Lingayatism is not just an ideological religion. It is a ritualistic religion
ಲಿಂಗಾಯತ ಧರ್ಮ ಕೇವಲ ವಿಚಾರ ಪ್ರಧಾನವಾದ ಧರ್ಮವಲ್ಲ. ಇದು ಆಚಾರ ಪ್ರಧಾನವಾದ ಧರ್ಮ
ಗುರುಚೆನ್ನಬಸವಣ್ಣನವರ ಜಯಂತಿಯ ಶುಭಾಶಯ ಗಳು
ಅರುಹಿನ ಮರಹು ಅಹಂಕಾರದ ಕುರುಹು
ವಚನ:
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ
ಗುರುದ್ರೋಹಿಯನೇನೆಂಬೆ ಲಿಂಗದ್ರೋಹಿಯನೇನೆಂಬೆ?
ಕೂಡಲ ಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ
ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.
ಗುರು ಚೆನ್ನಬಸವಣ್ಣನವರು ಈ ವಚನದಲ್ಲಿ ಅತ್ಯಂತ ಮಹತ್ವಪೂರ್ಣವಾದ ವಿಚಾರವನ್ನು ಹೇಳುತ್ತಿದ್ದಾರೆ. ವ್ಯಕ್ತಿ ತಿಳಿದುಕೊಂಡ ಜ್ಞಾನ ಅಥವಾ ಅರಿತಿರುವ ಜ್ಞಾನ ಅದು ಅರಿವಾಗಿ ಪರಿವರ್ತನೆ ಹೊಂದಬೇಕು. ಅರಿವು ಆಚಾರವಾಗಬೇಕು ಆಗ ಮಾತ್ರ ಅನುಭಾವ ಹೊರಹೊಮ್ಮುತ್ತದೆ. ಅರಿವು ಆಚಾರವಾಗದೆ ಚರಿಸುವ ವ್ಯಕ್ತಿಯ ಮಾತು ಅದು ಕೇವಲ ಮಾತಿನ ಮಥನವಾಗುತ್ತದೆಯೇ ಹೊರತು ಅನುಭಾವವಾಗುವುದಿಲ್ಲ. ಲಿಂಗಾಯತ ಧರ್ಮ ಕೇವಲ ವಿಚಾರ ಪ್ರಧಾನವಾದ ಧರ್ಮವಲ್ಲ. ಇದು ಆಚಾರ ಪ್ರಧಾನವಾದ ಧರ್ಮ. ವಿಚಾರವೆಂಬ ಹೂವು ಆಚಾರವೆಂಬ ಕಾಯಿಯಾದಾಗ ಮಾತ್ರ ಅದು ನಿಷ್ಪತ್ತಿಯ ಹಣ್ಣಾಗಿ ಮತ್ತೆ ತನ್ನ ಬೀಜಗಳನ್ನು ಬಿಟ್ಟು ಮೊಳೆತು ಸಸಿಯಾಗಿ ಮರವಾಗಿ ಮತ್ತೆ ಮತ್ತೆ ವಿಚಾರವೆಂಬ ಹೂವುಗಳಾಗುತ್ತವೆ. ಯಾವ ಧರ್ಮದ ವಿಚಾರಗಳು ಕೇವಲ ವಿಚಾರವೆಂಬ ಹೂವಾಗಿ, ಆಚಾರವೆಂಬ ಕಾಯಾಗದೇ ಹಾಗೆಯೇ ಉದುರಿ ಹೋಗುತ್ತವೆಯೋ ಆ ಧರ್ಮ ಮುಂದುವರೆಯಲಾರದು. ಲಿಂಗಾಯತ ಧರ್ಮದಲ್ಲಿ ವಿಚಾರವೆಂಬ ಹೂವುಗಳನ್ನು ಆಚಾರವೆಂಬ ಕಾಯಿಯನ್ನಾಗಿ ಮಾಡಲು ಶರಣರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಸತ್ಯವನ್ನು ಪ್ರತಿಪಾದನೆ ಮತ್ತು ಆಚರಣೆ ಮಾಡುವುದು ಹೇಡಿಗಳಿಂದ, ಸಮಯ ಸಾಧಕರಿಂದ, ಅಧಿಕಾರಕ್ಕೆ, ಪೀಠಕ್ಕೆ, ಕಿರೀಟಕ್ಕೆ ಅಂಟಿಕೊಂಡಿರುವವರಿಂದ ಸಾಧ್ಯವಿಲ್ಲ. ಸತ್ಯದ ಅನುಸರಣೆಗೆ ಗಟ್ಟಿ ಗುಂಡಿಗೆ ಬೇಕಾಗುತ್ತದೆ.
