Breaking News

ಹೊರತಳ್ಳುವ ಸಂಸ್ಕ್ರತಿಗೆ ಬದಲಾಗಿ ಒಳಗೊಳ್ಳುವ ಸಂಸ್ಕೃತಿಯನ್ನು ಕೊಟ್ಟ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕ

Basavanna is the cultural leader of this land who gave inclusive culture instead of exclusionary culture

ಇದೆ ತಿಂಗಳಲ್ಲಿ ಮಾನ್ಯ ಘನ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಈ ನೆಲದ ಎಲ್ಲರಿಗೂ ಸಂತೋಷ ತಂದು ಕೊಟ್ಟ ಗಳಿಗೆ ಅದು.

‘ಸಾಂಸ್ಕೃತಿ’ ಎಂಬ ಪದ ಬಹು ವ್ಯಾಪಕವಾದದ್ದು . ಹೊಸ ಹೊಸ ಅನುಭವಗಳನ್ನು , ಹೊಸ ಹೊಸ ಆಯಾಮಗಳನ್ನು ಒಳಗೊಂಡಿದ್ದು. ಸಮಷ್ಠಿ ಜೀವನದ ಅಂತರಂಗ ಮತ್ತು ಬಹಿರಂಗದ ಸಾಧನೆಗಾಗಿ ಸಹಕಾರಿಯಾದ ಸಾಮಾಗ್ರಿಗಳಿಂದ ಹಿಡಿದು ,ವ್ಯಷ್ಠಿ ಜೀವನದ ಸಂಸ್ಕಾರದವರೆಗೂ ಮತ್ತು ಮನುಷ್ಯನ ಸಾಮಾಜಿಕ , ಆರ್ಥಿಕ, ರಾಜಕೀಯ ಆಯಾಮಗಳೊಂದಿಗೆ ಒಂದು ವ್ಯಾಪಕವಾದ ಅರ್ಥ ಕೊಡುವುದು ಸಾಂಸ್ಕೃತಿ ಎಂಬ ಪದ. ಇಂತಹ ವ್ಯಾಪಕವಾದ ಅರ್ಥ ಒಂದು ಮಾದರಿ , ಆದರ್ಶವೆಂದರೆ ಬಸವಣ್ಣ.

ಬಸವಣ್ಣ ಕೇವಲ ಚರಿತ್ರೆಯಲ್ಲ, ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, 900 ವರ್ಷಗಳಿಂದ ಮತ್ತೆ ಮತ್ತೆ ವರ್ತಮಾನವಾಗಿ ಕವಿಗಳಿಂದ ,ಚಿಂತಕರಿಂದ, ವಿಮರ್ಶಕರಿಂದ ,ಪಂಡಿತರಿಂದ , ಜನಪದರಿಂದ , ರಾಜಕಾರಣಿಗಳಿಂದ ಹಿಡಿದು ಮಠಾಧೀಶರವರೆಗೂ ಮತ್ತು ಜನಸಾಮಾನ್ಯನವರಿಗೂ ಮರು ಚಿಂತನೆಗೊಳ್ಳುತ್ತಾ , ವಿಮರ್ಶೆಗೊಳ್ಳುತ್ತಾ , ಆಯಾಕಾಲದ ಅಗತ್ಯಗಳ ಮತ್ತು ಸ್ವಯಂವಿರೋಧಿಗಳ ಚೌಕಟ್ಟಿನಲ್ಲಿ ಮಾರ್ಪಾಡು ಹೊಂದುತ್ತಾ ಬಂದ ಅತ್ಯಂತ ಚರ್ಚಿತ ಒಂದು ಸಾಂಸ್ಕೃತಿಕ ಸಂಕೇತ ಬಸವಣ್ಣ .

