೈಕ್ಯರಾದರೂ ಕೂಡಾ ಅವರು ಮಾಡಿದ ತ್ಯಾಗ, ದಾನದ ಗುಣಗಳಿಂದ ಲಕ್ಷಾಂತರ ಜನತೆಯ ಬಾಳಿಗೆ ಬೆಳಕು ನೀಡುವ ಸೂರ್ಯನಾಗಿ ಇತಿಹಾಸದ ಪುಟದಲ್ಲಿ ಕಂಗೊಳಿಸುತ್ತಿದ್ದಾರೆ. ಲೇಖನ ಮೂಲ: ತೋಂಟದಾರ್ಯ ಪೀಠದ ಲಿಂಗಾಯತ ಸಂಶೋಧನಾ ಸಂಸ್ಥೆಯ ಕೃತಿ ತ್ಯಾಗವೀರ ಸಿರಸಂಗಿ ಲಿಂಗರಾಜರು. ಲೇಖಕ:ಡಾ. ದೇವಿಂದ್ರಕುಮಾರ ಹಕಾರಿಯವರು….
ಆ ಸಮಾವೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ನಿರ್ಣಯಗಳು:1) ಲಿಂಗಾಯತ ಮಹಾಸಭಾ ಸಂಘಟನೆ ಇರುವ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಲಿಂಗರಾಜ ಧೇಸಾಯಿಯವರ ಜಯಂತ್ಯೋತ್ಸವ ಆಚರಿಸಲು ಮಹಾಸಭಾ ಕ್ರಮ ಕೈಗೊಳ್ಳಬೇಕು. 2) ಲಿಂಗರಾಜರ ನೆನಹಿನಲ್ಲಿ ಸ್ಮಾರಕ ಭವನಗಳು ನಿರ್ಮಾಣವಾಗಬೇಕು. 3) ಲಿಂಗರಾಜರ ಕುರಿತಾಗಿ ವಿಚಾರ ಸಂಕಿರಣ ಮತ್ತು ಸಮ್ಮೇಳನಗಳನ್ನು ಆಯೋಜಿಸಬೇಕು. 4) ರಾಜ್ಯದಲ್ಲಿಯ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಲಿಂಗರಾಜ ಸರ ದೇಸಾಯಿವರ ಹೆಸರಿನಲ್ಲಿ ಅಧ್ಯಯನ ಪೀಠ ಪ್ರಾರಂಭಿಸಬೇಕು. 5) ಲಿಂಗರಾಜರ ಕೊಡುಗೆಯ ಬಗ್ಗೆ ಸಮುದಾಯದ ಜನರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಇಂತಿ ಸಮಾಜ ಹಿತಾಸಕ್ತಿಯಿಂದ ಪ್ರಕಟಪಡಿಸುತ್ತಿರುವವರು: ಭೀಮನಗೌಡ ಪರಗೊಂಡ.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.