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ ಗುರುದ್ರೋಹಿಯನೇನೆಂಬೆ? ಲಿಂಗದ್ರೋಹಿಯನೇನೆಂಬೆ? ಇದರ ಅರ್ಥವೇನೆಂದರೆ, ಅರಿದ ಅರಿವನ್ನು ಮರೆತು ಚರಿಸುವವ ವ್ಯವಹರಿವುವವ, ಅನುಭಾವ ನೀಡುವವ ಅವನೊಬ್ಬ ಗುರುದ್ರೋಹಿ, ಲಿಂಗದ್ರೋಹಿ ಎಂದು ಗುರು ಚೆನ್ನಬಸವಣ್ಣನವರು ಮೇಲಿನ ವಚನಗಳ ಸಾಲಿನಲ್ಲಿ ಹೇಳುತ್ತಿದ್ದಾರೆ.
ಈ ವಿಚಾರವನ್ನು ಕೆಲವು ಉದಾಹರಣೆಗಳೊಂದಿಗೆ ಹೇಳುವುದಾದರೆ, ದೇವರು ಒಬ್ಬನೇ, ಎಂದು ತಿಳಿದುಕೊಂಡಿರುವುದು ಅರಿವು ಎಂದಾದರೆ ಅದನ್ನು ಮರೆತು ಹಲವು ದೈವಂಗಳಿಗೆರಗುವುದು ಅದು ಅರಿವಿನ ಮರಹು. ಕಳವು ಮಾಡಬಾರದು, ಕೊಲ್ಲಬಾರದು, ಹುಸಿಯ ನುಡಿಯಬಾರದು, ಮುನಿಯಬಾರದು, ಅನ್ಯರಿಗೆ ಅಸಹ್ಯ ಪಡಬಾರದು, ತನ್ನ ಬಣ್ಣಿಸಬಾರದು, ಇತರರ ಹಳಿಯಬಾರದು ಎಂದು ಗುರು ಬಸವಣ್ಣನವರ ವಚನವನ್ನು ಓದಿ ತಿಳಿದುಕೊಳ್ಳುವುದು ಅರಿವು. ಇವುಗಳನ್ನು ಮರೆತು ಕಳವು ಮಾಡವುದು, ಕೊಲ್ಲುವುದು, ಹುಸಿಯ ನುಡಿಯುವುದು, ಮುನಿಯುವುದು, ಅನ್ಯರಿಗೆ ಅಸಹ್ಯಪಡುವುದು, ತನ್ನ ಬಣ್ಣಿಸುವುದು ಇತರರನ್ನು ಹಳಿಯುವುದನ್ನು ಮಾಡಿದರೆ ಇದು ಅರಿವಿನ ಮರಹು.