ಬಸವಣ್ಣ ಎಂದರೆ ಒಳಗೊಳ್ಳುವ ಸಂಸ್ಕ್ರತಿ . ಆತ್ಮಾವಲೋಕನದ ಪ್ರತೀಕ, ಅಂತರ್ ನಿರೀಕ್ಷಣೆಯ , ಆತ್ಮಪರೀಕ್ಷೆಯ ಅನುಭಾವದಲ್ಲಿ ಆಧಾರವಿಲ್ಲದ ಎಲ್ಲವನ್ನೂ ವಿಮರ್ಶನೆಗೊಳಪಡಿಸುವ ವ್ಯಕ್ತಿತ್ವ. ಅಂತರಂಗ ಬಹಿರಂಗಗಳ ಮಂಥನದಿಂದ ಒಂದು ಮಾಂತ್ರಿಕ ಹೊಸತನವನ್ನು ಹುಟ್ಟಿಸುವ ಧ್ವನಿ ಶಕ್ತಿ.

ಯಾವ ಅಸಮಾನತೆಯ ವ್ಯವಸ್ಥೆಯ ವಿರುದ್ದ ಬಂಡಾಯವೆದ್ದ ಬಸವಣ್ಣನ್ನು ಇಂದು ಆ ಅಸಮಾನತೆ ವ್ಯವಸ್ಥೆಯೊಳಗೆ ವೀಲಿನಗೊಳಿಸುತ್ತಿರುವುದು ಒಂದು ಸಾಂಸ್ಕೃತಿಕ ವಿಪರ್ಯಾಸವೇ ಸರಿ. ಬಸವಣ್ಣ ಶ್ರೇಣಿಕ್ರತ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿ , ಈ ಸಮಾಜದ ಶೂದ್ರ ಅಂತ್ಯಜರನ್ನು ಸಮಾಜೋಧಾರ್ಮಿಕ ವ್ಯವಸ್ಥೆಯ ಮುನ್ನಲೆಗೆ ತರುವ ಸಲುವಾಗಿ ಹುಟ್ಟಿಕೊಂಡಿದ್ದು ಲಿಂಗಾಯತ ಅಂದೋಲನ. ಸಮಾನತೆಯ ಸಂಕೇತಗಳಾದ ಲಿಂಗ ,ಜಂಗಮ , ಪ್ರಸಾದ, ವಿಭೂತಿ , ರುದ್ರಾಕ್ಷಿ ಮಂತ್ರಗಳು ಇಂದು ಜಾತಿಯ ಲಾಂಛನಗಳಾಗಿ ಮಾರ್ಪಟ್ಟಿವೆ.ಸಂಕೇತ ಮತ್ತು ಲಾಂಛನಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಅರಿಯದೇ ಇಂದು ನಿರ್ಜಾತಿಕರಣದ ಲಿಂಗಾಯತದಲ್ಲಿ ನೂರೆಂಟು ಒಳಪಂಗಡಗಳು ಹುಟ್ಟಿಕೊಂಡಿವೆ . ವರ್ಣಾಶ್ರಮದಲ್ಲಿ ಅನಿಷ್ಠ ನಿಸಿದ್ದ ಆಚರಣೆಗಳನ್ನು ನಿರ್ಣಾಮ ಮಾಡಲು ಹುಟ್ಟಿಕೊಂಡಿದ್ದ ಲಿಂಗಾಯತದಲ್ಲಿ ತನ್ನ ಅಸ್ಥಿತ್ವ ಮತ್ತು ಅಸ್ಮೀತೆಯನ್ನು ಗುರುತಿಸಿಕೊಳ್ಳಲಾರದಷ್ಟು ವೈದಿಕತೆ ಬೆಳಸಿಕೊಂಡ ಈ ಕಾಲಘಟ್ಟದಲ್ಲಿ ತಾತ್ವಿಕತೆಯನ್ನು ಮರುಪ್ರಶ್ನಿಸುವ ಜರೂರಿದೆ.

