Breaking News

2024ರನವೆಂಬರ್‌ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳು

Year round Kannada programs in Koppal district till November 2024

ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರಾದ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ ನವೆಂಬರ್ 01 (ಕರ್ನಾಟಕ ವಾರ್ತೆ): ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತವಾಗಿ 2023 ನವೆಂಬರ್ 01 ರಿಂದ 2024 ನವೆಂಬರ್‌ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಸಹ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತದಿಂದ ನವೆಂಬರ್ 1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸುವ ಅವಕಾಶ ತಮಗೆ ಒದಗಿ ಬಂದಿರುವುದು ತಮ್ಮ ಭಾಗ್ಯವಾಗಿದೆ ಎಂದು ತಿಳಿಸಿದ ಸಚಿವರು, ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ-ಶಾಂತಿ, ನೆಮ್ಮದಿ ನೆಲೆಸುವಂತಾಗಲಿ ಎಂದು ನಾಡದೇವತೆ ಭುವನೇಶ್ವರಿ ತಾಯಿಯಲ್ಲಿ ತಾವು ಪ್ರಾರ್ಥಿಸುವುದಾಗಿ ಹೇಳಿದರು.
ಸನ್ಮಾನ್ಯ ಮುಖ್ಯಮಂತ್ರಿ ಅವರು 2023-24ನೇ ಸಾಲಿನ ಆಯವ್ಯಯದಲ್ಲಿ ಪ್ರಮುಖ ಘೋಷಣೆಯೊಂದನ್ನು ಮಾಡಿದ್ದರು. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 2023ಕ್ಕೆ 50 ವರ್ಷ ಪೂರ್ಣಗೊಳ್ಳುವ ಈ ಮಹತ್ವದ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ, ಕನ್ನಡಿಗ ಕನ್ನಡದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಯೋಜನೆ ಅನುಷ್ಠಾನದ ಪ್ರಮುಖ ಹೊಣೆಗಾರಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾದ ತಮ್ಮ ಮೇಲಿದೆ ಎಂಬುದನ್ನು ಹೆಮ್ಮೆಯಿಂದ ಹೇಳ ಬಯಸುತ್ತೇನೆ ಎಂದರು.
ಮುಖ್ಯಮಂತ್ರಿಗಳು ಆಯವ್ಯದಲ್ಲಿ ಈ ಕಾರ್ಯಕ್ರಮವನ್ನು ಘೋಷಣೆ ಮಾಡುತ್ತಿದ್ದಂತೆ ಕನ್ನಡ ಮತ್ತು ಸಂಸ್ಕೃತಿಯು ಇಲಾಖೆಯು ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಈ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ ತಾವು ಇಡೀ ರಾಜ್ಯಾದ್ಯಂತ ಹಲವು ಸುತ್ತಿನ ಪ್ರವಾಸ ನಡೆಸಿ ಪ್ರಾದೇಶಿಕವಾರು ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧೆಡೆ ಸಾಹಿತಿಗಳು, ಚಿಂತಕರ ಸಭೆ ನಡೆಸಿ ಸವಿವರವಾಗಿ ಕಾರ್ಯಕ್ರಮಗಳ ರೂಪುರೇಷಗಳ ಬಗ್ಗೆ ಚರ್ಚಿಸಿ ಸಲಹೆ ಪಡೆದುಕೊಂಡು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಅಕ್ಟೋಬರ್ 17ರಂದು ಕರ್ನಾಟಕ ಸಂಭ್ರಮ-50ರ ಅಭಿಯಾನದ ಲಾಂಛನವನ್ನು ಮಾನ್ಯ ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದಾರೆ. ಈ ಲಾಂಛನವನ್ನು ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಬ್ಯಾನರ್ ಹಾಗೂ ಕರ ಪತ್ರಗಳ ಮೇಲೆ ಮುದ್ರಿಸಿ ಉಪಯೋಗಿಸಲು ಎಲ್ಲಾ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ.
ಇಂದು ನವೆಂಬರ್ 01 ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ-50ರ ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 05 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲು ಸಹ ಗ್ರಾಮ ಪಂಚಾಯತಿಗಳಲ್ಲಿ, ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳು, ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ಹುಯಿಲ್‌ಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ…, ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡದ ದೀಪ…. ಮತ್ತು ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಾಡುಗಳು ಮಾರ್ಧನಿಸಿ ಈ ನುಡಿ ನಮನದ ಮೂಲಕ ನಾಡು ನುಡಿಯ ರಕ್ಷಣೆಯ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸಂಭ್ರಮ-50ರ ಆಚರಣೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮತ್ತೊಂದು ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯಾದ್ಯಂತ ಜ್ಯೋತಿಯಾತ್ರೆ ಸಂಚರಿಸಲಿದ್ದು, ಈ ಜ್ಯೋತಿ ಯಾತ್ರೆಗೆ ಸ್ವಾಗತಿಸುವ ಹಾಗೂ ಬೀಳ್ಕೊಡುವ ಕಾರ್ಯಕ್ರಮದ ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಹರಿದು ಹಂಚಿಹೋಗಿದ್ದ ಈ ನಾಡಿನ ಏಕೀಕರಣ ಹೋರಾಟದಲ್ಲಿ ನಾಡಿನ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿದಂತೆ ಅನೇಕರು ಭಾಗಿಯಾದರು. ಆಲೂರು ವೆಂಕಟರಾವ್ ಅವರು ಕರ್ನಾಟಕ ಏಕೀಕರಣ ಚಳುವಳಿಗೆ ನಾಂದಿ ಹಾಡಿದರು. ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯರು, ಕಡಪ ರಾಘವೇಂದ್ರರಾವ್, ಹುಯಿಲಗೋಳ ನಾರಾಯಣರಾವ್, ಅಂದಾನಪ್ಪ ದೊಡ್ಡಮೇಟಿ, ಎಸ್. ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ ಪಾಟೀಲ ಪುಟ್ಟಪ್ಪ ಸೇರಿದಂತೆ ಈ ನಾಡಿನ ಅಸಂಖ್ಯಾತ ಲೇಖಕರು, ಚಿಂತಕರು, ಪತ್ರಕರ್ತರನ್ನು ನಾವಿಂದು ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಅನೇಕ ಮಹನಿಯರ ಹೋರಾಟದ ಪ್ರತಿಫಲವಾಗಿ 1956ರ ನವೆಂಬರ್ 01 ರಂದು ನಮ್ಮ ರಾಜ್ಯ ಉದಯವಾಯಿತು. ರಾಜ್ಯದ ಪ್ರಗತಿಗೆ ಭದ್ರ ಬುನಾದಿ ಹಾಕಿದ ಅಂದಿನ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ ಗಟ್ಟಿ ನಿರ್ಧಾರದಿಂದ 1973ರ ನವೆಂಬರ್ 01 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರವೂ ಪ್ರಮುಖವಾಗಿದೆ. ಕೊಪ್ಪಳ ಜಿಲ್ಲೆಯ ಅಳವಂಡಿ ಶಿವಮೂರ್ತಿಸ್ವಾಮಿ, ಶಿರೂರು ವೀರಭದ್ರಪ್ಪ ತೆಗ್ಗಿನಮನಿ, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳ, ಪಂಚಾಕ್ಷರಿ ಹಿರೇಮಠ, ಸೋಮಪ್ಪ ಡಂಬಳ, ದೇವೇಂದ್ರಕುಮಾರ ಹಕಾರಿ, ಭೀಮನಗೌಡ ಪಾಟೀಲ್, ಹನುಮರಡ್ಡಿ ಕಲ್ಗುಡಿ, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಸ್ಮರಿಸಲೇಬೇಕು ಎಂದರು.
ಆದಿಕವಿ ವಾಲ್ಮೀಕಿಯಿಂದ ಆರಂಭವಾಗಿ ಪಂಪ, ರನ್ನ ಮೊದಲಾದ ಕವಿಗಳು ತಮ್ಮ ಕಾವ್ಯದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಮನದುಂಬಿ ಹೊಗಳಿದ್ದಾರೆ. ರಾಷ್ಟçಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ವಿವಿಧತೆಯಲ್ಲಿ ಏಕತೆಯು ಇಲ್ಲಿ ನೆಲೆಸಿದೆ. ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎಂದ ಅವರು, ನಾಡು, ನುಡಿ, ನೆಲ, ಜಲ ಸಂರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರವು ಬದ್ಧವಾಗಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿ ಅನುಷ್ಠಾನಗೊಳಿಸುತ್ತಿದೆ. ಕನ್ನಡವನ್ನು ಕನ್ನಡಿಗರೆಲ್ಲರು ಮಾತನಾಡಬೇಕು. ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವಿದೆ. ಕನ್ನಡದ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಉಳಿಸಿ ಬೆಳಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.
ಅಭಿನಂದನೆ: ನಮ್ಮ ಜಿಲ್ಲೆಯ ಅನೇಕ ಸಾಹಿತಿಗಳು ಕಲಾವಿದರು ಹಾಗೂ ಇನ್ನೀತರ ಕ್ಷೇತ್ರಗಳ ಮಹನಿಯರು ನಾಡು ನುಡಿಗೆ ಸೇವೆ ಸಲ್ಲಿಸಿ ರಾಜ್ಯೋತ್ಸವ ಪುರಸ್ಕಾರ ಪಡೆದುಕೊಂಡಿದ್ದು ಸ್ಮರಣೀಯ ಮತ್ತು ಅಭಿನಂದನಾರ್ಹ ಸಂಗತಿಯಾಗಿದೆ. 2023ನೇ ಸಾಲಿನಲ್ಲಿ ಸಮಾಜಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ಹುಚ್ಚಮ್ಮ ಚೌದ್ರಿ ಅವರು, ಜಾನಪದ ಕ್ಷೇತ್ರದಲ್ಲಿನ ಗಣನೀಯ ಸೇವೆ ಸಲ್ಲಿಸಿದ್ದಕ್ಕೆ ಕೊಪ್ಪಳ ಜಿಲ್ಲೆಯ ಮೊರನಹಳ್ಳಿ ಗ್ರಾಮದ ತೊಗಲುಗೊಂಬೆ ಕಲಾವಿದರಾದ ಕೇಶಪ್ಪ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ ಅವರು ಮತ್ತು ಹಗಲುವೇಷದ ಕಲಾವಿದ ಸಿದ್ದಾಪುರದ ಗುಂಡಪ್ಪ ವಿಭೂತಿ ಅವರು ಸಹ ರಾಜ್ಯೋತ್ಸವ ಪುರಸ್ಕಾರ ಪಡೆದುಕೊಂಡಿದ್ದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಮಹನಿಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಭೇದಾರ, ತಹಸೀಲ್ದಾರ ವಿಠ್ಠಲ್ ಚೌಗಲಾ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಗಣ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಪತ್ರಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.