ಇಂದಿನ ಜ್ವಲಂತ ಉದಾಹರಣೆಯೊಂದಿಗೆ ಮೇಲಿನ ವಚನ ಅರ್ಥ ನೋಡುವುದಾದರೆ, ಪೂಜ್ಯ ಶ್ರೀ ಮಾತೆ ಮಹಾದೇವಿಯವರನ್ನು ಬಸವ ಧರ್ಮದ ಪುನರುತ್ಥಾರಕರು ಎಂದು ನಂಬುವುದ ಅರಿವು. ಅವರು ಮಾಡಿದ ಸಂಶೋಧನೆಗಳನ್ನು ಒಪ್ಪದೇ ಇರುವುದು ಅರಿವಿನ ಮರಹು. ಅವರು ಲಿಂಗದೇವ ವಚನಾಂಕಿತ ಮಾಡಿ ತಪ್ಪು ಮಾಡಿದ್ದಾರೆ ಎನ್ನುವುದು ಅದು ಕೇವಲ ಮರಹು ಅಲ್ಲ ಅದು ಅಂಹಂಕಾರದ ಕುರುಹು. ಇಂಥವರು ಗುರುದ್ರೋಹಿಗಳು ಲಿಂಗದ್ರೋಹಿಗಳು ಎನ್ನುವುದನ್ನು ಗುರು ಚೆನ್ನಬಸವಣ್ಣನವರು ಮೇಲಿನ ವಚನದಲ್ಲಿ ಅಂದೇ ಹೇಳಿದ್ದಾರೆ.
ಕೂಡಲ ಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು. ಎಂದರೆ ಈ ರೀತಿಯಾದ ಅರಿತ ಅರಿವನ್ನು ಬೋದಿಸಿದ ಬೋಧನೆಯನ್ನು ಮಾಡಿದ ಪ್ರವಚವನ್ನು ಮರೆತು ಮರಹಿನ ಭಕ್ತಿ ಮಾಡುವವರ ಬಾಯಿಯಲ್ಲಿ (ಕೂಡಲಚೆನ್ನಸಂಗಯ್ಯನು) ಲಿಂಗದೇವನು ಮಣ್ಣನ್ನು ಸುರಿಯುತ್ತಾನೆ ಎಂದು ಮೇಲಿನ ವಚನದಲ್ಲಿ ಗುರು ಚೆನ್ನಬಸವಣ್ಣನವರು ಹೇಳಿದ್ದಾರೆ
ವಚನ:
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ ಪಂಚ ಮಹಾ ಪಾತಕವೆಂದುದು ವಚನ.
ಇದು ಕಾರಣ ಕೂಡಲಚೆನ್ನಸಂಗಯ್ಯ ನಿಮ್ಮ ಶರಣರಿಗೆ ಸಂತಾನ ಅಭಿವೃದ್ಧಿಯಾಗದಿರಲಿ
ಈ ವಚನ ಅತ್ಯಂತ ಮಹತ್ವ ಪೂರ್ಣವಾದುದು. ಲಿಂಗಾಯತ ಧರ್ಮ ಗ್ರಂಥಕ್ಕೆ ಬೇಕಾದ ವಚನ ಇದು. ಲಿಂಗಾಯತ ಧರ್ಮ ಕಟ್ಟಲು ಬೇಕಾದ ವಚನವಿದು. ಲಿಂಗಾಯತ ಧರ್ಮದ ಸಂಘಟನೆ ಮಾಡಲು ಬೇಕಾದ ವಚನವಿದು. ಗುರು ಚೆನ್ನಬಸವಣ್ಣನವರು ನೊಂದು ನುಡಿದಿರುವ ವಚನವಿದು. ಲಿಂಗಾಯತ ಧರ್ಮವನ್ನು ತಪ್ಪಾದ ರೀತಿಯಲ್ಲಿ ಆಚರಿಸುವವರನ್ನು ನೋಡಿ ಬರೆದಿರುವ ವಚನವಿದು.
ಈ ವಚನವನ್ನು ಎರಡು ಹಂತದಲ್ಲಿ ಅರ್ಥೈಸಬಹುದು. ಮೊದಲನೆಯದಾಗಿ ಶರಣರ ಒಡಲಲ್ಲಿ, ಶರಣ ಪರಂಪರೆಯ ಮನೆತನದಲ್ಲು ಹುಟ್ಟುವುದೆಂದರೆ ಅದು ಜನ್ಮಜನ್ಮಾಂತರಗಳ ಪುಣ್ಯ. ಲಿಂಗಾಯತರಾಗಿರುವ ಸದ್ಭಕರ ಮಕ್ಕಳು ಲಿಂಗಾಯತ ಧರ್ಮದ ಮಾರ್ಗದಲ್ಲಿಯೇ ನಡೆಯಬೇಕು.