ಲಿಂಗವೆಂದರೆ ಸಾಮಾಜಿಕ ಧಾರ್ಮಿಕ ಅಸಮಾನತೆಯನ್ನು ನಾಶಮಾಡಿ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದರ ರೂಪಕವಾಗಿ ಪ್ರತಿನಿಧಿಸಬೇಕಿದ್ದ ಲಿಂಗ , ಇಂದು ಅಸಮಾನತೆಯ ರೂಪಕವಾಗಿ ತೋರುತ್ತಿದೆ.ಸಮುದಾಯದ ಸೂಪ್ತ ಮನಸ್ಸಿನಲ್ಲಿ ಬೇರೂರಿದ್ದ ಅಸಮಾನತೆಯನ್ನು ನಾಶಗೊಳಿಸಿದ್ದರ ರೂಪಕವಾದ ಮತ್ತು, ಆತ್ಮಗೌರವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದ್ದ ” ದೇಹವೆ ದೇವಾಲಯ ” ಪರಿಕಲ್ಪನೆಯ ಕೊಟ್ಟಿದ್ದು ಬಸವಣ್ಣ

ದೀನ ದಲಿತರ ಶೋಷಣೆಯ ಕೂಪವಾಗಿದ್ದ ಈ ವ್ಯವಸ್ಥೆಯಲ್ಲಿ ಅವರಿಗಾಗಿಯೇ ಒಂದು ಪರ್ಯಾಯ ವ್ಯವಸ್ಥೆಯನ್ನು ಹಾಕಿ ಕೊಟ್ಟ ಬಸವಣ್ಣನನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇವನಾರವ ಇವನಾರವ ಎಂದು ಪ್ರಶ್ನಿಸುತ್ತಿದ್ದ ವ್ಯವಸ್ಥೆಯಲ್ಲಿ ಇವ ನಮ್ಮವ ಇವ ನಮ್ಮವ ಎನ್ನುವ ಒಳಗೊಳ್ಳುವ ಸಂಸ್ಕ್ರತಿಯನ್ನು ಕೊಟ್ಟ ಬಸವಣ್ಣನನ್ನು ಅರ್ಥ ಮಾಡಿಕೊಳ್ಳಬೇಕಿದೆ. ದುಡಿಯುವ ಜನರಿಗೆ ಜಗತ್ತಿನಲ್ಲಿ ಮೊಟ್ಟ ಮೊದಲು ಶ್ರಮ ಸಿದ್ದಾಂತವನ್ನು ಕೊಟ್ಟವರು ಬಸವಣ್ಣ.

ಈ ಜಗತ್ತಿನ ಎಲ್ಲಾ ಮಾನವರು ಸಮಾನರು ಎಲ್ಲರೂ ಸಹೋದರತ್ವದಿಂದ ಬದುಕುಬೇಕು “ವಸುದೈವ ಕುಟಂಬಕಂ ” ಎನ್ನುವ ಆಸೆಯಗಳು ಮೊದಲಿನಿಂದ ಇದ್ದರೂ ಅವುಗಳು ಕೇವಲ ಕೆಲವೊಬ್ಬರಿಗೆ ಮಾತ್ರ ಸಿಮೀತ ಎನ್ನುವ ವ್ಯವಸ್ಥೆಯ ಬದಲಿಗೆ ” ಹಾರವ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲಾ ಒಂದೇ ಎನ್ನುವ ಸಕಲ ಜೀವಿಗಳಿಗೆ ಲೇಸ ಬಯಸುವ ,ದಯೆ ಧರ್ಮದ ಮೂಲ ಎನ್ನುವ ಹೊಸ ಜೀವನ ವಿಧಾನವನ್ನು ಕಲಿಸಿ ಕೊಟ್ಟ ಬಸವಣ್ಣನನ್ನು ಅರ್ಥ ಮಾಡಿಕೊಳ್ಳಬೇಕಿದೆ. ” ಮನೆ ನೋಡಾ ಬಡವರು ಮನ ನೋಡಾ ಸೋಂಕಿನಲ್ಲಿ ಶುಚಿ ಸರ್ವಾಂಗ ಕಲಿಗಳು ” ಎನ್ನುವ ಬಡತನವನ್ನು ನೋಡುವ ಕ್ರಮವನ್ನು ಕಲಿಸಿಕೊಟ್ಟ ಬಸವಣ್ಣನನ್ನು ಅರಿಯಬೇಕಿದೆ. ದೇವರು ಧರ್ಮದ ಹೆಸರಲ್ಲಿ ಈ ನೆಲದಲ್ಲಿ ಬಸವಳಿದಿದ್ದ ಶೂದ್ರ ಪಂಚಮರಂತ ಬಸವಳಿದ್ದವರ ಬಳಿಗೆ ಬಂದ ಬಸವನನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲಾ ಜಾತಿ ಮತಪಂಥಗಳನ್ನು ,ಬಡವ ಶ್ರೀಮಂತ ಎನ್ನುವ ,ಮೇಲು ಕೀಳು ಎಂಬ ಅನಿಸ್ಠವನ್ನು ತೊಡೆದು ಹಾಕಿ ವಿಶ್ವಮಾನವ ಪ್ರಜ್ಞೆಯನ್ನು ಸಾರಿ ಆ ಬಸವ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳುವ ಜರೂರಿ ಇದೆ .

