
The RSS spider web called Basavakalyana Kshetra Sami

ಬಸವಕಲ್ಯಾಣ ಕ್ಷೇತ್ರ ಸಮಿತಿ ಎಂಬ ಹೆಸರಿನ ಆರ್ ಎಸ್ ಎಸ್ ಜೇಡರ ಬಲೆ

ಆತ್ಮೀಯ ಬಂಧುಗಳೇ……
ವಿಶ್ವಗುರು ಬಸವಣ್ಣನವರ ಕಾಯಕ ಭೂಮಿ, ಶರಣ ಭೂಮಿ ಬಸವಕಲ್ಯಾಣವು ಲಿಂಗಾಯತ ಧರ್ಮಿಯರ ಧರ್ಮ ಕೇಂದ್ರ. ಇಂತಹ ಶರಣರ ನೆಲದಲ್ಲಿ ಅಂದು ವೈದಿಕ ಧರ್ಮವನ್ನು ನಿರಾಕರಣೆ ಮಾಡಿ ಕಾಯಕ ವರ್ಗದವರಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮ ಹುಟ್ಟಿಕೊಂಡಿದೆ. ಈ ಧರ್ಮದ ಕೇಂದ್ರ ಬಿಂದುವೇ ಹನ್ನೆರಡನೇ ಶತಮಾನದ ಅನುಭವ ಮಂಟಪ. ಇಂತಹ ಅನುಭವ ಮಂಟಪದ ನೂತನ ಕಟ್ಟಡ ಕಾರ್ಯ ಬಸವಕಲ್ಯಾಣದಲ್ಲಿ ಭರದಿಂದ ಸಾಗಿದೆ. ಕಟ್ಟಡದ ಪ್ರಾರಂಭದಲ್ಲಿ ಆಗಿನ ಬಿಜೆಪಿ ಸರಕಾರದಿಂದ ಅನುಭವ ಮಂಟಪದ ಕಾಮಗಾರಿಯ ಉಸ್ತುವಾರಿಯಾಗಿ ನೋಡಿಕೊಳ್ಳುವ ಜವಬ್ದಾರಿಯನ್ನು ಆರ್ ಎಸ್ ಎಸ್ ಏಜೆಂಟರಾದ ಬಸವರಾಜ ಪಾಟೀಲ ಸೇಡಂ ಅವರಿಗೆ ವಹಿಸಿತ್ತು. ಮೊದಲೇ ಬಸವಣ್ಣನವರನ್ನು ವೈದಿಕದ ಕಡೆಗೆ ತಿರುಗಿಸುವ ಹುನ್ನಾರ ಒಳಗೊಳಗೆ ನಡೆದಿತ್ತಾದರೂ ಅದಕ್ಕೊಂದು ಮುಹೂರ್ತದ ದಿನ ಸಿಗದೇ ಪರದಾಡುತ್ತಿದ್ದ ಆರ್ ಎಸ್ ಎಸ್ ಸಂಘಟನೆಯ ಬಸವರಾಜ ಪಾಟೀಲ ಸೇಡಂ ಅವರ ಬಸವಕಲ್ಯಾಣ ಪ್ರವೇಶದಿಂದ ತನ್ನ ಗರಿ ಬಿಚ್ಚಿತು. ಅನುಭವ ಮಂಟಪದ ಭೂಮಿ ಪೂಜೆಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರುವ ಹಿಂದಿನ ದಿನ ಬಸವರಾಜ ಪಾಟೀಲ ಸೇಡಂ ಅವರು ವಿಜಯವಾಣಿ ಪತ್ರಿಕೆಯಲ್ಲಿ ಸನಾತನ ಧರ್ಮದ ಮರುಸೃಷ್ಟಿ ಅನುಭವ ಮಂಟಪ ಎಂದು ಜಾಹಿರಾತು ಪ್ರಕಟಣೆ ಕೊಟ್ಟಿದ್ದರು. ಅದಕ್ಕೆ ನಾವೆಲ್ಲ ತೀವ್ರವಾಗಿ ಖಂಡಿಸಿ, ಪ್ರಜಾವಾಣಿ ಪತ್ರಿಕೆ ಮೂಲಕ ಹನ್ನೆರಡನೇ ಶತಮಾನದ ಅನುಭವ ಮಂಟಪದ ಮರುಸೃಷ್ಟಿ ಎಂದು ಪ್ರತಿಕ್ರಿಯೆ ನೀಡಿದ್ದೆವು. ಅನುಭವ ಮಂಟಪ ಕಾಮಗಾರಿ ಪ್ರಾರಂಭದ ದಿನ ಭಾಲ್ಕಿ ಶ್ರೀ, ಹುಣಸೂರು ಶ್ರೀ, ಅಕ್ಕ ಗಂಗಾಂಬಿಕೆ ಇನ್ನಿತರ ಸ್ವಾಮಿಗಳ ಸಾನಿಧ್ಯದಲ್ಲಿಯೇ ಲಕ್ಷ್ಮಿ ಭಾವಚಿತ್ರ ಇಟ್ಟು ಪೂಜೆ ಮಾಡಿಸಿದ್ದರು. ಅದಕ್ಕೆ ನಾವು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧಿಸಿದ್ದರ ಪರಿಣಾಮ ಲಕ್ಷ್ಮಿ ಭಾವಚಿತ್ರ ತೆಗೆದು ಬಸವಣ್ಣನವರ ಭಾವಚಿತ್ರ ಇಟ್ಟು ಮತ್ತೊಮ್ಮೆ ಪೂಜಿಸಿದರು.
