Breaking News

ದೌರ್ಜನ್ಯ ಪ್ರಕರಣ: ಸಂಗನಾಳ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

Atrocity case: District in-charge minister visits Sanganala village

ಜಾಹೀರಾತು

ಪರಿಹಾರ ಮಂಜೂರಾತಿಯ ಆದೇಶ ಪ್ರತಿ ವಿತರಣೆ

ಕೊಪ್ಪಳ, ಆಗಸ್ಟ್ 19 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಘಟಿಸಿದ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಆಗಸ್ಟ್ 19ರಂದು ಸಂಗನಾಳ ಗ್ರಾಮಕ್ಕೆ ಭೇಟಿ ನೀಡಿ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನದ ಮಂಜೂರಾತಿಯ ಆದೇಶದ ಪ್ರತಿ ನೀಡಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿ, ಸಂಸದರಾದ ರಾಜಶೇಖರ ಹಿಟ್ನಾಳ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಘಟನೆಯ ಬಗ್ಗೆ ಕುಟುಂಬದವರಿಗೆ ಕೇಳಿ, ಮೃತನ ತಾಯಿ ಮತ್ತು ಸಹೋದರರಿಗೆ ಸಾಂತ್ವನ ಹೇಳಿದರು.


ಮೊದಲ ಕಂತಿನ ಪರಿಹಾರ:
ಮೃತ ವ್ಯಕ್ತಿಯ ತಾಯಿ ಯಲ್ಲಮ್ಮ ಗಂಡ ದಿ.ಈರಪ್ಪ ಬಂಡಿಹಾಳ ಅವರಿಗೆ ಒಟ್ಟು ರೂ. 8.25 ಲಕ್ಷಗಳ ಪರಿಹಾರ ಧನದ ಪೈಕಿ ಮೊದಲ ಕಂತಿನ ರೂ. 4.125 ಲಕ್ಷ ರೂ.ಗಳ ಪರಿಹಾರದ ಆದೇಶ ಪ್ರತಿಯನ್ನು
ವಿತರಿಸಲಾಯಿತು.
ಅನುಕಂಪದ ಮೇಲೆ ನೌಕರಿ: ಮೃತ ವ್ಯಕ್ತಿಯ ಕುಟುಂಬಕ್ಕೆ ಉಳಿದ ಕಂತಿನ ಪರಿಹಾರ ಧನವನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ ಸಂಬಂಧಿಸಿದವರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಜಮೆ ಮಾಡಲಾಗುವುದು. ಕುಟುಂಬದ ಸದಸ್ಯರಿಗೆ ಚಾಲ್ತಿಯಿರುವ ಸರ್ಕಾರದ ನಿಯಮಾವಳಿಗಳನುಸಾರ ಅನುಕಂಪ ಆಧಾರದ ಸರಕಾರಿ ನೌಕರಿಯನ್ನು ಸಮಾಜ ಕಲ್ಯಾಣ ಇಲಾಖೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಅನುಮೋದನೆಯೊಂದಿಗೆ ನೀಡಲಾಗುವುದು. ದೋಷಾರೋಪಣೆ ಪಟ್ಟಿ ಸಲ್ಲಿಕೆಯಾದ ನಂತರ ಉಳಿದ ಪರಿಹಾರ ಧನವನ್ನು ಮುಂಜೂರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ನೌಕರಿ ನೀಡಲು ಮನವಿ: ಮನೆಯಲ್ಲಿ ದುಡಿಯುವ ವ್ಯಕ್ತಿಯೇ ಸಾವಿಗೀಡಾಗಿದ್ದಾನೆ. ಮನೆ ನಡೆಸುವುದು ಕಷ್ಟವಾಗಿದೆ. ನನ್ನ ಮಗನಿಗೆ ನೌಕರಿ ನೀಡಬೇಕು ಎಂದು ಮೃತ ವ್ಯಕ್ತಿಯ ತಾಯಿ ಸಚಿವರಲ್ಲಿ ಮನವಿ ಮಾಡಿದಳು. ನಿಯಮಾನುಸಾರ ಕುಟುಂಬದ ಒಬ್ಬರಿಗೆ ಗ್ರೂಪ್ ಸಿ ವೃಂದದ ನೌಕರಿ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಸಚಿವರು ತಿಳಿಸಿದರು.
ಈ ಘಟನೆ ಎಚ್ಚರಿಕೆ ಗಂಟೆಯಾಗಲಿ: ಇದು ಒಬ್ಬ ವ್ಯಕ್ತಿಯ ಸಾವಲ್ಲ. ಕೆಳ ಜಾತಿಯ ಜನರ ಸಾವು. ಜಿಲ್ಲೆಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಅಸ್ಪೃಶ್ಯತೆ ನಾಶವಾಗಬೇಕು.