ಗುರು ಬಸವಣ್ಣನವರು ಕೊಟ್ಟ ನಡೆಯನ್ನು ಹಿಡಿದು,ಬಿಡದೆ ನಡೆವೆನು ಲಿಂಗ ಜಂಗಮ ಸಾಕ್ಷಿಯಾಗಿ ಎಂದು ಆ ಮಾರ್ಗದಲ್ಲಿ ನಡೆಯಬೇಕು. ಇಲ್ಲದಿದ್ದರೆ ಅದು ಪಂಚಮಹಾ ಪಾತಕ. ಅದಕ್ಕಾಗಿ ಶರಣರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಸಂಪತ್ತು ಕೊಡದಿದ್ದರೂ ಪರವಾಗಿಲ್ಲ ಆದರೆ ಸಂಸ್ಕಾರ ಕೊಡಬೇಕು. ಸಂಸ್ಕಾರ ಒಂದಿದ್ದರೆ ಮುಂದೆ ಮಕ್ಕಳು ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಸಂಸ್ಕಾರ ಕೊಡದೆ ಕೇವಲ ಸಂಪತ್ತು ಕೊಟ್ಟರೇ ಕೆಲವೇ ವರ್ಷಗಳಲ್ಲಿ ಸಂಪತ್ತೂ ಇರಲ್ಲ ಸಂಸ್ಕಾರವಂತೂ ಮೊದಲೇ ಇರಲ್ಲ. ಇಂತಹ ಮಕ್ಕಳು ಸಮಾಜ ಘಾತಕರಾಗುತ್ತಾರೆ.ಗೂಂಡಾಗಳು ರೌಡಿಗಳು ಆಗಿ ತನಗೂ ತನ್ನ ಕುಟುಂಬಕ್ಕೂ ಕೆಟ್ಟ ಹೆಸರು ತರುತ್ತಾರೆ. ಅದಕ್ಕಾಗಿ ತಂದೆ ತಾಯಿಯರ ಮಕ್ಕಳಿಗೆ ಲಿಂಗಾಯತ ಧರ್ಮ ಸಂಸ್ಕಾರ ನೀಡುವುದು ಆದ್ಯ ಕರ್ತವ್ಯ. ಗುರು ಬಸವಣ್ಣನವರು ಕೊಟ್ಟ ನಡೆಯನ್ನು ಹಿಡಿದು,ಬಿಡದೆ ನಡೆದ ಬಸವ ಧರ್ಮೀಯರ ಮನೆಯಲ್ಲಿ ಆ ನಡೆಯನ್ನು ಮುಂದಿನ ಪೀಳಿಗೆ ನಡೆಯದಿದ್ದರೆ ಅದು ಪಂಚ ಮಹಾಪಾತಕ.
ಇದು ಕಾರಣ ಕೂಡಲಚೆನ್ನಸಂಗಯ್ಯ ನಿಮ್ಮ ಶರಣರಿಗೆ ಸಂತಾನ ಅಭಿವೃದ್ಧಿಯಾಗದಿರಲಿ
ವಚನದ ಮೇಲಿನ ಸಾಲನ್ನು ಗುರು ಚೆನ್ನಬಸವಣ್ಣನವರು ಬಹಾಳ ನೊಂದು ನುಡಿಯುತ್ತಿದ್ದಾರೆ. ನಿನ್ನ ವಂಶ ನಿರ್ವಂಶವಾಗಲಿ, ನಿನ್ನ ದೀಪ ಆರಿಹೋಗಲಿ, ನಿನ್ನ ಹೆಣಕ್ಕೆ ಮಣ್ಣುಹಾಕುವವರು ದಿಕ್ಕಿಲ್ಲಂದಂತೆ ಆಗಲಿ ಎಂದು ಇಂತಹ ಮಾತುಗಳನ್ನು ಸಾಮನ್ಯವಾಗಿ ಮನಸ್ಸಿಗೆ ತುಂಬಾ ನೋವಾದಾಗ ನುಡಿಯುತ್ತಾರೆ. ಶರಣರ ಮನೆಯಲ್ಲಿ ಹುಟ್ಟಿದ ಮಕ್ಕಳು ಸಂಸ್ಕಾರವಂತರಾಗದೆ, ಭವಿಗಳಾದರೆ, ದುಷ್ಟರಾದರೆ, ಗುಂಡಾಗಳಾದರೆ, ಇಂತಹ ಮಕ್ಕಳು ಹುಟ್ಟುವುದಕ್ಕಿಂತ ಆ ತಂದೆ ತಾಯಿಗಳಗಿ ಮಕ್ಕಳು ಹುಟ್ಟದೇ ಇರುವುದೇ ಎಷ್ಟೋ ವಾಸಿ ಎನ್ನುತ್ತಾರೆ ಗುರು ಚೆನ್ನಬಸವಣ್ಣನವರು. ಅನೇಕ ಬಾರಿ ತಮ್ಮ ಮಕ್ಕಳು ದುರ್ಮಾರ್ಗಕ್ಕಿಳಿದಾಗ, ಕೆಟ್ಟವರಾದಾಗ,
“ನಿನ್ನಂತಹ ಮಕ್ಕಳು ಹುಟ್ಟುವುದಕ್ಕಿಂತ ನಾನು ಬಂಜೆಯಾಗಿದ್ದರೆ ಎಷ್ಟೋ ಒಳ್ಳೆಯದಿರುತ್ತಿತ್ತು” ಎಂದು ನೋವಿನ ಮಾತುಗಳನ್ನು ಹೊರ ಹಾಕುವುದನ್ನು ಕಂಡಿದ್ದೇವೆ.
ಹೀಗೆ ಗುರು ಚೆನ್ನಬಸವಣ್ಣನವರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಕರ್ತವ್ಯವನ್ನು ತಂದೆ-ತಾಯಿಯಂದಿರಿಗೆ ಬೋಧಿಸಿದರೆ, ತಂದೆ ತಾಯಿಯ ಉಪದೇಶದಿಂದ ಧರ್ಮ ಮಾರ್ಗದಲ್ಲಿ ನಡೆಯುವ ಜವಾಬ್ದಾರಿಯನ್ನು ಸದ್ಭಕ್ತರ ಉದರದಲ್ಲಿ ಜನಿಸಿದ ಮಕ್ಕಳಿಗೆ ನೀಡುತ್ತಿದ್ದಾರೆ.
ಗುರು ಶಿಷ್ಯರ ಸಂಬಂಧವೂ ಇದೇ ರೀತಿ ಇರುತ್ತದೆ. ಗುರು ಬೋಧಿಸಿದ ಮಾರ್ಗದಲ್ಲಿ ಮುಂದಿನ ಶಿಷ್ಯಂದಿರು ನಡೆಯಬೇಕು. ಅದನ್ನು ಬಿಟ್ಟು ಗುರು ಬೋಧಿಸಿದ ಮಾರ್ಗವೇ ತಪ್ಪು ನಾನು ಆ ಮಾರ್ಗದಲ್ಲಿ ನಡೆಯುವುದಿಲ್ಲ ಎನ್ನುವ ಶಿಷ್ಯರು ಅವರು ಪಂಚ ಮಹಾ ಪಾತಕಿಗಳು.
ಈ ವಚನವನ್ನು ಎರಡನೇ ಹಂತದಲ್ಲಿ ಅರ್ಥೈಸುವುದಾದರೆ, ಅನೇಕ ಜನ ಶರಣ ಶರಣೆಯರು ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರ ಮತ್ತು ಪೂಜ್ಯ ಶ್ರೀ ಮಾತೆಮಹಾದೇವಿಯವರ ಪ್ರವಚನಗಳನ್ನು ಕೇಳಿ ಸದ್ಭಕ್ತರಾಗಿದ್ದಾರೆ. ಪ್ರವಚನಗಳನ್ನು ಮಾಡಿದ್ದಲೆಲ್ಲ ಪೂಜ್ಯರು ರಾಷ್ಟ್ರೀಯ ಬಸವದಳಗಳನ್ನು ಮಾಡಿ ಅವುಗಳಿಗೆ ಇಂತಹ ಸದ್ಭಕ್ತರನ್ನು ರಾ.ಬ.ದಳಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳನ್ನಾಗಿ ನೇಮಿಸುತ್ತಿದ್ದರು.
