SUCI(C) condemns proposal to increase working hours to 10 hours

ಕೊಪ್ಪಳ : ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹಾಗೂ ಹೆಚ್ಚುವರಿ ಅವಧಿಯನ್ನು (ಓಟಿ) 10 ರಿಂದ 12 ಗಂಟೆಗೆ ಏರಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ.
8 ಗಂಟೆ ದುಡಿತ, 8 ಗಂಟೆ ವಿಶ್ರಾಂತಿ, 8 ಗಂಟೆ ಖಾಸಗಿ ಬದುಕು ಎಂಬ ವೈಜ್ಞಾನಿಕ ನೀತಿ, ಕಾರ್ಮಿಕರ ರಕ್ತಸಿಕ್ತ ಹೋರಾಟದ ಫಲವಾಗಿ ಜಗತ್ತಿನಾದ್ಯಂತ ಒಪ್ಪಿತವಾಗಿದೆ. ಆದರೆ ಉದಾರೀಕರಣ, ಖಾಸಗೀಕರಣ ಜಾರಿಯಾದ ನಂತರ ಬಂಡವಾಳಶಾಹಿಗಳ ಗರಿಷ್ಠ ಲಾಭದ ದಾಹವನ್ನು ಪೂರೈಸಲು ಕಾರ್ಮಿಕರನ್ನು ಮಿತಿ ಮೀರಿ ಶೋಷಣೆ ಮಾಡಲು ಸರ್ಕಾರಗಳು ಅವಕಾಶ ಮಾಡಿಕೊಡುತ್ತಿವೆ.
ಈ ರೀತಿ ಕೆಲಸದ ಅವಧಿಯನ್ನು ಹೆಚ್ಚಿಸುವುದರಿಂದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ, ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಮತ್ತು ಉದ್ಯೋಗಗಳು ನಷ್ಟವಾಗುತ್ತವೆ ಎಂಬುದು ನೀತಿ ನಿರೂಪಕರಿಗೆ ಅರ್ಥವಾಗದ ವಿಷಯವಲ್ಲ. ಆದಾಗ್ಯೂ, ಇಂತಹ ನೀತಿ ಬರಲು ಇಂದು ಚಿಲ್ಲರೆ ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತಿರುವ ದೇಶ ವಿದೇಶಗಳ ಬೃಹತ್ ಮಾಲ್‌ಗಳ ಒಡೆಯರ ಪ್ರಭಾವವೇ ಕಾರಣ ಎಂಬುದು ದುಡಿಯುವ ಜನರ ಆಕ್ಷೇಪವಾಗಿದೆ.
ಜೊತೆಗೆ 10ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಅಂಗಡಿಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದಲೇ ಹೊರಗಿಡುವ ಪ್ರಸ್ತಾಪವು, ಈ ಸರ್ಕಾರಕ್ಕೆ ದುಡಿಯುವ ಜನರ ಕುರಿತಾದ ನಿಷ್ಕಾಳಜಿಯನ್ನು ತೋರಿಸುತ್ತದೆ.
ಆದ್ದರಿಂದ, ಇಂತಹ ಅಪ್ಪಟ ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕೆಂದು ಎಸ್‌ಯುಸಿಐ (ಸಿ) ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಕೆ.ಉಮಾ ಅವರು ಒತ್ತಾಯಿಸಿದ್ದಾರೆ.