ಬಸವಣ್ಣ ಈ ನೆಲೆದ ಶಕ್ತಿ, ಅರಿವಿನ ಪ್ರಜ್ಞೆಯ ಸಾಕಾರ ಮೂರ್ತಿ, ಬಿದ್ದವರನ್ನು ಎತ್ತಿದ ಮಹಾಪುರುಷ, ಅಕ್ಷರ ಇಲ್ಲದವರಿಗೆ ಅಕ್ಷರ ಕಲಿಸಿದ ಅಕ್ಷರದ ದಾಸೋಹಿ . ಬಸವಣ್ಣ ಅತ್ಯಂತ ಚರ್ಚಿತ ವ್ಯೆಕ್ತಿ. ಕೆಲವರು ಬಸವಣ್ಣನನ್ನು ಕ್ರಾಂತಿಕಾರಿಯಾಗಿ , ಸಮಾಜೋಧಾರ್ಮಿಕ ವ್ಯವಸ್ಥೆಯ ವಿರುದ್ದ ಬಂಡಾಯವೆದ್ದ ಚಳುವಳಿಗಾರನನ್ನಾಗಿ ,ರಾಜಕಾರಣಿಯಾಗಿ , ಆರ್ಥಿಕತಜ್ಞನಾಗಿ ಹೀಗೆ ವಿಭಿನ್ನ ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಒಟ್ಟಿನಲ್ಲಿ ಬಸವಣ್ಣ ಅಂದರೆ ಇವೆಲ್ಲಾ ಗುಣಗಳ ಸಮ್ಮಿಲನ. ಬಸವಣ್ಣ ವ್ಯೆಕ್ತಿಯಲ್ಲ, ಒಂದು ಸಿದ್ದಾಂತ .ಒಂದು ಪ್ರಣಾಳಿಕೆ.