ಈಗ ಹಿರಿಯ ತಲೆಮಾರಿನ ಅನೇಕ ಪದಾಧಿಕಾರಿಗಳು ಲಿಂಗೈಕ್ಯರಾಗಿದ್ದಾರೆ.ಮುಂದೆ ಮತ್ತೆ ರಾ.ಬ.ದಳದ ಅಧ್ಯಕ್ಷರು ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಇವರ ತಂದೆ ಅಧ್ಯಕ್ಷರಾಗಿದ್ದರು/ತಾಯಿ ಅಧ್ಯಕ್ಷರಾಗಿದ್ದರು ಎಂದ ಮಾತ್ರಕ್ಕೆ ಅವರ ಮಕ್ಕಳು ಭವಿಗಳಾಗಿದ್ದರೂ, ದುಷ್ಟರಾಗಿದ್ದರೂ, ಅವರ ಅಂಗದ ಮೇಲೆ ಲಿಂಗವಿಲ್ಲದಿದ್ದರೂ, ಅವರನ್ನೇ ರಾ.ಬ.ದಳಗಳ ಅಧ್ಯಕ್ಷರನ್ನಾಗಿ ಅಥವಾ ಇತರ ಪದಾಧಿಕಾರಿಗಳಾಗಿ ಆಯ್ಕೆ ಮಾಡಬಾರದು.
ಈ ರೀತಿ ಕೆಲವೊಂದು ರಾ.ಬ.ದಳಗಳಲ್ಲಿ ಆಗಿದೆ ಇದಾಗಬಾರದು. ತಂದೆ ತಾಯಿ ಭಕ್ತಿವಂತರಿದ್ದು ಸಂಸ್ಕಾರವಂತರಿದ್ದು ಅವರ ಮಕ್ಕಳೂ ಭಕ್ತಿವಂತರೂ, ಸಂಸ್ಕಾರವಂತರೂ\, ಲಿಂಗವಂತರೂ, ಇಷ್ಟಲಿಂಗ ಪೂಜಾ ನಿಷ್ಠರೂ ಆಗಿದ್ದರೆ ಅವರನ್ನು ರಾ.ಬ.ದಳಗಳ ಅಧ್ಯಕ್ಷರನ್ನಾಗಿ ಅಥವಾ ಇತರ ಪದಾಧಿಕಾರಿಗಳಾಗಿ ಆಯ್ಕೆ ಮಾಡಬಹುದು. ಆದರೆ ಕೇವಲ ಅವರ ತಾಯಿ/ತಂದೆ ಅಧ್ಯಕ್ಷರಾಗಿದ್ದರು, ಪದಾಧಿಕಾರಿಗಳಾಗಿದ್ದರು ಎನ್ನುವ ಕಾರಣಕ್ಕೆ ಸಂಸ್ಕಾರಹೀನರಾದ ಅವರ ಮಕ್ಕಳಿಗೆ ಪದವಿಗಳನ್ನು ಕೊಡುವುದು ತಪ್ಪು ಇದು ಲಿಂಗಾಯತ ಧರ್ಮದ ಸಂಘಟನೆಗೆ ಇದರ ಬೆಳೆಯುವಿಕೆಗೆ ಮಾರಕವಾಗುತ್ತದೆ.
ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಅವರಲ್ಲಿರುವ ಸದ್ಭಕ್ತಿ, ಸದ್ಗುಣ, ಇತರರನ್ನು ಇಂಬಿಟ್ಟುಕೊಳ್ಳುವ ಗುಣ, ವಿನಯಭಾವ, ಕಿಂಕರತೆ, ಅವರು ಈ ಸಂಘಟನೆಯಲ್ಲಿ ಸದಸ್ಯರಾಗಿ, ಕಾರ್ಯಕರ್ತರಾಗಿ ದುಡಿದಿರುವ ಅವಧಿ ಇವುಗಳನ್ನು ಪರಿಗಣಿಸಿ ಪದವಿಗಳನ್ನು ನೀಡಬೇಕೆ ವಿನಃ ಅವರಲ್ಲಿರುವ ಹಣ, ಅಂಹಂಕಾರ, ಅವರ ತಂದೆ/ತಾಯಿಯರನ್ನು ನೋಡಿ ಪಟ್ಟಗಟ್ಟಬಾರದು. ಹೀಗೆ ಮಾಡಿದರೆ ”ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ ಉಭಯ ಭ್ರಷ್ಟರ ಮೆಚ್ಚುವನೆ ನಮ್ಮ ಲಿಂಗದೇವಾ” ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಪಟ್ಟಕಟ್ಟಿದವರೂ ಪಟ್ಟ ಕಟ್ಟಿಸಿಕೊಂಡವರು ಇಬ್ಬರೂ ಭ್ರಷ್ಟರು ಎಂದು ಕರೆಯಲ್ಪಡುತ್ತಾರೆ. ಇಂತಹ ಸೂಕ್ಷ್ಮಾತಿ ಸೂಕ್ಷ್ಮ ತತ್ವಗಳನ್ನೂ ಗುರು ಚೆನ್ನಬಸವಣ್ಣನವರು ಹೇಳಿದ್ದಾರೆ.
ಹೀಗೆ ಗುರು ಚೆನ್ನಬಸವಣ್ಣನವರು ಬೋಧಿಸಿದ ಲಿಂಗಾಯತ ಧರ್ಮದ ಸೂಕ್ಷ್ಮ ವಿಚಾರಗಳನ್ನು ತಿಳದುಕೊಂಡು, ಅವುಗಳನ್ನು ಆಚಾರವೆಂಬ ಕಾಯಿಯನ್ನಾಗಿ ಮಾಡಿಕೊಂಡು, ನಿಷ್ಪತ್ತಿಯ ಹಣ್ಣಾಗಿ ಕೂಡಲ ಚೆನ್ನಸಂಗಯ್ಯನ ಶ್ರೀಪಾದಕ್ಕೆ ಸಲ್ಲೋಣ ಎಂದು ಆಶಿಸುತ್ತ ಅವರ ಜನ್ಮದಿನದ ಈ ಶುಭದಿನದಂದು ಅವರು ಬೋಧಿಸಿದ ಬೋಧನೆಗಳನ್ನು ಮನನ ಮಾಡಿಕೊಂಡು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಲಿಂಗ-ಜಂಗಮ ಸಾಕ್ಷಿಯಾಗಿ ನಡೆಯೋಣ, ಪ್ರಸಾದ ಸಾಕ್ಷಿಯಾಗಿ ಧೃಡದಿಂದ ಹಿಡಿದು ಬಿಡದೆ, ಕಡೆಮುಟ್ಟ ಸಲ್ಲಿಸೋಣ, ಅಂತಹ ಶಕ್ತಿ ಸಾಮರ್ಥ್ಯ ಮತ್ತು ನಿಷ್ಠೆಯನ್ನು ಗುರುಬಸವಣ್ಣನವರು ಗುರು ಚೆನ್ನಬಸವಣ್ಣನವರು ಮತ್ತು ಸಕಲ ಚರಾಚರದೊಡೆಯ ಲಿಂಗದೇವರು ನಮಗೆಲ್ಲರಿಗೂ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಗುರು ಚೆನ್ನಬಸವಣ್ಣನವರೇ ನುಡಿಸಿದ ಈ ನಾಲ್ಕು ನುಡಿಗಳನ್ನು ಅವರ ಶ್ರೀಚರಣಕ್ಕೆ ಸಮರ್ಪಿಸುತ್ತೇನೆ.
ಶರಣು ಶರಣಾರ್ಥಿಗಳೊಂದಿಗೆ
–ಸಚ್ಚಿದಾನಂದ ಪ್ರಭು ಚಟ್ನಳ್ಳಿ.