Breaking News

ಮಹಾಂತ ಜೋಳಿಗೆಯ ಶಿವಶಿಲ್ಪಿಯ ಜನ್ಮದಿನ: ವಿವಿಧ ಕಾರ್ಯಕ್ರಮ

Mahantha Jolige Shivashilpi's Birthday: Various Programmes

ಕೊಪ್ಪಳ ಆಗಸ್ಟ್ 01 (ಕರ್ನಾಟಕ ವಾರ್ತೆ): ಮಹಾಂತ ಜೋಳಿಗೆಯ ಶಿವಶಿಲ್ಪಿ, ವ್ಯಸನಮುಕ್ತ ಆಂದೋಲನದ ಹರಿಕಾರರಾದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಇಳಕಲ್‌ದ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಹಿನ್ನೆಲೆಯ ವ್ಯಸನ ಮುಕ್ತ ದಿನವನ್ನು ಜನಜಾಗೃತಿ ಜಾಥಾ, ಪ್ರತಿಜ್ಞಾವಿಧಿ ಬೋಧನೆ, ವಿಶೇಷ ಉಪನ್ಯಾಸ, ಕರಪತ್ರಗಳ ಬಿಡುಗಡೆ ಮೂಲಕ ಆಗಸ್ಟ್ 1ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಳಗ್ಗೆ ಜನಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನದ ರಸ್ತೆಯಲ್ಲಿರುವ ಶಿವಶಾಂತವೀರ ನಗರದವರೆಗೆ ಜನಜಾಗೃತಿಗಾಗಿ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ನಡೆಸಲಾಯಿತು. ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಬಾಲಕರ ಸರಕಾರಿ ಪ್ರಥಮ ದರ್ಜೆ ಕಾಲೇಜ್, ಶ್ರೀ ಗವಿಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿಗಳು, ಮಾದಕವಸ್ತು, ತಂಬಾಕು, ಮದ್ಯಪಾನ ದುಷ್ಪರಿಣಾಮದ ಜಾಗೃತಿಯ ಬ್ಯಾನರ್ ಹಿಡಿದು ಸಾಲಾಗಿ ಸಂಚರಿಸಿದರು. ‘ತಂಬಾಕು ತ್ಯಜಿಸಿ ನೆಮ್ಮದಿಯ ಜೀವನ ನಡೆಸಿ’, ‘ಮಾದಕ ಚಟದಿಂದ ಮರಣಕ್ಕೆ ದಾರಿ’, ‘ಕುಡಿತದ ಗೀಳು ಬಾಳಿಗೆಲ್ಲ ಗೋಳು’ ಎನ್ನುವ ನಾನಾ ಸಂದೇಶದ ಫಲಕಗಳನ್ನು ಪ್ರದರ್ಶಿಸಿ ಜನಜಾಗೃತಿ ಮೂಡಿಸಿದರು.
