Breaking News

ತಾಲೂಕು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದು : ಆರ್.ಗಾಣಿಗೇರ

Inauguration ceremony of new president of taluk The role of the press in providing social justice is important: R. Ganigera

ಗಂಗಾವತಿ, ಏ.01: ಕರ್ನಾಟಕ ಪತ್ರಕರ್ತರ ಸಂಘದ ಪ್ರಾಂತ ಮಟ್ಟದ ಪದಾಧಿಕಾರಿಗಳ ಸಭೆ ಹಾಗೂ ಗಂಗಾವತಿ ತಾಲೂಕ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ನಗರದ ಶ್ರೀ ಕೃಷ್ಣ ಭವನ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು


ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ರಮೇಶ ಗಾಣಿಗೇರ ಅವರು ಉದ್ಘಾಟಿಸಿ ಸೈಬರ್ ಕ್ರೈಂ ಮತ್ತು ಡಿಜಿಟಲ್ ಮಾಧ್ಯಮ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಯುವಕರು ತಂತ್ರಜ್ಞಾನಕ್ಕೆ ಮಾರುಹೋಗಿದ್ದು, ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಸೈಬರ್ ಕ್ರೈಂಗಳು ಹೆಚ್ಚುತ್ತಿರುವುದು ವಿಷಾದನೀಯ.

ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಬದುಕು ರೂಪಿಸಿಕೊಳ್ಳಬೇಕು. ದಾರ್ಶನಿಕರು, ಸಂತರು, ಸಾಮಾಜಿಕ ಹೋರಾಟಗಾರರು, ಸ್ವತಂತ್ರ ಹೋರಾಟಗಾರರಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕಾ ಮಾಧ್ಯಮವು ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ. ಶೋಷಿತರಿಗೆ, ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದು.

ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲ ಪತ್ರಿn.ಕೋದ್ಯಮವು ಡಿಜಿಟಲೀಕರಣವಾಗುತ್ತಿದೆ. ಕ್ಷಣ ಕ್ಷಣದ ಸುದ್ದಿಗಳು ಜನರನ್ನು ತಲುಪುತ್ತಿವೆ. ಸಾಕಷ್ಟು ಪತ್ರಿಕಾ ವರದಿಗಳನ್ನು ಆಧರಿಸಿ ನ್ಯಾಯಾಲಯವು ಸ್ವಯಂ ಪ್ರಕರಣ ದಾಖಲಿಸಿಕೊಂಡು ಶೋಷಿತರಿಗೆ ನ್ಯಾಯದಾನ ನೀಡಿದ ಉದಾಹರಣೆಗಳಿವೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ವರದಿಗಳನ್ನು ಬಿತ್ತರಿಸಬೇಕು ಎಂದು ತಿಳಿಸಿದರು.


ನಂತರ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ, ಸಂಘದ ಕಾರ್ಯವೈಖರಿ ಹಾಗೂ ಸಂಘದಿಂದ ಪತ್ರಕರ್ತರಿಗೆ ದೊರೆಯುವ ಸವಲತ್ತುಗಳ ಕುರಿತು ವಿವರಿಸಿದರು. ಸಂಘಗಳು ಅನೇಕ ಇರಬಹುದು. ಆದರೆ, ಪತ್ರಕರ್ತರು ಮಾತ್ರ ಎಲ್ಲರೂ ಒಂದೇ. ಪತ್ರಕರ್ತರಲ್ಲಿ ಸಾಕಷ್ಟು ಜನ ಆರ್ಥಿಕವಾಗಿ ಸದೃಢರಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನಮ್ಮ ಸಂಘವು ನೆರವಿನ ಹಸ್ತ ನೀಡುತ್ತದೆ.

ಜವಾಬ್ದಾರಿಯುತ ಪತ್ರಕರ್ತರು ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸರಕಾರಗಳು ಪತ್ರಕರ್ತರ ಬೆನ್ನಿಗೆ ನಿಂತು ನೆರವು ನೀಡುತ್ತಿರುವುದು ಶ್ಲಾಘನೀಯ. ಪತ್ರಕರ್ತರ ರಕ್ಷಣೆ ನಮ್ಮ ಸಂಘದ ಜವಾಬ್ದಾರಿ. ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಗಳು ಕೂಡ ಪತ್ರಕರ್ತರ ಪರ ಸದಾ ನಿಂತು ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದರು.