ಇಂದಿಗೂ ಸಮಾನತೆಯನ್ನು ಕೇವಲ ಆರ್ಥಿಕ ನಲೆಯಲ್ಲಿ ಚಿಂತನೆ ಮಾಡುವ ಕ್ರಮವಿದೆ .ಆದರೆ ಬಸವಣ್ಣ ಸಮಾನತೆಯ ವಿವಿಧ ಆಯಾಮಗಳನ್ನು ಚರ್ಚಿಸುತ್ತಾ ,ಉಳ್ಳವರು – ಇಲ್ಲದವರೆಂಬ ವರ್ಗಭೇದಭಾವ, ಗಂಡು – ಹೆಣ್ಣು ಎಂಬ ಲಿಂಗ ಭೇದಭಾವ, ಅಂತ್ಯಜ-ವಿಪ್ರ ಎಂಬ ಜಾತಿಭೇದಭಾವ, ಇಂತಹ ಅಸಮಾನತೆಯ ನಲೆಗಳನ್ನು ವಿಶ್ಲೇಷಣೆ ಮಾಡಿ ಒಂದು ಸಮಸಮಾನತೆ ನವ ಸಮಾಜವನ್ನು ಕಟ್ಟಬಯಸಿದರು. ಉಳ್ಳವರು ಇಲ್ಲದವರ ನಡುವಿನ ತಾರತಮ್ಯವನ್ನು ನಿಗಿಸಲು ” ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ” ಎಂದು ಇಲ್ಲದವರ ಪರ ನಿಲ್ಲುವ ಬಸವಣ್ಣ ನಮ್ಮಗೆ ಮಹತ್ವವಾಗುತ್ತಾನೆ. ಪುರುಷಪ್ರಧಾನವಾದ ಈ ಸಮಾಜದಲ್ಲಿ ಹೆಣ್ಣಿಗೆ ” ನ ಸ್ತ್ರೀ ಸ್ವಾತಂತ್ರ್ಯಂ ಅಹರ್ತಿ ” ಎನ್ನುವ ಅಸಮಾತೆಯ ವ್ಯವಸ್ಥೆಯ ವಿರುದ್ದವಾಗಿ ” ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ” ಎನ್ನುವ ಸ್ಥಾನ ನೀಡಿದ. ಕಲಿಯಬೇಕೆಂದರೂ ಕಲಿಸದಿದ್ದ ಆ ಕಾಲಘಟ್ಟದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ವಚನಗಳ ರಚನೆ ಮಾಡಿದ್ದು ಸಣ್ಣ ಮಾತಲ್ಲ. ಬಸವಣ್ಣನಿಂದಾಗಿ ಕಾಳೆವ್ವ , ಸತ್ಯಕ್ಕ , ರೆಮ್ಮವ್ವೆ ಎಂಬ ಇನ್ನಿತರ ತಳಸಮುದಾಯಗಳ ಹೆಣ್ಣು ಮಕ್ಕಳು ವಚನ ರಚನೆ ಮಾಡಲು ಸಾಧ್ಯವಾಯಿತು .

