Breaking News

ಬರ, ಕುಡಿವ ನೀರು: ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿನಲಿನ್ ಅತುಲ್ ಸೂಚನೆ

Drought, drinking water: District Collector Atul instructs for proper management


  • ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ಸಭೆ

* ವಿಪತ್ತು ನಿರ್ವಹಣೆ; 2 ಗಂಟೆಗಳ ಕಾಲ ಸುಧೀರ್ಘ ಚರ್ಚೆ

ಕೊಪ್ಪಳ ಡಿಸೆಂಬರ್ 09 (ಕರ್ನಾಟಕ ವಾರ್ತೆ): ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 8ರಂದು ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.
ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿನ ಕೇಶ್ವಾನ್ ಹಾಲನಲ್ಲಿ ವಿಡಿಯೋ ಸಂವಾದ ನಡೆಸಿ ಬರ ನಿರ್ವಹಣೆ, ಕುಡಿಯುವ ನೀರಿನ ಪರಿಸ್ಥಿತಿ, ಮೇವಿನ ಲಭ್ಯತೆ ಸೇರಿದಂತೆ ನಾನಾ ವಿಷಯಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಸುಧೀರ್ಘ 2 ಗಂಟೆಗಳ ಸಮಯ ಚರ್ಚಿಸಿ ಸಮಗ್ರ ಮಾಹಿತಿ ಪಡೆದರು. ಬರ ನಿರ್ವಹಣೆ ಮತ್ತು ಕುಡಿಯುವ ನೀರು ಪೂರೈಕೆ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಈಗ ಮೊದಲಾದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದ ನಮ್ಮ ಆದ್ಯ ಕರ್ತವ್ಯವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಸಮಸ್ಯೆ ತಲೆದೋರಬಹುದಾದ ಗ್ರಾಮಗಳ ಪಟ್ಟಿ ಮಾಡಿ ಅಂತಹ ಕಡೆಗೆ ಈಗಿನಿಂದಲೇ ಮುಂಜಾಗ್ರತೆ ವಹಿಸಬೇಕು. ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮೇವಿನ ಲಭ್ಯತೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ನಡೆಸಬೇಕು. ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ವಿಶೇಷವಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳು ಸಹ ನಿರಂತರ ಪ್ರವಾಸ ಕೈಗೊಂಡು ಬರ ನಿರ್ವಹಣೆ ವಿಷಯದಲ್ಲಿ ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳೊಂದಿಗೆ ಸಮನ್ವಯ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ನಗರ ಪ್ರದೇಶಗಳಲ್ಲಿ ಸಹ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ನಗರಸಭೆ ಪೌರಾಯುಕ್ತರು, ಪುರಸಭೆಗಳ ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯಸ್ಥರು ಸೂಕ್ತ ಮೇಲ್ವಿಚಾರಣೆ ನಡೆಸಿ ನಗರ ಪಟ್ಟಣ ಪ್ರದೇಶದ ಪ್ರತಿಯೊಂದು ವಾರ್ಡಗು ಸಹ ಸಮರ್ಪಕ ನೀರು ಪೂರೈಕೆಯತ್ತ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರೈತರಲ್ಲಿ ಮನವಿ: ಜಿಲ್ಲೆಯ ರೈತರು ಎಫ್‌ಐಡಿ ಸಂಖ್ಯೆಯನ್ನು ಹೊಂದುವುದು ಅತೀ ಅವಶ್ಯವಿದೆ. ಎಫ್‌ಐಡಿ ಸಂಖ್ಯೆಯನ್ನು ಹೊಂದಿದ್ದರು ಸಹ ಅದರಲ್ಲಿ ಎಲ್ಲ ಸರ್ವೇ ನಂಬರ್‌ಗಳನ್ನು ಕೆಲವು ರೈತರು ಸೇರಿಸಿಲ್ಲ ಎಂಬ ಮಾಹಿತಿ ಇದೆ. ಆದ್ದರಿಂದ ಬಿಟ್ಟುಹೋದ ಪ್ಲಾಟಗಳನ್ನು ಎಫ್‌ಐಡಿನಲ್ಲಿ ಸೇರಿಸಲು ರೈತರು ಮುಂದೆ ಬರಬೇಕು ಎಂದು ಜಿಲ್ಲೆಯ ರೈತರಲ್ಲಿ ಸಭೆಯ ಮೂಲಕ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲೆಯ ಒಟ್ಟು 153 ಗ್ರಾಮ ಪಂಚಾಯತಗಳಲ್ಲಿ 722 ಗ್ರಾಮಗಳ ಪೈಕಿ ಮುಂದಿನ ಮೂರು ತಿಂಗಳಲ್ಲಿ ಕುಕನೂರ ತಾಲೂಕಿನ 5, ಯಲಬುರ್ಗಾ ತಾಲೂಕಿನ 6, ಕುಷ್ಟಗಿ ತಾಲೂಕಿನ 20, ಗಂಗಾವತಿ ತಾಲೂಕಿನ 13, ಕೊಪ್ಪಳ ತಾಲೂಕಿನಲ್ಲಿ 93, ಕನಕಗಿರಿ ತಾಲೂಕಿನಲ್ಲಿ 16 ಮತ್ತು ಕಾರಟಗಿ ತಾಲೂಕಿನಲ್ಲಿ 6 ಸೇರಿ ಒಟ್ಟು 159 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಹುದೆಂದು ಪಟ್ಟಿ ಮಾಡಲಾಗಿದೆ. ಅದೇ ರೀತಿ ಗಂಗಾವತಿ ತಾಲೂಕಿನ 4 ಗ್ರಾಮಗಳಲ್ಲಿ, ಕನಕಗಿರಿ ತಾಲೂಕಿನಲ್ಲಿ ಒಂದು, ಕಾರಟಗಿ ತಾಲೂಕಿನಲ್ಲಿ 3, ಕೊಪ್ಪಳ ತಾಲೂಕಿನಲ್ಲಿ 8, ಕುಷ್ಟಗಿ ತಾಲೂಕಿನಲ್ಲಿ 7, ಕುಕನೂರ ತಾಲೂಕಿನಲ್ಲಿ 2 ಸೇರಿ ಒಟ್ಟು 25 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗಬಹುದೆಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟಾರೆ 898 ಖಾಸಗಿ ಬೋರವೆಲ್‌ಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,55,826 ಪ್ರಾಣಿಗಳಿದ್ದು ಮುಂದಿನ ದಿನಗಲ್ಲಿ ಜಿಲ್ಲೆಯಲ್ಲಿ 16 ಕಡೆಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸುವ ಸಂದರ್ಭ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2023ರ ಜನವರಿ 1 ರಿಂದ ಡಿಸೆಂಬರ್ 7ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ 608 ಮಿಮಿ ವಾಡಿಕೆ ಮಳೆ ಇದ್ದು ವಾಸ್ತವವಾಗಿ 393 ಮಿಮಿ ಮಳೆ ಸುರಿದು ಶೇ.37ರಷ್ಟು ಮಳೆ ಕೊರತೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 577.7 ಇದ್ದು ವಾಸ್ತವವಾಗಿ 359.8ರಷ್ಟು ಸುರಿದು ಶೇ.38ರಷ್ಟು ಮಳೆ ಕೊರತೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 629.9 ಮಿಮಿ ಇದ್ದು ವಾಸ್ತವವಾಗಿ 413.9ರಷ್ಟು ಮಳೆ ಸುರಿದು ಶೇ.34ರಷ್ಟು ಮಳೆ ಕೊರತೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 586.3 ಮಿಮಿ ಇದ್ದು ವಾಸ್ತವವಾಗಿ 328.1 ಮಿಮಿ ಮಳೆ ಸುರಿದು ಶೇ.44ರಷ್ಟು ಮಳೆ ಕೊರತೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 591.7 ಮಿಮಿ ಇದ್ದು ವಾಸ್ತವವಾಗಿ 411.5 ಮಳೆ ಸುರಿದು ಶೇ. 