Gudekote: World Rabies Day Awareness Program.
ಗುಡೇಕೋಟೆ:- ರೇಬಿಸ್ ಎಂಬುದು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮರಣಾಂತಿಕ ಕಾಯಿಲೆಯಾಗಿದೆ. ಇದನ್ನು ಗುಣಪಡಿಸಲು ಯಾವುದೇ ರೀತಿಯ ಆರೋಗ್ಯ ಚಿಕಿತ್ಸೆ ಇಲ್ಲದ ಕಾರಣ ನಾಯಿಗಳಿಗೆ ಲಸಿಕೆಯನ್ನು ಕೊಡಿಸುವ ಮೂಲಕ ಸುರಕ್ಷಿತ ಕ್ರಮಗಳನ್ನು ವಹಿಸಬೇಕಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕಣಾಧಿಕಾರಿ ಸೈಯದ್ ವಹಾಬ್ ತಿಳಿಸಿದರು.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಬಿಸ್ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ವಾರ್ಡುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವೈದ್ಯಾಧಿಕಾರಿ ಹೆಚ್.ಎಂ.ಸುಮಂಗಳ ಮಾತನಾಡಿ, ರೇಬಿಸ್ ಕಾಯಿಲೆಯು ನಾಯಿ, ಬೆಕ್ಕು, ನರಿ, ಹಸು, ಕುರಿ, ಕುದುರೆ, ಮುಂಗುಸಿ ಹಾಗೂ ಇತರೆ ಕಾಡು ಪ್ರಾಣಿಗಳ ಕಡಿತದಿಂದ ಹರಡುತ್ತದೆ. ರೇಬಿಸ್ ಕಾಯಿಲೆಯು ಸೋಂಕಿತ ನಾಯಿ ಕಡಿತದಿಂದ ಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ತಮ್ಮ ಸಾಕು ನಾಯಿಗಳಿಗೆ ತಪ್ಪದೇ ರೇಬಿಸ್ ಲಸಿಕೆಯನ್ನು ಹಾಕಿಸಬೇಕು.ನಾಯಿ ಕಡಿದ ತಕ್ಷಣವೇ ಸಾಬೂನಿನಿಂದ ಸ್ವಚ್ಛವಾಗಿ ಹರಿಯುವ ನೀರಿನಿಂದ ತೊಳೆಯಬೇಕು. ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಅರಿಶಿನ ಪುಡಿ, ವೀಳೆದ ಎಲೆ, ಸುಣ್ಣ ಎಣ್ಣೆಯಂತಹ ವಸ್ತುಗಳನ್ನು ಹಚ್ಚಬಾರದು. ಕಡಿದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರ ಸಲಹೆಯಂತೆ 5 ಡೋಸ್ ರೇಬಿಸ್ ಲಸಿಕೆಯನ್ನು ಪಡೆಯಬೇಕು ಎಂದರು. ರೇಬಿಸ್ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ,ನಿರಂಜನಾಮೂರ್ತಿ,ಕಟ್ಟೆಬಸಪ್ಪ, ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.