ಬಳಿಕ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಮೊದಲಿಗೆ ಶ್ರೀ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯುವಕರು ಈ ದೇಶದ ಬಹುದೊಡ್ಡ ಸಂಪತ್ತು. ವಿದ್ಯಾರ್ಥಿ ಯುವಜನರು ಸನ್ಮಾರ್ಗದಲ್ಲಿ ನಡೆದು ಕ್ರಿಯಾಶೀಲರಾಗಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿದಾಗ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮನುಷ್ಯನ ನೆಮ್ಮದಿ ಮೆದುಳನ್ನು ಹಾಳು ಮಾಡುವ ಮದ್ಯಪಾನ, ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಬಾಧಿಸುತ್ತಿದ್ದು ತಂಬಾಕು ಸೇವೆನೆ ಮಾಡುವವರಿಗೆ ಈ ಬಗ್ಗೆ ಅರಿವು ಮೂಡಿಸಿ ಅವರಿಗೆ ಸನ್ಮಾರ್ಗ ತೋರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಬಳಿಕ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ತಮ್ಮ ಜೋಳಿಗೆಯಲ್ಲಿ ಬಿಕ್ಷೆ ರೂಪದಲ್ಲಿ ತಂಬಾಕು, ಮಾದಕ ವಸ್ತುಗಳನ್ನು ಸಂಗ್ರಹಿಸಿ, ಈ ಮೂಲಕ ಅಸಂಖ್ಯಾತ ಜನರಲ್ಲಿದ್ದ ವ್ಯಸನಗಳನ್ನು ದೂರ ಮಾಡಿದರು. ಅತಿಯಾಗಿ ಟಿವಿ ವೀಕ್ಷಣೆ, ಮೊಬೈಲ್ ಬಳಸುವುದು ಕೂಡ ವ್ಯಸನವೇ ಆಗಿದ್ದು ಇದರಿಂದ ವಿದ್ಯಾರ್ಥಿಗಳು ಹೊರಬಂದು ಜ್ಞಾನಾರ್ಜನೆ ಮಾಡಬೇಕು ಎಂದು ಸಲಹೆ ಮಾಡಿದರು.
ಮಾನಸಿಕ ರೋಗ ತಜ್ಞರಾದ ಡಾ.ವಾದಿರಾಜ ಗೊರೆಬಾಳ ಅವರು ಉಪನ್ಯಾಸ ನೀಡಿ, ತಂಬಾಕು, ಮಾದಕವಸ್ತುಗಳು, ಮದ್ಯಪಾನ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಹಾನಿಯಿದೆ ಎಂಬುದು ವಿಜ್ಞಾನದಿಂದ ದೃಢಪಟ್ಟಿದೆ. ಇಂತಹ ವ್ಯಸನಕ್ಕೆ ಒಳಗಾದವರು ಬೇಗನೆ ಅದರಿಂದ ಹೊರಬರುವುದಿಲ್ಲ ಎನ್ನುವ ಎಚ್ಚರಿಕೆ ಹೊಂದಬೇಕು. ದೃಢಮನಸು, ಉತ್ತಮ ಸಂಕಲ್ಪ ಮಾಡಿದಾಗ ಮಾತ್ರ ಯಾವುದೇ ವ್ಯಸನದಿಂದ ಬಿಡುಗಡೆ ಸಾಧ್ಯವಿದೆ ಎಂದು ತಿಳಿಸಿದರು.
ಸಮಾಜ ಚಿಂತಕರು ಆಗಿರುವ ನಿವೃತ್ತ ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿಗಳಾದ ಡಾ.ಸಂಗಮೇಶ ಕಲಹಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ, ಪಾನಿಪುರಿ ಬರ್ಗರ್ ಬೇಕರಿ ಪದಾರ್ಥ ಸೇವಿಸಿ 10 ವರ್ಷದ ಬಾಲಕನು ಕರುಳು ಹುಣ್ಣಿನಿಂದ ಮೃತಪಟ್ಟದ್ದು, ಮೊಬೈಲ್ ಬಿಟ್ಟು ಓದು ಎಂದಿದ್ದಕ್ಕೆ 15 ವರ್ಷದ ಬಾಲಕಿ ನದಿಗೆ ಹಾರಿ ಪ್ರಾಣ ಕಳೆದುಕೊಂಡದ್ದು, 35 ವರ್ಷದಿಂದ ತಂಬಾಕು ತಿನ್ನುತ್ತಿದ್ದ 61 ವರ್ಷದ ವಯಸ್ಸಿನ ಅಜ್ಜಿಯು