ಹೆಣ್ಣು ಸೂತಕವೆಂದು ವೇದಾಧ್ಯಯನ,ಧಾರ್ಮಿಕ ಕಾರ್ಯಗಳಿಂದ ದೂರವಿಟ್ಟ ಆ ವ್ಯವಸ್ಥೆಯ ವಿರುದ್ದ ಹೆಣ್ಣು ಮಕ್ಕಳಿಗೂ ಇಷ್ಟಲಿಂಗದ ಮೂಲಕ ಧಾರ್ಮಿಕ ಆಚರಣೆಯು ಅವಳ ಹಕ್ಕು ಎಂದು ಧಾರ್ಮಿಕ ಸಮಾನತೆ ಕೊಟ್ಟ. ಕದಿರ ರೆಮ್ಮವ್ವನಂತಹ ಹೆಣ್ಣು ಕೂಡ ಅಂದು ಅಸ್ತಿತ್ವದಲ್ಲಿದ್ದ ಗಂಡು ಪ್ರಧಾನದ ಸಂಭಂದವನ್ನು ” ಎಲ್ಲರ ಗಂಡಂದಿರು ಮೇಲೆ , ನನ್ನ ಗಂಡ ಕೆಳಗೆ ನಾ ಮೇಲೆ ” ಎನ್ನುವ ಹೆಣ್ಣು ಪ್ರಧಾನದ ಸಿದ್ದಾಂತವು ಪ್ರತಿಪಾದನೆ ಮಾಡಲು ಸಾಧ್ಯವಾಗಿದ್ದು ಬಸವಣ್ಣನ ಪ್ರಣಾಳಿಕೆಯಲ್ಲಿ. ಗೊಗ್ಗವ್ವೆ ಎಂಬ ಶರಣೆ ಹೆಣ್ಣು ಗಂಡಿನ ಒಡವೆಯಲ್ಲ ಎನ್ನುವ ಸಿದ್ದಾಂತವನ್ನು ಪ್ರತಿಪಾದಿಸಿದಳು . ಅನಾದಿ ಕಾಲದಿಂದಲೂ ಕೇವಲ ಹೆಣ್ಣನ್ನೂ ಪರೀಕ್ಷೆ ಮಾಡು , ಕೇವಲ ಹೆಣ್ಣನ್ನು ಪ್ರಶ್ನಿಸುವ ಪರಿಪಾಠ ಬೆಳೆದುಕೊಂಡು ಬಂದಿತ್ತು, ಆದರೆ 12 ಶತಮಾನದ ಆ ಕಾಲಘಟ್ಟದ ಬಸವಣ್ಣನ ಸಮಯದಲ್ಲಿ ಹೆಣ್ಣುಸಹ ಗಂಡನ್ನು ಪರೀಕ್ಷಿಸಬಹುದು ಪ್ರಶ್ನಿಸಿಬಹುದು ಎನ್ನುವ ಸೂತ್ರವನ್ನು ಅಕ್ಕಮ್ಮನಂತಹ ಶರಣೆಯಿಂದ ಅದು ಬಸವ ಪ್ರಣಾಳಿಕೆಯಿಂದ ಸಾಧ್ಯವಾಯಿತು.ಹೆಣ್ಣು ಗಂಡಿನ ಸಂಭಂದ ಜೈವೀಕವೊ ಸಾಮಾಜಿಕವೊ ಎನ್ನುವ ಚರ್ಚೆ ಇಂದು 21 ಶತಮಾನದಲ್ಲಿಯೂ ನಡೆಯುತ್ತಿದೆ , ಆದರೆ 12 ನೇ ಶತಮಾನದಲ್ಲಿ ” ನಡುವೆ ಸುಳಿವಾತ್ಮನೂ ಹೆಣ್ಣು ಅಲ್ಲ ಗಂಡು ಅಲ್ಲ ” ಎನ್ನುವ ತಿರ್ಮಾನ ಅಂದೇ ಬಸವಣ್ಣನ ಕಾಲದಲ್ಲಿ ನಡೆದು ಹೋಗಿತ್ತು .

