Inter-departmental district level coordination committee meeting

ಕೊಪ್ಪಳ ಅಕ್ಟೋಬರ್ 10 (ಕರ್ನಾಟಕ ವಾರ್ತೆ): ಮಹತ್ವದ ಅಂತರ್ ಇಲಾಖೆಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 10ರಂದು ನಡೆಯಿತು.
ಜಮೀನು ನಿವೇಶನ ಮಂಜೂರಿ, ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಜಮೀನು ನಿವೇಶನದ ಅವಶ್ಯಕತೆ ಮತ್ತು ಮುಜುರಾಯಿ ಇಲಾಖೆ ಹಾಗೂ ವಕ್ಫ ಮಂಡಳಿಗಳ ಆಸ್ತಿ ವಿವರ ಕಾಲೋಚಿತಗೊಳಿಸುವುದು ಹಾಗು ಅತೀಕ್ರಮಣ ಆಸ್ತಿ ತೆರವುಗೊಳಿಸುವುದು ಸೇರಿದಂತೆ ನಾನಾ ವಿಷಯಗಳ ಮೇಲೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.
ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಅಳವಂಡಿ, ಇರಕಲ್ಗಗಡ ಹಾಗೂ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ಜಮೀನು ಅವಶ್ಯಕತೆಯಿದೆ ಎಂದು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳು ತಿಳಿಸಿದರು. ಕುಷ್ಟಗಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲು ಜಾಗ ಅವಶ್ಯಕತೆಯಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಮೀನು ಎಲ್ಲಿ ಅವಶ್ಯಕತೆ ಇದೆಯೋ ಆ ಬಗ್ಗೆ ವಿವರದೊಂದಿಗೆ ಪ್ರಸ್ತಾವನೆಗೆ ಸಲ್ಲಿಸಬೇಕು. ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಬೇಕಾದ ಜಮೀನು ಗುರುತಿಸಿ ಸಲ್ಲಿಸಬೇಕು. ಕುಷ್ಟಗಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಮೀನು ಗುರುತಿಸಿ ವರದಿ ತಯಾರಿಸಲು ಆಯಾ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ನೋಂದಣಿಯಾಗದ ಶಾಲೆಗಳ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಜಮೀನು ದಾನ ನೀಡಿರುವಂತಹ ಶಾಲೆಗಳ ನೋಂದಣಿಗೆ ಸಂಬಂಧಿಸಿದಂತೆ ಇರುವ ತಕರಾರುಗಳು, ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆಯಾ ಶಾಲೆಗಳಿಗೆ ಜಮೀನು ದಾನ ನೀಡಿದವರ ಹೆಸರಿಡಲು ಅವಕಾಶವಿದ್ದು, ಈ ಬಗ್ಗೆ ಸಂಬಂಧಿಸಿದ ಜಮೀನು ದಾನಿಗಳು ಹಾಗೂ ಅವರ ಕುಟುಂಬದವರೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಹೋಬಳಿ ಮಟ್ಟಡ ಕ್ರೀಡಾ ಚಟುವಟಿಕೆಗಳಿಗೆ ಜಮೀನು ಗುರುತಿಸುವುದಕ್ಕೆ ಮತ್ತು ನೂತನ ತಾಲೂಕುಗಳಲ್ಲಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಮೀನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ, ಆಯಾ ತಾಲೂಕುಗಳ ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.