ಈ ಹೇಳಿಕೆಯಿಂದ ಎಚ್ಚೆತ್ತುಕೊಂಡ ಬಸವರಾಜ ಪಾಟೀಲ ಸೇಡಂ ಅವರು ಬಸವಕಲ್ಯಾಣದಲ್ಲಿ ಬಸವಪರ ಸಂಘಟನೆಗಳನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ ಎಂದರಿತು, ಸನಾತನ ಧರ್ಮದ ಪ್ರತಿಷ್ಟಾಪನೆಗೆ ಇದು ಸೂಕ್ತಕಾಲವಲ್ಲ ಎಂದು ನಿರ್ಧರಿಸಿ ಒಳಗೊಳಗೆ ನಮ್ಮನ್ನು ದ್ವೇಷಿಸುತ್ತಾ ಮೇಲ್ನೋಟಕ್ಕೆ ನಾನೂ ಬಸವತತ್ವವಾದಿ ಎಂದು ಹೇಳಿಕೊಂಡು, ತನ್ನ ವರಸೇ ಬದಲಾಯಿಸಿಕೊಂಡರು. ಆಗ ಹುಟ್ಟಿಕೊಂಡಿದ್ದೇ ಬಸವಕಲ್ಯಾಣ ಕ್ಷೇತ್ರ ಸಮಿತಿ ಎಂಬ ಹೆಸರಿನ ಆರ್ ಎಸ್ ಎಸ್ ಜೇಡರ ಬಲೆ.
ಬಸವಕಲ್ಯಾಣ ಕ್ಷೇತ್ರ ಸಮಿತಿ: ಭಾಲ್ಕಿ ಶ್ರೀ, ಹುಲಸೂರು ಶ್ರೀ, ಅಕ್ಕ ಗಂಗಾಂಬಿಕೆ, ಬಸವಧರ್ಮ ಪೀಠ, ಬೇಲೂರು ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಇವರನ್ನೂ ಒಳಗೊಂಡಂತೆ ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಕನ್ನೇರಿ ಶ್ರೀ, ಸದಾಶಿವ ಸ್ವಾಮಿಗಳನ್ನು ಮತ್ತು ಸ್ಥಳಿಯ ರಾಜಕಾರಣಿಗಳು ಹಾಗೂ ಸ್ಥಳಿಯ ಬಸವಪರ ಸಂಘಟನೆಗಳನ್ನು ಸೇರಿಸಿಕೊಂಡು “ಬಸವಕಲ್ಯಾಣ ಕ್ಷೇತ್ರ ಸಮಿತಿ”ಯೊಂದನ್ನು ರಚಿಸಿದರು. ಬಸವಕಲ್ಯಾಣದ ಬಸವಪರ ಸಂಘಟನೆಗಳ ಮುಖ್ಯಸ್ಥರು, ಅಪ್ಪಟ ಬಸವತತ್ವ ನಿಷ್ಟ ಶರಣೆಯರ ಗುಂಪನ್ನು ರಚಿಸಿಕೊಂಡು ಬೆಂಗಳೂರು ಪ್ರವಾಸ ಮಾಡಿಸಿಕೊಂಡು ಬಂದು ಅವರನ್ನು ಬಸವಕಲ್ಯಾಣ ಸಂದರ್ಶಕರ ಗೈಡಾಗಿ ನೇಮಿಸಿದ. ಸರಕಾರ ಮಾಡುವ ಕೆಲಸ ಖಾಸಗಿಯಾಗಿ ಮಾಡಿ ಒಂದು ಕಛೇರಿಯನ್ನು ತೆರೆದರು.