ಕ್ಯಾನ್ಸರಗೆ ಬಲಿಯಾಗಿದ್ದು, ಪಿಯುಸಿಯಲ್ಲಿ ಶೇ.95 ಅಂಕ ಪಡೆದಿದ್ದ ಯುವಕನು ಗುಟುಕು ಸೇವನೆಯಿಂದ ಕ್ಯಾನ್ಸರಗೆ ಬಲಿಯಾದ ಅನೇಕ ಘಟನೆಗಳು ನಮ್ಮ ಕಣ್ಮುಂದೆಯೇ ನಡೆದಿವೆ. ಸಂಸಾರದ ಜವಾಬ್ದಾರಿ ಹೊತ್ತ ಯುವಕರು ಕುಡಿತಕ್ಕೆ ದಾಸರಾಗಿ ಎಲ್ಲೆಂದರಲ್ಲಿ ಬೀಳುವ ದೃಶ್ಯಗಳು ನಿತ್ಯ ಕಣ್ಣಿಗೆ ರಾಚುತ್ತವೆ. ತಿಳಿವಳಿಕೆಯುಳ್ಳ ಮಾನವನು ಇಂತಹ ವ್ಯಸನಗಳಿಂದ ದೂರ ಇರಬೇಕು ಎಂಬುದು ಇಳಕಲ್ ಶ್ರೀ ಮಹಾಂತ ಶಿವಯೋಗಿಗಳ ಆಶಯವಾಗಿತ್ತು. ತಂಬಾಕು, ಗುಟುಕಾದಂತಹ ಮಾದಕ ಪದಾರ್ಥಗಳನ್ನು ಜೋಳಿಗೆಗೆ ಪಡೆದು ಅನೇಕ ಜನರಲ್ಲಿದ್ದ ದುಶ್ಚಟಗಳನ್ನು ದೂರ ಮಾಡಿದರು. ಅಂತಹ ಮಹಾತ್ಮರ ಸ್ಮರಣೆ, ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ಧ ಹೊಸಮನಿ ಅವರು ಪ್ರಾಸ್ತಾವಿಕ ಮಾತನಾಡಿ, ನಮ್ಮ ನಾಡಿನಲ್ಲಿ ಸಮಾಜೋದ್ಧಾರ ಅನೇಕ ಚಳುವಳಿಗಳು ನಡೆದಿವೆ. ಈ ಸಾಲಿಗೆ ಮಹಾಂತ ಜೋಳಿಗೆ ವ್ಯಸನಮುಕ್ತ ಆಂದೋಲನ ಸಹ ಸೇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆಗಸ್ಟ್ 1ರಂದು, ವ್ಯಸನಮುಕ್ತ ಆಂದೋಲನದ ಹರಿಕಾರರಾದ ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನ ಎಂದು ಆಚರಿಸುತ್ತಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ, ಬಾಲ್ಯವಿವಾಹ, ಪೊಕ್ಸೊ ಕಾಯಿದೆ, ಮಕ್ಕಳ ಸುರಕ್ಷತೆ, ಮಹಿಳಾ ಸುರಕ್ಷತೆ ಕುರಿತಾದ ಜಾಗೃತಿಯ ಕರಪತ್ರಗಳನ್ನು ಸಹ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕರಾದ ನರಸಿಂಹಮೂರ್ತಿ, ಬಾಲಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ ಆರೆಂಟನೂರ, ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರಾದ ಈಶಪ್ಪ ದೊಡ್ಡಮನಿ, ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಶಾಂತಮ್ಮ ಕಟ್ಟಿಮನಿ, ಸಖಿ ಒನ್ ಸ್ಟಾಪ್ ಸೆಂಟರನ ಯಮುನಾ ಬೆಸ್ತಾರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಗಣ್ಯರು ಭಾಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಬಸವೇಶ್ವರ ಟ್ರಸ್ಟ್, ಬಸವ ಬಳಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಹಿರಿಯ ಪತ್ರಕರ್ತರಾದ ಮಹಾಂತೇಶ ಮಲ್ಲನಗೌಡರ, ಸಿದ್ದಪ್ಪ ಹಂಚಿನಾಳ ಸೇರಿದಂತೆ ಇನ್ನೀತರ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.