Ramayana storyline 'Purushotthamayana' novel by Ju. Chief Minister Siddaramaiah's Lokkarpane on 29th
ಬೆಂಗಳೂರು, ಜು,25: ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಪುರುಷೋತ್ತಮ ದಾಸ್ ಹೆಗ್ಗಡೆ ವಿರಚಿತ ರಾಮಾಯಣದ ಕಥಾ ಹಂದರವನ್ನು ಹೊಂದಿರುವ ‘ಪುರುಷೋತ್ತಮಾಯಣ’ ಎಂಬ ಎರಡು ಸಂಪುಟಗಳ ಬೃಹತ್ ಕಾದಂಬರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 29 ರಂದು ಬಿಡುಗಡೆ ಮಾಡಲಿದ್ದಾರೆ.
ನಗರದ ಒರಾಯನ್ ಮಾಲ್‍ನ ಎದುರುಗಡೆಯ ಕೆ.ಆರ್.ಡಿ.ಸಿ.ಎಲ್ ಸಭಾಂಗಣದಲ್ಲಿ ನಡೆಯಲಿಲರುವ ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಡಾ. ಈ ರಾಮಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ಕಾರ್ಯದರ್ಶಿ ಸಿ ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಚಿಂತಕರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕೃತಿ ಪರಿಚಯಿಸಲಿದ್ದಾರೆ.
ಮೂಲ ರಾಮಾಯಣದಲ್ಲಿನ ಮಿಥ್ಯೆ, ಅಲೌಕಿಕತೆ, ಕಾಲ್ಪನಿಕತೆ, ಪ್ರಕ್ಷಿಪ್ತತೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕಾದಂಬರಿಯನ್ನು ರಚಿಸಲಾಗಿದ್ದು ಪಾತ್ರಗಳ ಮೂಲ, ಸ್ವಭಾವ, ಸೂಕ್ಷ್ಮತೆಗಳನ್ನು ವಿಷದವಾಗಿ ಚಿತ್ರೀಕರಿಸಲು ಪ್ರಯತ್ನಿಸಲಾಗಿದೆ. ಹೊಸ ಪಾತ್ರ-ಸನ್ನಿವೇಶಗಳನ್ನು ಹೊಸೆದು ಕಳಚಿದ್ದ ಕೊಂಡಿಗಳನ್ನು ಬೆಸೆದು ಸುಂದರ ಸರಪಳಿಯನ್ನು ನಿರ್ಮಿಸಲಾಗಿದ್ದು ವಿಸ್ತ್ರುತವಾದ ಮಾತುಕತೆಗಳು, ವಾದ-ವಿವಾದಗಳು ಪಾತ್ರಗಳ ಅಂತರಂಗವನ್ನು ಭೇದಿಸುತ್ತವೆ ಎಂದು ಕೃತಿ ರಚನೆಕಾರರು ತಿಳಿಸಿದ್ದಾರೆ.
ಭೂಮಿಗಾಗಿ ಬಡಿದಾಟ ಮೂಲನಿವಾಸಿ ರಾವಣನನ್ನು ಅನಿವಾಸಿಗಳು ಬಗ್ಗು ಬಡಿಯುವಂತೆ ಪ್ರೇರೇಪಿಸುತ್ತದೆ. ತಾರಕಾಸುರುನ ಸಂಹಾರಕ್ಕಾಗಿ ಕಾರ್ತಿಕೇಯನು ಆಯ್ಕೆಯಾದಂತೆ ಪಂಚಋಷಿಗಳ, ಇಂದ್ರಾದಿ ದೇವತೆಗಳ ನೇತೃತ್ವದಲ್ಲಿ ರಾವಣನ ಸಂಹಾರಕ್ಕಾಗಿ ರಾಮನು ಆಯ್ಕೆಯಾಗಿ ರಾವಣನ ಸಂಹಾರದಲ್ಲಿ ನಿರತನಾಗುತ್ತಾನೆ.
ರಾಮನ ಬಲ, ತುಮುಲ, ಅಶಕ್ತತೆ, ಆಯ್ಕೆ, ವಿರೋಧಾಭಾಸಗಳನ್ನು ಕೃತಿ ಅನಾವರಣಗೊಳಿಸಿದ್ದು ಸೀತೆಯ ಅಹಿಂಸಾ ನೀತಿ, ಬುದ್ಧಿವಾದ, ಸಾಮಾಜಿಕ ನಿಲುವುಗಳನ್ನು ತೋರಿಸಲಾಗಿದೆ. ಪುರಾತನ ಘಟನಾವಳಿಗಳನ್ನು ವರ್ತಮಾನದಲ್ಲಿನ ಜ್ಞಾನದ ಆಧಾರದಲ್ಲಿ ವಿಶ್ಲೇಷಿಸಲಾಗಿದ್ದು ಅನೇಕ ಅಂಶಗಳಿಗೆ ಸೂಕ್ತ ಪುರಾವೆ, ಸಾಕ್ಷ್ಯಾಧಾರಗಳನ್ನು ನೀಡಲು ಸಾಧ್ಯವಿಲ್ಲದ್ದರಿಂದ ವಾಸ್ತವಕ್ಕೆ ತೀರ ಸನಿಹವಾಗಿ ಕಲ್ಪಿಸಿಕೊಂಡು ಕಾದಂಬರಿ ರೂಪವನ್ನು ನೀಡಲಾಗಿದೆ. ಯಾವುದೇ ಅನುಮಾನ, ಗೊಂದಲಗಳಿಗೆ ಆಸ್ಪದ ನೀಡದೆ ಕಥೆಯು ವೇಗವಾಗಿ ಸಾಗುತ್ತದೆ ಎಂದು ಲೇಖಕರು ತಿಳಿಸಿದ್ದಾರೆ.