ಅಷ್ಟೊತ್ತಿಗೆ ಬಿಜೆಪಿ ಸರಕಾರ ಬಿದ್ದು ಕಾಂಗ್ರೆಸ್ ಸರಕಾರ ಬಂತು. ಆಗ ಸಹಜವಾಗಿಯೇ ಇವರಿಗೆ ಕೋಕ್ ನೀಡಿದ ಸರಕಾರ ಬೇರೊಬ್ಬರನ್ನು ಇವರ ಸ್ಥಾನಕ್ಕೆ ನೇಮಿಸಿತು. ಬಸವಕಲ್ಯಾಣ ಬಿಟ್ಟು ಹೋಗದೇ ತನ್ನ ಉದ್ಧೇಶ ಈಡೇರಿಸಿಕೊಳ್ಳಲು ಪ್ರತಿ ತಿಂಗಳಿಗೊಮ್ಮೆ ಸಭೆಗಳನ್ನು ಮಾಡುತ್ತಾ ಅನೇಕ ಯೋಜನೆಗಳನ್ನು ಹಾಕಿಕೊಂಡ. ಅದರಲ್ಲಿ ಈ ಕೆಳಕಂಡಂತೆ.
1) ಶರಣರ ಇತಿಹಾಸ ತಿರುಚುವುದು:” ಬಸವಕಲ್ಯಾಣದ ಶರಣ ಸ್ಮಾರಕದ ಮುಂದೆ ಶರಣರ ಇತಿಹಾಸ ಮತ್ತು ಕಾಲಮಾನ ತಿರುಚಿ ಬೋರ್ಡ್ ಹಾಕಿಸಿದ್ದು. ಉದಾ: ಶರಣೆ ಗಂಗಾಂಬಿಕೆಯವರು ರುದ್ರಮುನಿ ಅವರಿಂದ ದೀಕ್ಷೆ ಪಡೆದರೆಂದು, ಬಸವಕಲ್ಯಾಣ ಪರುಷ ಕಟ್ಟೆಯಲ್ಲಿ ನಂದಿ ಭಾವಚಿತ್ರ ಹಾಕಿಸಿದ್ದು, ಬಸವಕಲ್ಯಾಣಕ್ಕೆ ಬಂದ ಅತಿಥಿಗಳಿಗೆ ನಂದಿ ಭಾವಚಿತ್ರ, ನಂದಿ ವಿಗ್ರಹ ಹಂಚುವುದು ಇತ್ಯಾದಿ.
2) ಕಾಯಕ ಉತ್ಸವ: ಕಾಯಕ ಉತ್ಸವ ಎಂಬ ಕಾರ್ಯಕ್ರಮವನ್ನು ರೂಪಿಸಿ ಅದರ ದಿವ್ಯ ಸಾನಿಧ್ಯವನ್ನು ಅತ್ತ ಪಂಚಾಚಾರ್ಯರಿಗೂ ಜೈ ಇತ್ತ ಬಸವತತ್ವಕ್ಕೂ ಜೈ ಎನ್ನುವ ಮನೋಭಾವ ಹೊಂದಿದ ಹಾರಕೂಡ ಶ್ರೀಗಳಿಗೆ ನೀಡಿ, ಅವರ ಅಡಿಯಾಳಾಗಿ ಕಾರ್ಯ ಮಾಡುವಂತೆ ಬಸವಕಲ್ಯಾಣ ಕ್ಷೇತ್ರ ಸಮೀತಿಯ ಸ್ವಾಮಿಗಳನ್ನೂ ಮತ್ತು ಬಸವತತ್ವ ನಿಷ್ಟ ಸಂಘಟನೆಗಳನ್ನು ಬಳಸಿಕೊಂಡರು. ಮುಂದೆ ಈ ಕಾರ್ಯಕ್ರಮವನ್ನು ಪ್ರತೀ ವರ್ಷ ಹಾರಕೂಡ ಶ್ರೀಗಳೇ ನಡೆಸುವಂತೆ ನೋಡಿಕೊಳ್ಳುತ್ತಿರುವರು.
3) ಬಸವ ಭಾರತ ಉತ್ಸವ: 2027ರ ಸಾಲಿನಲ್ಲಿ ನಡೆಯುವ ಈ ಉತ್ಸವಕ್ಕೆ ಈಗಾಗಲೇ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇದರ ಯಶಸ್ವಿಯಾಗಿ ಪ್ರತೀ ತಿಂಗಳ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬಸವತತ್ವ ಸ್ವಾಮಿಗಳನ್ನು ಮತ್ತು ಬಸವಪರ ಸಂಘಟನೆಗಳನ್ನು ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಸ್ಥಳಿಯ ಆರ್ ಎಸ್ ಎಸ್ ಸಂಘಟನೆಗಳು ಎಲೆಮರೆಯ ಕಾಯಿಯಂತೆ ಸೇವೆಗೆ ಇಳಿದಿವೆ. ಒಂದು ಲಕ್ಷ ಜನ ಭಾಗಿಯಾಗಿಸುವ ಉತ್ಸಾಹದಲ್ಲಿ ಬಸವರಾಜ ಪಾಟೀಲ ಸೇಡಂ ಇದ್ದಾರೆ. ಇದರ ಮುಂದುವರೆದ ಭಾಗವೇ RSS ನವರು 108 ಅಡಿ ಮೂರ್ತಿ ಎದುರು ಈ ಪ್ರಶಿಕ್ಷಣ ವರ್ಗ ಮಾಡುವುದು ಹೊಸದೇನಲ್ಲ. ಬಸವರಾಜ ಪಾಟೀಲ ಸೇಡಂ ಅವರು ಕಳೆದ 4ವರ್ಷದಿಂದ ಇಂತಹ ಅನೇಕ ಕಾರ್ಯಾಗಾರ ಮಾಡಿ, ಈಗಾಗಲೇ ಬಸವಕಲ್ಯಾಣ ಕ್ಷೇತ್ರ ಸಮಿತಿಯೊಂದನ್ನು ಹುಟ್ಟು ಹಾಕಿದ್ದಾರೆ. ಅದರಲ್ಲಿ ಭಾಲ್ಕಿ ಶ್ರೀ, ಹುಲಸೂರು ಶ್ರೀ, ಬಸವಧರ್ಮಪೀಠ, ಅಕ್ಕ ಗಂಗಾಂಬಿಕೆ, ಪಂಚಾಕ್ಷರಿ ಶ್ರೀ, ಸ್ಥಳಿಯ ಬಸವಪರ ಸಂಘಟನೆಗಳು ಮತ್ತು ಹೊರಗಿನ ಕನ್ನೇರಿ ಶ್ರೀ ಸೇರಿದಂತೆ ಅನೇಕ ಮಠಾಧೀಶರು ಅದರಲ್ಲಿದ್ದಾರೆ. ನನ್ನನ್ನು ಸೆಳೆಯಲು ಅನೇಕ ರೀತಿಯಲ್ಲಿ ಪ್ರಯತ್ನಿಸಿದರೂ ನಾನು ಸೈದ್ಧಾಂತಿಕ ವಿರೋಧಿ ಎಂದು ಸಾಭೀತು ಪಡಿಸಿರುವೆ. RSS ಅಜೇಂಡಾ ಬಸವಾದಿ ಶರಣರ ಹಿಂದೂ ಸಮಾವೇಶದ ನಂತರ 2027ಕ್ಕೆ ಬಸವ ಭಾರತ ಉತ್ಸವ ಎಂದು ಸಂಘಿಗಳ ಗುಂಪು ಬಹುದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲು ಈಗಾಗಲೇ ಭರದಿಂದ ಸಿದ್ಧತೆ ನಡೆಸಿದ್ದಾರೆ.
ನಾಗ್ಪೂರದಿಂದ ನಿಯೋಜನೆಗೊಂಡ ಬಸವರಾಜ ಪಾಟೀಲ ಸೇಡಂ ಅವರು ಕಲ್ಯಾಣದ ಬಸವ ತತ್ವ ಮಠಾಧೀಶರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡದ್ದಾಗಿದೆ. ಈಗ ಮುಂದಿನ ಕಾರ್ಯ ಅವರಿಗೆ ಸಲೀಸಾಗಿದೆ. ಬಸವಕಲ್ಯಾಣ ಈಗ RSS ತವರ ಮನೆಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಾವೆಲ್ಲ ಸಂಘಟಿತರಾಗಿ ಪ್ರತಿರೋಧ ವ್ಯಕ್ತಪಡಿಸದೆ ಹೋದರೆ ಬಸವಕಲ್ಯಾಣದ ಅನುಭವ ಮಂಟಪದ ಮೇಲೆ ಹಿಂದುತ್ವದ ಧ್ವಜ ಹಾರಿದರೂ ಆಶ್ಚರ್ಯ ಪಡಬೇಕಿಲ್ಲ.*ಬಸವ ಭಾರತ ಉತ್ಸವ ಯಾವ ಸ್ವಾರ್ಥಕ್ಕಾಗಿ?:"* ನಾನೂ ಬಸವತತ್ವವಾದಿ ಎಂದು ಹೇಳಿಕೊಳ್ಳುವ ಬಸವರಾಜ ಪಾಟೀಲ ಸೇಡಂ ಅವರಿಗೆ ಈ ಪ್ರಶ್ನೆಗಳನ್ನು ಕೇಳಿ.
