Global Reading of the Preamble of the Constitution of India: Successful in the district
- ಅಂತಾರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದೇಶ
- ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ
- ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರಿಂದ ಬೋಧನೆ
ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಭಾಗಿ
ಕೊಪ್ಪಳ ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ): ಭಾರತ ಸಂವಿಧಾನದ ಆಶಯವನ್ನು ಮತ್ತು ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನು ಮುಂದಿಡುವ ಭಾರತ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮವು ಕೊಪ್ಪಳ ಜಿಲ್ಲಾದ್ಯಂತ ಸೆಪ್ಟೆಂಬರ್ 15ರಂದು ಯಶಸ್ವಿಯಾಗಿ ನೆರವೇರಿತು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಈ ಕಾರ್ಯಕ್ರಮವು ಪೂರ್ವ ನಿಗದಿಯಂತೆ ಸರಿಯಾಗಿ ಬೆಳಗಿನ ಅವಧಿಯಲ್ಲಿ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ, ಕೊಪ್ಪಳ ತಾಲೂಕುಗಳಲ್ಲಿ ಏಕಕಾಲಕ್ಕೆ ಆರಂಭವಾಗಿ ಅಚ್ಚುಕಟ್ಟಾಗಿ ನೆರವೇರಿತು. ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮದಲ್ಲಿ ನಗರ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿದ್ದರು. ಯುವಜನರು, ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹ ಭಾಗಿಯಾಗಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರಿಂದ ನಡೆದ ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಸದರಾದ ಕರಡಿ ಸಂಗಣ್ಣ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಈ ವೇಳೆ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುತ್ತಿದ್ದಂತೆ, ಏಕಕಾಲಕ್ಕೆ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಸಹ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
“ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ವಿಚಾರ, ಅಭಿವೃದ್ಧಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ‍್ಯ, ಸ್ಥಾನಮಾನ, ಅವಕಾಶಗಳ ಸಮಾನತೆ ದೊರೆಯುವಂತೆ ಮಾಡುವ, ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭಾತೃತ್ವ ಭಾವನೆ ಮೂಡಿಸುವ ದೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 1949ರ ನವೆಂಬರ್ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” ಎನ್ನುವ ಪೀಠಿಕೆಯನ್ನು ಕಾರ್ಯಕ್ರಮದಲ್ಲಿದ್ದ ಗಣ್ಯರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವಾಚನ ಮಾಡಿದರು.
ಭಾರತ ಸಂವಿಧಾನದ ಪಿತಾಮಹಗೆ ಗೌರವ: ಭಾರತದ ಸಂವಿಧಾನದ ಪಿತಾಮಹ, ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಸಮಾರಂಭದಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿ ನಮಿಸಿದರು.
ಗಣ್ಯರು ಭಾಗಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಕುರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದರು. ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಇನ್ನೀತರ ಜನಪ್ರತಿನಿಧಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇದಾರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಎಸ್.ಬಿರಾದಾರ, ತಹಸೀಲ್ದಾರ ವಿಠ್ಠಲ್ ಚೌಗಲಾ, ಕೊಪ್ಪಳ ತಾಲೂಕು ಸಿಡಿಪಿಓ ಜಯಶ್ರೀ ರಾಜಪುರೋಹಿತ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ನಗರ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ ಹಳ್ಳೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವಿಠ್ಠಲ್ ಜಾಬಗೌಡರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜ ಸೇರಿದಂತೆ ಶಾಲಾ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.
