Theater artist Sekharatheggi has pledged his body to Koppal Medical College
ಗಂಗಾವತಿ: ನಗರದ ರಂಗಭೂಮಿ ಮತ್ತು ಚಲನಚಿತ್ರ ನಟ ಶೇಖರ ತೆಗ್ಗಿ ತಮ್ಮ ಮರಣಾ ನಂತರ ಮೃತ ದೇಹವನ್ನು ಕೊಪ್ಪಳ ಮೆಡಿಕಲ್ ಕಾಲೇಜಿಗೆ ನೀಡುವ ವಾಗ್ದಾನ ಮಾಡಿದ್ದಾರೆ. ಅವರು ಸೋಮವಾರ ಕೊಪ್ಪಳದ ಸರಕಾರಿ ಮೆಡಿಕಲ್ ಕಾಲೇಜಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ನಿಧನವಾದ ನಂತರ ಮೃತ ದೇಹವನ್ನು ಮೆಡಿಕಲ್ ಕಾಲೇಜಿಗೆ ಪಡೆದು ವೈದ್ಯಕೀಯ ವೃತ್ತಿ ಕಲಿಯುವ ವಿದ್ಯಾರ್ಥಿಗಳಿಗೆ ಬಳಕೆ ಮಾಡಲು ಅನುಮತಿ ನೀಡಿ ಮೆಡಿಕಲ್ ಕಾಲೇಜಿನಿಂದ ದೇಹ ದಾನ ಮಾಡಿದ ಕುರಿತು ಗುರುತಿನ ಪ್ರಮಾಣ ಪತ್ರ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮನುಷ್ಯ ಜನ್ಮ ದೊಡ್ಡದು ಇದನ್ನು ವ್ಯರ್ಥ ಮಾಡಬಾರದು. ನಾವು ಮರಣಾ ನಂತರವೂ ನಮ್ಮ ದೇಹ ನಾಲ್ಕು ಜನರಿಗೆ ಉಪಯೋಗಕ್ಕೆ ಬರುವ ಹಾಗೆ ನಾವು ಬದುಕಿ ತೋರಿಸಬೇಕು. ನಾನು ವೃತ್ತಿಯಿಂದ ವ್ಯಾಪಾರಿಯಾಗಿದ್ದರೂ ಪ್ರವೃತ್ತಿಯಿಂದ ಕನ್ನಡ ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದು ಸಾರ್ವಜನಿಕವಾಗಿ ನಾವು ಉಪಯೋಗಕ್ಕೆ ಬರುವಂತಾಗಬೇಕು. ವೈದ್ಯಕೀಯ ಓದುವ ವಿದ್ಯಾರ್ಥಿಗಳಿಗೆ ಮನುಷ್ಯ ದೇಹದ ಮೇಲೆ ಹಲವು ಅಭ್ಯಾಸ ಮಾಡುವ ಅಗತ್ಯಗಳಿರುತ್ತವೆ.
ಮನುಷ್ಯ ಮೃತ ದೇಹದ ಕೊರತೆಯಿದ್ದು ಇದರಿಂದ ಕಲಿಯುವ ಮಕ್ಕಳಿಗೆ ಬಹಳ ತೊಂದರೆಯಾಗುತ್ತದೆ. ನಾವು ಸತ್ತ ಮೇಲೂ ಉಪಯೋಗಕ್ಕೆ ಬರುವಂತಾಗಲು ನಾನು ಕೊಪ್ಪಳ ಸರಕಾರಿ ಮೆಡಿಕಲ್ ಕಾಲೇಜಿಗೆ ಕುಟುಂಬದವರ ಒಪ್ಪಿಗೆ ಪಡೆದು ದೇಹದಾನದ ವಾಗ್ದಾನ ಮಾಡಿದ್ದೇನೆ. ನನಗೆ ಬಹಳ ಖುಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಅಂಗದಾನ ಶಾಸ್ತç ವಿಭಾಗದ ಡಾ.ಚನ್ನಬಸವಗೌಡ ಇದ್ದರು.