1) ಗುರು ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರು ಎಂದು ಒಪ್ಪಿಕೊಳ್ಳುವಿರೋ?
2) ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳುವಿರೋ?
3) ವಚನ ಸಾಹಿತ್ಯ ಧರ್ಮ ಗ್ರಂಥ ಎಂದು ಒಪ್ಪಿಕೊಳ್ಳುವಿರೋ?
4) ಬಸವ ತತ್ವವನ್ನು ಒಪ್ಪಿಕೊಂಡಿದ್ದೇ ಆದರೆ ಆರ್ ಎಸ್ ಎಸ್ ಸಂಘಟನೆಯಿಂದ ಹೊರಬಂದು ಪತ್ರಿಕೆ ಹೇಳಿಕೆ ನೀಡಿ.
ಇದಾವುದಕ್ಕೂ ಉತ್ತರಿಸದೇ ಇದ್ದರೆ ಹಿತ್ತಲ ಭಾಗಿಲಿನಿಂದ ಬಂದು ಬಸವಕಲ್ಯಾಣವನ್ನು ಆರ್ ಎಸ್ ಎಸ್ ಅಡ್ಡ ಮಾಡಲು ಹೊರಟ ನೀವೊಬ್ಬ ಸಂಘಿಗಳ ಪತ್ತೇದಾರಿ ಎಂದು ನಿರ್ಧರಿಸಿ ಬಸವ ಭಾರತ ಉತ್ಸವ ನಡೆಯದಂತೆ ಪ್ರತಿರೋಧ ಒಡ್ಡಬೇಕಾಗುತ್ತದೆ.
ಬಸವ ತತ್ವ ಪೂಜ್ಯರಲ್ಲಿ ಕಳಕಳಿಯ ವಿನಂತಿ:
ಬಸವತತ್ವ ಪೂಜ್ಯರಾದ ಭಾಲ್ಕಿ ಶ್ರೀ, ಹುಲಸೂರು ಶ್ರೀ, ಬಸವಧರ್ಮ ಪೀಠ, ಪಂಚಾಕ್ಷರಿ ಶ್ರೀ, ಅಕ್ಕ ಗಂಗಾಂಬಿಕೆ ಮತ್ತು ಸ್ಥಳೀಯ ಬಸವಪರ ಸಂಘಟನೆಗಳು ಯಾವ ಉದ್ಧೇಶದಿಂದ ನೀವು ಅವರ ಜೊತೆ ಕೈಜೋಡಿಸಿರುವಿರಿ ಉತ್ತರಿಸಬೇಕಾಗುತ್ತದೆ. ಬಸವರಾಜ ಪಾಟೀಲ ಸೇಡಂ ಅವರು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಿ ಅವರ ಮುಂದಿನ ಜೀವನ ಲಿಂಗಾಯತ ಧರ್ಮಕ್ಕಾಗಿ ಸಮರ್ಪಿಸಿದರೆ ಅವರ ಕಾರ್ಯಗಳಿಗೆ ಕೈ ಜೋಡಿಸಿ. ಇಲ್ಲವಾದರೆ ಅವರ ಜೊತೆ ಸೇರಿ ಐತಿಹಾಸಿಕ ತಪ್ಪು ಎಸಗಿ ಲಿಂಗಾಯತ ಧರ್ಮಕ್ಷೇತ್ರವನ್ನು ಆರ್ ಎಸ್ ಎಸ್ ಅಡ್ಡವಾಗಿ ಮಾರ್ಪಡಿಸಿ ಬಸವ ತತ್ವಕ್ಕೆ ದ್ರೋಹ ಎಸಗದಿರಿ.
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.