30ರಷ್ಟು ಮಳೆ ಕೊರತೆಯಾಗಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 637.4 ಮಿಮಿ ಇದ್ದು ವಾಸ್ತವವಾಗಿ 337.34ರಷ್ಟು ಮಳೆ ಸುರಿದು ಶೇ.47ರಷ್ಟು ಮಳೆ ಕೊರತೆಯಾಗಿದೆ. ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 697.3 ಮಿಮಿ ಇದ್ದು ವಾಸ್ತವವಾಗಿ 454.7ರಷ್ಟು ಮಳೆ ಸುರಿದು ಶೇ.34ರಷ್ಟು ಮಳೆ ಕೊರತೆಯಾಗಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 520.6 ಮಿಮಿ ಇದ್ದು ವಾಸ್ತವವಾಗಿ 353.2 ಮಿಮಿ ಮಳೆ ಸುರಿದು ಶೇ.37ರಷ್ಟು ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ಉಪ ನಿರ್ದೇಶಕರಾದ ಸಹದೇವ ಅವರು ತಿಳಿಸಿದರು.
2023-24ನೇ ಸಾಲಿನಲ್ಲಿ ಒಟ್ಟು 3,08,000 ಹೇಕ್ಟೇರ್ ಬಿತ್ತನೆ ಗುರಿಯ ಪೈಕಿ ಸೆಪ್ಟೆಂಬರ್ 22ರವರೆಗೆ ಒಟ್ಟು 3,13,795 ಹೆಕ್ಟೇರ್ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಜೋಳ ಸಜ್ಜೆ ನವಣೆ ತೊಗರಿ ಹುರುಳಿ ಅಲಸಂದಿ ಶೇಂಗಾ ಸೂರ್ಯಕಾಂತಿ ಎಳ್ಳು ಹತ್ತಿ ಕಬ್ಬು ಹಾಗೂ ಇನ್ನೀತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲಿ 1,69,810 ಹೆಕ್ಟೇರ್ ಪ್ರದೇಶದ ಪೈಕಿ 1,64,691 ಹೆಕ್ಟೇರ್ ಪ್ರದೇಶದಲ್ಲಿ ಡಿಸೆಂಬರ್ 8ರವರೆಗೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.
2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಡಿಸೆಂಬರ್ 8ರವರೆಗೆ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿನಲ್ಲಿ ಜೋಳ, ಗೋದಿ, ಕಡಲೆ, ಶೇಂಗಾ ಸೂರ್ಯಕಾಂತಿ ಸೇರಿ ಒಟ್ಟು 29,181.46 ಕ್ವಿಂಟಲ್ ದಾಸ್ತಾನು ಸ್ವೀಕೃತಿ ಪೈಕಿ 24,770.36 ಕ್ವಿಂಟಲ್‌ನಷ್ಟು ಬೀಜಗಳನ್ನು ವಿತರಣೇ ಮಾಡಿದ್ದು 4,410 ಕ್ವಿಂಟಲ್ ಬೀಜದ ದಾಸ್ತಾನು ಇದೆ. 2023ನೇ ಸಾಲಿನಲ್ಲಿ ಯೂರಿಯಾ ಡಿಎಪಿ ಎಂಓಪಿ ಕಾಂಪ್ಲೆಕ್ಸ್ ಎಸ್‌ಎಸ್‌ಪಿ ಸೇರಿ ಅಕ್ಟೋಬರ್ 2023ರಿಂದ ಮಾರ್ಚ 2024ರವರೆಗೆ 74,763 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಬೇಡಿಕೆ ಇದ್ದು ಈ ಪೈಕಿ ಜಿಲ್ಲೆಯಲ್ಲಿ ಡಿಸೆಂಬರ್ 8ರವೆರೆಗೆ 55,231 ಮೆ.ಟನ್ ರಸಗೊಬ್ಬರದ ದಾಸ್ತಾನು ಇದೆ. 15,400 ಮೆ.ಟನ್ ರಸಗೊಬ್ಬರ ಮಾರಾಟವಾಗಿದೆ. 39,831 ಮೆ.ಟನ್ ಉಳಿಕೆ ದಾಸ್ತಾನು ಮಾಹಿತಿ ಇದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೇ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಮಾಧ್ಯಮ ಹೇಳಿಕೆ ಬೆಂಗಳೂರು, ಮೇ 6: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.