18 ಸಮುದಾಯ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ಮಾತನಾಡಿ, ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ಸಾಮಾಜಿಕ ಕಳಕಳಿಯಿಂದ ವರದಿ ಬಿತ್ತರಿಸುವ ಪತ್ರಕರ್ತರಿಗೆ ಇತ್ತೀಚಿನ ದಿನಗಳಲ್ಲಿ ಬೆದರಿಕೆಗಳು ಹೆಚ್ಚಾಗುತ್ತಿವೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವಂತಹ ವಾತಾವರಣ ಸೃಷ್ಠಿಯಾಗಬೇಕಿದೆ. ಪ್ರಮಾಣಿಕ ಪತ್ರಕರ್ತರು ಹೆದರುವ ಅಗತ್ಯವಿಲ್ಲ. ಸಮಾಜದ ಲೋಪದೋಷಗಳನ್ನು ಧೈರ್ಯವಾಗಿ ವರದಿ ಮಾಡಬೇಕು. ಇಂತಹ ಪತ್ರಕರ್ತರಿಗೆ ಪೊಲೀಸ್ ಇಲಾಖೆ ಹಾಗೂ ನಮ್ಮೆಲ್ಲರ ಬೆಂಬಲ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಜಾಮೀಯಾ ಮಸೀದಿ ಧರ್ಮಗುರು ಮಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಮಾತನಾಡಿ, ಎಲ್ಲಾ ಧರ್ಮಗಳ ರಕ್ಷಣೆಗೆ ಧರ್ಮಗುರುಗಳನ್ನು ಭಗವಂತ ನೇಮಿಸಿರುವಂತೆ ಸಮಾಜದ ದುಷ್ಟ ಶಕ್ತಿಗಳಿಂದ ಜನಸಾಮಾನ್ಯರ ರಕ್ಷಣೆಗೆ ಆ ಭಗವಂತನು ಪತ್ರಕರ್ತರನ್ನು ಸೃಷ್ಠಿಸಿದ್ದಾನೆ. ಪತ್ರಿಕೋದ್ಯಮ ಎಂಬುವುದು ದೈವಿಕಾರ್ಯ. ಜನಸಾಮಾನ್ಯರ ಸಂಕಷ್ಟಗಳು ಹಾಗೂ ಶೋಷಿತರ ಪರ ಪತ್ರಕರ್ತರು ವರದಿ ಪ್ರಕಟಿಸುವ ಮೂಲಕ ಸರಕಾರ ಹಾಗೂ ಸಮಾಜದ ಕಣ್ಣು ತೆರೆಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಮಹೋನ್ನತ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ ಎಂದು ತಿಳಿಸಿದರು.
ಈ ವೇಳೆ ಗಂಗಾವತಿ ತಾಲೂಕ ನೂತನ ಅಧ್ಯಕ್ಷ ಶ್ರೀನಿವಾಸ ದೇವಿಕೇರಿ ಅವರಿಗೆ ಅತಿಥಿ ಗಣ್ಯರಿಂದ ವಿಶೇಷ ಸನ್ಮಾನ ನೆರವೇರಿಸಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಸುದೇಶಕುಮಾರ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ ಮುಚಳಂಬಿ, ರಾಜ್ಯ ಕಾರ್ಯದರ್ಶಿ ಕೆ.ಗೋಪಾಲ ಸಂಡೂರು, ಬಳ್ಳಾರಿ ಜಿಲ್ಲಾಧ್ಯಕ್ಷ ಅರುಣ್ ಭೂಪಾಲ್, ವಿಜಯನಗರ ಜಿಲ್ಲಾಧ್ಯಕ್ಷ ಬಿ.ಹೆಚ್.ಎಸ್. ರಾಜು, ಬಾಗಲೋಟೆ ಜಿಲ್ಲಾಧ್ಯಕ್ಷ ಡಿ.ಬಿ.ವಿಜಯಶಂಕರ, ಗದಗ ಜಿಲ್ಲಾಧ್ಯಕ್ಷ ರಮೇಶ ಎಂ.ಭಜಂತ್ರಿ, ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಪತ್ರಿಕೆ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ, ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಹಿರಿಯ ವಕೀಲರಾದ ಸೈಯ್ಯದ್ ಹಾಶುಮುದ್ದೀನ್, ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ|| ಅಮರೇಶ ಪಾಟೀಲ್, ದಲಿತ ಮುಖಂಡ ಹುಲಿಗೇಶ ದೇವರಮನಿ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷಿ ಸುದ್ಧಿ ಮಾಸ ಪತ್ರಿಕೆ ಸಂಪಾದಕ ಹಾಗೂ ಸಾಹಿತಿ ಲಿಂಗಾರೆಡ್ಡಿ ವಿ.ಆಲೂರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಮಲ್ಲಿಕಾರ್ಜುನ ಹೊಸ್ಕೇರಾ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಶರಣಪ್ಪ ಗುಮಗೇರಾ ಅವರು ಸ್ವಾಗತಿಸಿದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.