ಜಾತಿ ಧರ್ಮ ಬೇಧ ಭಾವ ಮಾಡದೇ ಎಲ್ಲರೂ ಒಂದಾಗಿ ಬಾಳುವ ಹಾಗೆ ವ್ಯವಸ್ಥೆ ಮಾಡಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಈ ಘಟನೆ ಇನ್ನೀತರರಿಗೆ ಎಚ್ಚರಿಕೆ ಗಂಟೆಯಾಗಬೇಕು. ಜಿಲ್ಲೆಯಲ್ಲಿನ ಎಲ್ಲಾ ಕಡೆಗಿನ ಯಾವುದೇ ಅಂಗಡಿ, ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ ಕೂಡಲೇ ರವಾನೆಯಾಗಬೇಕು. ಜಿಲ್ಲೆಯಲ್ಲಿ ಸೌಹಾರ್ದತೆ ಇದೆ. ಕೆಲವು ಕೆಟ್ಟ ಮನಸುಗಳಿಂದ ಈ ರೀತಿ ಅವಘಡಗಳು ಸಂಭವಿಸುತ್ತಿವೆ. ಇದನ್ನು ಸರಿಪಡಿಸಬೇಕು ಎಂದು
ಮುಖಂಡರಾದ ಕರಿಯಪ್ಪ ಗುಡಿಮನಿ, ಮುತ್ತಣ್ಣ ನಡುವಿನಕೆರಿ, ಮುದುಕಪ್ಪ‌ ಮತ್ತು ಯಡಿಯೂರ ವಿರೂಪಾಕ್ಷಿ ಹಾಗೂ ಇನ್ನೀತರರು ಮನವಿ ಮಾಡಿದರು.
ಕಡಿವಾಣಕ್ಕೆ ಕ್ರಮ: ಜಾತಿ ದೌರ್ಜನ್ಯ ಅಕ್ಷಮ್ಯ. ಇಂತಹ ಪ್ರಕರಣಗಳು ಮಾನವ ಕುಲಕ್ಕೆ ಕಳಂಕವನ್ನುಂಟು ಮಾಡುತ್ತವೆ.
ಇಂತಹ ಅವಘಡಗಳು ಸಂಭವಿಸಿದಾಗ‌ ಈ ಹಿಂದೆ ಮುಲಾಜಿಲ್ಲದೇ ಕ್ರಮ ಜರುಗಿಸಿದ್ದೇವೆ. ತಪ್ಪಿತಸ್ಥರನ್ನು ಯಾವಾಗಲು ರಕ್ಷಣೆ ಮಾಡುವುದಿಲ್ಲ. ತಪ್ಪು ಕಂಡುಬಂದರೆ ಅದನ್ನು ಸಹಿಸುವುದಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಇದೆ ವೇಳೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರಸಿದ್ಧಿ, ತಹಸೀಲ್ದಾರರಾದ ಬಸವರಾಜ ಟಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ತಳವಾರ
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಕರಣ ಏನು:
ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದ 27 ವರ್ಷದ ಯಮನೂರು ಸ್ವಾಮಿ ತಂದೆ ಈರಪ್ಪ ಬಂಡಿಹಾಳ್ ಎಂಬ ಯುವಕನನ್ನು ಅದೇ ಗ್ರಾಮದ ಕ್ಷೌರದ ಅಂಗಡಿಯವನು ಕ್ಷೌರ ಮಾಡುವ ವಿಷಯವಾಗಿ ಜಗಳವಾಗಿ ಜಾತಿ ನಿಂದನೆ ಮಾಡಿ ಕೊಲೆಯಾಗಿದ್ದು, ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆ, ಗುನ್ನೆ ಸಂಖ್ಯೆ: 121/2024 ದಿನಾಂಕ: 17.08.2024ರ ಮೂಲಕ ದೌರ್ಜನ್ಯ ಪ್ರತಿಬಂಧಕ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

About Mallikarjun

Check Also

ದೇಶದಲ್ಲಿಅಧಿಕಾರಶಾಹಿ ಪದ್ಧತಿನಿರ್ಮೂಲವಾಗಬೇಕು : ಡಾ.ಕೆ ಎಸ್ ಜನಾರ್ದನ್

Bureaucracy should be eradicated in the country: Dr. KS Janardhan ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ  …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.