Chargesheet is not confidential documentation: Home Minister Parameshwar
ಬೆಂಗಳೂರು, ಸೆ.10:- ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೊಂಡಿದ್ದು, ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಕಚೇರಿ ಸ್ಪೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶ ಉಲ್ಲೇಖಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಮಿಕ್ಕ ವಿಚಾರಗಳು ಗೊತ್ತಿಲ್ಲ ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಅಂಶ ಬಹಿರಂಗವಾಗುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಅಪೋಸಿಟ್ ಲಾಯರ್‌ಗು ಚಾರ್ಜ್‌ಶೀಟ್ ನೀಡಲಾಗುತ್ತದೆ. ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನು ಅಲ್ಲ. ಅದನ್ನು ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಸಹಜವಾಗಿ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ಹೊರಗೆ ಬರುತ್ತದೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದು ಹೇಳಿದರು.
ಸಾರ್ವಜನಿಕವಾಗಿ ಮಾತನಾಡುವುದನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಾಕ್ಷ್ಯ, ದಾಖಲೆಗಳ ಆಧಾರದ ಮೇಲೆ ಪ್ರಕರಣ ನಡೆಯುತ್ತದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ, ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡುತ್ತಾರೆ. ಆ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಯುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಲು ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ ಎಂಬ ವಿಚಾರವನ್ನು ನಾನು ಸಹ ಹೇಳಿದ್ದೇನೆ. ಮಾಧ್ಯಮದವರು ಮುಖ್ಯಮಂತ್ರಿಯಾಗುತ್ತೀರ ಎಂದು ಕೇಳಿದಾಗ, ನಾವು ಬೇಡ ಅಂತ ಯಾಕೆ ಹೇಳಬೇಕು ಅಂತ ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಏನು ಇಲ್ಲ ಎಂದರು.
ಸಚಿವ ಎಂ.ಬಿ.ಪಾಟೀಲ್ ಅವರು ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ನಾನು ಸಹ ಗೃಹ ಇಲಾಖೆಗೆ ಸಂಬಂಧಿಸಿದ ಕೆಲಸ ಇದ್ದರೆ ದೆಹಲಿಗೆ ಹೋಗುತ್ತೇನೆ. ಹೋದಾಕ್ಷಣ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ಹೋಗಿದ್ದರು ಅಂತ ಹೇಳಿ ಬಿಟ್ಟರೆ ಹೇಗೆ? ಈ ಬಗ್ಗೆ ಚರ್ಚೆಯೇ ಅನಗತ್ಯ ಎಂದು ಹೇಳಿದರು.