ಶಾಲಾ ಶಿಕ್ಷಣ ಇಲಾಖೆಯಿಂದ ಸಹಕಾರ: ಕೊಪ್ಪಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎಸ್ ಎಸ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ ವಿವಿಧ ಶಾಲಾ ಕಾಲೇಜುಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೊಪ್ಪಳದ ಬಾಲಕಿಯರ ಸ.ಪ.ಪೂ.ಕಾಲೇಜು, ಎಸ್.ಎಫ್.ಎಸ್ ಪ್ರೌಢಶಾಲೆ, ಸ.ಮಾ.ಹಿ.ಪ್ರಾ.ಶಾಲೆ ಕೊಪ್ಪಳ ಸರಕಾರಿ ಪ್ರೌಢಶಾಲೆ ಬನ್ನಿಕಟ್ಟಿ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ನಿವೇದಿತಾ ಪ್ರೌಢಶಾಲೆ, ಬಾಲಕರ ಸ.ಪ.ಪೂ.ಕಾಲೇಜು, ಸ.ಹಿ.ಪ್ರಾ.ಶಾಲೆ ಗಾಂಧೀಸ್ಕಾರಕ ಕೊಪ್ಪಳ, ಭಾಗ್ಯನಗರದ ಜ್ಞಾನಬಂಧು ಪ್ರೌಢಶಾಲೆ ಹಾಗೂ ನ್ಯಾಷನಲ್ ಪ್ರೌಢಶಾಲೆ ಮತ್ತು ವಿವಿಧ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕುಷ್ಟಗಿ ತಾಲೂಕು ವರದಿ: ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕುಷ್ಟಗಿಯ ತಾಲೂಕು ಕ್ರೀಡಾಂಗಣದಲ್ಲಿ ಸಹ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವು ತಹಸೀಲ್ದಾರರಾದ ಶ್ರುತಿ ಅವರ ನೇತೃತ್ವದಲ್ಲಿ ನಡೆಯಿತು. ವಿವಿಧ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಲಾಗಿ ನಿಂತು ಪೋಟೊ ತೆಗೆಯಿಸಿಕೊಂಡರು.
ಕನಕಗಿರಿ ತಾಲೂಕು ವರದಿ: ಕನಕಗಿರಿ ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಲಾ ಮಕ್ಕಳೊಂದಿಗೆ ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಿದರು. ಮುಖ್ಯಾಧ್ಯಾಪಕ ಪ್ರಭು ವಸ್ತ್ರದ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ತಹಸೀಲ್ದಾರ ವಿಶ್ವನಾಥ ಮುರಡಿ, ತಾಪಂ ಸಿಓ ಚಂದ್ರಶೇಖರ ಕಂದಕೂರ, ಸಿಡಿಪಿಓ ವಿರುಪಾಕ್ಷಿ, ಮುಖ್ಯ ಶಿಕ್ಷಕರಾದ ಜಗದೀಶ ಹಾದಿಮನಿ, ಸಮಾಜ ಕಲ್ಯಾಣ ಇಲಾಖೆಯ ನೌಕರರು ಇದ್ದರು.
ಗಂಗಾವತಿ ತಾಲೂಕು ವರದಿ: ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಶಾಸಕರಾದ ಜನಾರ್ಧನ ರೆಡ್ಡಿ ಅವರು ಭಾಗಿಯಾದರು. ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿ ಸಂವಿಧಾನದ ಪೀಠಿಕೆಯನ್ನು ಓದಿದರು. ಗಂಗಾವತಿ ತಹಸೀಲ್ದಾರ ಮಂಜುನಾಥ ಭೋಗಾವತಿ ಹಾಗೂ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ ಗೈಡ್ಸ್: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕೊಪ್ಪಳ ಮತ್ತು ಜಿಲ್ಲಾ ತರಬೇತಿ ಕೇಂದ್ರ ಕೊಪ್ಪಳ ಇವರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು. ಭಾರತದ ಸಂವಿಧಾನದ ಪೂರ್ವ ಪೀಠಿಕೆಯನ್ನು ಸ್ಕೌಟ್‌ನ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ ಮಾಸಗಟ್ಟಿ ಅವರು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳ ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ 120 ಜನ ವಿದ್ಯಾರ್ಥಿಗಳು ಹಾಗೂ ಸ್ಕೌಟರ್-ಗೈಡರ್ ಹಾಗೂ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥ ಕೊಪ್ಪಳ ಪದಾಧಿಕಾರಿಗಳು, ಮಾರುತಿ ಆರೇರ ಜಿಲ್ಲಾ ಕಾರ್ಯದರ್ಶಿಗಳು, ಎಸ್ ಹೆಚ್ ಹತ್ತಿಮತ್ತೂರ, ಶಶಿಧರ್, ಬಸಮ್ಮ ಗುಜ್ಜಲ್, ಪ್ರಭಾಕರ ದಾಸರ ಭಾಗವಹಿಸಿದ್ದರು.