ಅಂತ್ಯಜ – ಕುಲಜ ಎನ್ನುವ ಅಸಮಾನತೆಯನ್ನು ಧಿಕ್ಕರಿಸುತ್ತಾ ” ದೇವನೊಲಿದಾತನೆ ಕುಲಜ ” ಎನ್ನುವ ಸಮಾನತೆಯನ್ನು ಬಿತ್ತಿದ್ದು ಬಸವಣ್ಣ. ” ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ ” ಎಂದು ಹೊಲೆಗೇರಿ ಶಿವಾಲಯವನ್ನು ಮುಖಾಮುಖಿಯಾಗಿ ಚರ್ಚಿಸುವ ಬಸವಣ್ಣ “ಕುಲವೊಂದೆ ತನ್ನ ತಾ ಅರಿದಂವಗೆ ” ಎಂದು ಜಡ್ಜಮೆಂಟ್ ನೀಡುತ್ತಾನೆ. ಅಂತ್ಯಜರನ್ನು ದೂರವಿಟ್ಟಿದ್ದ ಸಮಾಜಕ್ಕೆ ಪ್ರತಿಯಾಗಿ ” ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ” ಎಂದು ಹೊರದೂಡಲ್ಪಟ್ಟ ಸಂಸ್ಕ್ರತಿಗೆ ಪರ್ಯಾಯವಾಗಿ ಒಳಗೊಳ್ಳುವ ಸಂಸ್ಕ್ರತಿಯನ್ನು ಕಟ್ಟಿದ ಬಸವಣ್ಣ. ನೈತಿಕತೆ ಅನೈತಿಕತೆ ಎಂದು ಭಿನ್ನವಾಗಿಸುವ ವ್ಯವಸ್ಥೆಯ ವಿರುದ್ದ ” ಚೆನ್ನಯ್ಯ ಮನೆಯ ದಾಸಿಯ ಮಗನು , ಕಕ್ಕಯ್ಯ ಮನೆಯ ದಾಸಿಯ ಮಗಳ ಬೆರಣಿಗೆ ಹೋಗಲು ಅವರಿಬ್ಬರಿಗೆ ಹುಟ್ಟಿದ ಅನೈತಿಕ ಕೂಸು ನಾ ” ಎಂದು ಅನೈತಿಕತೆಯನ್ನು ನೈತಿಕಗೊಳಿಸಿದ ಬಸವಣ್ಣ. ಬಸವಣ್ಣ ಎಂದೂ ಮೇಲಾಗದೆ ” ಮೇಲಾಗಲೊಲ್ಲೇನು ಕೀಳಾಗಲ್ಲದೆ ,ಕೀಳಿಂಗೆ ಹಯನು ಕರೆಯುವುದು” ಎಂದು ಕೀಳಾಗುತ್ತಲೇ ಮೇಲಾದ ಬಸವಣ್ಣ. ಬಸವಣ್ಣ ಹಾಲು ,ಕೆನೆ, ಬೆಲ್ಲ , ಬೆಣ್ಣೆ ,ತುಪ್ಪದ ಬಗ್ಗೆ ಮಾತಾಡಲಿಲ್ಲ . ಮಾದಾರ ಚೆನ್ನಯ್ಯ ಮನೆಯ ಅಂಬಲಿ ಬಗ್ಗೆ ಮಾತಾಡಿದ.

ಸೋಮಾರಿ ಸಂಸ್ಕೃತಿಯ ಬದಲಾಗಿ “ಗುರು ಲಿಂಗ ಜಂಗಮಕ್ಕಾದರೂ ಕಾಯಕದಿಂದಲೇ ಜೀವನ್ಮುಕ್ತಿ ” ಎಂದು ಶ್ರಮ ಸಂಸ್ಕೃತಿಯ ಬಗ್ಗೆ ಮಾತಾಡಿದ.ಕಾಯಕ ಮರೆತ ಲಿಂಗಕ್ಕೂ ಕಾಯಕದ ಮಹತ್ವ ತಿಳಿಸಿಕೊಟ್ಟ ನೂಲಿಯ ಚೆಂದಯ್ಯಾ , ಒಂದು ಕ್ಷಣಕ್ಕೆ ಕಾಯಕವನ್ನು ಮರೆತಿದ್ದ ಮಾರಯ್ಯನಿಗೆ , ಕಾಯಕದ ಎಚ್ಚರಿಕೆ ಕೊಟ್ಟಿದ್ದು ಲಕ್ಕಮ್ಮ. ಬಸವಣ್ಣ ಶ್ರಮ ಸಂಸ್ಕೃತಿಯ ಪರವಾಗಿ ನಿಂತ.

ಬಸವಣ್ಣ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎನ್ನುವ ಚಲನಶೀಲ ಪ್ರಣಾಳಿಕೆ ಕೊಟ್ಟ. ” ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ” ಒಳಗೊಳ್ಳುವ ವಿಶ್ವಮಾವನ ಪ್ರಜ್ಞೆ ಕೊಟ್ಟ. ” ದಯವೇ ಧರ್ಮದ ಮೂಲ ” ಎನ್ನುವ ವಿಶ್ವಸಂದೇಶ ಕೊಟ್ಟ.

