Breaking News

ಕರ್ನಾಟಕರಾಜ್ಯೋತ್ಸವ, ಜ್ಯೋತಿ ರಥಯಾತ್ರೆ ಆಗಮನ ಹಿನ್ನೆಲೆ: ಕೊಪ್ಪಳದಲ್ಲಿ ಹಬ್ಬದ ಸಂಭ್ರಮ

Karnataka Rajyotsava, Jyoti Rathayatra Arrival Background: Festival celebrations in Koppal

ಕೊಪ್ಪಳ ನವೆಂಬರ್ 01 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯೋತ್ಸವ ಮತ್ತು ನವೆಂಬರ್ 2ರಂದು ಕೊಪ್ಪಳ ನಗರಕ್ಕೆ ಐತಿಹಾಸಿಕ ಜ್ಯೋತಿ ರಥಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ತವರು ಜಿಲ್ಲೆ ಕೊಪ್ಪಳ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.
ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಗಿರುವುದಕ್ಕೆ 2023ರ ನವೆಂಬರ್ 1ಕ್ಕೆ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ಸೂಚನೆಯಂತೆ ಜ್ಯೋತಿ ರಥಯಾತ್ರೆಯನ್ನು ಸಹ ಅದ್ಧೂರಿಯಾಗಿ ಬರ ಮಾಡಿಕೊಳ್ಳಲು ಜಿಲ್ಲಾಡಳಿತವು ಕೊಪ್ಪಳ ನಗರವನ್ನು ಶೃಂಗಾರಗೊಳಿಸುತ್ತಿದೆ.
ಜಿಲ್ಲಾಡಳಿತ ಭವನದಿಂದ ಜಿಲ್ಲಾ ಕ್ರೀಡಾಂಗಣದವರೆಗಿನ ಮುಖ್ಯರಸ್ತೆಯಲ್ಲಿ ಮತ್ತು ಪ್ರಮುಖ ವೃತ್ತಗಳಲ್ಲಿ ಸಾಲುಸಾಲು ರಂಗುರಂಗಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಾಡಧ್ವಜದ ಬಣ್ಣದ ಬಟ್ಟೆಗಳ ಮೂಲಕ ಮುಖ್ಯ ರಸ್ತೆಗಳಿಗೆ ವಿಶೇಷ ಮೆರುಗು ನೀಡಲಾಗಿದೆ. ನಗರದ ಬಸವೇಶ್ವರ ವೃತ್ತ, ಅಶೋಕ ವೃತ್ತ, ಗವಿಮಠ ರಸ್ತೆಯ ಕಮಾನು, ಎಸ್ಪಿ ಕಚೇರಿಯ ಎದುರಿನ ಪ್ರದೇಶ ಸೇರಿದಂತೆ ವಿವಿಧೆಡೆ ಪ್ರಕಾಶಮಾನವಾದ ಲೈಟುಗಳನ್ನು ಬೆಳಗಿಸಿ ಶೃಂಗಾರಗೊಳಿಸಲಾಗಿದೆ.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಚರ್ಚಿಸಿದಂತೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಮಾರ್ಗವಾಗಿ ಆಗಮಿಸಿ ಹೊಸಲಿಂಗಾಪೂರ, ಹೊಸಳ್ಳಿ, ಗಿಣಿಗೇರಿ, ಕೊಪ್ಪಳ, ದದೇಗಲ್, ಹಲಗೇರಿ, ಭಾನಾಪೂರ, ತಳಕಲ್, ಬನ್ನಿಕೊಪ್ಪ ಮಾರ್ಗವಾಗಿ ಗದಗ ಜಿಲ್ಲೆಯ ಲಕ್ಕುಂಡಿಗೆ ಜ್ಯೋತಿ ರಥಯಾತ್ರೆಯನ್ನು ಶಿಷ್ಠಾಚಾರದಂತೆ ಸ್ವಾಗತಿಸಿ, ಬೀಳ್ಕೊಡಲು ಆಯಾ ಗ್ರಾಮ ಪಂಚಾಯತ್‌ಗಳು, ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಸೂಚಿಸಲಾಗಿದ್ದು ವಿವಿಧೆಡೆ ಅಗತ್ಯ ಸಿದ್ಧತೆಯಾಗಿದೆ. ಕೊಪ್ಪಳ ನಗರದಲ್ಲಿ ಜ್ಯೋತಿ ರಥಯಾತ್ರೆ ಸಂಚರಿಸುವ ವೇಳೆ ಅದ್ಧೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಹಾಗೂ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಾಹಿತಿಗಳು, ಕಲಾವಿದರು, ಕನ್ನಡ ಪರ ಸಂಘಟನೆಗಳಿಗೆ ಜ್ಯೋತಿಯಾತ್ರೆ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಜಿಲ್ಲೆಯಲ್ಲಿ ಜ್ಯೋತಿ ಯಾತ್ರೆ ಸಾಗುವ ಸ್ಥಳಗಳಾದ ಮುನಿರಾಬಾದ್, ಹೊಸಲಿಂಗಾಪೂರ, ಹೊಸಳ್ಳಿ, ಗಿಣಿಗೇರಿ, ಕೊಪ್ಪಳ ನಗರ, ದದೇಗಲ್, ಹಲಗೇರಿ, ಭಾನಾಪೂರ, ತಳಕಲ್, ಬನ್ನಿಕೊಪ್ಪ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗುವ ರಸ್ತೆಯನ್ನು ಸ್ವಚ್ಛಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ್: ಮುನಿರಾಬಾದ್‌ನ ಜ್ಯೋತಿ ಯಾತ್ರೆ ಸ್ವಾಗತಿಸುವ ಸ್ಥಳದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಂಡ ಬ್ಯಾನರ್‌ಗಳ ಪ್ರದರ್ಶನಕ್ಕೆ ಸಹ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಗೆ ಆಗಮಿಸಲಿರುವ ಐತಿಹಾಸಿಕ ಜ್ಯೋತಿ ರಥಯಾತ್ರೆ ಸಂಚರಿಸುವ ಮಾರ್ಗದಲ್ಲಿ ಶಾಂತಿ ಪಾಲನೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ತಿಳಿಸಿದ್ದಾರೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.