Breaking News

ಅಂಚೆ ಕಚೇರಿ ರಫ್ತು ಕೇಂದ್ರಕ್ಕೆ ಕೊಪ್ಪಳ ಜಿಲ್ಲೆ ಆಯ್ಕೆ ಸಂತಸದ ಸಂಗತಿ: ಸಂಸದರಾದ ಕರಡಿ ಸಂಗಣ್ಣ

Koppal district has been selected as a post office export hub: Kardi Sanganna, MP

ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಅಂಚೆ ಕಚೇರಿ ರಫ್ತು ಕೇಂದ್ರದ (ಡಾಕ್ ಘರ್ ನಿರ್ಯಾತ ಕೇಂದ್ರ) ಪ್ರಾರಂಭೋತ್ಸವ ಕಾರ್ಯಕ್ರಮ ಆಗಸ್ಟ್ 21ರಂದು ನಗರದ ಕೊಪ್ಪಳ ಜಿಲ್ಲೆಯ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಡೆಯಿತು.
ಲೋಕಸಭಾ ಸಂಸದರಾದ ಕರಡಿ ಸಂಗಣ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ರಾಷ್ಟ್ರದಲ್ಲಿ 1001 ಅಂಚೆ ಕಚೇರಿ ರಫ್ತು ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದಾರೆ. ಇದರ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ 73 ಡಾಕ್ ಘರ್ ನಿರ್ಯಾತ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ಯೋಜನೆಯಡಿ ನಮ್ಮ ಲೋಕಸಭಾ ಕ್ಷೇತ್ರ ಕೊಪ್ಪಳ ಮತ್ತು ಸಿಂಧನೂರು ಒಳಗೊಂಡಿರುವುದು ಸಂತಸದ‌ ಸಂಗತಿ ಎಂದರು.
ಅಂಚೆ ಕಚೇರಿ ರಫ್ತು ಕೇಂದ್ರದಿಂದ ಸಣ್ಣ ಹಿಡುವಳಿದಾರರಿಗೆ, ರೇಷ್ಮೆ ಕೃಷಿ, ಸಿರಿಧಾನ್ಯಗಳ ರಫ್ತಿಗೆ ಸೇರಿದಂತೆ ಎಲ್ಲಾ ರೈತರಿಗೂ ಅನುಕೂಲವಾಗಲಿದೆ. ಇದರಿಂದಾಗಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ರೈತರು ಸಹ ದೇಶದ ಆರ್ಥಿಕತೆಯನ್ನು ಹೆಚ್ಚಿಸಬಲ್ಲರು ಎಂಬ ಪರಿಕಲ್ಪನೆ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಈ ರಫ್ತು ಕೇಂದ್ರಗಳಿಂದ ಆಗಲಿದೆ ಎಂದರು.
ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಬೇಳೆಯುತ್ತಿರುವ ಜಿಲ್ಲೆ ಕೊಪ್ಪಳ ಆಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಚೆ ಕಚೇರಿ ರಫ್ತು ಕೇಂದ್ರಗಳ ಮಾಹಿತಿಯನ್ನು ಎಲ್ಲಾ ರೈತರಿಗೆ, ಬೆಳೆಗಾರರಿಗೆ ಸಿಗುವಂತಾಗಬೇಕು. ಎರಡು ಮೂರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ದಾಳಂಬರಿಯನ್ನು ಯುರೋಪ ದೇಶಕ್ಕೆ ರಫ್ತು ಮಾಡಿದ ಕೀರ್ತಿ ನಮ್ಮ ಕೊಪ್ಪಳ ಹಾಗೂ ಕುಷ್ಟಗಿಯದ್ದಾಗಿದೆ. ಅದೇ ರೀತಿ ಕೊಪ್ಪಳ ಕೇಸರ ಮಾವಿಗು ಸಹ ಎಲ್ಲಿಲ್ಲದ ಬೇಡಿಕೆಯಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಸ್ಯಸಂತೆಯಲ್ಲಿ ಈ ತಳಿಯ ಸುಮಾರು 70 ಸಾವಿರಕ್ಕೂ ಅಧಿಕ ಸಸಿಗಳು ಮಾರಾಟವಾಗಿರುವುದು ವಿಶೇಷ. ನಮ್ಮ ದೇಶದಲ್ಲಿ ಗುಜರಾತ ನಂತರ ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚು ಕೇಸರ ಮಾವು ಬೆಳೆಯಲಾಗುತ್ತಿದೆ. ಗುಜರಾತಿನ ಕೇಸರ ಮಾವು ಜೂನ್ ಮಾಹೆಯಲ್ಲಿ ಬರಲಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಏಪ್ರೀಲ್ ಮಾಹೆಯಿಂದಲೆ ಕೇಸರ ಹಣ್ಣು ಪ್ರಾರಂಭವಾಗಲಿದೆ. ದೇಶದಲ್ಲಿ ಈ ಹಣ್ಣಿಗೆ ಸಾಕಷ್ಟು ಬೇಡಿಕೆ ಇದ್ದು, ಅಂಚೆ ಕಚೇರಿ ರಫ್ತು ಕೇಂದ್ರಗಳ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಕೊಪ್ಪಳ ಕೇಸರ ಮಾವು ಪೂರೈಕೆ ಮಾಡಲು ನಮ್ಮ ರೈತರಿಗೆ ಸುವರ್ಣವಕಾಶವಾಗಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ಸೂಕ್ತ ಮಾಹಿತಿ ನೀಡುವುದರ ಜೊತೆಗೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಪ್ರಗತಿಪರ ರೈತರಾದ ದೇವೇಂದ್ರಪ್ಪ ಬಳೂಟಗಿ ಹಾಗೂ ಯಂಕಣ್ಣ ಯರಾಶಿ ಅವರು ಅಂಚೆ ಕಚೇರಿ ರಫ್ತು ಕೇಂದ್ರದ ಪ್ರಾರಂಭದಿಂದ ರೈತರಿಗೆ ಆಗುವ ಅನುಕೂಲಗಳು, ಸೌಲಭ್ಯಗಳ ಕುರಿತು ಮಾತನಾಡಿದರು.
ಗದಗ ಅಂಚೆ ವಿಭಾಗದ ಅಧೀಕ್ಷಕರಾದ ಎನ್.ಜಿ ಭಂಗೀಗೌಡರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಅಂಚೆ ಇಲಾಖೆಯ ಅಧಿಕಾರಿಗಳಾದ ಭೀಮಚಂದ್, ಜಿ.ಎನ್ ಹಳ್ಳಿ, ಬಸವರಾಜ ಸೇರಿದಂತೆ ರೈತರು, ಹಲವು ಗಣ್ಯರು ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ಮತ್ತಿತರರಿದ್ದರು.

About Mallikarjun

Check Also

ಲೋಕಾಯುಕ್ತರಿಂದ ಗಂಗಾವತಿ, ಕಾರಟಗಿ, ಕನಕಗಿರಿ  ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಗಂಗಾವತಿ 17:ತಾಲೂಕು ಮಂಧನ   ಸಭಾಂಗಣದಲ್ಲಿ  ಗಂಗಾವತಿ: ನಗರದ ತಾಲೂಕ ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತರು ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.