ಇಂದಿಗೂ ಬಸವಣ್ಣ ಪ್ರಣಾಳಿಕೆ ಪ್ರಸ್ತುತ ಯಾಕೆಂದರೆ ಬಸವಣ್ಣ ಬಡತನದ ಬಗ್ಗೆ ಮಾತಾಡಿದ , ಆಹಾರದ ಬಗ್ಗೆ ಮಾತಾಡಿದ , ಕೂಲಿಯ ಬಗ್ಗೆ ಮಾತಾಡಿದ , ಹಸಿವಿನ ಬಗ್ಗೆ ಮಾತಾಡಿದ, ಒಡಲಿನ ಬಗ್ಗೆ ಮಾತಾಡಿದ, ಹೊಲೆಗೇರಿ ಬಗ್ಗೆ ಮಾತಾಡಿದ. ಮಾದಾರ ಚೆನ್ನಯ್ಯ ಬಗ್ಗೆ ಮಾತಾಡಿದ , ಕಕ್ಕಯ್ಯನ ಬಗ್ಗೆ ಮಾತಾಡಿದ , ಹೆಣ್ಣಿನ ಸಮಾತೆ ಬಗ್ಗೆ ಮಾತಾಡಿದ, ಅಕ್ಷರದ ಬಗ್ಗೆ ಮಾತಾಡಿದ. ಹಾಗಾಗಿ ಇಂದಿಗೂ ಬಸವಣ್ಣನ ಪ್ರಣಾಳಿಕೆ ನಮಗೆ ಪ್ರಸ್ತುತ. ಬಸವಣ್ಣನನ್ನು ಭಕ್ತಿಯ ಜಾಲದಲ್ಲಿ ಬಂಧಿಸದೆ ವಿಶಾಲವಾದ ತತ್ವದ ಬಸವಣ್ಣನ್ನು ಅರಿಯುವುದು ಇಂದಿನ ನಮ್ಮ ಅನಿವಾರ್ಯವು ಹೌದು .

ಶತಶತಮಾನಗಳಿಂದ ಈ ನೆಲದ ಮೂಲ ಜನರನ್ನು ಹೊರತಳ್ಳುವ ಸಂಸ್ಕೃತಿಗೆ ಬದಲಾಗಿ , ಒಳಗೊಳ್ಳುವ ಸಂಸ್ಕೃತಿಯನ್ನು ಕೊಟ್ಟ ಬಸವಣ್ಣ ಒಂದು ಪರ್ಯಾಯ ಸಂಸ್ಕೃತಿಯನ್ನೆ ಕಟ್ಟಿದ. ಹಾಗಾಗಿ ಇಂದಿಗೂ ಜನಸಾಮಾನ್ಯರಲ್ಲಿ ಎದ್ದರೂ , ಬಿದ್ದರೂ , ಕೆಮ್ಮಿದರೂ , ಸೀನಿದರೂ , ಹುಟ್ಟುನ ಸಂಭ್ರಮದಿಂದ ಇಡಿದು ಸಾವಿನವರೆಗೂ ‘ ಬಸವ ‘ ‘ಬಸವ’ ಎನ್ನುವ ಸಾಮಾನ್ಯರ ಬದುಕಾದ ಬಸವಣ್ಣ ಇಂದು ಕರ್ನಾಟಕದ ‘ ಸಾಂಸ್ಕೃತಿಕ ನಾಯಕ ‘ ನೆಂದು ಘೋಷಿಸಿದ್ದು ಎಲ್ಲರಿಗೂ ಹೆಮ್ಮೆಯ ವಿಷಯ. ಹಾಗೂ ಘನ ಸರಕಾರಕ್ಕೆ ಮತ್ತು ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೂ ಅಭಿನಂಧನೆಗಳು ಮತ್ತು ಬಸವಣ್ಣನನ್ನು ಒಪ್ಪುವ ಎಲ್ಲಾ ಮನಸ್ಸುಗಳು ಅವರಿಗೆ ಚಿರಋಣಿ.

ಡಾ.ರಾಜಶೇಖರ ನಾರನಾಳ
ವೈದ್ಯರು ಗಂಗಾವತಿಯ.
9880884048

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.